Advertisement

ಐಪಿಎಲ್‌: ಮುನ್ನಡೆಯಲ್ಲಿ ಮುಂಬೈ

08:22 PM Apr 27, 2017 | Team Udayavani |

ಮುಂಬಯಿ: ಐಪಿಎಲ್‌ ಹತ್ತು ಅರ್ಧ ದಾರಿ ಕ್ರಮಿಸಿದ್ದು ಮುಂಬೈ ಇಂಡಿಯನ್ಸ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಗುಜರಾತ್‌ ಲಯನ್ಸ್‌ ಕೊನೆಯ ಸ್ಥಾನದಲ್ಲಿದೆ. ಈ ಹಿಂದಿನ ಮೂರು ಐಪಿಎಲ್‌ಗ‌ಳಲ್ಲಿ ಮುಂಬೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆದರೆ ಈ ಬಾರಿ ಅದ್ಭುತ ಆಟದ ಪ್ರದರ್ಶನ ನೀಡಿದ ಮುಂಬೈ ಆಡಿದ ಎಂಟು ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಸಾಧಿಸಿ ಅಗ್ರಸ್ಥಾನ ಅಲಂಕರಿಸಿದೆ. ಮೊದಲ ಪಂದ್ಯ ಸೋತ ಬಳಿಕ ಸತತ ಆರು ಪಂದ್ಯ ಗೆದ್ದಿರುವ ಮುಂಬೈ ಈಗಾಗಲೇ ತನ್ನ ಶ್ರೇಷ್ಠ ಆಟವಾಡುವ ಬಳಗವನ್ನು ಗುರುತಿಸಿದೆ. ಕಣದಲ್ಲಿರುವ ಎಂಟು ತಂಡಗಳಲ್ಲಿ ಮುಂಬೈ ಕೇವಲ ಪುಣೆಗೆ ಮಾತ್ರ ಶರಣಾಗಿದೆ. ಉಳಿದ ತಂಡಗಳನ್ನು ಹೋಲಿಸಿದರೆ ಮುಂಬೈ ಕಡಿಮೆ ಬದಲಾವಣೆ ಮಾಡಿಕೊಂಡಿದೆ. ಬಹುತೇಕ ಭಾರತೀಯ ಆಟಗಾರರ ಬಲದಿಂದಲೇ ಮುಂಬೈ ಹೆಚ್ಚಿನ ಪಂದ್ಯಗಳಲ್ಲಿ ಜಯ ಒಲಿಸಿಕೊಂಡಿದೆ.

Advertisement

ನಿತೀಶ್‌ ರಾಣ ಸರಾಸರಿ 38ರಂತೆ 266 ರನ್‌ ಗಳಿಸಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಕೈರನ್‌ ಪೋಲಾರ್ಡ್‌ 199 ರನ್‌ ಗಳಿಸಿದ್ದು ಗುಜರಾತ್‌ ಮತ್ತು ಆರ್‌ಸಿಬಿ ವಿರುದ್ಧ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಲಸಿತ ಮಾಲಿಂಗ ಮತ್ತು ರೋಹಿತ್‌ ಶರ್ಮ ಅವರ ಫಾರ್ಮ್ ಉತ್ತಮಗೊಂಡರೆ ಮುಂಬೈ ಇನ್ನಷ್ಟು ಬಲಿಷ್ಠವಾಗಬಹುದು.

ಕೆಕೆಆರ್‌ ದ್ವಿತೀಯ


ಮುಂಬೈಯಂತೆ ಕೋಲ್ಕತಾ ನೈಟ್‌ರೈಡರ್ ಕೂಡ ಉತ್ತಮ ಆರಂಭ ಪಡೆದಿದ್ದು ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಜಯ ಸಾಧಿಸಿದೆ. ಆಂಡ್ರೆ ರಸೆಲ್‌ ಅವರ ಅನುಪಸ್ಥಿತಿಯ ಹೊರತಾಗಿಯೂ ಉತ್ತಮ ನಿರ್ವಹಣೆ ನೀಡಿದ ಕೆಕೆಆರ್‌ ಪವರ್‌ಪ್ಲೇಯಲ್ಲಿ ಆಕ್ರಮಣಕಾರಿ ಆಟಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಕ್ರಿಸ್‌ ಲಿನ್‌ ಮತ್ತು ಅವರ ಅನುಪಸ್ಥಿತಿಯಲ್ಲಿ ಸುನೀಲ್‌ ನಾರಾಯಣ್‌ ಇನ್ನಿಂಗ್ಸ್‌ ಆರಂಭಿಸಿ ಬಿರುಸಿನ ಆಟವಾಡಿ ರನ್‌ವೇಗ ಹೆಚ್ಚಿಸಲು ನೆರವಾಗಿದ್ದಾರೆ. ಪವರ್‌ಪ್ಲೇಯಲ್ಲಿ ಉತ್ತಮ ರನ್‌ಧಾರಣೆಯನ್ನು ಕೆಕೆಆರ್‌ ದಾಖಲಿಸಿದೆ. ಇದಲ್ಲದೇ ಬಿಗು ದಾಳಿಯ ನೆರವಿನಿಂದ ಕೆಕೆಆರ್‌ ಹೆಚ್ಚಿನ ಪಂದ್ಯಗಳಲ್ಲಿ ಜಯ ದಾಖಲಿಸಿದೆ. ಮೂವರು ಬೌಲರ್‌ಗಳು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿರುವುದು ಇದಕ್ಕೆ ಸಾಕ್ಷಿ.

ಕ್ರಿಸ್‌ ಲಿನ್‌ ಮತ್ತು ಸುನೀಲ್‌ ನಾರಾಯಣ್‌ ಆರಂಭಿಕರಾಗಿ ಬಿರುಸಿನ ಆಟವಾಡಿ 244 ರನ್‌ ಪೇರಿಸಿರುವುದು ಮತ್ತು ನಥನ್‌ ಕೌಲ್ಟರ್‌ ನೈಲ್‌ 8 ವಿಕೆಟ್‌ ಪಡೆದಿರುವುದು ಕೆಕೆಆರ್‌ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದೆ. ಇನ್ನಿಂಗ್ಸ್‌ನ ಅಂತ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ಪ್ರದ ರ್ಶನ ನೀಡುವುದು ಅಗತ್ಯವಾಗಿದೆ. ಸದ್ಯ 16ರಿಂದ 20 ಓವರ್‌ ನಡುವೆ ಕೆಕೆಆರ್‌ ಕಳಪೆ ರನ್‌ರೇಟ್‌ ಹೊಂದಿದೆ. ಇದಲ್ಲದೇ ಪಂದ್ಯ ಗೆಲ್ಲಿಸಿಕೊಡಬಲ್ಲ ಸಮರ್ಥ ಆಟಗಾರರ ಆವಶ್ಯಕತೆಯೂ ತಂಡಕ್ಕೆ ಬೇಕಾಗಿದೆ.

ಹೈದರಾಬಾದ್‌ಗೆ ಬೌಲಿಂಗ್‌ ಬಲ
ಈ ಋತುವಿನಲ್ಲಿ ಸನ್‌ರೈಸರ್ ಹೈದರಾಬಾದ್‌ ಅಸ್ಥಿರ ನಿರ್ವಹಣೆ ನೀಡಿದೆ. ಆಡಿದ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಮೂರನೇ ಸ್ಥಾನದಲ್ಲಿದೆ. ತವರಿನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿ ಗೆದ್ದಿರುವ ಹೈದರಾಬಾದ್‌ ಉತ್ತಮ ಬೌಲಿಂಗ್‌ ಪಡೆ ಹೊಂದಿದ್ದರೂ ತವರಿನ ಹೊರ ಗಡೆ ಒಂದು ಪಂದ್ಯ ಕೂಡ ಗೆದ್ದಿಲ್ಲ. ಅಗ್ರ ನಾಲ್ಕರೊಳಗಿನ ಸ್ಥಾನ ಪಡೆಯಲು ಹೈದರಾಬಾದ್‌ ಪ್ರಯತ್ನಿಸಲಿದೆ. ಭುವನೇಶ್ವರ್‌ ಕುಮಾರ್‌ ಮತ್ತು ರಶೀದ್‌ ಖಾನ್‌ ಅವರ ಬಲದಿಂದ ತಂಡ ಗೆಲುವು ಒಲಿಸಿಕೊಂಡಿದೆ.

Advertisement

ಮಧ್ಯಮ ಕ್ರಮಾಂಕದ ಆಟಗಾರರು ಮಿಂಚಬೇಕಾಗಿದೆ. ಕಳೆದ ಋತುವಿನಲ್ಲಿ ಡೇವಿಡ್‌ ವಾರ್ನರ್‌ ಮತ್ತು ಶಿಖರ್‌ ಧವನ್‌ ತಂಡ ಗಳಿಸಿದ ಮೊತ್ತದ ಶೇಕಡಾ 60ರಷ್ಟು ರನ್‌ ಅನ್ನು ಗಳಿಸಿದ್ದರು. ಆರಂಭಿಕರನ್ನು ತಂಡ ಅವವಂಬಿಸುವುದನ್ನು ತಪ್ಪಿಸಬೇಕು ಮತ್ತು ಪ್ರತಿಯೊಬ್ಬರು ಸಂಘಟಿತ ಹೋರಾಟ ನೀಡಿ ಗೆಲುವು ಒಲಿಸಿಕೊಳ್ಳಲು ಪ್ರಯತ್ನಿಸುವುದು ಅಗತ್ಯವಾಗಿದೆ. 

ರೈಸಿಂಗ್‌ ಪುಣೆ ಸೂಪರ್‌ಜೈಂಟ್‌


ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ನ ಇಷ್ಟರವರೆಗಿನ ನಿರ್ವಹಣೆ ಆಶ್ಚರ್ಯ ಹುಟ್ಟಿಸುತ್ತಿದೆ. ತಾಹಿರ್‌ ಹೊರತು ಪಡಿಸಿದರೆ ತಂಡ ಅನನುಭವಿ ಬೌಲಿಂಗ್‌ ಪಡೆಯನ್ನು ಹೊಂದಿದೆ. ಉತ್ತಮ ತಂಡದೆದುರು ಮೂರು ಪಂದ್ಯ ಗೆದ್ದಿರುವ ಪುಣೆ ಕೂಟದ ದ್ವಿತೀಯಾರ್ಧದಲ್ಲಿ ಇನ್ನಷ್ಟು ಸುಧಾರಿತ ಆಟವಾಡಿ ಗೆಲುವಿಗೆ ಪ್ರಯತ್ನಿಸಬೇಕಾಗಿದೆ. ಸ್ಟೀವನ್‌ ಸ್ಮಿತ್‌, ಧೋನಿ ಮತ್ತು ದುಬಾರಿ ಆಟಗಾರ ಬೆನ್‌ ಸ್ಟೋಕ್ಸ್‌ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರರಾಗಿದ್ದಾರೆ. 

ಪಂಜಾಬ್‌ ಕಳಪೆ ಬ್ಯಾಟಿಂಗ್‌
ಕಳೆದ ಎರಡು ಐಪಿಎಲ್‌ ಋತುಗಳಿಗೆ ಹೋಲಿಸಿದರೆ ಈ ಬಾರಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮೊದಲಾರ್ಧದಲ್ಲಿ ಕಳಪೆ ನಿರ್ವಹಣೆ ದಾಖಲಿಸಿದೆ. ಆಡಿದ ಏಳು ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಗೆಲುವು ಕಂಡಿದೆ. ಪ್ರತಿಯೊಂದು ಪಂದ್ಯದಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿರುವ ಆದು ಬೌಲಿಂಗ್‌ನಲ್ಲಿಯೂ ಕಳಪೆ ನಿರ್ವಹಣೆ ನೀಡಿದೆ. ಮುಂದಿನ ಎರಡು ವಾರಗಳಲ್ಲಿ ಪಂಜಾಬ್‌ ಇವೋನ್‌ ಮಾರ್ಗನ್‌, ಡೇವಿಡ್‌ ಮಿಲ್ಲರ್‌ ಮತ್ತು ಆಮ್ಲ ಅವರ ಸೇವೆ ಕಳೆದುಕೊಳ್ಳುವ ಸಾಧ್ಯತೆಯಿದೆ. ಪ್ಲೇ ಆಫ್ಗೆ ತೇರ್ಗಡೆಯಾಗಲು ತೀವ್ರ ಹೋರಾಟ ನೀಡುವ ನಿರೀಕ್ಷೆಯಿದೆ. ಹಾಶಿಮ್‌ ಆಮ್ಲ ಶತಕ ಸಹಿತ 299 ರನ್‌ ಪೇರಿಸಿ ಗಮನ ಸೆಳೆದಿದ್ದಾರೆ. 

ಡೆಲ್ಲಿ ಡೇರ್‌ಡೆವಿಲ್ಸ್‌
ಡೆಲ್ಲಿ ಡೇರ್‌ಡೆವಿಲ್ಸ್‌ ತಂಡ ಈ ಕೂಟದ ಶ್ರೇಷ್ಠ ಬೌಲಿಂಗ್‌ ಪಡೆಯನ್ನು ಹೊಂದಿದ ತಂಡವಾಗಿದೆ. ಆದರೆ ಅನನುಭವಿ ಬ್ಯಾಟಿಂಗ್‌ನಿಂದ ಮತ್ತು ಬ್ಯಾಟಿಂಗ್‌ ಕ್ರಮಾಂಕದ ಕಳಪೆ ನಿರ್ಧಾರದಿಂದ ತಂಡ ಸೋಲು ಕಾಣುವಂತಾಗಿದೆ. ಮುಂದಿನ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡದಲ್ಲಿ ಸೇರಿಕೊಳ್ಳುವ ಕಾರಣ ಸ್ಯಾಮ್‌ ಬಿಲ್ಲಿಂಗ್ಸ್‌, ಕ್ರಿಸ್‌ ಮೊರಿಸ್‌ ಮತ್ತು ಕಾಗಿಸೊ ರಬಾಡ ಅವರ ಸೇವೆಯಿಂದ ಡೆಲ್ಲಿ ವಂಚಿತವಾಗಲಿದೆ.

ಗುಜರಾತ್‌ ಲಯನ್ಸ್‌
ಉತ್ತಮ ಬ್ಯಾಟಿಂಗ್‌ ಪಡೆಯನ್ನು ಹೊಂದಿದ್ದರೂ ಗುಜರಾತ್‌ ಲಯನ್ಸ್‌ ತಂಡ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಅವರನ್ನು ಅವಲಂಬಿಸಿದೆ. ಮುಂದಿನ ಪಂದ್ಯಗಳಲ್ಲಿ ಬ್ರಾವೊ ಅವರ ಅನುಪಸ್ಥಿತಿಯಿಂದ ತಂಡದ ಬೌಲಿಂಗ್‌ಗೆ ಹಿನ್ನಡೆಯಾಗಲಿದೆ. ಆಡಿದ ಏಳು ಪಂದ್ಯಗಳಲ್ಲಿ ತಂಡ ಎರಡರಲ್ಲಿ ಮಾತ್ರ ಜಯ ಕಂಡಿದೆ. ಪ್ಲೇ ಆಫ್ಗೆ ತೇರ್ಗಡೆಯಾಗಬೇಕಾದರೆ ಇನ್ನುಳಿದ ಎಲ್ಲ ಪಂದ್ಯಗಳಲ್ಲಿ ಗೆಲ್ಲಬೇಕಾಗಿದೆ.

ಆರ್‌ಸಿಬಿ ದಾರಿ ದುರ್ಗಮ


ಕೆಕೆಆರ್‌ ವಿರುದ್ಧ ಘೋರ ಸೋಲು ಕಂಡ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಪ್ಲೇಆಫ್ಗೆ ತೇರ್ಗಡಯಾಗುವ ದಾರಿ ದುರ್ಗಮವಾಗಿದೆ. ಇನ್ನುಳಿದ ಎಲ್ಲ ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಮುನ್ನಡೆಯುವ ಸಾಧ್ಯತೆಯಿದೆ. ಎಬಿ ಡಿ’ವಿಲಿಯರ್ಸ್. ಕ್ರಿಸ್‌ ಗೇಲ್‌ ಮತ್ತು ವಿರಾಟ್‌ ಕೊಹ್ಲಿ ಜತೆಯಾಗಿ ಕೇವಲ ಮೂರು ಪಂದ್ಯಗಳಲ್ಲಿ ಆಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಡಿ’ವಿಲಿಯರ್ ಇರುವ ಸಾಧ್ಯತೆಯಿಲ್ಲ. ಹಾಗಾಗಿ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next