Advertisement

ಇಂದು ಸೋತವರ ಸೆಣಸಾಟ: ಚೆನ್ನೈ ಸೂಪರ್‌ ಕಿಂಗ್ಸ್‌-ಲಕ್ನೋ ಸೂಪರ್‌ ಜೈಂಟ್ಸ್‌

11:07 PM Mar 30, 2022 | Team Udayavani |

ಮುಂಬಯಿ: ಗುರುವಾರದ ಐಪಿಎಲ್‌ ಪಂದ್ಯ ಸೋತ ತಂಡಗಳೆರಡರ ನಡುವಿನ ಕಾಳಗಕ್ಕೆ ಸಾಕ್ಷಿಯಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಗೆ ಶರಣಾಗಿದ್ದ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ನೂತನ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಸ್ಪರ್ಧೆಗೆ ಇಳಿಯಲಿದೆ.

Advertisement

ಲಕ್ನೋ ತನ್ನ ಮೊದಲ ಪಂದ್ಯದಲ್ಲಿ ಇನ್ನೊಂದು ನೂತನ ತಂಡವಾದ ಗುಜರಾತ್‌ ಟೈಟಾನ್ಸ್‌ಗೆ ಶರಣಾಗಿತ್ತು.

ಚೆನ್ನೈ ಪಡೆಯ ಸೋಲಿಗೆ ಮುಖ್ಯ ಕಾರಣ ತೀವ್ರ ಬ್ಯಾಟಿಂಗ್‌ ವೈಫ‌ಲ್ಯ. ಕೆಕೆಆರ್‌ ವಿರುದ್ಧ ಗಳಿಸಲು ಸಾಧ್ಯವಾದದ್ದು ಬರೀ 131 ರನ್‌ ಮಾತ್ರ. 5 ವಿಕೆಟ್‌ ಕೈಲಿದ್ದೂ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫ‌ಲವಾಗಿತ್ತು. ಮಾಜಿ ನಾಯಕ ಧೋನಿ ಸಿಡಿದು ನಿಂತು ಅರ್ಧ ಶತಕ ಬಾರಿಸಿದ್ದರಿಂದ ಚೆನ್ನೈ ಸ್ಕೋರ್‌ಬೋರ್ಡ್‌ನಲ್ಲಿ ಇಷ್ಟಾದರೂ ರನ್‌ ದಾಖಲಾಯಿತು.

ಉಳಿದಂತೆ ಆರಂಭಿಕರಾದ ಋತುರಾಜ್‌ ಗಾಯಕ್ವಾಡ್‌ (0), ಡೇವನ್‌ ಕಾನ್ವೇ (3) ಉಮೇಶ್‌ ಯಾದವ್‌ ಮೋಡಿಗೆ ಸಿಲುಕಿ ಬೇಗನೇ ಪೆವಿಲಿಯನ್‌ ಸೇರಿಕೊಂಡರು. ರಾಬಿನ್‌ ಉತ್ತಪ್ಪ, ಅಂಬಾಟಿ ರಾಯುಡು ಸಿಡಿದರೂ ಇನ್ನಿಂಗ್ಸ್‌ ಬೆಳೆಸುವಲ್ಲಿ ವಿಫ‌ಲರಾದರು. ಮೊದಲ ಸಲ ನಾಯಕತ್ವ ವಹಿಸಿದ ರವೀಂದ್ರ ಜಡೇಜ ಜೋಶ್‌ ತೋರಲಿಲ್ಲ. ಶಿವಂ ದುಬೆ ಕೂಡ ಕೈಕೊಟ್ಟದ್ದು ಚೆನ್ನೈ ಸಂಕಟವನ್ನು ಬಿಗಡಾಯಿಸುವಂತೆ ಮಾಡಿತು.

ಇದನ್ನೂ ಓದಿ:ನಿಧಾನಗತಿಯ ಬೌಲಿಂಗ್‌: ಕೇನ್‌ ವಿಲಿಯಮ್ಸನ್‌ಗೆ 12 ಲಕ್ಷ ರೂ. ದಂಡ

Advertisement

ಚೆನ್ನೈ ಗೆಲುವಿನ ಹಳಿ ಏರಬೇಕಾದರೆ ಬ್ಯಾಟಿಂಗ್‌ ಕ್ಲಿಕ್‌ ಆಗಬೇಕಾದುದು ಅತ್ಯಗತ್ಯ. ಇಂಗ್ಲೆಂಡಿನ ಆಲ್‌ರೌಂಡರ್‌ ಮೊಯಿನ್‌ ಅಲಿ ಆಗಮನವಾದ್ದರಿಂದ ದ್ವಿತೀಯ ಪಂದ್ಯದಲ್ಲಿ ಚೆನ್ನೈ ಸುಧಾರಿತ ಪ್ರದರ್ಶನ ನೀಡಬಹುದೆಂಬುದೊಂದು ನಿರೀಕ್ಷೆ. ಪಿಂಚ್‌ ಹಿಟ್ಟರ್‌ ಆಗಿರುವ ಅಲಿ ಒನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬರಬಹುದು. ಇವರಿಗಾಗಿ ಆ್ಯಡಂ ಮಿಲ್ನೆ ಜಾಗ ಬಿಡಬೇಕಾಗುತ್ತದೆ.

ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾದ ಡ್ವೇನ್‌ ಪ್ರಿಟೋರಿಯಸ್‌ ಕೂಡ ಲಭ್ಯರಿದ್ದಾರೆ. ಆದರೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಡ್ವೇನ್‌ ಬ್ರಾವೊ ಮತ್ತು ಮಿಚೆಲ್‌ ಸ್ಯಾಂಟ್ನರ್‌ ಹನ್ನೊಂದರ ತಂಡದಲ್ಲಿ ಮುಂದುವರಿಯುವುದು ಬಹುತೇಕ ಖಚಿತವಾದ್ದರಿಂದ ಪ್ರಿಟೋರಿಯಸ್‌ ತುಸು ಕಾಯಬೇಕಾಗಿ ಬರಬಹುದು.

ಲಕ್ನೋಗೆ ಲಕ್‌ ಒಲಿದೀತೇ?
ಚೆನ್ನೈಯಂತೆ ಲಕ್ನೋ ಕೂಡ ನಿರಾಶಾದಾಯಕ ಆರಂಭ ಪಡೆದಿತ್ತು. ನಾಯಕ ಕೆ.ಎಲ್‌. ರಾಹುಲ್‌ ಮೊದಲ ಎಸೆತದಲ್ಲೇ ಔಟಾದದ್ದು, ಡಿ ಕಾಕ್‌, ಲೆವಿಸ್‌, ಪಾಂಡೆ ವಿಫ‌ಲರಾದದ್ದು ಒತ್ತಡವನ್ನು ಹೆಚ್ಚಿಸುವಂತೆ ಮಾಡಿತ್ತು. ಇವರೆಲ್ಲ ಸಿಡಿದು ನಿಂತರೆ ದೊಡ್ಡ ಮೊತ್ತ ಪೇರಿಸುವುದು ಲಕ್ನೋಗೆ ಸವಾಲೇನಲ್ಲ. ದೀಪಕ್‌ ಹೂಡಾ-ಆಯುಷ್‌ ಬದೋನಿ ಸಾಹಸದಿಂದಾಗಿ ಲಕ್ನೋ ಮೊತ್ತ ನೂರೈವತ್ತರ ಗಡಿ ದಾಟಿತ್ತು.

ತಂಡದ ಬೌಲಿಂಗ್‌ ವಿಭಾಗ ಹೇಳುವಷ್ಟು ಘಾತಕ ವಲ್ಲ. ಆವೇಶ್‌ ಖಾನ್‌, ರವಿ ಬಿಷ್ಣೋಯಿ, ದುಷ್ಮಂತ ಚಮೀರ ಮೇಲೆ ಹೆಚ್ಚಿನ ಒತ್ತಡ ಇದೆ. ಕರಣ್‌ ಶರ್ಮ, ಕೃಷ್ಣಪ್ಪ ಗೌತಮ್‌ ರೇಸ್‌ನಲ್ಲಿದ್ದಾರೆ.

ಇಂದಿನ ಪಂದ್ಯ
ಲಕ್ನೋ-ಚೆನ್ನೈ
ಸ್ಥಳ: ಮುಂಬಯಿ ಆರಂಭ: 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next