ಹೊಸದಿಲ್ಲಿ: ಈ ಬಾರಿಯ ಐಪಿಎಲ್ ಪ್ಲೇ ಆಫ್ ಪಂದ್ಯಗಳನ್ನು ಕೋಲ್ಕತಾ ಮತ್ತು ಅಹ್ಮದಾಬಾದ್‌ನಲ್ಲಿ ಆಡಲಾಗುವುದು ಎಂದು ನಂಬಲರ್ಹ ಮೂಲವೊಂದರಿಂದ ತಿಳಿದು ಬಂದಿದೆ.
ಇದರಂತೆ ಕ್ವಾಲಿಫೈಯರ್-1 ಮತ್ತು ಎಲಿಮಿನೇಟರ್ ಪಂದ್ಯಗಳ ಆತಿಥ್ಯ ಕೋಲ್ಕತಾದ “ಈಡನ್ ಗಾರ್ಡನ್ಸ್’ ಪಾಲಾಗಲಿದೆ. ಕ್ವಾಲಿಫೈಯರ್-2 ಮತ್ತು ಮೇ 29ರ ಫೈನಲ್ ಪಂದ್ಯವನ್ನು ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಆಡಲಾಗುವುದು ಎಂದು ಬಗ್ಗೆ ಮಾಹಿತಿ ಲಭಿಸಿದೆ.
ಮುಂದಿನ ಕೆಲವೇ ದಿನಗಳಲ್ಲಿ ಬಿಸಿಸಿಐ ಇದನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.
“ಐಪಿಎಲ್ ಲೀಗ್ ಪಂದ್ಯಗಳೀಗ ಜೈವಿಕ ಸುರಕ್ಷಾ ವಲಯದ 4 ಕೇಂದ್ರಗಳಲ್ಲಿ ನಿರ್ವಿಘ್ನವಾಗಿ ಸಾಗುತ್ತಿವೆ. ಪ್ಲೇ ಆಫ್ ಪಂದ್ಯಗಳನ್ನು ಎರಡು ಕೇಂದ್ರಗಳಲ್ಲಿ ನಡೆಸುವುದು ಮೊದಲಿನಿಂದಲೂ ಮಂಡಳಿಯ ಯೋಜನೆಯಾಗಿತ್ತು. ಆಗ ಬಯೋಬಬಲ್ ವಿಧಾನವನ್ನು ಅನುಸರಿಸಿ ಕೇವಲ ಎರಡು ನಗರಗಳಿಗಷ್ಟೇ ಸಂಚರಿಸಿದರೆ ಸಾಕು. ಈ ಅವಕಾಶ ಕೋಲ್ಕತಾ ಮತ್ತು ಅಹ್ಮದಾಬಾದ್ ಪಾಲಾಗುವ ಸಾಧ್ಯತೆ ಇದೆ’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಈ ಮೊದಲು ಲಕ್ನೋದಲ್ಲಿ 2 ಪ್ಲೇ ಆಫ್ ಪಂದ್ಯಗಳನ್ನು ಆಡಿಸುವುದು ಬಿಸಿಸಿಐ ಯೋಜನೆಯಾಗಿತ್ತು.