Advertisement

IPL; ಕೊಹ್ಲಿ ಶತಕಕ್ಕೆ ಬಟ್ಲರ್ ಪ್ರತಿ ಶತಕ: ಆರ್ ಸಿಬಿಗೆ ಮತ್ತೆ ಸೋಲಿನ ಬರೆ

01:13 AM Apr 07, 2024 | Team Udayavani |

ಜೈಪುರ: ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಆರ್ ಸಿಬಿ ಸೋತು ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.

Advertisement

ವಿರಾಟ್ ಕೊಹ್ಲಿ ಐಪಿಎಲ್ ನ ತನ್ನ 8 ನೇ ಶತಕ ದಾಖಲಿಸಿದರೂ ಆರ್ ಸಿಬಿ ಪಾಲಿಗೆ ಗೆಲುವು ಒಲಿದು ಬರಲಿಲ್ಲ. ಕೊಹ್ಲಿ ಶತಕಕ್ಕೆ ಪ್ರತಿಯಾಗಿ ಬಟ್ಲರ್ ಪ್ರತಿ ಶತಕ ಸಿಡಿಸಿ ರಾಜಸ್ಥಾನಕ್ಕೆ ಗೆಲುವು ಒದಗಿಸಿಕೊಟ್ಟರು.

ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್ ಸಿಬಿ 3 ವಿಕೆಟ್ ನಷ್ಟಕ್ಕೆ 183 ರನ್ ಕಲೆ ಹಾಕಿತು. ವಿರಾಟ್ ಕೊಹ್ಲಿ 72 ಎಸೆತಗಳಲ್ಲಿ 113 ರನ್ ಗಳಿಸಿ ಅಜೇಯರಾಗಿ ಉಳಿದರು. 12 ಬೌಂಡರಿ ಮತ್ತು 4 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿತ್ತು. ಕೊಹ್ಲಿ ಅವರ ಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 183 ರನ್ ಕಲೆ ಹಾಕಿತು. ಆರ್ ಸಿಬಿ ಬೌಲಿಂಗ್ ವಿಚಾರದಲ್ಲಿ ಹಿಂದುಳಿದ ಕಾರಣ ರಾಜಸ್ಥಾನದ ಪಾಲಿಗೆ ಈ ಮೊತ್ತ ಅಷ್ಟು ದೊಡ್ಡ ಸವಾಲು ಆಗಿ ಪರಿಣಮಿಸಲಿಲ್ಲ.

ಗುರಿ ಬೆನ್ನಟ್ಟಿದ ರಾಜಸ್ಥಾನ್ ಖಾತೆ ತೆರೆಯುವ ಮುನ್ನವೇ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಅಮೋಘ ಆಟವಾಡಿದ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್ ಗೆಲುವು ಖಚಿತ ಪಡಿಸಿದರು. ಜೋಸ್ ಬಟ್ಲರ್ ಅಜೇಯ ಶತಕ ಸಿಡಿಸಿ ಸಂಭ್ರಮಿಸಿದರು.ಇದು ಐಪಿಎಲ್ ನಲ್ಲಿ ಅವರ 6 ನೇ ಶತಕವಾಗಿದೆ. 58 ಎಸೆತಗಳಲ್ಲಿ 100 ರನ್ ಸಿಡಿಸಿದ ಅವರು 9 ಬೌಂಡರಿ ಮತ್ತು 4 ಆಕರ್ಷಕ ಸಿಕ್ಸರ್ ಸಿಡಿಸಿದರು. 19.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ 6 ವಿಕೆಟ್ ಗಳ ಜಯ ತನ್ನದಾಗಿಸಿಕೊಂಡಿತು. ಗೆಲ್ಲಲು 1 ರನ್ ಬೇಕಿತ್ತು ಮತ್ತು ಬಟ್ಲರ್‌ಗೆ 100ಕ್ಕೆ 6 ಬೇಕಿತ್ತು. ಭರ್ಜರಿ ಸಿಕ್ಸರ್ ಸಿಡಿಸಿ ಶತಕ ಮತ್ತು ಗೆಲುವಿನ ಸಂಭ್ರಮ ಒಟ್ಟಿಗೆ ಆಚರಿಸಿದರು.

ರಾಜಸ್ಥಾನ್ ಆಡಿದ 4 ಪಂದ್ಯಗಳಲ್ಲಿ 4ನ್ನೂ ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರ್ ಸಿಬಿ 5 ಪಂದ್ಯಗಳಲ್ಲಿ 4 ರಲ್ಲಿ ಸೋಲು ಅನುಭವಿಸಿ ಅಭಿಮಾನಿಗಳನ್ನು ಇನ್ನಷ್ಟು ನಿರಾಶರನ್ನಾಗಿಸಿದೆ. ಕೊಹ್ಲಿ ಅವರು ಶತಕ ಸಿಡಿಸಿದ ಹೊರತಾಗಿಯೂ ಆರ್ ಸಿಬಿ ಸೋತ 3 ನೇ ಪಂದ್ಯ ಇದಾಗಿದೆ.

Advertisement

ಸೌರವ್‌ ಚೌಹಾಣ್‌ ಪದಾರ್ಪಣೆ
ಆರ್‌ಸಿಬಿ ಪರ ಎಡಗೈ ಬ್ಯಾಟರ್‌ ಸೌರವ್‌ ಚೌಹಾಣ್‌ ಐಪಿಎಲ್‌ ಪದಾರ್ಪಣೆ ಮಾಡಿದರು. ಇವರಿಗಾಗಿ ಜಾಗ ಬಿಟ್ಟವರು ಕೀಪರ್‌ ಅನುಜ್‌ ರಾವತ್‌. ಹೀಗಾಗಿ ದಿನೇಶ್‌ ಕಾರ್ತಿಕ್‌ ಕೀಪಿಂಗ್‌ ನಡೆಸಿದರು. ರಾಜಸ್ಥಾನ್‌ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ.

ಜೆರ್ಸಿ ಬಣ್ಣ ಬದಲಾಗಿದ್ದೇಕೆ?

ಗ್ರಾಮೀಣ ರಾಜಸ್ಥಾನದ ಮಹಿಳೆಯರಿಗೆ ತಮ್ಮ ಬೆಂಬಲವನ್ನು ಪ್ರದರ್ಶಿಸಲು ರಾಜಸ್ಥಾನ್ ರಾಯಲ್ಸ್ ಪೂರ್ಣ ಪಿಂಕ್ ಜೆರ್ಸಿಗಳನ್ನು ಧರಿಸಿ ಆಡಿದರು.ಇದು ರಾಜಸ್ಥಾನದ ಮಹಿಳೆಯರಿಗೆ ನಮ್ಮ ಗುಲಾಬಿ ಭರವಸೆ, ಮಹತ್ವದ ಸಾಮಾಜಿಕ ಪರಿವರ್ತನೆಗಾಗಿ ಎಂದು ತಂಡ ಹೇಳಿದೆ.

ಸಾಮಾಜಿಕ ಉದ್ದೇಶಕ್ಕಾಗಿ “ಔರತ್ ಹೈ ತೋ ಭಾರತ್ ಹೈ” ಸಂದೇಶವನ್ನು ಸಹ ಹೊಂದಿತ್ತು. ಮಾತ್ರವಲ್ಲದೆ ತಂಡವು ಮಹಿಳೆಯರಿಗಾಗಿ ಹೆಚ್ಚಿನ ಉಪಕ್ರಮಗಳನ್ನು ಹೊಂದಿತ್ತು. ಆನ್-ಗ್ರೌಂಡ್ ಉಪಕ್ರಮಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು, ರಾಯಲ್ಸ್ ಈ ಪಂದ್ಯಕ್ಕಾಗಿ ಖರೀದಿಸಿದ ಪ್ರತಿ ಟಿಕೆಟ್‌ನಲ್ಲಿ ರಾಜಸ್ಥಾನದ ಮಹಿಳಾ ನೇತೃತ್ವದ ಗ್ರಾಮೀಣ ರೂಪಾಂತರಕ್ಕಾಗಿ  100 ರೂ. ದೇಣಿಗೆ ನೀಡುತ್ತದೆ. ಅದರ ಹೊರತಾಗಿ, ಪ್ರತಿಯೊಂದರ ಮಾರಾಟದಿಂದ ಬರುವ ಎಲ್ಲಾ ಆದಾಯಗಳು, ಗುಲಾಬಿ ರಾಯಲ್ಸ್‌ನ ಜೆರ್ಸಿಯು ಅದರ ಸಾಮಾಜಿಕ ಘಟಕ ರಾಯಲ್ ರಾಜಸ್ಥಾನ್ ಫೌಂಡೇಶನ್‌ಗೆ ಹೋಗಿದೆ. ಎರಡೂ ತಂಡಗಳ ಪಂದ್ಯದ ಸಮಯದಲ್ಲಿ ಪ್ರತಿ ಸಿಕ್ಸ್ ಗಳಿಗೆ, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ರಾಜಸ್ಥಾನ್ ಫೌಂಡೇಶನ್ ಸಂಭಾರ್ ಪ್ರದೇಶದ 6 ಮನೆಗಳನ್ನು ಸೌರಶಕ್ತಿಯಿಂದ ಬೆಳಗಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next