Advertisement

ಇನ್ನು ಕ್ವಾಲಿಫೈಯರ್‌, ಎಲಿಮಿನೇಟರ್‌ ಕಾತರ

11:09 PM May 22, 2022 | Team Udayavani |

ಮುಂಬಯಿ: ಒಂದು ಪಂದ್ಯ ಬಾಕಿ ಇರುವಾಗಲೇ 2022ರ ಐಪಿಎಲ್‌ ಪಂದ್ಯಾವಳಿಯ ಅಗ್ರ 4 ತಂಡಗಳ ಇತ್ಯರ್ಥವಾಗಿದೆ. ಗುಜರಾತ್‌ ಟೈಟಾನ್ಸ್‌ (20 ಅಂಕ), ರಾಜಸ್ಥಾನ್‌ ರಾಯಲ್ಸ್‌ (18 ಅಂಕ), ಲಕ್ನೋ ಸೂಪರ್‌ಜೈಂಟ್ಸ್‌ (18 ಅಂಕ) ಮತ್ತು ರಾಯಲ್‌ ಚಾಲೆಂಜರ್ ಬೆಂಗಳೂರು (16 ಅಂಕ) ತಂಡಗಳು ಪ್ಲೇ ಆಫ್ ಪ್ರವೇಶಿಸಿವೆ.

Advertisement

ಈ ನಾಲ್ಕರಲ್ಲಿ ಗುಜರಾತ್‌ ಮತ್ತು ಲಕ್ನೋ ನೂತನ ತಂಡಗಳೆಂಬುದು ಉಲ್ಲೇಖನೀಯ. ಪದಾರ್ಪಣೆಯ ಋತುವಿನಲ್ಲೇ ಇವು ಪ್ಲೇ ಆಫ್ ಪ್ರವೇಶಿಸಿ ಸುದ್ದಿಯಾಗಿವೆ. ಹಾಗೆಯೇ 4 ತಂಡಗಳಲ್ಲಿ ಚಾಂಪಿಯನ್‌ ಆಗಿರುವ ಹೆಗ್ಗಳಿಕೆ ಹೊಂದಿರುವುದು ರಾಜಸ್ಥಾನ್‌ ಮಾತ್ರ. ಅದು 2008ರ ಚೊಚ್ಚಲ ಕೂಟದಲ್ಲೇ ಪ್ರಶಸ್ತಿ ಸುತ್ತು ತಲುಪಿ ಚಾಂಪಿಯನ್‌ ಆಗಿ ಮೂಡಿಬಂದಿತ್ತು. ನಾಯಕರಾಗಿದ್ದವರು ಶೇನ್‌ ವಾರ್ನ್. ಅನಂತರ ರಾಜಸ್ಥಾನ್‌ ಫೈನಲ್‌ ತಲುಪಿದ್ದೇ ಇಲ್ಲ.

ಆರ್‌ಸಿಬಿ ಮತ್ತು ಹಸುರು ಜೆರ್ಸಿ
ಇನ್ನು ಆರ್‌ಸಿಬಿ. ಗೇಲ್‌, ಎಬಿಡಿ, ಕೊಹ್ಲಿ ಅವರನ್ನೆಲ್ಲ ಒಳಗೊಂಡು ಐಪಿಎಲ್‌ ಇತಿಹಾಸದ ಬಲಿಷ್ಠ ತಂಡವಾಗಿದ್ದೂ ಕಪ್‌ ಎತ್ತಲಾಗದ ನತದೃಷ್ಟ ತಂಡ. 3 ಸಲ ಫೈನಲ್‌ಗೆ ಲಗ್ಗೆ ಇರಿಸಿ ಮೂರರಲ್ಲೂ ಮುಗ್ಗರಿಸಿದೆ.
ಆದರೆ ಹಸುರು ಜೆರ್ಸಿಗೂ ಆರ್‌ಸಿಬಿಗೂ ಅದೃಷ್ಟದ ನಂಟಿದೆ. ಹಸಿರು ಉಡುಗೆಯಲ್ಲಿ ಆಡಿ ಗೆದ್ದ ಮೂರೂ ಋತುಗಳಲ್ಲಿ ಅದು ಫೈನಲ್‌ ತಲುಪಿದೆ.

ಈ ಸಲವೂ ಗ್ರೀನ್‌ ಜೆರ್ಸಿಯಲ್ಲಿ ಜಯ ಸಾಧಿಸಿತ್ತಾದರೂ ತಂಡದ ನಸೀಬು ಮುಂಬೈ-ಡೆಲ್ಲಿ ಪಂದ್ಯದ ಫ‌ಲಿತಾಂಶವನ್ನು ಅವಲಂಬಿಸಿತ್ತು. ಇಲ್ಲಿ ಮುಂಬೈ ಜಯ ಸಾಧಿಸುವುದರೊಂದಿಗೆ ಬೆಂಗಳೂರು ಪಡೆಗೆ ಒಂದು ಹಂತದ ಅದೃಷ್ಟ ಕೈಹಿಡಿದಿದೆ.

ಮಂಗಳವಾರದ ಕ್ವಾಲಿಫೈಯರ್‌ ಮುಖಾಮುಖೀಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಗುಜರಾತ್‌-ರಾಜಸ್ಥಾನ್‌ ಸೆಣಸಲಿವೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ ತಲುಪಲಿದೆ. ಪರಾಜಿತ ತಂಡಕ್ಕೆ ಇನ್ನೊಂದು ಅವಕಾಶ ಲಭಿಸಲಿದೆ.

Advertisement

ಬುಧವಾರ ಆರ್‌ಸಿಬಿ-ಲಕ್ನೋ ನಡುವೆ ಎಲಿಮಿನೇಟರ್‌ ಪಂದ್ಯ ಸಾಗಲಿದೆ. ಇಲ್ಲಿ ಸೋತ ತಂಡ ಕೂಟದಿಂದ ನಿರ್ಗಮಿಸಲಿದೆ. ಗೆದ್ದ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದ ವಿರುದ್ಧ ಆಡಲಿದೆ. ಇದು ದ್ವಿತೀಯ ಕ್ವಾಲಿಫೈಯರ್‌. ಇಲ್ಲಿ ಗೆದ್ದವರು ಫೈನಲ್‌ಗೆ ಲಗ್ಗೆ ಇಡಲಿದ್ದಾರೆ. ಇದು ಕೂಟದ ಮಾದರಿ.

ಹೈದರಾಬಾದ್‌ ಸಾಧನೆ
ಕ್ವಾಲಿಫೈಯರ್‌, ಎಲಿಮಿನೇಟರ್‌ ಮಾದರಿಯನ್ನು ಅಳವಡಿಸಿದ ಬಳಿಕ ಐಪಿಎಲ್‌ ಹೆಚ್ಚು ರೋಚಕ ಹಾಗೂ ಸ್ಪರ್ಧಾತ್ಮಕವಾಗಿ ಗೋಚರಿಸಿದೆ. ಇಲ್ಲಿ ಎಲಿಮಿನೇಟರ್‌ ಪಂದ್ಯವನ್ನು ಆಡುವಾಗ ಹೆಚ್ಚು ಎಚ್ಚರಿಕೆ ಇರಬೇಕಾಗುತ್ತದೆ. ಏಕೆಂದರೆ ಇದು “ಮಾಡು-ಮಡಿ’ ಪಂದ್ಯ. ಸೋತ ತಂಡಕ್ಕೆ ಬಾಗಿಲು ಸಂಪೂರ್ಣವಾಗಿ ಮುಚ್ಚಲ್ಪಡುತ್ತದೆ.

ಐಪಿಎಲ್‌ ಇತಿಹಾಸದಲ್ಲಿ ಎಲಿಮಿನೇಟರ್‌ ಪಂದ್ಯವಾಡಿಯೂ ಚಾಂಪಿಯನ್‌ ಆಗಿ ಮೂಡಿಬಂದ ಏಕೈಕ ತಂಡವೆಂದರೆ ಸನ್‌ರೈಸರ್ ಹೈದರಾಬಾದ್‌. ಅದು 2016ರಲ್ಲಿ ಈ ಸಾಧನೆಗೈದಿತ್ತು. ಅಂದಿನ ನಾಯಕ ಡೇವಿಡ್‌ ವಾರ್ನರ್‌.

ಎಲಿಮಿನೇಟರ್‌ ಆಡುವ ತಂಡ ಟ್ರೋಫಿ ಎತ್ತುವ ಹಾದಿಯಲ್ಲಿ ಸತತ 3 ಪಂದ್ಯಗಳನ್ನು ಜಯಿಸಬೇಕಾಗುತ್ತದೆ. ಅಂದು ಹೊಸದಿಲ್ಲಿಯಲ್ಲಿ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಹೈದರಾಬಾದ್‌ಗೆ ಎದುರಾದ ತಂಡ ಕೆಕೆಆರ್‌. ವಾರ್ನರ್‌ ಸೇನೆ ಇದನ್ನು 22 ರನ್ನುಗಳಿಂದ ಜಯಿಸಿತು. ಬಳಿಕ ದ್ವಿತೀಯ ಕ್ವಾಲಿಫೈಯರ್‌ ಹಣಾಹಣಿಯಲ್ಲಿ ಗುಜರಾತ್‌ ಲಯನ್ಸ್‌ಗೆ 4 ವಿಕೆಟ್‌ಗಳ ಸೋಲುಣಿಸಿ ಫೈನಲ್‌ಗೆ ಲಗ್ಗೆ ಇರಿಸಿತು. ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಕಾಳಗದಲ್ಲಿ ಆತಿಥೇಯ ಆರ್‌ಸಿಬಿಯನ್ನು 8 ರನ್ನುಗಳಿಂದ ರೋಚಕವಾಗಿ ಮಣಿಸಿ ಟ್ರೋಫಿ ಎತ್ತಿತು!

2021ರಲ್ಲಿ ಕೆಕೆಆರ್‌ ಮುಂದೆಯೂ ಇಂಥದೊಂದು ಅವಕಾಶವಿತ್ತು. ಆದರೆ ಫೈನಲ್‌ನಲ್ಲಿ ಅದು ಚೆನ್ನೈಗೆ ಶರಣಾಗಿ ಚಾಂಪಿಯನ್‌ ಆಗುವ ಅವಕಾಶವನ್ನು ಕಳೆದುಕೊಂಡಿತು.

 

 

Advertisement

Udayavani is now on Telegram. Click here to join our channel and stay updated with the latest news.

Next