Advertisement

ಐಪಿಎಲ್‌ ಹೀನಾಯ ಸೋಲುಗಳಿಗೆ ಆರ್‌ಸಿಬಿ ರಾಯಭಾರಿ!

11:35 AM May 06, 2017 | Team Udayavani |

2008ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭಗೊಂಡ ವರ್ಷದಲ್ಲಿ ಐಪಿಎಲ್‌ ತಂಡಗಳಿಗೆ ಈ ಟಿ20 ಮಾದರಿಯ ತಂತ್ರಗಾರಿಕೆ ಅಷ್ಟರಮಟ್ಟಿಗೆ ಅರ್ಥವಾಗಿರಲಿಲ್ಲ. ಹೊಡಿಬಡಿಯ ಕ್ರಿಕೆಟ್‌ನಲ್ಲಿ ಆಡುವ ಹನ್ನೊಂದರಲ್ಲಿ ಹನ್ನೊಂದೂ ಬ್ಯಾಟ್ಸ್‌ಮನ್‌ಗಳಿದ್ದರೆ ಪಂದ್ಯಗಳ ಗೆಲುವು ಸುಲಭ ಎಂದು ನಂಬಿದ್ದ ಕಾಲವದು. ಆ ವರ್ಷ ರಾಯಲ್ಸ್‌ ಚಾಲೆಂಜರ್ ಬೆಂಗಳೂರು ತನ್ನ ತಂಡದಲ್ಲಿ ರಾಹುಲ್‌ ದ್ರಾವಿಡ್‌, ದಕ್ಷಿಣ ಆಫ್ರಿಕಾದ ಜಾಕ್‌ ಕಾಲಿಸ್‌, ಮುಂಬೈನ ವಾಸೀಂ ಜಾಫ‌ರ್‌ ರೀತಿಯ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ತುಂಬಿದರೂ ಕೇವಲ ಡೆಕ್ಕನ್‌ ಚಾರ್ಜರ್ ಕೃಪೆಯಿಂದ ಅತಿ ಕೆಳಗಿನ ಸ್ಥಾನಮಾನ ತಪ್ಪಿ ಕೆಳಗಿನಿಂದ ಎರಡನೇ ಸ್ಥಾನ ಸಿಕ್ಕಿತ್ತು. ಈಗ ಅದರ ನೆನಪು ಏಕೆ ಎಂದರೆ, ಇತಿಹಾಸ ಮರುಕಳಿಸುವುದು ನಿಜವಾಗಿದೆ!

Advertisement

ಮೇ ಒಂದರ ಮುಂಬೈ ವಿರುದ್ಧದ ಪಂದ್ಯದ ಸೋಲು ಆರ್‌ಸಿಬಿ ಪಾಲಿಗೆ ಎಂಟನೆಯದು. ಈ ಮುನ್ನ ಒಂದು ಪಂದ್ಯವನ್ನು ಮಳೆ ತನ್ನದಾಗಿಸಿಕೊಂಡಿದ್ದರೆ ಎರಡರಲ್ಲಷ್ಟೇ ಆರ್‌ಸಿಬಿ ಗೆದ್ದಿದೆ. 2008ರಲ್ಲಿ ತಂಡ ಕನಿಷ್ಠ ನಾಲ್ಕು ಪಂದ್ಯಗಳನ್ನಾದರೂ ಗೆದ್ದಿತ್ತು. ಈ ಬಾರಿ ಕೊನೆಪಕ್ಷ ಈ ದಾಖಲೆಯನ್ನು ಸರಿಗಟ್ಟಲು ತಂಡ ಮುಂದಿನ ಮೂರರಲ್ಲಿ ಎರಡನ್ನು ಗೆಲ್ಲಬೇಕು! 2008ರ ಹೋಲಿಕೆಯಲ್ಲಿ ಕಳಪೆತನ ಚೂರು ಹೆಚ್ಚೇ ಇದೆ. ಆದರೆ ಈಗ ತಂಡದಲ್ಲಿ ಕ್ರಿಸ್‌ ಗೇಲ್‌, ಎ.ಬಿ.ಡಿವಿಲಿಯರ್, ಶೇನ್‌ ವಾಟ್ಸನ್‌, ಕೇದಾರ್‌ ಜಾಧವ್‌, ಪವನ್‌ ನೇಗಿ, ಯಜುವೇಂದ್ರ ಚಾಹಲ್‌ ಮೊದಲಾದ ಬೌಲಿಂಗ್‌, ಬ್ಯಾಟಿಂಗ್‌ ಪ್ರತಿಭೆಗಳಿವೆ. ಹೆಚ್ಚಿನ ಸಮತೋಲನ ಇರಬೇಕಿತ್ತು. ಈ ಸಮತೋಲನ, ಪೈಪೋಟಿ ಕೇವಲ ಕಳಪೆ ಪ್ರದರ್ಶನ ನೀಡುವುದರಲ್ಲಿದೆ ಎಂಬುದು ಶುದ್ಧ ಚೋದ್ಯ.

ಪ್ರತಿ ವಿಕೆಟ್‌ಗೆ ಆರ್‌ಸಿಬಿ ಜೋಡಿಸಿರುವ 18.58 ರನ್‌ಗಳು ಈ ವರೆಗಿನ ಐಪಿಎಲ್‌ ಇತಿಹಾಸದ ಎರಡನೇ ಕಳಪೆ ಪ್ರದರ್ಶನ. ಈ ವರ್ಷ 40 ಬಾರಿ ಆಟಗಾರರು ಒಂದಂಕಿಯ ಅಮೋಘ ಪ್ರದರ್ಶನ ನೀಡಿದ್ದಾರೆ.  ಐಪಿಎಲ್‌ನಲ್ಲಿ ಸಿಂಗಲ್ಸ್‌, ಡಬಲ್‌ಗ‌ಳಿಂದ ಪಂದ್ಯದ ಸುರಕ್ಷಿತ ಗುರಿ ನಿಗದಿಪಡಿಸುವ ಕೆಲಸ ಸಾಧ್ಯವಿಲ್ಲ. ಬೌಂಡರಿ ಸಿಕ್ಸರ್‌ ಬರಬೇಕು, ಚಿಯರ್‌ ಲೀಡರ್‌ ಸ್ಟೆಪ್‌ ಹಾಕಬೇಕು. ಈ ವರ್ಷದ ಮೊದಲ 10 ಪಂದ್ಯಗಳ ಅಂಕಿಅಂಶದಂತೆ ಆರ್‌ಸಿಬಿ ಪ್ರತಿ 7.2 ಚೆಂಡು ಎದುರಿಸಿದ 

ನಂತರ ಬೌಂಡರಿ ಹೊಡೆದಂತೆ. ಹೀಗೆ ಹೇಳುವುದಕ್ಕಿಂತ, ಆಡುವ 20 ಓವರ್‌ಗಳಲ್ಲಿ ಆರ್‌ಸಿಬಿ ಹೆಚ್ಚು ಕಡಿಮೆ 17 ಬೌಂಡರಿ ಸಿಕ್ಸರ್‌ ಮಾತ್ರ ಬಾರಿಸಿದೆ ಎಂದರೆ ಆ ತಂಡದ ಹೀನಾಯ ಪ್ರದರ್ಶನ ಅರ್ಥವಾಗುತ್ತದೆ.

ಕಳಪೆ ಪ್ರದರ್ಶನದ ವಿರುದ್ಧ ತಿರುಗಿ ಬಿದ್ದು ಆರ್‌ಸಿಬಿ ತನ್ನ ಮರ್ಯಾದೆ ಉಳಿಸಿಕೊಂಡ ಘಟನೆಯನ್ನು 2016ರಲ್ಲಿ ಕಂಡಿದ್ದೆವು. ವಿಕೆಟ್‌ ಒಂದಕ್ಕೆ ತಂಡ 42 ರನ್‌ ಸರಾಸರಿಯಲ್ಲಿ ರನ್‌ ಗಳಿಸಿದ್ದು ಹಾಗೂ ಪ್ರತಿ 4.9 ಓವರ್‌ಗೆ ಬೌಂಡರಿಯನ್ನೋ, ಸಿಕ್ಸರ್‌ನೊ ಬಾರಿಸಿದ್ದು ಕಳೆದ ವರ್ಷದಲ್ಲಿ ನಂಬರ್‌ ಒನ್‌. ಓವರ್‌ಗೆ 9.62 ಸರಾಸರಿಯಲ್ಲಿ ರನ್‌ ಕೊಳ್ಳೆ ಹೊಡೆದಿದ್ದು ಮತ್ತೆ ಬೆಸ್ಟ್‌. ಪ್ರಶಸ್ತಿ ಗೆಲ್ಲದಿದ್ದರೂ ಅತ್ಯುತ್ತಮ ಅಂಕಿಅಂಶದ ಮರುವರ್ಷ ಅತ್ಯಂತ ಕಳಪೆಯ ಸಾಧನೆ ಮಾಡುವುದು ದುರಂತವೇ ಸರಿ. ರನ್‌ಗಳು ಕೆಲವು ದೋಷಗಳನ್ನು ಮುಚ್ಚುತ್ತವೆ. ಹಾಗಾಗಿಯೇ ಆರ್‌ಸಿಬಿ ಬೌಲಿಂಗ್‌ನ ಅಷ್ಟಿಷ್ಟು ಧಾರಾಳತನವನ್ನು ರನ್‌ ಗುಡ್ಡೆ ಕಾಣದಂತೆ ಮಾಡುತ್ತಿತ್ತು. ಕೊಹ್ಲಿ, ಗೇಲ್‌, ವಾಟ್ಸನ್‌ ಹಾಗೂ ಎಬಿಡಿ 2016ರ 57 ಇನ್ನಿಂಗ್ಸ್‌ ಮೂಲಕ 43.04 ಸರಾಸರಿಯಲ್ಲಿ 2066 ರನ್‌ ಸಂಗ್ರಹಿಸಿದ್ದರು. 1331 ಚೆಂಡುಗಳಲ್ಲಿ ಈ ರನ್‌ 155.2ರ ಸ್ಟ್ರೈಕ್‌ರೇಟ್‌ನಲ್ಲಿ ಇತ್ತು ಎಂಬುದನ್ನು ಈ ವರ್ಷದ 2017ರ ಮೇ ಒಂದಕ್ಕಿಂತ ಮುಂಚಿನ ಪಂದ್ಯಗಳ ರನ್‌ ಅಕೌಂಟ್‌ ಪ್ರಕಾರ 22 ಇನ್ನಿಂಗ್ಸ್‌ಗಳಲ್ಲಿ 27.86ರ ಸರಾಸರಿಯಲ್ಲಿ 485 ಚೆಂಡುಗಳಲ್ಲಿನ 585 ರನ್‌ಗೆ ಹೋಲಿಸಿದರೆ ಸ್ಟ್ರೈಕ್‌ರೇಟ್‌ 120.6 ಅಷ್ಟೇ! ಒಂದರ್ಥದಲ್ಲಿ ಆರ್‌ಸಿಬಿ ಭಾರತ ತಂಡದ ಪಡಿಯಚ್ಚು.

Advertisement

ಇಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ಒಂದು ರೀತಿಯಲ್ಲಿ ಓವರ್‌ ಪ್ರೋತ್ಸಾಹ. ಆದರೆ ಕ್ಲಿಕ್‌ ಆಗಲು ಸಮಯಬೇಕು. ಮಾಡು ಇಲ್ಲವೇ ಮಡಿ ಎಂಬ ಸನ್ನಿವೇಶ ನಿರ್ಮಾಣವಾದರೆ ಮಾತ್ರ ಪ್ರತಿಭೆ ಪ್ರಕಾಶಿಸುತ್ತದೆ. ಹಿಂದಿನ ಎರಡು ವರ್ಷಗಳಲ್ಲೂ ಆರ್‌ಸಿಬಿ ತಂಡ ತೀವ್ರ ಹಿನ್ನಡೆಯ ನಂತರ ದ್ವಿತೀಯಾರ್ಧದಲ್ಲಿ ಇದೇ ರೀತಿಯಲ್ಲಿ ಚೇತರಿಸಿಕೊಂಡಿದ್ದು ಕಾಣಿಸುತ್ತದೆ. ಕಳೆದ ವರ್ಷ ನಾಲ್ಕಕ್ಕೆ ನಾಲ್ಕು ಪಂದ್ಯ ಗೆದ್ದರೆ ಮಾತ್ರ ಪ್ಲೇ ಆಫ್ ಎಂಬ ಸವಾಲು ಎದುರಾದರೂ ಆರ್‌ಸಿಬಿ ಅದನ್ನು ಸಫ‌ಲ ರೀತಿಯಲ್ಲಿ ದಾಟಿತ್ತು. ಫೈನಲ್‌ ಫ‌ಲಿತಾಂಶ ಬಿಡಿ. ಆದರೆ ಪ್ರತಿ ಬಾರಿ, ಪ್ರತಿ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಪಣ ಎದುರಾದಾಗ ಅನಗತ್ಯವಾದ ಒತ್ತಡವೂ ಸೃಷ್ಟಿಯಾಗುತ್ತದೆ. ಒಂದು ಸಮರ್ಥ ತಂಡ ತನ್ನನ್ನು ತಾನೇ ಒತ್ತಡಕ್ಕೆ ಸಿಲುಕಿಸಿಕೊಳ್ಳುವುದು ಸಮರ್ಥನೀಯವಲ್ಲ. ಅಂಥ ಸಂದರ್ಭದಲ್ಲಿ ತಂಡ ಪತನಗೊಳ್ಳುತ್ತದೆ. ಆರ್‌ಸಿಬಿಗೆ ಈ ಬಾರಿ ಆಗಿರುವುದು ಇದೇ. ಕೆ.ಎಲ್‌.ರಾಹುಲ್‌ ಆಡಲಿಲ್ಲ, ಡಿವಿಲಿಯರ್, ಕೊಹ್ಲಿ ಕೆಲ ಪಂದ್ಯಕ್ಕೆ ಅಲಭ್ಯರಾದರು ಎಂಬುದು ಕೇವಲ ನೆಪಗಳಷ್ಟೇ. ಫಾರಂ ಪ್ರಶ್ನೆ ಬಂದಾಗ ಕ್ರಿಸ್‌ ಗೇಲ್‌ರನ್ನು ಹೊರಗಿಟ್ಟು ಆಡಬೇಕಾದ ಹೀನಾಯ ಸ್ಥಿತಿಯೂ ಈ ಬಾರಿ ನಿರ್ಮಾಣವಾಗಿತ್ತು. ಜವಾಬ್ದಾರಿ ಮರೆತು ಆಡಿದ ಬ್ಯಾಟ್ಸ್‌ಮನ್‌ಗಳು ಎರಡು ಇನ್ನಿಂಗ್ಸ್‌ನಲ್ಲಿ 100ಕ್ಕಿಂತ ಕಡಿಮೆ ರನ್‌ ಗಳಿಸಿದ್ದು…. ಐಪಿಎಲ್‌ನ ಕಳಪೆ ನಿರ್ವಹಣೆಗೆ ರಾಯಲ್ಸ್‌ ಚಾಲೆಂಜರ್‌ ರಾಯಭಾರಿಯಾಗುವಂತಾಗಿದೆ ಎಂತಾದರೆ, ಛೇ!

ಸೋತವನ ಮೇಲೆ ಕಲ್ಲು, ಒಂದೇ ಎರಡೇ?!
ಆರ್‌ಸಿಬಿ ತಂಡದ ಪ್ರಚಾರವನ್ನು ಮಾತ್ರ ಮಾಧ್ಯಮಗಳು ಅದರ ಸೋಲು ಗೆಲುವು ಪರಿಗಣನೆಗೆ ತೆಗೆದುಕೊಳ್ಳದೆ ಮಾಡಿವೆ. ಅದರ ಗೆಲುವು, ಭರ್ಜರಿ ಪ್ರದರ್ಶನಗಳ ವೇಳೆ ಎದುರಾಳಿ ತಂಡಗಳ ಕುರಿತಾಗಿ ವ್ಯಂಗ್ಯ ಬಾಣ ಬಿದ್ದರೆ ಉಳಿದ ವೇಳೆ ಆರ್‌ಸಿಬಿಗೂ ರಿಯಾಯ್ತಿಯಿಲ್ಲ. ಈ ಋತುವಿನಲ್ಲಿ 49ಕ್ಕೆ ಆಲ್‌ಔಟ್‌ ಆದಾಗ ಅಕ್ಷರಶಃ ತಂಡವನ್ನು ಆಲ್‌ಔಟ್‌ ಸೊಳ್ಳೆ ವಿಕರ್ಷಕದ ಮಾಡೆಲ್‌ಗ‌ಳಾಗಿಸಿ ಸೋತ 24 ಘಂಟೆಗಳಲ್ಲಿ ಅಭಿಮಾನಿಗಳು ಕೊಂಡಾಡಿದ್ದರು. ಅಂತಹ ಇನ್ನೂ ಕೆಲವು ತುಣುಕುಗಳು….

ಆರ್‌ಸಿಬಿ ಆಟಗಾರರ ಬ್ಯಾಟಿಂಗ್‌ ಪ್ರದರ್ಶನದಿಂದ ಸ್ಫೂರ್ತಿ ಪಡೆದ ತಂಡದ ಆಡಳಿತ ತನ್ನ ಸಂಪರ್ಕ ದೂರವಾಣಿ ಸಂಖ್ಯೆಯನ್ನು ಬದಲಿಸಿದೆ. ಅದೀಗ 70189820250 ಆಗಿದೆ. ಕೆಕೆಆರ್‌ ವಿರುದ್ಧ ಆರ್‌ಸಿಬಿ ಆಟಗಾರರ ವೈಯುಕ್ತಿಕ ಸ್ಕೋರ್‌ಗಳನ್ನು ಒಂದರ ಪಕ್ಕ ಒಂದು ಇರಿಸಿದಾಗ ಬಂದದ್ದೇ ಇದು!

ಪ್ಲೇಯಿಂಗ್‌ ಬೋಲ್ಡ್‌ ಎಂಬುದು ಆರ್‌ಸಿಬಿ ಧ್ಯೇಯವಾಕ್ಯ. ಎಲ್ಲೋ ಎಡವಟ್ಟಾಗಿದೆ. ಕೊಹ್ಲಿ ಹಾಗೂ ಅವರ ಬಳಗಕ್ಕೆ ಈ ಮಾತು ಪ್ಲೇಯಿಂಗ್‌ ಫಾರ್‌ ಬೋಲ್ಡ್‌ ಎಂದು ಕೇಳಿಸಿದೆ. ಚೆಂಡು ವಿಕೆಟ್‌ಗೆ ಅಪ್ಪಳಿಸಲು ಬಿಟ್ಟಿದ್ದಾರೆ. ಅದರಲ್ಲಿ ಅವರ ತಪ್ಪೇನು?

ಸೀಸನ್‌ನ ಒಂದು ಪಂದ್ಯದಲ್ಲಿ ತನ್ನ ಉಡುಗೆಯನ್ನು ಬದಲಾಯಿಸಿ ಹಸಿರು ವರ್ಣ ಪ್ರದರ್ಶಿಸುವ ಮೂಲಕ “ಗೋ ಗ್ರೀನ್‌ ಎಂಬ ಪರಿಸರ ಚಳುವಳಿಯನ್ನು ಬೆಂಬಲಿಸುವ ಕೆಲಸವನ್ನು ಆರ್‌ಸಿಬಿ ಮಾಡುತ್ತದೆ. ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಅದು ದೇಶದಲ್ಲಿ ಏಕಾಂಗಿಗಳಾಗಿ ಬದುಕು ಸವೆಸುತ್ತಿರುವವರ ಬೆಂಬಲಕ್ಕೆ ನಿಲ್ಲಲು ತೀರ್ಮಾನಿಸಿತ್ತು. ಅದರ ಫ‌ಲವೇ ಅದರ ಇನ್ನಿಂಗ್ಸ್‌ನಲ್ಲಿ ಎಲ್ಲ ಬ್ಯಾಟ್ಸ್‌ಮನ್‌ಗಳು ಸಿಂಗಲ್‌ ಡಿಜಿಟ್‌ ಪ್ರದರ್ಶನ ನೀಡಿದರು!

ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next