Advertisement

IPL;ಇಂದು ಆರ್‌ಸಿಬಿ ಎದುರಾಳಿ ಗುಜರಾತ್‌ ಟೈಟಾನ್ಸ್‌:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ

12:40 AM May 04, 2024 | Team Udayavani |

ಬೆಂಗಳೂರು: ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವು ಐಪಿಎಲ್‌ನ ಶನಿವಾರದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡ ವನ್ನು ಎದುರಿಸಲಿದೆ. ಐಪಿಎಲ್‌ನ ಪ್ಲೇಆಫ್ಗೆ ತೇರ್ಗಡೆಯಾಗಬೇಕಾದರೆ ಎರಡೂ ತಂಡಗಳಿಗೆ ಮುಂದಿನ ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದೆ.

Advertisement

ಆರ್‌ಸಿಬಿ ಸದ್ಯ ಆಡಿರುವ 10 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಆರಂಕ ಹೊಂದಿದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದೇ ವೇಳೆ ಗುಜರಾತ್‌ ನಾಲ್ಕರಲ್ಲಿ ಜಯ ಸಾಧಿಸಿದ್ದು ಎಂಟಂಕದೊಂದಿಗೆ ಎಂಟನೇ ಸ್ಥಾನದಲ್ಲಿದೆ. ಬಲಿಷ್ಠ ತಂಡಗಳಲ್ಲಿ ಒಂದಾದ ಚೆನ್ನೈ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಸದ್ಯ ಹತ್ತು ಅಂಕ ಹೊಂದಿದ್ದರಿಂದ ಗೆಲುವು ಸಾಧಿಸಲು ಒದ್ದಾಡುತ್ತಿರುವ ಕಾರಣ ಉಳಿದ ತಂಡಗಳಿಗೆ ತಮ್ಮ ಸ್ಥಾನವನ್ನು ಉತ್ತಮಪಡಿಸಲು ಉತ್ತಮ ಅವಕಾಶ ಲಭಿಸಿದೆ. ಈ ಮೂಲಕ ನಾಕೌಟ್‌ ಹಂತಕ್ಕೆ ಏರಲು ಪ್ರಯತ್ನಿಸಬಹುದಾಗಿದೆ.

ಉಳಿದ ತಂಡಗಳ ಸಾಮರ್ಥ್ಯ ಮತ್ತು ಅಂಕಪಟ್ಟಿಯ ಸ್ಥಾನವನ್ನು ಗಮನಿಸುವ ಮೊದಲು ಆರ್‌ಸಿಬಿ ಮತ್ತು ಗುಜರಾತ್‌ ಗೆಲುವಿನತ್ತ ಗಮನ ಹರಿಸುವುದು ಅತೀ ಮುಖ್ಯವಾಗಿದೆ. ಮುಂದಿನ ಪಂದ್ಯಗಳಲ್ಲಿ ಭಾರೀ ಗೆಲುವಿನತ್ತ ಪ್ರಯತ್ನ ಸಾಗಿದರೆ ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಉತ್ತಮಪಡಿಸುವ ಜತೆಗೆ ಪ್ಲೇಆಫ್ಗೆ ತೇರ್ಗಡೆ ಯಾಗಲು ಎರಡೂ ತಂಡಗಳಿಗೆ ಸಾಧ್ಯವಿದೆ.

ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಫಾ ಡು ಪ್ಲೆಸಿಸ್‌ ನೇತೃತ್ವದ ಆರ್‌ಸಿಬಿ ತಂಡ ಮುಂದಿನ ಪಂದ್ಯಗಳಲ್ಲೂ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಮಿಂಚಿದರೆ ಗೆಲುವು ದಾಖಲಿಸಬಹುದು. ಸ್ಫೋಟಕ ಶತಕ ಸಿಡಿಸಿರುವ ವಿಲ್‌ ಜ್ಯಾಕ್ಸ್‌ ಮತ್ತು ಹೈದರಾಬಾದ್‌ ವಿರುದ್ಧ ಕ್ಯಾಮರಾನ್‌ ಗ್ರೀನ್‌ ಅವರ ಆಲ್‌ರೌಂಡ್‌ ನಿರ್ವಹಣೆ ಆರ್‌ಸಿಬಿಯ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಅವರಿಬ್ಬರು ತವರಿನಲ್ಲಿ ನಡೆಯುವ ಶನಿವಾರದ ಪಂದ್ಯದಲ್ಲೂ ಮಿಂಚಿನ ನಿರ್ವಹಣೆ ನೀಡುವ ನಿರೀಕ್ಷೆ ಇಡಲಾಗಿದೆ.

ಅಗ್ರ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ನಲ್ಲಿ ವಿರಾಟ್‌ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್‌ನ ಈ ಋತುವಿನಲ್ಲಿ 500 ರನ್‌ ಗುರಿ ದಾಟಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿರುವ ಅವರು ಆರ್‌ಸಿಬಿಯನ್ನು ಆಧರಿಸುವ ಸಾಧ್ಯತೆಯಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ಗುಜರಾತ್‌ ತಂಡವನ್ನು 9 ವಿಕೆಟ್‌ ಅಂತರದಿಂದ ಸೋಲಿಸಿರುವುದು ಆರ್‌ಸಿಬಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

Advertisement

ಬೌಲರ್‌ಗಳಾದ ಸಿರಾಜ್‌, ಯಶ್‌ ದಯಾಳ್‌, ಕಣ್‌ì ಮತ್ತು ಸ್ವಪ್ನಿಲ್‌ ಸ್ಥಿರ ನಿರ್ವಹಣೆ ನೀಡಿದರೆ ಆರ್‌ಸಿಬಿ ಮೇಲುಗೈ ಸಾಧಿಸಬಹುದು.

ತಿರುಗೇಟು ಸಾಧ್ಯತೆ
ಬಲಿಷ್ಠ ಬ್ಯಾಟಿಂಗ್‌ ಶಕ್ತಿಯನ್ನು ಹೊಂದಿರುವ ಗುಜರಾತ್‌ ಟೈಟಾನ್ಸ್‌ ತಂಡವು ಮೊದಲ ಸುತ್ತಿನ ಪಂದ್ಯದಲ್ಲಿ ಆದ ಸೋಲಿಗೆ ತಿರುಗೇಟು ನೀಡುವ ಸಾಧ್ಯತೆಯಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯಲು ಪ್ರಯತ್ನಿಸಬಹುದು. ಉತ್ತಮ ಫಾರ್ಮ್ನಲ್ಲಿರುವ ಶುಭ್‌ಮನ್‌ ಗಿಲ್‌, ಸಾಯಿ ಸುದರ್ಶನ್‌ ಮುಂದಿನ ಪಂದ್ಯಗಳಲ್ಲೂ ಬ್ಯಾಟಿಂಗ್‌ನಲ್ಲಿ ಮಿಂಚುವ ನಿರೀಕ್ಷೆಯಿದೆ. ಅವರೊಂದಿಗೆ ವೃದ್ಧಿಮಾನ್‌ ಸಾಹಾ, ಡೇವಿಡ್‌ ಮಿಲ್ಲರ್‌, ರಾಹುಲ್‌ ತೆವಾಟಿಯ, ವಿಜಯಶಂಕರ್‌ ಮತ್ತು ಶಾರೂಖ್‌ ಖಾನ್‌ ಬ್ಯಾಟಿಂಗ್‌ನಲ್ಲಿ ತಂಡವನ್ನು ಆಧರಿಸಿದರೆ ತಂಡ ಗೆಲ್ಲಬಹುದು.

ಬ್ಯಾಟಿಂಗ್‌ ಜತೆ ಬೌಲರ್‌ಗಳೂ ಬಿಗು ದಾಳಿ ಸಂಘಟಿಸುವುದು ಅನಿವಾರ್ಯವಾಗಿದೆ. ತಂಡ ಸ್ಟಾರ್‌ ಸ್ಪಿನ್ನರ್‌ ಆಗಿರುವ ರಶೀದ್‌ ಖಾನ್‌ ಇಷ್ಟರವರೆಗಿನ 10 ಪಂದ್ಯಗಳಿಂದ ಕೇವಲ ಎಂಟು ವಿಕೆಟ್‌ ಉರುಳಿಸಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಅವರು 17 ಪಂದ್ಯಗಳಿಂದ 27 ವಿಕೆಟ್‌ ಉರುಳಿಸಿದ್ದರು. ಇದನ್ನು ಗಮನಿಸಿದರೆ ಅವರ ನಿರ್ವಹಣೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಮೊಹಮ್ಮದ್‌ ಶಮಿ ಅವರ ಅನುಪಸ್ಥಿತಿಯಲ್ಲಿ ಉಮೇಶ್‌ ಯಾದವ್‌ ಮತ್ತು ಮೋಹಿತ್‌ ಶರ್ಮ ವೇಗದ ದಾಳಿಯ ನೇತೃತ್ವ ವಹಿಸಿದ್ದು ನಿರೀಕ್ಷಿತ ನಿರ್ವಹಣೆ ನೀಡಿಲ್ಲ.

ಪಿಚ್‌ ವರದಿ
ಚಿನ್ನಸ್ವಾಮಿ ಮೈದಾನದಲ್ಲಿನ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಆದರೂ ಶುಕ್ರವಾರ ಮಳೆಯಾಗಿರುವ ಕಾರಣ ಔಟ್‌ಫೀಲ್ಡ್‌ನಲ್ಲಿ ಚೆಂಡು ಉರುಳುವುದು ನಿಧಾನವಾಗಲಿದೆ. ಅಲ್ಲದೇ ಈ ಪಿಚ್‌ನಲ್ಲಿ ಮೀಡಿಯಂ ಪೇಸರ್‌ಗಳು ಕೊಂಚ ನೆರವು ಪಡೆದುಕೊಳ್ಳಬಹುದು.

ಲಘು ಮಳೆ ಸಾಧ್ಯತೆ
ಕರ್ನಾಟಕ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಶನಿವಾರ ಬೆಂಗಳೂರಿನಲ್ಲಿ ಲಘು ಮಳೆಯಾಗಲಿದೆ. ಸದ್ಯದ ಪ್ರಕಾರ ಭಾರೀ ಪ್ರಮಾಣದಲ್ಲಿ ಮಳೆಯುವ ಸಾಧ್ಯತೆಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next