Advertisement

ಐಕೂ ಝಡ್‍ 5: ಉತ್ತಮ ಸ್ಪೆಸಿಫಿಕೇಷನ್‍, ಜೇಬಿಗೆ ಹಗುರ

06:24 PM Dec 17, 2021 | Team Udayavani |

ಬಿಬಿಕೆ ಎಲೆಕ್ಟ್ರಾನಿಕ್ಸ್ ಕಂಪೆನಿಯ ಒಡೆತನದಲ್ಲಿ ಒನ್‍ ಪ್ಲಸ್‍, ಒಪ್ಪೋ, ವಿವೋ, ರಿಯಲ್‍ಮಿ ಫೋನ್‍ಗಳಿರುವುದು ನಿಮಗೆಲ್ಲ ತಿಳಿದ ವಿಷಯ. ಇದೇ ಕಂಪೆನಿಯ ಇನ್ನೊಂದು ಬ್ರಾಂಡ್‍ ಐಕೂ (iQOO) ಈ ಬ್ರಾಂಡ್‍ನಡಿಯಲ್ಲಿ ಸಾಮಾನ್ಯವಾಗಿ 20 ಸಾವಿರಕ್ಕಿಂತ ಮೇಲ್ಪಟ್ಟ ದರದ ಮಧ್ಯಮ ಹಾಗೂ ಮೇಲ್ಮಧ್ಯಮ ದರ್ಜೆಯ ಫೋನ್‍ಗಳನ್ನು ಆನ್‍ಲೈನ್‍ ಎಕ್ಸ್ ಕ್ಲೂಸಿವ್‍ ಮಾರಾಟಕ್ಕೆ ಈ ಬ್ರಾಂಡ್ ರೂಪಿಸಲಾಗಿದೆ. ಉತ್ತಮ ಸ್ಪೆಸಿಫಿಕೇಷನ್‍ ಗಳನ್ನು ಮಿತವ್ಯಯದ ದರದಲ್ಲಿ ಈ ಬ್ರಾಂಡಿನಡಿ ನೀಡಲಾಗುತ್ತಿದೆ. ಐಕೂನ ಇತ್ತೀಚಿನ ಮಾಡೆಲ್‍ ಐಕೂ ಝಡ್‍5. ಈ ಹೊಸ ಫೋನ್‍ನೊಳಗೆ ಏನೆಲ್ಲ ಅಂಶಗಳಿವೆ? ಕಾರ್ಯಾಚರಣೆ ಹೇಗಿದೆ? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Advertisement

ವಿನ್ಯಾಸ

ಈ ಫೋನ್‍ 164. 7 ಮಿ.ಮಿ. ಉದ್ದ, 76.7 ಮಿಮಿ ಅಗಲ ಹಾಗೂ 8.5 ಮಿ.ಮಿ. ದಪ್ಪ ಹೊಂದಿದೆ. 193 ಗ್ರಾಂ ತೂಕವಿದೆ.  ಫೋನಿನ ಹಿಂಬದಿ ತ್ರಿವಳಿ ಕ್ಯಾಮರಾ ಅಳವಡಿಸಲಾಗಿದೆ. ಫೋನಿನ ಬಾಡಿಯಿಂದ ಕ್ಯಾಮರಾ ಲೆನ್ಸ್ ಈಚೆ ಬರುವಂತೆ ವಿನ್ಯಾಸ ಮಾಡಲಾಗಿದೆ. ಬಲಗಡೆ ಧ್ವನಿ ಹೆಚ್ಚು, ಕಡಿಮೆ ಮಾಡುವ ಬಟನ್‍ ಹಾಗೂ ಅದರ ಕೆಳಗೆ ಬೆರಳಚ್ಚು ಸ್ಕ್ಯಾನರ್‍ ಹಾಕಲಾಗಿದೆ. ಇದರಲ್ಲೇ ಆನ್‍ ಆಫ್‍ ಆಯ್ಕೆ ಸಹ ಇದೆ. ಎಡಬದಿಯಲ್ಲಿ ಯಾವುದೇ ಬಟನ್‍ ಇಲ್ಲ.  ಕೆಳ ಬದಿಯಲ್ಲಿ ಯೂಎಸ್‍ಬಿ ಟೈಪ್‍ ಸಿ ಪೋರ್ಟ್, ಸಿಮ್‍ ಟ್ರೇ, ಸ್ಪೀಕರ್‍ ನೀಡಲಾಗಿದೆ. ಮೇಲ್ಬದಿಯಲ್ಲಿ 3.5 ಮಿ.ಮೀ. ಆಡಿಯೋ ಪೋರ್ಟ್ ಇದೆ. ಫೋನಿನ ಫ್ರೇಂ ಮತ್ತು ಹಿಂಬದಿ ಪ್ಲಾಸ್ಟಿಕ್‍ ಕವಚ ಹಾಕಲಾಗಿದೆ.

ಫೋನನ್ನು ಕೈಯಲ್ಲಿ ಹಿಡಿದಾಗ ತುಂಬ ಹೆವಿ ಅನಿಸುವುದಿಲ್ಲ. ಸ್ಲಿಮ್‍ ಆಗಿ ವಿನ್ಯಾಸ ಮಾಡಲಾಗಿದೆ. ಹಿಂಬದಿ ಪ್ಲಾಸ್ಟಿಕ್‍ ಕವಚ ಇದ್ದರೂ ಲೋಹದ್ದು ಎನಿಸುವಂತೆ ವಿನ್ಯಾಸ ಮಾಡಲಾಗಿದೆ. ಒಟ್ಟಂದದಲ್ಲಿ ದುಬಾರಿ ಬೆಲೆಯ ಫೋನಿನಂತೆ ಕಾಣುತ್ತದೆ.

Advertisement

ಪರದೆ

6.67 ಇಂಚಿನ ಫುಲ್‍ ಎಚ್‍ ಡಿ ಪ್ಲಸ್‍ (1080*2400 ಪಿಕ್ಸಲ್ಸ್) ಎಲ್‍ಸಿಡಿ ಡಿಸ್‍ಪ್ಲೇ ಹೊಂದಿದೆ. 395 ಪಿಪಿಐ ಡೆನ್ಸಿಟಿ ಇದೆ. ಪರದೆಯ ಮೇಲ್ಭಾಗದ ಮಧ್ಯದಲ್ಲಿ ಮುಂಬದಿ ಕ್ಯಾಮರಾ ಇರಿಸಿ ಪಂಚ್‍ ಹೋಲ್‍ ಡಿಸ್‍ಪ್ಲೇ ನೀಡಲಾಗಿದೆ.  ಪರದೆ ಮತ್ತು ದೇಹದ ಅನುಪಾತ ಶೇ. 85ರಷ್ಟಿದೆ. 120 ಹರ್ಟ್ಜ್ ರಿಫ್ರೆಶ್‍ ರೇಟ್‍ ಹೊಂದಿರುವುದರಿಂದ ಪರದೆಯನ್ನು ಸ್ಕ್ರಾಲ್‍ ಮಾಡಿದಾಗ, ಕುಂಠಿತಗೊಳ್ಳದೇ ಸರಾಗವಾಗಿ ಚಲಿಸುತ್ತದೆ. ಅಮೋಲೆಡ್‍ ಅಥವಾ ಎಲ್‍ಟಿಪಿಎಸ್‍ ಪರದೆ ನೀಡಿಲ್ಲ. ಮಿತವ್ಯಯದ ದರಕ್ಕೆ ಹೆಚ್ಚು ಸೌಲಭ್ಯ ನೀಡುವ ಉದ್ದೇಶದಿಂದ ಹಾರ್ಡ್ ವೇರ್‍ ನಲ್ಲಿ ಕೊಂಚ ಕಾಂಪ್ರೊಮೈಸ್‍ ಮಾಡಿಕೊಳ್ಳಲಾಗಿದೆ ಎನಿಸುತ್ತದೆ.

ಪ್ರೊಸೆಸರ್‍ ಮತ್ತು ಕಾರ್ಯಾಚರಣೆ

ಇದರಲ್ಲಿ ಸ್ನಾಪ್‍ಡ್ರಾಗನ್‍ 778 ಜಿ ಪ್ರೊಸೆಸರ್‍ ಅಳವಡಿಸಲಾಗಿದೆ. 5ಜಿ ಸೌಲಭ್ಯ ಇದೆ.  ಈ ದರಕ್ಕೆ ಸ್ನಾಪ್‍ಡ್ರಾಗನ್‍ 778 (6ನ್ಯಾನೋ ಮೀಟರ್‍) ನಂಥ ಪ್ರೊಸೆಸರ್‍ ನೀಡಿರುವುದು ಬಹುಮುಖ್ಯ ಪ್ಲಸ್‍ ಪಾಯಿಂಟ್. ಇದೊಂದು ಮೇಲ್ಮಧ್ಯಮ ದರ್ಜೆಯ ಉತ್ತಮ ಪ್ರೊಸೆಸರ್‍. ಮಲ್ಟಿಟಾಸ್ಕಿಂಗ್, ವೇಗದ ಕಾರ್ಯಾಚರಣೆ, ಸರಾಗವಾದ ಬಳಕೆಗೆ ಪೂರಕವಾದ ಪ್ರೊಸೆಸರ್‍ ಆಗಿದೆ. ಹಾಗಾಗಿ ಮೊಬೈಲ್‍ ಬಳಕೆ ಅಡೆತಡೆಯಿಲ್ಲದೇ ವೇಗವಾಗಿ ನಡೆಯುತ್ತದೆ. ಗೇಮಿಂಗ್‍ ವೇಗವೂ ಉತ್ತಮವಾಗಿದೆ. 240 ಹರ್ಟ್ಜ್ ಟಚ್‍ ಸ್ಯಾಂಪ್ಲಿಂಗ್‍ ರೇಟ್‍ ನೀಡಲಾಗಿದೆ. ಸ್ಪರ್ಶಕ್ಕೆ ಹೆಚ್ಚಿನ ಸಂವೇದನೆ ದೊರೆಯುವುದರಿಂದ ಗೇಮಿಂಗ್‍ ಇನ್ನಷ್ಟು ವೇಗವಾಗಿ ಸೂಕ್ಷ್ಮವಾಗಿ ಕಾರ್ಯಾಚರಿಸುತ್ತದೆ.

ಇದಕ್ಕೆ ಆಂಡ್ರಾಯ್ಡ್ 11 ಕಾರ್ಯಾಚರಣೆ ವ್ಯವಸ್ಥೆ ಇದೆ. ಇದಕ್ಕೆ ಫನ್‍ಟಚ್‍ ಓಎಸ್‍ ಅನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಆಂಡ್ರಾಯ್ಡ್ 12  ಅಪ್‍ಡೇಟ್‍ ಸೇರಿ ಒಟ್ಟು ಎರಡು ಮುಖ್ಯ ಅಪ್‍ಡೇಟ್‍ ಹಾಗೂ 3 ವರ್ಷಗಳ ಸೆಕ್ಯುರಿಟಿ ಅಪ್‍ಡೇಟ್‍ಗಳು ದೊರಕಲಿದೆ ಎಂದು ಕಂಪೆನಿ ತಿಳಿಸಿದೆ.

ಕ್ಯಾಮರಾ

64 ಮೆ.ಪಿ. ಮುಖ್ಯ ಲೆನ್ಸ್, 8 ಮೆ.ಪಿ. ಅಲ್ಟ್ರಾವೈಡ್‍ ಲೆನ್ಸ್ ಹಾಗೂ 2 ಮೆ.ಪಿ. ಮ್ಯಾಕ್ರೋ ಲೆನ್ಸ್ ಹೊಂದಿದ ಹಿಂಬದಿ ಕ್ಯಾಮರಾ ಹಾಗೂ 16 ಮೆ.ಪಿ. ಮುಂಬದಿ ಕ್ಯಾಮರಾ ಹೊಂದಿದೆ.  ಹಿಂಬದಿ ಕ್ಯಾಮರಾ ಗುಣಮಟ್ಟ ಚೆನ್ನಾಗಿದೆ. ರಾತ್ರಿ ವೇಳೆಯ ದೃಶ್ಯಗಳ ಸೆರೆಗಾಗಿ ಸೂಪರ್‍ ನೈಟ್‍ ಮೋಡ್‍ ನೀಡಲಾಗಿದೆ. ಮಂದ ಬೆಳಕಿನಲ್ಲೂ ಸ್ಪಷ್ಟ ಫೋಟೋಗಳನ್ನು ಸೆರೆ ಹಿಡಿಯಲು ಇದು ಸಹಾಯಕವಾಗಿದೆ.  ಡುಯಲ್‍ ವ್ಯೂ ವಿಡಿಯೋ ಎಂಬ ಆಯ್ಕೆಯಲ್ಲಿ ಏಕಕಾಲಕ್ಕೆ ಸೆಲ್ಫಿ ಹಾಗೂ ಹಿಂಬದಿ ಕ್ಯಾಮರಾದಲ್ಲಿ ವಿಡಿಯೋ ಚಿತ್ರೀಕರಣವಾಗುತ್ತದೆ. ಇದು ಎಷ್ಟರ ಮಟ್ಟಿಗೆ ಉಪಯುಕ್ತ ಎಂದು ಬಳಕೆದಾರನೇ ನಿರ್ಧರಿಸಬೇಕು.

ಇದನ್ನೂ ಓದಿ:ಹೂಡಿಕೆದಾರರಿಗೆ ಲಕ್ಷಾಂತರ ರೂ. ನಷ್ಟ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 889 ಅಂಕ ಇಳಿಕೆ

ಬ್ಯಾಟರಿ

ಇದರಲ್ಲಿ 5000 ಎಂಎಎಚ್‍ ಬ್ಯಾಟರಿ ಇದೆ. ಇದರ ಜೊತೆಗೆ 44 ವ್ಯಾಟ್ಸ್ ವೇಗದ ಜಾರ್ಜರ್‍ ನೀಡಿರುವುದು ಉತ್ತಮ ಅಂಶ. ಶೂನ್ಯದಿಂದ ಶೇ. 50ರಷ್ಟು ಬ್ಯಾಟರಿ, 30 ನಿಮಿಷದಲ್ಲಿ ಚಾರ್ಜ್‍ ಆಗುತ್ತದೆ. 1 ಗಂಟೆಯಲ್ಲಿ ಶೇ. 87 ರಷ್ಟು ಹಾಗೂ 1 ಗಂಟೆ 15 ನಿಮಿಷದಲ್ಲಿ ಶೇ. 100ರಷ್ಟು ಚಾರ್ಜ್‍ ಆಗುತ್ತದೆ.  ವಿಡಿಯೋ, ಗೇಮಿಂಗ್‍, ಬ್ರೌಸಿಂಗ್‍, ಕರೆ ಇತ್ಯಾದಿಗಳನ್ನು ಅತಿ ಹೆಚ್ಚಿನ ಬ್ರೈಟ್‍ನೆಸ್‍ನೊಡನೆ ಬಳಸಿದಾಗ 8 ಗಂಟೆ ಬ್ಯಾಟರಿ ಬಾಳಿಕೆ ಬರುತ್ತದೆ. ಸಾಧಾರಣ ಬಳಕೆದಾರರಿಗೆ ಒಂದೂವರೆ ದಿನ ಬ್ಯಾಟರಿ ಬಳಕೆಗೆ ಅಡ್ಡಿಯಿಲ್ಲ.

ಈ ಫೋನಿನ ದರ ಅಮೆಜಾನ್‍. ಇನ್‍ ನಲ್ಲಿ 12 ಜಿಬಿ ರ್ಯಾಮ್‍ ಹಾಗೂ 256 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 26,990 ರೂ. ಮತ್ತು 8 ಜಿಬಿ ರ್ಯಾಮ್‍  ಹಾಗೂ 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 23,990 ರೂ. ಇದೆ. ವಿಶೇಷವೆಂದರೆ, ಪ್ರಸ್ತುತ ಅಮೆಜಾನ್‍.ಇನ್‍ ನಲ್ಲಿ ಹೆಚ್ಚುವರಿಯಾಗಿ 3 ಸಾವಿರ ರೂ. ಕೂಪನ್‍ ಡಿಸ್ಕೌಂಟ್‍ ಇದೆ. ಅಂದರೆ 256 ಜಿಬಿ ಸಂಗ್ರಹ ಮಾದರಿ 23,990 ರೂ.ಗಳಿಗೆ ಹಾಗೂ 128 ಜಿಬಿ ಸಂಗ್ರಹ ಮಾದರಿ 20,990 ರೂ.ಗಳಿಗೆ ದೊರಕುತ್ತದೆ. ಅಮೆಜಾನ್‍ ಪ್ರೈಮ್‍ ಚಂದಾದಾರರಿಗೆ 6 ತಿಂಗಳವರೆಗೆ ಉಚಿತವಾಗಿ ಸ್ಕ್ರೀನ್‍ ರೀಪ್ಲೇಸ್‍ಮೆಂಟ್‍ ಆಫರ್‍ ಕೂಡ ಇದೆ.

ಸಾರಾಂಶ

ಈ ಫೋನಿನಲ್ಲಿ ಉತ್ತಮ ದರ್ಜೆಯ ಪ್ರೊಸೆಸರ್‍, ಉತ್ತಮ ಕ್ಯಾಮರಾ ಬ್ಯಾಟರಿ ವೇಗದ ಚಾರ್ಜರ್‍ ನೀಡಲಾಗಿದೆ. ಇದಕ್ಕೆ ನಿಗದಿ ಮಾಡಿರುವ ದರಕ್ಕೆ ಇದು ಹಣಕ್ಕೆ ತಕ್ಕ ಮೌಲ್ಯ ನೀಡುವ ಮೊಬೈಲ್‍ ಫೋನ್‍ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅಮೋಲೆಡ್‍ ಪರದೆ, ಲೋಹದ ದೇಹ, ಪರದೆಯ ರಕ್ಷಣೆಗೆ ಕಾರ್ನಿಂಗ್‍ ಗೊರಿಲ್ಲಾ ಗ್ಲಾಸ್‍ ಇಲ್ಲ ಎಂಬಂತಹ ಸಣ್ಣ ಕೊರತೆಗಳಿದ್ದರೂ, 20 ರಿಂದ 25 ಸಾವಿರ ರೂ. ಆಸುಪಾಸಿನ ದರಕ್ಕೆ ಒಂದು ತೃಪ್ತಿಕರ ಸ್ಪೆಸಿಫಿಕೇಷನ್‍ ಉಳ್ಳ ಫುಲ್ಲೀ ಲೋಡೆಡ್‍ ಫೋನ್‍ ಇದಾಗಿದೆ.

-ಕೆ.ಎಸ್‍. ಬನಶಂಕರ ಆರಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next