ಬೆಂಗಳೂರು : ಪೊಲೀಸ್ ತರಬೇತಿ ವಿಭಾಗದ ಡಿಜಿಪಿ ಸ್ಥಾನಕ್ಕೆ ಡಾ.ಪಿ.ರವೀಂದ್ರನಾಥ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ನಾಗರಿಕ ಹಕ್ಕು ನಿರ್ದೇಶನಾಲಯದ ನಿರ್ದೇಶಕ ಸ್ಥಾನದಿಂದ ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಬೇಸರಗೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲದಿನಗಳಿಂದ ಕೌಟುಂಬಿಕ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅವರು ರಜೆಯ ಮೇಲಿದ್ದರು. ಈ ಅವಧಿಯಲ್ಲೇ ವರ್ಗಾವಣೆ ನಡೆದಿತ್ತು. ಮಂಗಳವಾರ ಸೇವೆಗೆ ಹಾಜರಾಗಿದ್ದರು. ಕೆಲ ಹೊತ್ತು ಕಳೆದ ಬಳಿಕ ವಿಧಾನಸೌಧಕ್ಕೆ ತೆರಳಿ ಸ್ವಯಂ ಲಿಖಿತ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಂಡ್ಯ : ದೇವಿಗೆ ಬಲಿ ಕೊಡಲು ತಂದಿದ್ದ ಕೋಳಿ ಮರ ಏರಿ ಕುಳಿತರೆ…!
ರವೀಂದ್ರನಾಥ್ ಅವರು 2013- 14 ರಲ್ಲಿಯೂ ಒಮ್ಮೆ ರಾಜೀನಾಮೆ ಸಲ್ಲಿಸಿದ್ದರು. ಕನ್ನಿಂಗ್ ಹ್ಯಾಂ ರಸ್ತೆಯ ಕಾಫಿ ಸೆಂಟರ್ ನಲ್ಲಿ ನಡೆದ ಫೋಟೋಶೂಟ್ ವಿವಾದ ಸಂಬಂಧ ಅವರನ್ನು ಹೈಗ್ರೌಂಡ್ಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು.
ಆದರೆ ಅಂದು ಅಧಿಕಾರದಲ್ಲಿದ್ದ ಸಿಎಂ ಸಿದ್ದರಾಮಯ್ಯ, ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹಾಗೂ ಅಂದಿನ ಗುಪ್ತದಳ ಐಜಿಪಿ ಐಎನ್ ಎಸ್ ಪ್ರಸಾದ್ ವಿರುದ್ಧ ಜಾತಿ ನಿಂದನೆ ಆರೋಪ ಮಾಡಿದ ರವೀಂದ್ರನಾಥ್ ತಮ್ಮ ಸೇವೆಗೆ ರಾಜೀನಾಮೆ ಸಲ್ಲಿಸಿದ್ದರು. ಸಿಎಂ ಕಚೇರಿಯಿಂದ ತಮ್ಮ ನಿವಾಸದ ವರೆಗೆ ಪಾದಯಾತ್ರೆ ನಡೆಸಿ ಹಂಗಾಮ ಸೃಷ್ಟಿಸಿದ್ದರು. ತದನಂತರ ದಲಿತ ಸಂಘಟನೆಗಳ ಮಧ್ಯಸ್ಥಿಕೆ ವಹಿಸಿ ರಾಜೀನಾಮೆ ವಾಪಾಸ್ ಪಡೆಯಲಾಗಿತ್ತು. ಅದಾದ ಬಳಿಕ ಅವರಿಗೆ ಯಾವುದೇ ಮಹತ್ವದ ಹುದ್ದೆ ಲಭಿಸಿರಲಿಲ್ಲ. ಈಗ ಎರಡನೇ ಬಾರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.