ಟೆಹರಾನ್: ಹಿಜಾಬ್ ಧರಿಸುವುದರ ವಿರುದ್ಧ ಇರಾನ್‌ನಲ್ಲಿ ಮಹಿಳೆ ಯರಿಂದ ಪ್ರತಿಭಟನೆಗಳು ತೀವ್ರಗೊಂಡಿರುವ ನಡುವೆಯೇ ಹೊಟೇಲ್ ಒಂದರಲ್ಲಿ ಹಿಜಾಬ್ ಧರಿಸದೇ ಉಪಾಹಾರ ಸೇವಿಸಿದಕ್ಕಾಗಿ ಮಹಿಳೆಯೊಬ್ಬರನ್ನು ಇರಾನ್ ಪೊಲೀಸರು ಬಂಧಿಸಿದ್ದಾರೆ.
ಇಸ್ಲಾಮಿಕ್ ರಾಷ್ಟ್ರ ಇರಾನ್‌ನಲ್ಲಿ ಮಹಿಳೆಯರಿಗೆ ಕಟ್ಟುನಿಟ್ಟಾದ ವಸ್ತ್ರ ಸಂಹಿತೆ ಇದೆ. ಇಬ್ಬರು ಮಹಿಳೆಯರು ಹಿಜಾಬ್ ಧರಿಸದೇ ರೆಸ್ಟೋರೆಂಟ್‌ನಲ್ಲಿ ಉಪಾಹಾರ ಸೇವಿಸುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಪ್‌ಲೋಡ್ ಮಾಡಿದ್ದಾರೆ.
ಈ ವೀಡಿಯೋ ಆಧಾರದಲ್ಲಿ ಮಹಿಳೆಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಮಹಿಳೆಯ ಹುಡುಕಾಟದಲ್ಲಿ ತೊಡಗಿದ್ದಾರೆ.
ಇತ್ತೀಚೆಗೆ ಹಿಜಾಬ್ ಸರಿಯಾಗಿ ಧರಿಸದೇ ಇರುವುದಕ್ಕೆ ಮಹ್ಸಾ ಅಮಿನಿ ಎಂಬ ಯುವತಿಯನ್ನು ಇರಾನ್ ಪೊಲೀಸರು ಬಂಧಿಸಿದ್ದರು. ಆಕೆ ಪೊಲೀಸರ ವಶದಲ್ಲಿ ಮೃತಪಟ್ಟಿದ್ದಳು. ಪೊಲೀಸರ ನೈತಿಕಗಿರಿ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ.