ಲಕ್ನೋ: ಶೇಷ ಭಾರತ ವಿರುದ್ಧ ಮಂಗಳವಾರ ಮೊದಲ್ಗೊಂಡ “ಇರಾನಿ ಕಪ್’ ಕ್ರಿಕೆಟ್ ಪಂದ್ಯದಲ್ಲಿ ರಣಜಿ ಚಾಂಪಿಯನ್ ಮುಂಬಯಿ ಆರಂಭಿಕ ಕುಸಿತದಿಂದ ಪಾರಾಗಿದೆ. ಬೆಳಕಿನ ಅಭಾವದಿಂದ ಮೊದಲ ದಿನದಾಟ ಬೇಗನೇ ಕೊನೆಗೊಂಡಾಗ 68 ಓವರ್‌ಗಳಲ್ಲಿ 4 ವಿಕೆಟಿಗೆ 237 ರನ್ ಮಾಡಿತ್ತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬಯಿ ಒಂದು ಹಂತದಲ್ಲಿ 3 ವಿಕೆಟಿಗೆ 37 ರನ್ ಮಾಡಿ ಪರದಾಡುತ್ತಿತ್ತು. ಮುಕೇಶ್ ಕುಮಾರ್ ಅಗ್ರ ಕ್ರಮಾಂಕದ ಮೂರೂ ವಿಕೆಟ್ ಹಾರಿಸಿ ಶೇಷ ಭಾರತಕ್ಕೆ ಮೇಲುಗೈ ಒದಗಿಸಿದರು. ಆದರೆ ನಾಯಕ ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ ಮತ್ತು ಸರ್ಫರಾಜ್ ಖಾನ್ ಅವರ ಅರ್ಧ ಶತಕಗಳ ನೆರವಿನಿಂದ ಕುಸಿತದಿಂದ ಪಾರಾಯಿತು.
ರಹಾನೆ 86 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ (197 ಎಸೆತ, 6 ಬೌಂಡರಿ, 1 ಸಿಕ್ಸರ್). ಇವರೊಂದಿಗೆ 54 ರನ್ ಗಳಿಸಿರುವ ಸರ್ಫರಾಜ್ ಕ್ರೀಸ್‌ನಲ್ಲಿದ್ದಾರೆ (88 ಎಸೆತ, 6 ಬೌಂಡರಿ). ಇವರಿಂದ ಮುರಿಯದ 5ನೇ ವಿಕೆಟಿಗೆ 98 ರನ್ ಒಟ್ಟುಗೂಡಿದೆ.
ಶ್ರೇಯಸ್ ಅಯ್ಯರ್ 57 ರನ್ ಕೊಡುಗೆ ಸಲ್ಲಿಸಿದರು (84 ಎಸೆತ, 6 ಬೌಂಡರಿ, 2 ಸಿಕ್ಸರ್). ರಹಾನೆ-ಅಯ್ಯರ್ 102 ರನ್ ಜತೆಯಾಟ ನಡೆಸಿ ಮುಂಬಯಿಗೆ ಶಕ್ತಿ ತುಂಬಿದರು. ಈ ಜೋಡಿಯನ್ನು ಯಶ್ ದಯಾಳ್ ಬೇರ್ಪಡಿಸಿದರು.
ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡವರೆಂದರೆ ಪೃಥ್ವಿ ಶಾ (4), ಆಯುಷ್ ಮ್ಹಾತ್ರೆ (19) ಮತ್ತು ಹಾರ್ದಿಕ್ ತಮೋರೆ (0).