Advertisement

ಮತ್ತೆ ಸೋನಿ ನೆಟ್‌ವರ್ಕ್‌ ತೆಕ್ಕೆಗೆ ಐಪಿಎಲ್‌?

10:45 PM Jun 13, 2022 | Team Udayavani |

ಹೊಸದಿಲ್ಲಿ: ಐಪಿಎಲ್‌ ಆರಂಭದಿಂದಲೂ ಸತತ 9 ವರ್ಷಗಳ ಕಾಲ ನೇರ ಪ್ರಸಾರ ಹಕ್ಕು ಹೊಂದಿದ್ದ ಸೋನಿ ನೆಟ್‌ವರ್ಕ್‌ ಮತ್ತೆ ಈ ಕ್ಯಾಶ್‌ರಿಚ್‌ ಪಂದ್ಯಾವಳಿಯನ್ನು ಮುಂದಿನ 5 ವರ್ಷಗಳ ಕಾಲ ಬಿತ್ತರಿಸುವ ಸೂಚನೆ ಲಭಿಸಿದೆ.

Advertisement

ಕಳೆದೆರಡು ದಿನಗಳಿಂದ ನಡೆಯುತ್ತಿದ್ದ ಐಪಿಎಲ್‌ ಪ್ರಸಾರ ಹಕ್ಕನ್ನು ಅದು ಬರೋಬ್ಬರಿ 23,575 ಕೋಟಿ ರೂ. ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಆದರೆ ಬಿಸಿಸಿಐ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

2008ರಿಂದ 2016ರ ತನಕ ಸೋನಿ ಸೆಟ್‌ಮ್ಯಾಕ್ಸ್‌ ಐಪಿಎಲ್‌ ಪಂದ್ಯಗಳನ್ನು ಪ್ರಸಾರ ಮಾಡುತ್ತಿತ್ತು. ಆದರೆ 2017ರಿಂದ ಈ ಹಕ್ಕು ಸ್ಟಾರ್‌ ನ್ಪೋರ್ಟ್ಸ್ ಪಾಲಾಯಿತು. ಅಂದು 16 ಸಾವಿರ ಕೋಟಿಗೂ ಅಧಿಕ ಮೊತ್ತಕ್ಕೆ ಅದು ಐಪಿಎಲ್‌ ಪ್ರಸಾರ ಹಕ್ಕನ್ನು ಖರೀದಿಸಿತ್ತು. ಈ ಬಾರಿ ದೊಡ್ಡ ಮೊತ್ತವನ್ನು ಕಟ್ಟಿಕೊಂಡು ಬಿಡ್ಡಿಂಗ್‌ ಅಖಾಡಕ್ಕೆ ನುಗ್ಗಿದ ಸೋನಿ, ಸ್ಟಾರ್‌ ಸ್ಪೋರ್ಟ್ಸ್ ಗೆ ಆಘಾತ ನೀಡಿರುವ ಸಾಧ್ಯತೆ ಇದೆ.

ಡಿಜಿಟಲ್‌ ಪ್ರಸಾರ ಹಕ್ಕು
5 ವರ್ಷಗಳ ಐಪಿಎಲ್‌ ಡಿಜಿಟಲ್‌ ಪ್ರಸಾರ ಹಕ್ಕನ್ನು 20,500 ಕೋಟಿ ರೂ.ಗೆ ರಿಲಯನ್ಸ್‌ ವಯಕಾಮ್‌-18 ಕಂಪೆನಿ ತನ್ನದಾಗಿಸಿಕೊಂಡಿದೆ. ಅಂದರೆ ಅದು ಪ್ರತೀ ಪಂದ್ಯಕ್ಕೆ 50 ಕೋಟಿ ರೂ. ವ್ಯಯಿಸಿದಂತಾಗುತ್ತದೆ. ಇಲ್ಲಿಯೂ ಸೋನಿ ನೆಟ್‌ವರ್ಕ್‌, ರಿಲಯನ್ಸ್‌ ಮತ್ತು ಡಿಸ್ನಿ ಹಾಟ್‌ಸ್ಟಾರ್‌ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆದಿತ್ತು. ಇನ್ನು ವೂಟ್‌ ಆ್ಯಪ್‌ ಹಾಗೂ ಜಿಯೋ ಆ್ಯಪ್‌ ಗಳಲ್ಲಿ ಐಪಿಎಲ್‌ ಪಂದ್ಯಗಳು ಮೂಡಿಬರಲಿವೆ.

ಟಿವಿ ರೈಟ್ಸ್‌ ಮತ್ತು ಡಿಜಿಟಲ್‌ ರೈಟ್ಸ್‌ ಪ್ಯಾಕೇಜ್‌ಗಳ ಮೂಲಕವೇ ಬಿಸಿಸಿಐ ಸುಮಾರು 44,075 ಕೋಟಿ ರೂ.ಗಳಷ್ಟು ಆದಾಯ ಗಳಿಸಲಿದೆ. ಇದರಿಂದ ಪ್ರತೀ ಪಂದ್ಯಕ್ಕೆ ಅದು ಪಡೆಯುವ ಮೊತ್ತ ಅಂದಾಜು 111 ಕೋಟಿ ರೂ!

Advertisement

ಪ್ಯಾಕೇಜ್‌ ಸಿ ಬಿಡ್ಡಿಂಗ್‌ ಆರಂಭ
ಸೋಮವಾರ ಸಂಜೆಯೇ ಪ್ಯಾಕೇಜ್‌ ಸಿ ಅಂದರೆ, ನಾನ್‌ ಎಕ್ಸ್‌ ಕ್ಲುಸೀವ್‌ ಡಿಜಿಟಲ್‌ ರೈಟ್ಸ್‌ ಡೀಲ್‌ಗಾಗಿ ಬಿಡ್ಡಿಂಗ್‌ ಶುರುವಾಗಿದೆ. ಸಂಜೆ 6 ಗಂಟೆಗೆ ದಿನದ ಬಿಡ್ಡಿಂಗ್‌ ಮುಗಿದಾಗ, 2,000 ಕೋಟಿ ರೂ. ನಡೆಯುತ್ತಿತ್ತು. ಇದು ಮಂಗಳವಾರವೂ ಮುಂದುವರಿಯಲಿದ್ದು, ಇನ್ನಷ್ಟು ಹಣ ಬಾಚಿಕೊಳ್ಳುವ ಸಾಧ್ಯತೆ ಇದೆ. ಈ ಕೆಟಗೆರಿಯಲ್ಲಿ ಒಟ್ಟು 98 ಪಂದ್ಯಗಳ ಪ್ರಸಾರ ಹಕ್ಕು ಸಿಗಲಿದೆ. ಅಂದರೆ, ಮೊದಲ ಎರಡು ಸೆಷನ್‌ನಲ್ಲಿ ತಲಾ 18, ಮುಂದಿನ ಎರಡರಲ್ಲಿ ತಲಾ 20, ಫೈನಲ್‌ ಸೆಷನ್‌ನಲ್ಲಿ 24 ಪಂದ್ಯಗಳ ಪ್ರಸಾರ ಹಕ್ಕು ದೊರೆಯಲಿದೆ.

ಇಂದು ಪ್ಯಾಕೇಜ್‌ ಡಿ
ಇನ್ನು ಪ್ಯಾಕೇಜ್‌ ಡಿ ಹರಾಜು ಪ್ರಕ್ರಿಯೆ, ಪ್ಯಾಕೇಜ್‌ ಸಿ ಮುಗಿದ ಅನಂತರ ಮಂಗಳವಾರವೇ ಶುರುವಾಗಲಿದೆ. ಇದರಲ್ಲಿ 410 ಪಂದ್ಯಗಳನ್ನೂ ಹೊರ ದೇಶಗಳಲ್ಲಿ ಟೀವಿ ಮತ್ತು ಡಿಜಿಟಲ್‌ ರೂಪದಲ್ಲಿ ಪ್ರಸಾರ ಮಾಡಬಹುದು. ಅಂದರೆ, 2023 ಮತ್ತು 2024ರಲ್ಲಿ ತಲಾ 74 ಮ್ಯಾಚ್‌, 2025 ಮತ್ತು 2026ರಲ್ಲಿ ತಲಾ 84 ಮ್ಯಾಚ್‌ ಹಾಗೂ 2027ರಲ್ಲಿ 94 ಮ್ಯಾಚ್‌ಗಳ ಪ್ರಸಾರದ ಹಕ್ಕು ಸಿಗಲಿದೆ. ಪ್ಯಾಕೇಜ್‌ ಸಿ ಮೇಲೆ ಝೀ ಮತ್ತು ಬಿಸಿಸಿಐನ ಮಾಜಿ ಸಿಇಓ ರಾಹುಲ್‌ ಜೋಹ್ರಿ ಕಣ್ಣಿಟ್ಟಿದ್ದಾರೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.

ಐದು ವರ್ಷದ ಹಿಂದಿನ ಹರಾಜಿಗೆ ಹೋಲಿಕೆ ಮಾಡಿದರೆ, ಈ ಬಾರಿ ಬಿಸಿಸಿಐ 3 ಪಟ್ಟು ಹೆಚ್ಚು ಹಣ ಗಳಿಸಿಕೊಳ್ಳುತ್ತಿದೆ ಎಂದೇ ಹೇಳಬಹುದು. ಏಕೆಂದರೆ, ಆಗ ಸ್ಟಾರ್‌ ನೆಟ್‌ವರ್ಕ್‌ 16,347 ಕೋಟಿ ರೂ.ಗಳಿಗೆ ಟೀವಿ, ಡಿಜಿಟಲ್‌ ಮತ್ತು ಹೊರದೇಶದ ಪ್ರಸಾರ ಹಕ್ಕುಗಳನ್ನು ಖರೀದಿ ಮಾಡಿತ್ತು. ಆದರೆ, ಈಗ ದಾಖಲೆ ಪ್ರಮಾಣದ ಹಣಕ್ಕೆ ಮಾರಾಟವಾಗಿರುವುದು ಹೆಗ್ಗಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next