ಕೋಲ್ಕತಾ: ಈಡನ್ ಗಾರ್ಡನ್ಸ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 9 ವಿಕೆಟಿಗಳಿಂದ ಅಮೋಘ ಗೆಲುವು ಸಾಧಿಸಿತು.
ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತು. ವೆಂಕಟೇಶ್ ಅಯ್ಯರ್ 57 ರನ್ ಗರಿಷ್ಠ ಸ್ಕೋರ್ ಮಾಡಿದರು. ಜೇಸನ್ ರಾಯ್ 10, ಗುರ್ಬಾಜ್ 18, ನಾಯಕ ನಿತೀಶ್ ರಾಣಾ 22, ರಸೆಲ್ 10, ರಿಂಕು ಸಿಂಗ್ 16 ರನ್ ಗಳಿಸಿ ಔಟಾದರು. ತಂಡ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. ಬ್ಯಾಟ್ಸ್ ಮ್ಯಾನ್ ಗಳು ನಿರೀಕ್ಷಿತ ಆಟ ತೋರಲಿಲ್ಲ. ಆರ್ ಆರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ 4 ವಿಕೆಟ್ ಕಬಳಿಸಿದರು. ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್(
187) ಪಡೆದ ಬೌಲರ್ ಆಗಿದ್ದಾರೆ. ಡ್ವೇನ್ ಬ್ರಾವೋ 183 ವಿಕೆಟ್ ಕಬಳಿಸಿ ಅಗ್ರಣಿಯಾಗಿದ್ದರು.
ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಅವರ ಭರ್ಜರಿ ಸಾಥ್ ನಿಂದಾಗಿ ಅಮೋಘ ಜಯ ಸಾಧಿಸಿತು. 13.1 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ ಸ್ಮರಣೀಯ ಜಯ ತನ್ನದಾಗಿಸಿಕೊಂಡಿತು.
ಜೈಸ್ವಾಲ್ ಐಪಿಎಲ್‌ನಲ್ಲಿ ಅತಿ ವೇಗದ ಐವತ್ತು ರನ್ ಗಳಿಸಿದ ದಾಖಲೆ ಮಾಡಿದರು. ಕೆ ಎಲ್ ರಾಹುಲ್ ಮತ್ತು ಪ್ಯಾಟ್ ಕಮಿನ್ಸ್ ಅವರು ಈ ಹಿಂದೆ 14 ಎಸೆತಗಳಲ್ಲಿ ಸ್ಪೋಟಕ ಅರ್ಧ ಶತಕಗಳನ್ನು ಸಿಡಿಸಿದ್ದರು.
ಕೇವಲ 13 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜೈಸ್ವಾಲ್ 47ಎಸೆತಗಳಿಂದ 98 ರನ್ ಗಳಿಸಿ ಅಜೇಯರಾಗಿ ಉಳಿದರು.13 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಬಾರಿಸಿದ್ದರು. ಸಂಜು ಸ್ಯಾಮ್ಸನ್ ಔಟಾಗದೆ 29 ಎಸೆತಗಳಿಂದ 48 ರನ್ ಗಳಿಸಿ ಅಜೇಯರಾಗಿ ಉಳಿದರು 2 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು.
ರಾಜಸ್ಥಾನ್ ರಾಯಲ್ಸ್ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಮೂರನೇ ಸ್ಥಾನದಲ್ಲಿದೆ.