Advertisement

ಪಂಜಾಬ್‌-ಹೈದರಾಬಾದ್‌: ಮೊಹಾಲಿ ಮೇಲಾಟ

03:11 AM Apr 28, 2017 | Karthik A |

ಮೊಹಾಲಿ: ಹತ್ತನೇ ಐಪಿಎಲ್‌ ಪಂದ್ಯಾವಳಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ತವರಾದ ಮೊಹಾಲಿಗೆ ಕಾಲಿಟ್ಟಿದೆ. ಶುಕ್ರವಾರ ಇಲ್ಲಿ ಪ್ರಸಕ್ತ ಋತುವಿನ ಮೊದಲ ಪಂದ್ಯ ನಡೆಯಲಿದ್ದು, ಮ್ಯಾಕ್ಸ್‌ವೆಲ್‌ ಬಳಗ ಕಳೆದ ಬಾರಿಯ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ಸವಾಲನ್ನು ಎದುರಿಸಲಿದೆ. ಇದು ಇತ್ತಂಡಗಳ ಪಾಲಿನ ಎರಡನೇ ಸುತ್ತಿನ ಕದನ. ಎ. 17ರಂದು ಹೈದರಾಬಾದ್‌ನಲ್ಲಿ ತೀವ್ರ ಪೈಪೋಟಿ ನಡೆಸಿಯೂ ಪಂಜಾಬ್‌ 5 ರನ್ನಿನ ಸೋಲನ್ನು ಕಂಡಿತ್ತು. ಇದಕ್ಕೆ ತನ್ನ ಹೋಮ್‌ ಗ್ರೌಂಡ್‌ನ‌ಲ್ಲಿ ಪಂಜಾಬ್‌ ಪಡೆ ಸೇಡು ತೀರಿಸಿಕೊಂಡೀತೇ ಎಂಬುದು ಅಭಿಮಾನಿಗಳ ಮುಂದಿರುವ ಕುತೂಹಲ.

Advertisement

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ ಗಳಿಸಿದ್ದು 6ಕ್ಕೆ 159 ರನ್‌ ಮಾತ್ರ. ಆದರೆ ಇದನ್ನು ಬೆನ್ನಟ್ಟುವ ಹಾದಿಯಲ್ಲಿ ಪಂಜಾಬ್‌ 19.4 ಓವರ್‌ಗಳಲ್ಲಿ 154ಕ್ಕೆ ಆಲೌಟ್‌ ಆಯಿತು. ಆರಂಭಕಾರ ಮನನ್‌ ವೋಹ್ರ (95) ಹೊರತುಪಡಿಸಿ ಉಳಿದವರ್ಯಾರಿಗೂ ಹೈದರಾಬಾದ್‌ ದಾಳಿಯನ್ನು ಎದುರಿಸಿ ನಿಲ್ಲಲು ಸಾಧ್ಯವಾಗಿರಲಿಲ್ಲ. ಸದ್ಯ 8 ಪಂದ್ಯಗಳನ್ನಾಡಿರುವ ಡೇವಿಡ್‌ ವಾರ್ನರ್‌ ಬಳಗ ನಾಲ್ಕನ್ನು ಗೆದ್ದು ಮೂರರಲ್ಲಿ ಸೋಲನುಭವಿಸಿ 9 ಅಂಕ ಸಂಪಾದಿಸಿದೆ. ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ. ಆರ್‌ಸಿಬಿ ಎದುರಿನ ಮಂಗಳವಾರದ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಇನ್ನೊಂದೆಡೆ ಪಂಜಾಬ್‌ ಏಳರಲ್ಲಿ 3 ಪಂದ್ಯ ಜಯಿಸಿದೆ. ನಾಲ್ಕರಲ್ಲಿ ಎಡವಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 

ಸನ್‌ರೈಸರ್ ತನ್ನ ನಾಲ್ಕೂ ಗೆಲುವುಗಳನ್ನು ತವರಿನ ಅಂಗಳದಲ್ಲೇ ಸಂಪಾದಿಸಿತ್ತೆಂಬುದನ್ನು ಮರೆಯುವಂತಿಲ್ಲ. ಮುಂಬಯಿ, ಕೋಲ್ಕತಾ ಮತ್ತು ಪುಣೆಯಲ್ಲಿ ವಾರ್ನರ್‌ ಬಳಗ ಎಡವಿತ್ತು. ತವರಿನಾಚೆ ಹೈದರಾಬಾದ್‌ ಗೆಲುವಿನ ಹುಡುಕಾಟದಲ್ಲಿದೆ. ಈ ಗೆಲುವು ಮೊಹಾಲಿಯಲ್ಲಿ ಲಭಿಸೀತೇ ಎಂಬ ನಿರೀಕ್ಷೆಯಲ್ಲಿದೆ. ಆದರೆ ಹೈದರಾಬಾದ್‌ ಇನ್ನೂ ತವರಿನ ಹೊರಗೆ ಗೆದ್ದಿಲ್ಲ ಎಂಬ ಸಂಗತಿಯೇ ಪಂಜಾಬ್‌ನ ಮನೋಸ್ಥೈರ್ಯವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ!

ಎ. 28ರಿಂದ ಮೇ 9ರ ತನಕ ಪಂಜಾಬ್‌ ಪಡೆ ಮೊಹಾಲಿಯಲ್ಲಿ 4 ಪಂದ್ಯಗಳನ್ನು ಆಡಲಿದೆ. ತಂಡ ತವರಿನಂಗಳದ ಲಾಭ ಎತ್ತಬೇಕಾದ ಕಾರಣ ಎಲ್ಲವೂ ಮಹತ್ವದ್ದಾಗಿದೆ. ಪ್ಲೇ-ಆಫ್ ಸುತ್ತು ಪ್ರವೇಶಿಸಬೇಕಾದರೆ ಉಳಿದ ಏಳರಲ್ಲಿ 4 ಅಥವಾ 5 ಪಂದ್ಯಗಳನ್ನಾದರೂ ಗೆಲ್ಲಬೇಕಿದೆ ಎಂದಿದ್ದಾರೆ ತಂಡದ ‘ಕ್ರಿಕೆಟ್‌ ಆಫ್ ಆಪರೇಶನ್ಸ್‌’ನ ಮುಖ್ಯಸ್ಥ ವೀರೇಂದ್ರ ಸೆಹವಾಗ್‌. ಪಂಜಾಬ್‌ ಆರಂಭಕಾರ ಹಾಶಿಮ್‌ ಆಮ್ಲ ಉತ್ತಮ ಲಯದಲ್ಲಿದ್ದಾರೆ. ಒಂದು ಶತಕವನ್ನೂ ಬಾರಿಸಿದ್ದಾರೆ. ಆದರೆ ಈ ಶತಕ ಗೆಲುವನ್ನು ತಂದು ಕೊಡಲಿಲ್ಲ ಎಂಬುದು ಬೇರೆ ಮಾತು. ನಾಯಕ ಮ್ಯಾಕ್ಸ್‌ವೆಲ್‌ ಕೂಡ ಬಿರುಸಿನ ಬ್ಯಾಟಿಂಗಿನಲ್ಲಿ ಹಿಂದೆ ಬಿದ್ದಿಲ್ಲ. ಡೇವಿಡ್‌ ಮಿಲ್ಲರ್‌, ಎವೋನ್‌ ಮಾರ್ಗನ್‌ ಅವರಂಥ ಸ್ಟಾರ್‌ ಆಟಗಾರರೂ ತಂಡದಲ್ಲಿದ್ದಾರೆ.

ಹೈದರಾಬಾದ್‌ ಅಪಾಯಕಾರಿ!
ಹೈದರಾಬಾದ್‌ ಪ್ರತಿಯೊಂದು ವಿಭಾಗದಲ್ಲೂ ಬಲಿಷ್ಠವಾಗಿದ್ದು, ಅಪಾಯಕಾರಿ ಆಟಗಾರರನ್ನೇ ಹೊಂದಿದೆ. ಡೇವಿಡ್‌ ವಾರ್ನರ್‌ (235 ರನ್‌), ಶಿಖರ್‌ ಧವನ್‌ (282 ರನ್‌), ಹೆನ್ರಿಕ್ಸ್‌ (193 ರನ್‌) ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಕೇನ್‌ ವಿಲಿಯಮ್ಸನ್‌ ಡೆಲ್ಲಿ ವಿರುದ್ಧ 89 ರನ್‌ ಬಾರಿಸಿ ಮಿಂಚಿದ್ದಾರೆ. ಬೌಲಿಂಗ್‌ನಲ್ಲಿ ಭುವನೇಶ್ವರ್‌ ಕುಮಾರ್‌ (16 ವಿಕೆಟ್‌) ಮತ್ತು ರಶೀದ್‌ ಖಾನ್‌ (10 ವಿಕೆಟ್‌) ಹೈದರಾಬಾದ್‌ನ ಪ್ರಮುಖ ಅಸ್ತ್ರಗಳು. ಅಂದಹಾಗೆ ಈ ತಂಡದ ಯುವರಾಜ್‌ ಸಿಂಗ್‌ ಮತ್ತು ಪೇಸ್‌ ಬೌಲರ್‌ ಸಿದ್ಧಾರ್ಥ ಕೌಲ್‌ ಅವರಿಗೆ ಇದು ‘ತವರಿನ ಪಂದ್ಯ’ ಎಂಬುದನ್ನು ಮರೆಯುವಂತಿಲ್ಲ. ಇವರಿಬ್ಬರೂ ದೇಶಿ ಕ್ರಿಕೆಟ್‌ನಲ್ಲಿ ಪಂಜಾಬ್‌ ತಂಡದ ಪ್ರತಿನಿಧಿಗಳಾಗಿದ್ದಾರೆ. ಇದು ಸನ್‌ರೈಸರ್ಸ್ ಪಾಲಿಗೆ ಪ್ಲಸ್‌ ಪಾಯಿಂಟ್‌!

Advertisement
Advertisement

Udayavani is now on Telegram. Click here to join our channel and stay updated with the latest news.

Next