Advertisement

IPL;ಮುಂಬೈ ತೀವ್ರ ವೈಫ‌ಲ್ಯ: ರಾಜಸ್ಥಾನ್‌ ರಾಯಲ್ಸ್‌ ಗೆ ಭರ್ಜರಿ ಜಯ

10:54 PM Apr 01, 2024 | Team Udayavani |

ಮುಂಬಯಿ: ಸೋಮವಾರದ ಐಪಿಎಲ್‌ ಪಂದ್ಯದಲ್ಲಿ ತವರಿನ “ವಾಂಖೇಡೆ ಸ್ಟೇಡಿಯಂ’ನಲ್ಲೂ ವೈಫ‌ಲ್ಯ ತೋರಿದ ಮುಂಬೈ ಇಂಡಿಯನ್ಸ್‌ ರಾಜಸ್ಥಾನ್‌ ರಾಯಲ್ಸ್‌ ತಂಡದೆದುರು ಸೋಲು ಅನುಭವಿಸಿತು.

Advertisement

ಬಿಗಿಯಾದ ಬೌಲಿಂಗ್‌ ದಾಳಿಗೆ ತೀವ್ರ ಕುಸಿತ ಕಂಡ ಮುಂಬೈ 9 ವಿಕೆಟಿಗೆ ಕೇವಲ 125 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್‌ 15.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ರಿಯಾನ್ ಪರಾಗ್ 54 ರನ್ ಗಳಿಸಿ ಔಟಾಗದೆ ಉಳಿದರು.

ಮೊದಲೆರಡೂ ಪಂದ್ಯಗಳನ್ನು ಸೋತು ಗೆಲುವಿನ ಹುಡುಕಾಟದಲ್ಲಿದ್ದ ಮುಂಬೈ ಮೂರನೇ ಸೋಲು ಅನುಭವಿಸಿತು. ಮುಂಬೈ ಇಂಡಿಯನ್ಸ್‌ನ ಮಾಜಿ ವೇಗಿ ಟ್ರೆಂಟ್‌ ಬೌಲ್ಟ್ ಮೊದಲ ಓವರ್‌ನಲ್ಲೇ ಘಾತಕವಾಗಿ ಪರಿಣಮಿಸಿದರು. 2 ವಿಕೆಟ್‌ ಉದುರಿಸಿಕೊಂಡ ಪಾಂಡ್ಯ ಪಡೆ ತತ್ತರಿಸಿತು. ಮೂವರು ಮೊದಲ ಎಸೆತದಲ್ಲೇ ಔಟಾಗಿ ಗೋಲ್ಡನ್‌ ಡಕ್‌ ಅವಮಾನಕ್ಕೆ ಸಿಲುಕಿದರು. ಇವರಲ್ಲಿ ಮೊದಲು ನಿರ್ಗಮಿಸಿದವರು ರೋಹಿತ್‌ ಶರ್ಮ.

ರೋಹಿತ್‌ ಸೊನ್ನೆ ದಾಖಲೆ
ರೋಹಿತ್‌ ಐಪಿಎಲ್‌ನಲ್ಲಿ ಅತ್ಯಧಿಕ 17 ಸಲ ಸೊನ್ನೆ ಸುತ್ತಿದ ದಿನೇಶ್‌ ಕಾರ್ತಿಕ್‌ ದಾಖಲೆಯನ್ನು ಸರಿದೂಗಿಸಿದರು. ಬೌಲ್ಟ್ ಅವರ ಮುಂದಿನ ಎಸೆತದಲ್ಲಿ ನಮನ್‌ ಧೀರ್‌ ಲೆಗ್‌ ಬಿಫೋರ್‌ ಆಗಿ ನಿರ್ಗಮಿಸಿದರು. ಇವರ ಮುಂದಿನ ಓವರ್‌ನ 2ನೇ ಎಸೆತದಲ್ಲಿ ಡಿವಾಲ್ಡ್‌ ಬ್ರೇವಿಸ್‌ ವಿಕೆಟ್‌ ಉದುರಿತು. ಬೌಲ್ಟ್ 4 ಎಸೆತಗಳಲ್ಲಿ ಮೂವರನ್ನು ಪೆವಿಲಿಯನ್‌ಗೆ ರವಾನಿಸಿ ರಾಜಸ್ಥಾನ್‌ಗೆ ಮೇಲುಗೈ ಒದಗಿಸಿದರು.

ಐಪಿಎಲ್‌ ಇತಿಹಾಸದಲ್ಲಿ ತಂಡವೊಂದರ ಅಗ್ರ ನಾಲ್ಕು ಆಟಗಾರರಲ್ಲಿ ಮೂವರು ಸೊನ್ನೆ ಸುತ್ತಿದ 6ನೇ ನಿದರ್ಶನ ಇದಾಗಿದೆ. ಸ್ಕೋರ್‌ 20 ರನ್‌ ಆದಾಗ ಇಶಾನ್‌ ಕಿಶನ್‌ (16) ವಿಕೆಟ್‌ ಬಿತ್ತು. ಈ ಯಶಸ್ಸು ನಾಂಡ್ರೆ ಬರ್ಗರ್‌ಗೆ ಲಭಿಸಿತು.

Advertisement

5ನೇ ವಿಕೆಟಿಗೆ ಜತೆಗೂಡಿದ ನಾಯಕ ಹಾರ್ದಿಕ್‌ ಪಾಂಡ್ಯ ಮತ್ತು ತಿಲಕ್‌ ವರ್ಮ ತಂಡದ ಕುಸಿತಕ್ಕೆ ತಡೆಯಾಗಿ ನಿಂತರು. 36 ಎಸೆತಗಳಿಂದ 56 ರನ್‌ ಒಟ್ಟುಗೂಡಿತು. ಪಾಂಡ್ಯ ಗಳಿಕೆ 21 ಎಸೆತಗಳಿಂದ ಸರ್ವಾಧಿಕ 34 ರನ್‌ (6 ಬೌಂಡರಿ). ಈ ಜೋಡಿಯನ್ನು ಬೇರ್ಪಡಿಸಿದವರು ಚಹಲ್‌. ಅರ್ಧ ಹಾದಿ ಕ್ರಮಿಸುವಾಗ ಮುಂಬೈ 5 ವಿಕೆಟ್‌ ನಷ್ಟಕ್ಕೆ 77 ರನ್‌ ಮಾಡಿತ್ತು.

ಅನಂತರವೂ ಮುಂಬೈ ಇನ್ನಿಂಗ್ಸ್‌ ಸುಧಾರಣೆ ಕಾಣಲಿಲ್ಲ. ಪೀಯೂಷ್‌ ಚಾವ್ಲಾ (3) ಮತ್ತು ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದ ತಿಲಕ್‌ ವರ್ಮ (32) 12 ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡರು.

ಮುಂಬೈಗೆ ಆರಂಭಿಕ ಆಘಾತವಿಕ್ಕಿದ ವೇಗಿ ಬೌಲ್ಟ್ 22 ರನ್ನಿಗೆ 3 ವಿಕೆಟ್‌, ಚಹಲ್‌ ಕೇವಲ 11 ರನ್ನಿಗೆ 3 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next