Advertisement

ಜನರ ಆರೋಗ್ಯಕ್ಕಿಂತ ಐಪಿಎಲ್‌ ದೊಡ್ಡದಲ್ಲ

10:10 AM Mar 14, 2020 | mahesh |

ಐಪಿಎಲ್‌ನಂಥ ಬೃಹತ್‌ ಕ್ರೀಡಾಕೂಟವೊಂದನ್ನು ರದ್ದುಪಡಿಸಿದರೆ ಭಾರೀ ಪ್ರಮಾಣದ
ನಷ್ಟವಾಗುತ್ತದೆ ಎನ್ನುವುದು ನಿಜ. ಹಾಗೆಂದು ಜನರ ಆರೋಗ್ಯವನ್ನು ಪಣಕ್ಕಿಡುವುದು ಸರಿಯಲ್ಲ. ಈ ಪರಿಸ್ಥಿತಿಯಲ್ಲಿ ಐಪಿಎಲ್‌ ರದ್ದುಪಡಿಸುವುದೇ ಸರಿ.

Advertisement

ಜಗತ್ತಿನಾದ್ಯಂತ ಹಾಹಾಕಾರ ಎಬ್ಬಿಸಿರುವ ಕೊರೊನಾ ವೈರಸ್‌ನ ಕರಿನೆರಳು ಕ್ರೀಡಾ ಕ್ಷೇತ್ರದ ಮೇಲೂ ದಟ್ಟವಾಗಿಯೇ ಕವಿದಿದೆ. ಭಾರತದಲ್ಲಿ ಈ ಮಾಸಾಂತ್ಯದಲ್ಲಿ ಪ್ರಾರಂಭವಾಗಲಿರುವ ಐಪಿಎಲ್‌ ಕ್ರಿಕೆಟ್‌ ಕೂಟ, ವರ್ಷಾಂತ್ಯದಲ್ಲಿ ಜಪಾನ್‌ನ ಟೋಕಿಯೊ ನಗರದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕೂಟವೂ ಸೇರಿದಂತೆ ಹಲವು ಪ್ರಮುಖ ಕ್ರೀಡಾಕೂಟಗಳ ಭವಿಷ್ಯ ಕೊರೊನಾದಿಂದಾಗಿ ಅತಂತ್ರವಾಗಿದೆ.

ಕ್ರೀಡಾಕೂಟಗಳೆಂದರೆ ಜನರಿಗೆ ಭರಪೂರ ಮನರಂಜನೆ ಸಿಗುವ ಕಾರ್ಯಕ್ರಮ. ಸಹಜವಾಗಿಯೇ ಕ್ರೀಡಾಕೂಟಗಳಿಗೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇಂಥ ಕಡೆಗೆ ಕೊರೊನಾ ವೈರಸ್‌ ಸೋಂಕು ಇರುವ ವ್ಯಕ್ತಿಯೇನಾದರೂ ಬಂದರೆ ಅದರಿಂದ ಆಗಬಹುದಾದ ಹಾನಿ ಅಪಾರ. ಈ ಹಿನ್ನೆಲೆಯಲ್ಲಿ ಅನೇಕ ದೇಶಗಳು ಕ್ರೀಡಾಕೂಟಗಳು ಸೇರಿದಂತೆ ಎಲ್ಲ ರೀತಿಯ ಸಾಮಾಜಿಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಿವೆ. ಕೊರೊನಾ ಹಾವಳಿ ವಿಪರೀತವಿರುವ ಇಟಲಿ ದೇಶವಂತೂ ಪೂರ್ತಿ ಸ್ತಬ್ಧಗೊಂಡಿದೆ. ನಮ್ಮದೇ ದೇಶದ ಕೇರಳ ರಾಜ್ಯದಲ್ಲೂ ಕೆಲವು ನಗರಗಳ ರಸ್ತೆಗಳು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ.

ಕೇಂದ್ರ ಆರೋಗ್ಯ ಇಲಾಖೆ ಕೊರೊನಾ ಹರಡುವುದನ್ನು ತಡೆಯುವ ಸಲುವಾಗಿ ಅನೇಕ ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಹಾಗೂ ಹಲವು ನಿರ್ಬಂಧಗಳನ್ನು ಹೇರಿದೆ. ಈ ಪೈಕಿ ವಿಸಾ ನಿರ್ಬಂಧವೂ ಒಂದು. ರಾಜತಾಂತ್ರಿಕ ಮತ್ತು ನೌಕರಿಗೆ ಸಂಬಂಧಪಟ್ಟಿರುವ ವಿಸಾಗಳನ್ನು ಹೊರತುಪಡಿಸಿ ಉಳಿದ ಎಲ್ಲ ವಿಸಾಗಳ ನೀಡಿಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಈ ನಿರ್ಬಂಧದಿಂದಾಗಿ ಮೊದಲ ಹೊಡೆತ ಬೀಳುವುದು ಐಪಿಎಲ್‌ ಕ್ರೀಡಾಕೂಟಕ್ಕೆ. ಏಕೆಂದರೆ ಐಪಿಎಲ್‌ನಲ್ಲಿ ಆಡುವ ಸುಮಾರು 60ರಷ್ಟು ವಿದೇಶಿ ಆಟಗಾರರು ಬಿಸಿನೆಸ್‌ ವಿಸಾ ಮೇಲೆ ಬರುತ್ತಾರೆ. ನಿರ್ಬಂಧದಿಂದಾಗಿ ಎ.15ರ ತನಕ ಇವರು ಭಾರತಕ್ಕೆ ಬರುವಂತಿಲ್ಲ. ಹೀಗಾಗಿ ಐಪಿಎಲ್‌ ಮೊದಲ ಸುತ್ತಿನಲ್ಲಿ ತನ್ನ ರೋಚಕತೆಯನ್ನು ಕಳೆದುಕೊಳ್ಳಲಿದೆ. ಈಗ ಇರುವ ಪ್ರಶ್ನೆಯೇನೆಂದರೆ ಇಂಥ ಪರಿಸ್ಥಿತಿಯಲ್ಲೂ ಐಪಿಎಲ್‌ ಕೂಟವನ್ನು ನಡೆಸಬೇಕೆ ಎನ್ನುವುದು.

Advertisement

ಅನಿವಾರ್ಯ ಎಂದಾದರೆ ಕ್ರೀಡಾಕೂಟಗಳನ್ನು ಜನ ಸೇರಿಸದೆ ನಡೆಸಬೇಕೆಂದು ಆರೋಗ್ಯ ಇಲಾಖೆ ಎಲ್ಲ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಗೆ ಸಲಹೆಯಿತ್ತಿದೆ. ಐಪಿಎಲ್‌ನಂಥ ಕ್ರೀಡಾಕೂಟವನ್ನು ಪ್ರೇಕ್ಷಕರಿಲ್ಲದೆ ಆಡುವುದನ್ನು ಊಹಿಸಲು ಕಷ್ಟವಾಗುತ್ತದೆ. ಹೀಗಾಗಿ ಐಪಿಎಲ್‌ ಆಡಳಿತ ಸಮಿತಿ ಮತ್ತು ಬಿಸಿಸಿಐ ಈ ವರ್ಷದ ಐಪಿಎಲ್‌ ಕೂಟದ ಬಗ್ಗೆ ಮರು ಚಿಂತನೆ ನಡೆಸಬೇಕು.

ಜನರ ಸಂಶಯಗಳಿಗೆ ಇಂಬುಕೊಡುವಂತೆ ಮಾ.8ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆದ ವನಿತೆಯರ ಟ್ವೆಂಟಿ-ಟ್ವೆಂಟಿ ಫೈನಲ್‌ ಪಂದ್ಯ ನೋಡಿದ ಓರ್ವ ಪ್ರೇಕ್ಷಕನಲ್ಲಿ ಕೊರೊನಾ ಸೋಂಕು ಇದ್ದದ್ದು ದೃಢಪಟ್ಟಿದೆ. ಆತನ ಸುತ್ತಮುತ್ತ ಕುಳಿತಿದ್ದವರು ನಿತ್ಯದ ಕೆಲಸಗಳನ್ನು ಮಾಡಬಹುದಾದರೂ ನೈರ್ಮಲ್ಯದ ಬಗ್ಗೆ ತುಸು ಹೆಚ್ಚು ಕಾಳಜಿ ವಹಿಸಿಕೊಳ್ಳಬೇಕೆಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿದೆ. ಇಂಥ ಪ್ರಕರಣಗಳು ಭಾರತದಲ್ಲಿ ಸಂಭವಿಸುವ ಸಾಧ್ಯತೆಯೂ ಇರುವುದರಿಂದ ಈ ವರ್ಷದ ಮಟ್ಟಿಗೆ ಐಪಿಎಲ್‌ ರದ್ದುಗೊಳಿಸುವುದು ಅಥವಾ ಕನಿಷ್ಠ ಮುಂದೂಡುವುದು ಸಮುಚಿತ ನಿರ್ಧಾರವಾಗಬಹುದು. ಐಪಿಎಲ್‌ ಮುಂದೂಡಬೇಕೆಂದು ಆಗ್ರಹಿಸಿದ ದಾವೆಯೂ ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿದ್ದು, ಇದು ಮುಂದಿನ ದಿನಗಳಲ್ಲಿ ವಿಚಾರಣೆಗೆ ಬರಲಿದೆ.

ಐಪಿಎಲ್‌ನಂಥ ಬೃಹತ್‌ ಕ್ರೀಡಾಕೂಟವೊಂದನ್ನು ರದ್ದುಪಡಿಸಿದರೆ ಭಾರೀ ಪ್ರಮಾಣದ ನಷ್ಟವಾಗುತ್ತದೆ ಎನ್ನುವುದು ನಿಜ. ಆಟಗಾರರಿಗೆ, ಬಿಸಿಸಿಐಗೆ, ಫ್ರಾಂಚೈಸಿಗಳಿಗೆ, ಮಾಧ್ಯಮಗಳಿಗೆ ನಷ್ಟವಾಗುತ್ತದೆ. ಮಾತ್ರವಲ್ಲದೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಷ್ಟ ಅನುಭವಿಸುವ ಅನೇಕ ಮಂದಿಯಿದ್ದಾರೆ. ದೇಶದ ಪ್ರವಾಸೋದ್ಯಮ, ಹೊಟೇಲ್‌ ಉದ್ಯಮಕ್ಕೂ ನಷ್ಟವಾಗುತ್ತದೆ. ಒಟ್ಟಾರೆಯಾಗಿ ದೇಶದ ಆರ್ಥಿಕತೆಗೆ ಹಿನ್ನಡೆಯಾಗುತ್ತದೆ.ಕೊರೊನಾದಿಂದಾಗಿ ಪ್ರವಾಸೋದ್ಯಮ ಈಗಾಗಲೇ ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದೆ. ಆದರೆ ಹಾಗೆಂದು ಜನರ ಆರೋಗ್ಯವನ್ನು ಪಣಕ್ಕಿಡುವುದು ಸರಿಯಲ್ಲ. ಈ ಪರಿಸ್ಥಿತಿಯಲ್ಲಿ ಐಪಿಎಲ್‌ ರದ್ದುಪಡಿಸುವುದೇ ಸಮರ್ಪಕವಾದ ನಿರ್ಧಾರವಾಗುತ್ತದೆ. ಜನರ
ಪ್ರಾಣಕ್ಕಿಂತ ಕ್ರೀಡಾಕೂಟ ದೊಡ್ಡದಲ್ಲ.

Advertisement

Udayavani is now on Telegram. Click here to join our channel and stay updated with the latest news.

Next