Advertisement

ರಂಗಿನ ಐಪಿಎಲ್‌: ಈ ಗೆಲುವುಗಳನ್ನು ಮರೆಯಲಾದೀತೇ?

11:50 AM Mar 25, 2019 | |

ಈ ಹಿಂದಿನ 11 ಐಪಿಎಲ್‌ ಕೂಟಗಳಲ್ಲಿ ನಡೆದಿರುವ ಕೆಲವು ಪಂದ್ಯಗಳನ್ನು ಮರೆತೇನಂದ್ರೂ ಮರೆಯಲು ಸಾಧ್ಯವಿಲ್ಲ. ಅಂತಹ 5 ಪಂದ್ಯಗಳ ರೋಚಕ ಕ್ಷಣಗಳು ಇಲ್ಲಿವೆ.

Advertisement

ಕೊನೆ ಓವರ್‌ನಲ್ಲಿ 21 ರನ್‌ ಚಚ್ಚಿದ ರೋಹಿತ್‌
2009ರಲ್ಲಿ ನಡೆದ ಆ ಪಂದ್ಯ ರೋಹಿತ್‌ ಶರ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ ಪಂದ್ಯ. ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ 160 ರನ್‌ ಗಳಿಸಿತು. ಗೆಲ್ಲಲು ಡೆಕ್ಕನ್‌ ಚಾರ್ಜರ್ಸ್‌ಗೆ 161 ರನ್‌ ಬೇಕಿತ್ತು. ಅಂತಿಮ ಓವರ್‌ನಲ್ಲಿ ಬೇಕಿದ್ದದ್ದು 21 ರನ್‌. ಬಾಂಗ್ಲಾದ ಮಶ್ರಫೆ ಎಸೆದ ಆ ಓವರ್‌ನಲ್ಲಿ 2 ಬೌಂಡರಿ, 2 ಸಿಕ್ಸರ್‌ಗಳನ್ನು ರೋಹಿತ್‌ ಚಚ್ಚಿದ ಪರಿಣಾಮ, ಡೆಕ್ಕನ್‌ ಅಗತ್ಯಕ್ಕಿಂತ 4 ರನ್‌ಗಳನ್ನು ಹೆಚ್ಚಾಗಿಯೂ ಗಳಿಸಿ, ಜಯಿಸಿತು.

ಬೌಲಿಂಗ್‌ ಪರಾಕ್ರಮಕ್ಕೆ ಟ್ರೋಫಿಯೇ ಒಲಿಯಿತು
2017ರ ಫೈನಲ್‌ನಲ್ಲಿ ಮುಂಬೈ ಮತ್ತು ರೈಸಿಂಗ್‌ ಪುಣೆ ತಂಡಗಳು ಎದುರಾಗಿದ್ದವು. ಪುಣೆಗೆ ಗೆಲ್ಲಲು ಒಟ್ಟು 129 ರನ್‌ ಅಗತ್ಯವಿತ್ತು. ಅಂತಿಮ ಓವರ್‌ನಲ್ಲಿ ಆ ತಂಡಕ್ಕೆ ಬೇಕಿದ್ದದ್ದು 12 ರನ್‌. ನಾಯಕ ಸ್ಮಿತ್‌, ತಿವಾರಿ ಕ್ರೀಸ್‌ನಲ್ಲಿದ್ದರು. ಮುಂಬೈ ಪರ ಜಾನ್ಸನ್‌ ದಾಳಿಗಿಳಿದಿದ್ದರು. ಅವರು ಆ ಓವರ್‌ನಲ್ಲಿ ಅದ್ಭುತ ದಾಳಿ ಸಂಘಟಿಸಿ, ಸ್ಮಿತ್‌, ತಿವಾರಿಯನ್ನು ಕೆಡವಿದರು. ರನೌಟ್‌ ಸೇರಿ ಒಟ್ಟು ಮೂರು ವಿಕೆಟ್‌ಗಳು ಅದೇ ಓವರ್‌ನಲ್ಲಿ ಉರುಳಿದವು. ಪುಣೆಗೆ ಜಾನ್ಸನ್‌ ನೀಡಿದ್ದು ಬರೀ 10 ರನ್‌ ಮಾತ್ರ. 1 ರನ್‌ ಅಂತರದಿಂದ ಮುಂಬೈ ಟ್ರೋಫಿ ಜೈಸಿತು.

ಇತಿಹಾಸದ ಮೊದಲ ಸೂಪರ್‌ ಓವರ್‌ ಜಯಭೇರಿ
2009ರಲ್ಲಿ ಇಡೀ ಐಪಿಎಲ್‌ ದ.ಆಫ್ರಿಕಾದಲ್ಲಿ ನಡೆದಿತ್ತು. ಆ ಕೂಟದ ಲೀಗ್‌ ಹಂತದಲ್ಲಿ ಬರೀ ಯುವಕರನ್ನೇ ಒಳಗೊಂಡಿದ್ದ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಕೆಕೆಆರ್‌ ಸೆಣಸಿದ್ದವು. ಯೂಸುಫ್ ಪಠಾಣ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ 151 ರನ್‌ ಗಳಿಸಿತು. ಇದನ್ನು ಬೆನ್ನಟ್ಟಿ ಹೋದ ಕೆಕೆಆರ್‌, ಗಂಗೂಲಿ 46 ರನ್‌ ನೆರವಿನಿಂದ ಗೆಲುವಿನ ಸನಿಹ ತಲುಪಿತು. ಕೊನೆಯ ಎಸೆತದಲ್ಲಿ ಅದಕ್ಕೆ 2 ರನ್‌ ಬೇಕಿತ್ತು. ಸಿಕ್ಕಿದ್ದು ಒಂದು ರನ್‌ ಮಾತ್ರ. ಪಂದ್ಯ ಟೈಗೊಂಡಿತು. ಆಗ ಐಪಿಎಲ್‌ ಇತಿಹಾಸದ ಮೊದಲ ಸೂಪರ್‌ ಓವರ್‌ ನಡೆಯಿತು. ಅದರಲ್ಲಿ ಕೆಕೆಆರ್‌ 15 ರನ್‌ ಬಾರಿಸಿ, ರಾಜಸ್ಥಾನಕ್ಕೆ 16 ರನ್‌ ಗುರಿ ನೀಡಿತು. ಯೂಸುಫ್ ಪಠಾಣ್‌ ಮೊದಲ ನಾಲ್ಕೇ ಎಸೆತಕ್ಕೆ 16 ರನ್‌ ಬಾರಿಸಿ ರಾಜಸ್ಥಾನ್‌ ತಂಡವನ್ನು ಗೆಲ್ಲಿಸಿದರು.

ಒಂದೇ ಒಂದು ಕ್ಯಾಚ್‌ನಿಂದ ಫ‌ಲಿತಾಂಶವೇ ಬದಲಾಯ್ತು 

Advertisement


ಒಂದು ಪಂದ್ಯದ ದಿಕ್ಕುದೆಸೆಯನ್ನು ಒಂದು ಕ್ಯಾಚ್‌ ಹೇಗೆ ಬದಲಿಸಬಲ್ಲದು ಎನ್ನುವುದಕ್ಕೆ 2014ರಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ನಡುವೆ ನಡೆದ ಪಂದ್ಯ ಸಾಕ್ಷಿ. ದುಬೈನಲ್ಲಿ ನಡೆದ ಆ ಪಂದ್ಯದಲ್ಲಿ ಆರ್‌ಸಿಬಿಗೆ 151 ರನ್‌ ಗುರಿ ನೀಡಲಾಗಿತ್ತು. ಕೊನೆಯ ಓವರ್‌ನಲ್ಲಿ ಆರ್‌ಸಿಬಿಗೆ 9 ರನ್‌ ಬೇಕಿತ್ತು. ಕ್ರೀಸ್‌ನಲ್ಲಿದ್ದದ್ದು ಬ್ಯಾಟಿಂಗ್‌ ದೈತ್ಯ ಡಿ ವಿಲಿಯರ್  ವಿನಯ್‌ ಕುಮಾರ್‌ ಎಸೆದ ಮೊದಲ 3 ಎಸೆತದಲ್ಲಿ ಬಂದಿದ್ದು ಮೂರು ರನ್‌. 4ನೇ ಎಸೆತವನ್ನು ಡಿ ವಿಲಿಯರ್ ಹೊಡೆದಿದ್ದು, ಸಿಕ್ಸರ್‌ ಗೆರೆ ದಾಟಿ ಹೋಯಿತು ಎಂದು ಎಲ್ಲರೂ ಯೋಚಿಸುತ್ತಿದ್ದರು. ಆಗ ನಡೆದಿದ್ದು ಪವಾಡ. ಮೇಲೆ ಹೋಗುತ್ತಿದ್ದ ಚೆಂಡನ್ನು ಅದ್ಭುತವಾಗಿ ನೆಗೆದು ಕ್ರಿಸ್‌ ಲಿನ್‌ ಹಿಡಿದರು. ನಂತರ ಚೆಂಡನ್ನು ಹಿಂದಕ್ಕೆ ಎಸೆದರು. ಆ ಮೇಲೆ ಮತ್ತೆ ಹಿಮ್ಮುಖವಾಗಿ ಓಡಿಬಂದು ಹಿಡಿದರು. ಡಿ ವಿಲಿಯರ್  ಔಟ್‌. ಅಂತೂ ಕೆಕೆಆರ್‌ 2 ರನ್‌ಗಳಿಂದ ಪಂದ್ಯ ಗೆದ್ದಿತ್ತು. ಒಂದು ಕ್ಯಾಚ್‌ ಪಂದ್ಯದ ಹಣೆಬರೆಹ ಬದಲಿಸಿತು.

ನಂಬಲು ಅಸಾಧ್ಯವಾದದ್ದು ಸಾಧ್ಯವಾಯ್ತು
ಇದು 2014ರ ಐಪಿಎಲ್‌ನಲ್ಲಿ ನಡೆದ ಒಂದು ಅಸಾಧಾರಣ ಪಂದ್ಯ. ಇದರ ಫ‌ಲಿತಾಂಶ ಎಷ್ಟು ರೋಚಕವಾಗಿತ್ತೆಂದರೆ ಈ ಪಂದ್ಯದಲ್ಲಿ ನಡೆದಿದ್ದೆಲ್ಲ ನಂಬಲು ಅಸಾಧ್ಯವಾದ ಘಟನೆಗಳೇ! ಕೂಟದುದ್ದಕ್ಕೂ ಕಳಪೆಯಾಗಿ ಆಡಿದ್ದ ಮುಂಬೈಗೆ ತನ್ನ ಕಡೆಯ ಲೀಗ್‌ ಪಂದ್ಯದಲ್ಲಿ ಪ್ಲೇಆಫ್ಗೇರಲು ಅಸಾಮಾನ್ಯ ಗೆಲುವೊಂದರ ಅವಶ್ಯಕತೆಯಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಜ ಸ್ಥಾನ್‌ 190 ರನ್‌ ಗುರಿಯನ್ನು ಮುಂಬೈಗೆ ನೀಡಿತ್ತು. 20 ಓವರ್‌ಗಳು ಇದ್ದರೂ, ಮುಂಬೈ ಪ್ಲೇಆಫ್ಗೇರಬೇಕಾಗಿದ್ದರೆ, 14.3 ಓವರ್‌ನಲ್ಲೇ ಇದನ್ನು ಸಾಧಿಸ ಬೇಕಿತ್ತು.


ಆ್ಯಂಡರ್ಸನ್‌ ಚಚ್ಚಿದ ಪರಿಣಾಮ ಮುಂಬೈ ಇದನ್ನು ಸಾಧಿಸುವುದು ಖಚಿತವೆನ್ನುವ ಮಟ್ಟಕ್ಕೆ ಹೋಯ್ತು. 14.3ನೇ ಎಸೆತದಲ್ಲಿ ಮುಂಬೈ 2 ರನ್‌ ಗಳಿಸಿದರೆ, ಜಯ ಸಾಧಿಸುವುದು ಮಾತ್ರವಲ್ಲ ಪ್ಲೇಆಫ್ಗೇರುತ್ತಿತ್ತು. ಆ ಎಸೆತದಲ್ಲಿ ಬ್ಯಾಟ್ಸ್‌ ಮನ್‌ ರನೌಟ್‌. ಸ್ಕೋರ್‌ ಸಮಗೊಂಡಿತು. ರಾಜಸ್ಥಾನ್‌ ಪ್ಲೇಆಫ್ಗೇರಿದ ಖುಷಿಯಲ್ಲಿ ತೇಲಿತು. ಅಷ್ಟರಲ್ಲಿ ಮತ್ತೂಂದು ಜಾದೂ ನಡೆಯಿತು. ಮುಂದಿನ ಎಸೆತದಲ್ಲಿ 4 ರನ್‌ ಗಳಿಸಿದರೆ, ಆಗಲೂ ಮುಂಬೈಗೆ ಪ್ಲೇಆಫ್ ಅವಕಾಶವಿದೆ ಎಂದು ಗೊತ್ತಾಯ್ತು. ಆ ಎಸೆತದಲ್ಲಿ ಆದಿತ್ಯ ತಾರೆ ಸಿಕ್ಸರ್‌ ಬಾರಿಸಿ ಅಸಾಧ್ಯವಾದದ್ದನ್ನು ಸಾಧಿಸಿದರು!

Advertisement

Udayavani is now on Telegram. Click here to join our channel and stay updated with the latest news.

Next