Advertisement

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

11:35 PM Sep 26, 2021 | Team Udayavani |

ದುಬಾೖ: ಹರ್ಷಲ್‌ ಪಟೇಲ್‌ ಅವರ ಅಮೋಘ ಹ್ಯಾಟ್ರಿಕ್‌ ಸಾಹಸ ಹಾಗೂ ವಿರಾಟ್‌ ಕೊಹ್ಲಿ -ಗ್ಲೆನ್‌ ಮ್ಯಾಕ್ಸ್‌ವೆಲ್‌ ಜೋಡಿಯ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಎದುರಿನ ರವಿವಾರ ರಾತ್ರಿಯ ಐಪಿಎಲ್‌ ಪಂದ್ಯವನ್ನು ಆರ್‌ಸಿಬಿ 54 ರನ್ನುಗಳಿಂದ ಜಯಿಸಿದೆ. ಇದರೊಂದಿಗೆ ಪ್ರಸಕ್ತ ಐಪಿಎಲ್‌ನಲ್ಲಿ ಮುಂಬೈ ಎದುರಿನ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದಂತಾಯಿತು. ಜತೆಗೆ ಯುಎಇಯಲ್ಲೂ ಗೆಲುವಿನ ಖಾತೆ ತೆರೆಯಿತು.

Advertisement

ಆರ್‌ಸಿಬಿ 6 ವಿಕೆಟಿಗೆ 165 ರನ್‌ ಬಾರಿಸಿ ಸವಾಲೊಡ್ಡಿದರೆ, ಮುಂಬೈ 18.1 ಓವರ್‌ಗಳಲ್ಲಿ 111ಕ್ಕೆ ಆಲೌಟ್‌ ಆಯಿತು. ಆರ್‌ಸಿಬಿ ಮುಂಬೈಯನ್ನು ಆಲೌಟ್‌ ಮಾಡಿದ ಮೊದಲ ನಿದರ್ಶನ ಇದಾಗಿದೆ.

3ನೇ ಹ್ಯಾಟ್ರಿಕ್‌ ಹೀರೋ
17ನೇ ಓವರ್‌ ದಾಳಿಗಿಳಿದ ಹರ್ಷಲ್‌ ಪಟೇಲ್‌, ಮೊದಲ 3 ಎಸೆತಗಳಲ್ಲಿ ಹಾರ್ದಿಕ್‌ ಪಾಂಡ್ಯ, ಕೈರನ್‌ ಪೊಲಾರ್ಡ್‌ ಮತ್ತು ರಾಹುಲ್‌ ಚಹರ್‌ ವಿಕೆಟ್‌ ಉಡಾಯಿಸಿ ಹ್ಯಾಟ್ರಿಕ್‌ ಪೂರೈಸಿದರು. ಪಟೇಲ್‌ ಸಾಧನೆ 17ಕ್ಕೆ 4 ವಿಕೆಟ್‌. ಇದು ಆರ್‌ಸಿಬಿ ಪರ ದಾಖಲಾದ 3ನೇ ಹ್ಯಾಟ್ರಿಕ್‌. 2010ರಲ್ಲಿ ಪ್ರವೀಣ್‌ ಕುಮಾರ್‌ ರಾಜಸ್ಥಾನ್‌ ವಿರುದ್ಧ (ಬೆಂಗಳೂರು), 2017ರಲ್ಲಿ ಸಾಮ್ಯುಯೆಲ್‌ ಬದ್ರಿ ಮುಂಬೈ ವಿರುದ್ಧವೇ (ಬೆಂಗಳೂರು) ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು.

ಚೇಸಿಂಗ್‌ ವೇಳೆ ಆರಂಭಿಕರಾದ ನಾಯಕ ರೋಹಿತ್‌ ಶರ್ಮ (43) ಮತ್ತು ಕ್ವಿಂಟನ್‌ ಡಿ ಕಾಕ್‌ (24) ಹೊರತುಪಡಿಸಿ ಉಳಿದವರ್ಯಾರೂ ಎರಡಂಕೆಯ ಮೊತ್ತ ದಾಖಲಿಸಲಿಲ್ಲ. ಚಹಲ್‌ 4 ಓವರ್‌ಗಳಲ್ಲಿ ಕೇವಲ 11 ರನ್ನಿತ್ತು 3 ವಿಕೆಟ್‌ ಉರುಳಿಸಿದರು.

ಇದನ್ನೂ ಓದಿ:ಕೊನೆಯ ಎಸೆತದಲ್ಲಿ ಚೆನ್ನೈಗೆ ಜಯ

Advertisement

ಕೊಹ್ಲಿಗೆ ಒಲಿದ ಅದೃಷ್ಟ
ಮುಂಬೈಯಿಂದ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆರ್‌ಸಿಬಿ, ದ್ವಿತೀಯ ಎಸೆತದಲ್ಲೇ ಕೊಹ್ಲಿ ವಿಕೆಟ್‌ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿತ್ತು. ಇದನ್ನು ಚಹರ್‌ ಕೈಚೆಲ್ಲಿದರು. ಕೊಹ್ಲಿಗೆ ಸಿಕ್ಸರ್‌ ಒಲಿಯಿತು. ಈ ಲಕ್‌ 16ನೇ ಓವರ್‌ ಮುಂದುವರಿಯುತ್ತ ಹೋಯಿತು. ಕೊಹ್ಲಿ ಸತತ 2ನೇ ಅರ್ಧ ಶತಕದೊಂದಿಗೆ ಮಿಂಚಿದರು. 42 ಎಸೆತ ನಿಭಾಯಿಸಿದ ಆರ್‌ಸಿಬಿ ಕಪ್ತಾನ 3 ಸಿಕ್ಸರ್‌, 3 ಬೌಂಡರಿ ನೆರವಿನಿಂದ 51 ರನ್‌ ಹೊಡೆದರು. ಮ್ಯಾಕ್ಸ್‌ವೆಲ್‌ ಗಳಿಕೆ 37 ಎಸೆತಗಳಿಂದ ಸರ್ವಾಧಿಕ 56 ರನ್‌ (6 ಬೌಂಡರಿ, 3 ಸಿಕ್ಸರ್‌). ಇದು ಪ್ರಸಕ್ತ ಋತುವಿನ 3ನೇ ಫಿಫ್ಟಿ.

ದ್ವಿತೀಯ ಓವರ್‌ನಲ್ಲಿ ಜಸ್‌ಪ್ರೀತ್‌ಬುಮ್ರಾ, ಪಡಿಕ್ಕಲ್‌ಗೆ (0) ಪೆವಿಲಿಯನ್‌ ಹಾದಿ ತೋರಿಸಿದರೂ ಕೊಹ್ಲಿ ಅಬ್ಬರಿಸುತ್ತಲೇ ಹೋದರು. ಅವರಿಗೆ ಶ್ರೀಕರ್‌ ಭರತ್‌ ಉತ್ತಮ ಬೆಂಬಲ ನೀಡಿದರು. ದ್ವಿತೀಯ ವಿಕೆಟಿಗೆ 7.1 ಓವರ್‌ಗಳಿಂದ 68 ರನ್‌ ಹರಿದು ಬಂತು. ಇದರಲ್ಲಿ ಭರತ್‌ ಕೊಡುಗೆ 32 ರನ್‌. 24 ಎಸೆತಗಳ ಈ ಸೊಗಸಾದ ಆಟದ ವೇಳೆ 2 ಸಿಕ್ಸರ್‌, 2 ಬೌಂಡರಿ ಸಿಡಿಯಿತು.

ಪವರ್‌ ಪ್ಲೇ ಆಟದಲ್ಲಿ ಒಂದಕ್ಕೆ 48 ರನ್‌ ಮಾಡಿದ ಆರ್‌ಸಿಬಿ, 10 ಓವರ್‌ಗಳಲ್ಲಿ 2ಕ್ಕೆ 82 ರನ್‌ ಗಳಿಸಿತು. 3ನೇ ಕ್ರಮಾಂಕದಲ್ಲಿ ಕ್ರೀಸ್‌ ಇಳಿದ ಮ್ಯಾಕ್ಸ್‌ವೆಲ್‌ ಕೂಡ ಬಿರುಸಿನ ಆಟಕ್ಕಿಳಿದರು. ಬೌಂಡರಿ, ಸಿಕ್ಸರ್‌ ಸರಾಗ ವಾಗಿ ಬರತೊಡಗಿತು. ಕೊಹ್ಲಿ-ಮ್ಯಾಕ್ಸ್‌ವೆಲ್‌ ಭರ್ತಿ 7 ಓವರ್‌ ನಿಭಾಯಿಸಿದರು. 3ನೇ ವಿಕೆಟಿಗೆ 51 ರನ್‌ ಒಟ್ಟುಗೂಡಿತು. ಮ್ಯಾಕ್ಸ್‌ವೆಲ್‌ ರಿವರ್ಸ್‌ ಸ್ವೀಪ್‌ ಮೂಲಕ ಮುಂಬೈ ಬೌಲರ್‌ಗಳನ್ನು ಗೋಳುಹೊಯ್ದುಕೊಂಡರು. ಅವರ ಸಿಕ್ಸರ್‌ಗಳೆಲ್ಲವೂ ರಿವರ್ಸ್‌ ಸ್ವೀಪ್‌ ಮೂಲಕವೇ ಬಂದುದು ವಿಶೇಷವಾಗಿತ್ತು.

ಅನಂತರ ಕ್ರೀಸ್‌ ಇಳಿದ ಎಬಿ ಡಿವಿಲಿಯರ್ ಸಿಕ್ಸರ್‌ ಮೂಲಕವೇ ಅಬ್ಬರಿಸಿದರೂ ಡೆತ್‌ ಓವರ್‌ಗಳಲ್ಲಿ ಆರ್‌ಸಿಬಿ ಓಟಕ್ಕೆ ದೊಡ್ಡ ಬ್ರೇಕ್‌ ಬಿತ್ತು. ಜಸ್‌ಪ್ರೀತ್‌ ಬುಮ್ರಾ ಸತತ ಎಸೆತಗಳಲ್ಲಿ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಮತ್ತು ಎಬಿಡಿ ವಿಕೆಟ್‌ ಕಿತ್ತು ಮುಂಬೈಗೆ ಮೇಲುಗೈ ಒದಗಿಸಿದರು. ಕೊನೆಯ 2 ಓವರ್‌ಗಳಲ್ಲಿ ಆರ್‌ಸಿಬಿಗೆ ಗಳಿಸಲು ಸಾಧ್ಯವಾದದ್ದು 9 ರನ್‌ ಮಾತ್ರ.

ಕೊಹ್ಲಿ 10 ಸಾವಿರ ರನ್‌ ಸರದಾರ
ಮುಂಬೈ ಇಂಡಿಯನ್ಸ್‌ ಎದುರಿನ ರವಿವಾರ ರಾತ್ರಿಯ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ನೂತನ ಎತ್ತರ ತಲುಪಿದರು. ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಪೂರ್ತಿಗೊಳಿಸಿದ ಹಿರಿಮೆಗೆ ಪಾತ್ರರಾದರು. ಅಂತಾರಾಷ್ಟ್ರೀಯ, ದೇಶಿ ಹಾಗೂ ಫ್ರಾಂಚೈಸಿ ಪಂದ್ಯಗಳೆಲ್ಲವೂ ಇದರಲ್ಲಿ ಸೇರಿವೆ.

ಇಂಡಿಯನ್‌ ಟೀಮ್‌-ಮೇಟ್‌ ಬುಮ್ರಾ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಕೊಹ್ಲಿ 10 ಸಾವಿರ ರನ್‌ ಗಡಿ ತಲುಪಿದರು. ಈ ಪಂದ್ಯ ಆಡಲಿಳಿಯುವಾಗ ಕೊಹ್ಲಿ ಮೈಲುಗಲ್ಲಿಗೆ ಕೇವಲ 13 ರನ್‌ ಅಗತ್ಯವಿತ್ತು. ಇದು ಅವರ 314ನೇ ಪಂದ್ಯ.

ರವಿವಾರದ ಪಂದ್ಯಕ್ಕೂ ಮುನ್ನ 298 ಟಿ20 ಇನ್ನಿಂಗ್ಸ್‌ಗಳಲ್ಲಿ ಆಡಲಿಳಿದಿರುವ ಕೊಹ್ಲಿ, 41.61ರ ಸರಾಸರಿಯಲ್ಲಿ ರನ್‌ ಪೇರಿಸಿದ್ದಾರೆ. 5 ಶತಕ, 73 ಅರ್ಧ ಶತಕಗಳು ಇದರಲ್ಲಿ ಸೇರಿವೆ. 113 ರನ್‌ ಸರ್ವಾಧಿಕ ಗಳಿಕೆ.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಸಿ ರಾಯ್‌ ಬಿ ಮಿಲ್ನೆ 51
ಪಡಿಕ್ಕಲ್‌ ಸಿ ಡಿ ಕಾಕ್‌ ಬಿ ಬುಮ್ರಾ 0
ಎಸ್‌. ಭರತ್‌ ಸಿ ಸೂರ್ಯಕುಮಾರ್‌ ಬಿ ಚಹರ್‌ 32
ಮ್ಯಾಕ್ಸ್‌ವೆಲ್‌ ಸಿ ಬೌಲ್ಟ್ ಬಿ ಬುಮ್ರಾ 56
ಎಬಿ ಡಿ ವಿಲಿಯರ್ ಸಿ ಡಿ ಕಾಕ್‌ ಬಿ ಬುಮ್ರಾ 11
ಡೇನಿಯಲ್‌ ಕ್ರಿಸ್ಟಿಯನ್‌ ಔಟಾಗದೆ 1
ಶಾಬಾಜ್‌ ಅಹ್ಮದ್‌ ಬಿ ಬೌಲ್ಟ್ 1
ಕೈಲ್‌ ಜಾಮೀಸನ್‌ ಔಟಾಗದೆ 2
ಇತರ 11
ಒಟ್ಟು(6 ವಿಕೆಟಿಗೆ) 165
ವಿಕೆಟ್‌ ಪತನ: 1-7, 2-75, 3-126, 4-161, 5-161, 6-162.
ಬೌಲಿಂಗ್‌; ಟ್ರೆಂಟ್‌ ಬೌಲ್ಟ್ 4-0-17-1
ಜಸ್‌ಪ್ರೀತ್‌ ಬುಮ್ರಾ 4-0-36-3
ಆ್ಯಡಂ ಮಿಲ್ನೆ 4-0-48-1
ಕೃಣಾಲ್‌ ಪಾಂಡ್ಯ 4-0-27-0
ರಾಹುಲ್‌ ಚಹರ್‌ 4-0-33-1

ಮುಂಬೈ ಇಂಡಿಯನ್ಸ್‌
ರೋಹಿತ್‌ ಸಿ ಪಡಿಕ್ಕಲ್‌ ಬಿ ಮ್ಯಾಕ್ಸ್‌ವೆಲ್‌ 43
ಕ್ವಿಂಟನ್‌ ಡಿ ಕಾಕ್‌ ಸಿ ಮ್ಯಾಕ್ಸ್‌ವೆಲ್‌ ಬಿ ಚಹಲ್‌ 24
ಇಶಾನ್‌ ಕಿಶನ್‌ ಸಿ ಹರ್ಷಲ್‌ ಬಿ ಚಹಲ್‌ 9
ಸೂರ್ಯಕುಮಾರ್‌ ಸಿ ಚಹಲ್‌ ಬಿ ಸಿರಾಜ್‌ 8
ಕೃಣಾಲ್‌ ಪಾಂಡ್ಯ ಬಿ ಮ್ಯಾಕ್ಸ್‌ವೆಲ್‌ 5
ಕೈರನ್‌ ಪೊಲಾರ್ಡ್‌ ಬಿ ಹರ್ಷಲ್‌ 7
ಹಾರ್ದಿಕ್‌ ಪಾಂಡ್ಯ ಸಿ ಕೊಹ್ಲಿ ಬಿ ಹರ್ಷಲ್‌ 3
ಆ್ಯಡಂ ಮಿಲ್ನೆ ಬಿ ಹರ್ಷಲ್‌ 0
ರಾಹುಲ್‌ ಚಹರ್‌ ಬಿ ಹರ್ಷಲ್‌ 0
ಜಸ್‌ಪ್ರೀತ್‌ ಬುಮ್ರಾ ಬಿ ಚಹಲ್‌ 5
ಟ್ರಂಟ್‌ ಬೌಲ್ಟ್ ಔಟಾಗದೆ 0
ಇತರ 7
ಒಟ್ಟು(18. ಓವರ್‌ಗಳಲ್ಲಿ ಆಲೌಟ್‌) 111
ವಿಕೆಟ್‌ ಪತನ:1-57, 2-79, 3-81, 4-93, 5-97, 6-106, 7-1.6, 8-106, 9-111.
ಬೌಲಿಂಗ್‌; ಕೈಲ್‌ ಜಾಮೀಸನ್‌ 2-0-22-0
ಮೊಹಮ್ಮದ್‌ ಸಿರಾಜ್‌ 3-0-15-1
ಡೇನಿಯಲ್‌ ಕ್ರಿಸ್ಟಿಯನ್‌ 2-0-21-0
ಹರ್ಷಲ್‌ ಪಟೇಲ್‌ 3.1-0-17-4
ಯಜುವೇಂದ್ರ ಚಹಲ್‌ 4-1-11-3
ಗ್ಲೆನ್‌ ಮ್ಯಾಕ್ಸ್‌ವೆಲ್‌ 4-0-23-2

Advertisement

Udayavani is now on Telegram. Click here to join our channel and stay updated with the latest news.

Next