Advertisement

ಕೆಕೆಆರ್‌ ವಿರುದ್ಧ ಗೆಲುವಿನ ಕೇಕೆ ಹಾಕೀತೇ ಆರ್‌ಸಿಬಿ?

06:26 PM Mar 29, 2022 | Team Udayavani |

ನವೀ ಮುಂಬಯಿ: ರಾಯಲ್‌ ಚಾಲೆಂಜರ್ ಬೆಂಗಳೂರು ತಂಡಕ್ಕೆ ಬುಧವಾರ ರಾತ್ರಿ ಕೋಲ್ಕತಾ ನೈಟ್‌ರೈಡರ್ ಚಾಲೆಂಜ್‌ ಹಾಕಲಿದೆ. ಇದು ಎರಡೂ ತಂಡಗಳಿಗೆ ಕೂಟದ ದ್ವಿತೀಯ ಪಂದ್ಯವಾಗಿದೆ.

Advertisement

ಶ್ರೇಯಸ್‌ ಅಯ್ಯರ್‌ ಸಾರಥ್ಯದ ಕೆಕೆಆರ್‌ ಗೆಲುವಿನ ಉತ್ಸಾಹದಲ್ಲಿದ್ದರೆ, ಮೊದಲ ಸಲ ಫಾ ಡು ಪ್ಲೆಸಿಸ್‌ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಆರ್‌ಸಿಬಿಗೆ ಸೋಲಿನ ಬಿಸಿ ತಟ್ಟಿದೆ.

ಸಾಧ್ಯವಾದಷ್ಟು ಬೇಗ ಗೆಲುವಿನ ಹಳಿ ಏರಿದರೆ ಬೆಂಗಳೂರು ಫ್ರಾಂಚೈಸಿಗೆ ಲಾಭ ಹೆಚ್ಚು. ಕೆಕೆಆರ್‌ ವಿರುದ್ಧವೇ ಮೊದಲ ಮೆಟ್ಟಿಲಾಗಿಸಿಕೊಂಡರೆ ಕ್ಷೇಮ.

ಬೆಂಗಳೂರಿಗೆ ಬೌಲಿಂಗ್‌ ಚಿಂತೆ
ಕಳೆದ ಸಲದ ರನ್ನರ್ ಅಪ್‌ ಆಗಿರುವ ಕೆಕೆಆರ್‌ 2022ರ ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೂಪರ್‌ ಪ್ರದರ್ಶನ ನೀಡಿ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿತ್ತು. ಇನ್ನೊಂದೆಡೆ ಪಂಜಾಬ್‌ ವಿರುದ್ಧ ಇನ್ನೂರರ ಗಡಿ ದಾಟಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ಆರ್‌ಸಿಬಿ ವಿಫಲವಾಗಿತ್ತು. ಇದಕ್ಕೆ ಕಾರಣ ಸ್ಪಷ್ಟ. ಅದು ದಯನೀಯ ಬೌಲಿಂಗ್‌ ವೈಫಲ್ಯ.

ಪಂಜಾಬ್‌ ವಿರುದ್ಧ 21 ವೈಡ್‌ ಬಾಲ್‌ ಎಸೆಯುವ ಮೂಲಕ ಆರ್‌ಸಿಬಿ ಅನಪೇಕ್ಷಿತ ದಾಖಲೆಯೊಂದನ್ನು ಬರೆಯಿತು. ಇದರಲ್ಲಿ ತಂಡದ ಪ್ರಧಾನ ಬೌಲರ್‌ ಮೊಹಮ್ಮದ್‌ ಸಿರಾಜ್‌ ಒಬ್ಬರೇ 14 ವೈಡ್‌ ಎಸೆದರೆಂಬುದು ತುಸು ಆತಂಕದ ಸಂಗತಿ. ತಂಡದ ಮತ್ತೋರ್ವ ಪ್ರಮುಖ ಬೌಲರ್‌ ಹರ್ಷಲ್‌ ಪಟೇಲ್‌ 5 ವೈಡ್‌ ಎಸೆದು ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡರು.

Advertisement

ಕೇವಲ ಸಿರಾಜ್‌ ಮಾತ್ರವಲ್ಲ, ರಾಯಲ್‌ ಚಾಲೆಂಜರ್ನ ಯಾವ ಬೌಲರ್‌ನಿಂದಲೂ ಪಂಜಾಬ್‌ಗ ನಿಯಂತ್ರಣ ಹೇರಲು ಸಾಧ್ಯವಾಗಿರಲಿಲ್ಲ. ಡೇವಿಡ್‌ ವಿಲ್ಲಿ, ಆಕಾಶ್‌ ದೀಪ್‌, ವನಿಂದು ಹಸರಂಗ, ಹರ್ಷಲ್‌ ಪಟೇಲ್‌ ಚೆನ್ನಾಗಿ ದಂಡಿಸಿಕೊಂಡರು. ಎಲ್ಲಿಯ ತನಕ ಈ ಬೌಲಿಂಗ್‌ ಪಡೆ ಘಾತಕವಾಗಿ ಗೋಚರಿಸುವುದಿಲ್ಲವೋ ಅಲ್ಲಿಯ ತನಕ ಆರ್‌ಸಿಬಿಗೆ ಸಂಕಟ ತಪ್ಪಿದ್ದಲ್ಲ.

ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠ
ಆರ್‌ಸಿಬಿ ಬ್ಯಾಟಿಂಗ್‌ ಸಾಮರ್ಥ್ಯದ ಬಗ್ಗೆ ಯಾವುದೇ ಅಪಸ್ವರವಿಲ್ಲ. ಎಬಿಡಿ, ಪಡಿಕ್ಕಲ್‌, ಮ್ಯಾಕ್ಸ್‌ವೆಲ್‌ ಗೈರಲ್ಲೂ ಅದು ಎರಡೇ ವಿಕೆಟಿಗೆ 205 ರನ್‌ ರಾಶಿ ಹಾಕಿದ್ದು ಅಮೋಘ ಸಾಧನೆಯೇ ಆಗಿದೆ. ಡು ಪ್ಲೆಸಿಸ್‌, ಭರವಸೆಯ ಎಡಗೈ ಆರಂಭಕಾರ ಅನುಜ್‌ ರಾವತ್‌, ವಿರಾಟ್‌ ಕೊಹ್ಲಿ, ದಿನೇಶ್‌ ಕಾರ್ತಿಕ್‌ ಹೊಡಿಬಡಿಯ ಆಟವಾಡಿದ್ದರು. ಶಫೇìನ್‌ ರುದರ್‌ಫೋರ್ಡ್‌ಗೆ ಕ್ರೀಸ್‌ ಇಳಿಯುವ ಅವಕಾಶ ಸಿಕ್ಕಿರಲಿಲ್ಲ.

ಅಂದಹಾಗೆ ಆಸ್ಟ್ರೇಲಿಯದ ಇಬ್ಬರು ಸ್ಟಾರ್‌ ಆಟಗಾರರಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಜೋಶ್‌ ಹ್ಯಾಝಲ್‌ವುಡ್‌ ಈ ಪಂದ್ಯಕ್ಕೂ ಲಭ್ಯರಾಗುತ್ತಿಲ್ಲ.

ಇದನ್ನೂ ಓದಿ:ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಕಂಗಾಲು; ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತ

ಕೆಕೆಆರ್‌ ಸಮತೋಲಿತ ತಂಡ
ಆರ್‌ಸಿಬಿಯಂತೆ ಕೆಕೆಆರ್‌ ಬ್ಯಾಟಿಂಗ್‌ ಸರದಿಯೂ ಬಲಿಷ್ಠ. ಬೌಲಿಂಗ್‌ ಅಂತೂ ವೈವಿಧ್ಯಮಯ. ಅಗ್ರ ಕ್ರಮಾಂಕದಲ್ಲಿ ಮೂವರು ಎಡಗೈ ಬ್ಯಾಟ್ಸ್‌ಮನ್‌ಗಳಿರುವುದು, ಉತ್ತಮ ದರ್ಜೆಯ ಆಲ್‌ರೌಂಡರ್ ಗಳನ್ನು ಹೊಂದಿರುವುದು ಕೋಲ್ಕತಾದ ವೈಶಿಷ್ಟ್ಯ. ಅದು ಸಮತೋಲಿತ ತಂಡವಾಗಿ ಗೋಚರಿಸುತ್ತಿದೆ.

ಕೆಕೆಆರ್‌ ತಂಡದ ಇಂಡಿಯನ್‌ ಮತ್ತು ವೆಸ್ಟ್‌ ಇಂಡಿಯನ್‌ ಬೌಲರ್‌ಗಳ ಕಾಂಬಿನೇಶನ್‌ ಚೆನ್ನೈಗೆ ಭಾರೀ ಸಮಸ್ಯೆ ತಂದೊಡ್ಡಿತ್ತು. ಅದರಲ್ಲೂ ಉಮೇಶ್‌ ಯಾದವ್‌ ಘಾತಕ ಸ್ಪೆಲ್‌ ನಡೆಸಿದ್ದರು. ಶಿವಂ ಮಾವಿ, ವರುಣ್‌ ಚಕ್ರವರ್ತಿ, ಸುನೀಲ್‌ ನಾರಾಯಣ್‌, ಆ್ಯಂಡ್ರೆ ರಸೆಲ್‌ ಸೇರಿಕೊಂಡು ರವೀಂದ್ರ ಜಡೇಜ ಪಡೆಯನ್ನು 131ಕ್ಕೆ ನಿಯಂತ್ರಿಸಿದ್ದನ್ನು ಮರೆಯುವಂತಿಲ್ಲ. ಧೋನಿ ಅರ್ಧ ಶತಕ ಬಾರಿಸದೇ ಹೋಗಿದ್ದಲ್ಲಿ ಚೆನ್ನೈ ಕತೆ ಇನ್ನಷ್ಟು ಶೋಚನೀಯವಾಗುತ್ತಿತ್ತು.

ಉಮೇಶ್‌ ಯಾದವ್‌ ಅವರಂತೆ ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿರುವ ಅಜಿಂಕ್ಯ ರಹಾನೆ ಕೂಡ ಧಾರಾಳ ಯಶಸ್ಸು ಕಂಡಿದ್ದಾರೆ.

ಆರಂಭಿಕನಾಗಿ ಇಳಿದ ಅವರು ಸರ್ವಾಧಿಕ 44 ರನ್‌ ಬಾರಿಸಿ ಚೇಸಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಿತೀಶ್‌ ರಾಣಾ, ನಾಯಕ ಅಯ್ಯರ್‌, ಸ್ಯಾಮ್‌ ಬಿಲ್ಲಿಂಗ್ಸ್‌, ರಸೆಲ್‌ ಅವರೆಲ್ಲ ಬ್ಯಾಟಿಂಗ್‌ ಸರದಿಯ ಪ್ರಮುಖರು.

ಈಗಿನ ಲೆಕ್ಕಾಚಾರದಂತೆ ಆರ್‌ಸಿಬಿಯ ಬ್ಯಾಟಿಂಗ್‌ ಬಹಳ ಸ್ಟ್ರಾಂಗ್‌. ಕೆಕೆಆರ್‌ನ ಬೌಲಿಂಗ್‌ ಹೆಚ್ಚು ಘಾತಕ. ಈ ಮೇಲಾಟದಲ್ಲಿ ಗೆಲ್ಲುವವರ್ಯಾರು ಎಂಬುದು ತೀವ್ರ ಕುತೂಹಲದ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next