Advertisement

ಲಂಕಾದಲ್ಲಿ ಈ ಬಾರಿಯ ಐಪಿಎಲ್‌!

11:09 AM Apr 18, 2020 | Sriram |

ಹೊಸದಿಲ್ಲಿ: ಕೋವಿಡ್-19 ಕಾರಣ ಈ ಬಾರಿಯ ಐಪಿಎಲ್‌ ಬಹುತೇಕ ರದ್ದು ಅನ್ನುವಷ್ಟರಲ್ಲೇ ಹೊಸ ದಾರಿಯೊಂದು ತೆರೆದುಕೊಂಡಿದೆ. ದ್ವೀಪರಾಷ್ಟ್ರ ಶ್ರೀಲಂಕಾ ತಾನು ಐಪಿಎಲ್‌ ಆಯೋಜಿಸಲು ಸಿದ್ಧ ಎಂದು ಹೇಳಿದೆ.

Advertisement

ತನ್ನ ದೇಶದಲ್ಲಿ ಕೋವಿಡ್-19 ಪ್ರಕರಣಗಳು ಬಹಳ ಕಡಿಮೆಯಿರುವುದರಿಂದ ಐಪಿಎಲ್‌ ಕೂಟವನ್ನು ಆಯೋಜಿಸುತ್ತೇನೆಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಶಮ್ಮಿ ಸಿಲ್ವ ಹೇಳಿದ್ದಾರೆ. ಆದರೆ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ)ಯಲ್ಲಿರುವ ಪ್ರಭಾವಿಗಳು ಅದಕ್ಕೆ ಮನಸ್ಸು ಮಾಡಿಲ್ಲ, ಇಡೀ ಜಗತ್ತೇ ಮುಚ್ಚಿ ಹೋದಂತಾಗಿರುವ ಈ ಹೊತ್ತಿನಲ್ಲಿ, ಶ್ರೀಲಂಕಾದಲ್ಲಿ ಐಪಿಎಲ್‌ ನಡೆಸುವ ಉಸಾಬರಿ ಏಕೆ ಎಂದು ಸುಮ್ಮನಾಗಿದ್ದಾರೆ ಎಂದು ಹೇಳಲಾಗಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಇನ್ನೂ ಶ್ರೀಲಂಕಾದಿಂದ ಅಧಿಕೃತವಾಗಿ ಪ್ರಸ್ತಾವ ಬಂದಿಲ್ಲ. ಸದ್ಯ ಆ ದೇಶ ಭಾರತದ ಜತೆಗಿದೆ. ಜುಲೈನಲ್ಲಿ ನಡೆಯುವ ಐಸಿಸಿ ಚುನಾವಣೆಯಲ್ಲಿ ಶಶಾಂಕ್‌ ಮನೋಹರ್‌ ಮುಖ್ಯಸ್ಥ ಸ್ಥಾನ ತ್ಯಜಿಸಲಿದ್ದಾರೆ. ಆಗಿನ ಲೆಕ್ಕಾಚಾರಗಳೇ ಬೇರೆಯಾಗಬಹುದು ಎಂದು ಹೇಳಿವೆ. ಆದರೆ ಆಗ ಯಾವ ರೀತಿ ಈ ಲೆಕ್ಕಾಚಾರ ಬದಲಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿಲ್ಲ.

ಲಂಕಾದಲ್ಲಿ ನಡೆಸುವುದು ಸುಲಭವೇ?
ಶ್ರೀಲಂಕಾ ಒಂದು ದ್ವೀಪರಾಷ್ಟ್ರ. ಸದ್ಯ ಅಲ್ಲಿನ ಪ್ರೇಮದಾಸ, ಗಾಲೆ, ಕ್ಯಾಂಡಿಯಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ನಡೆಸಬಹುದು. ಈ ಮೈದಾನಗಳು ಕೇವಲ 120 ಕಿ.ಮೀ. ಅಂತರದಲ್ಲಿವೆ. ಆದ್ದರಿಂದ ಇಲ್ಲಿಗೆ ವಿಮಾನ ಸೌಲಭ್ಯವಿಲ್ಲ. ಇದಕ್ಕಾಗಿ ವಾಹನಗಳನ್ನೇ ಅವಲಂಬಿಸಬೇಕು. ರಕ್ಷಣೆಯ ದೃಷ್ಟಿಯಿಂದ ಇದು ಅಪಾಯಕಾರಿ. ಆದರೆ ಖಾಸಗಿಯಾಗಿ ವಿಮಾನ ವ್ಯವಸ್ಥೆ ಮಾಡಿಕೊಳ್ಳುವುದು ಸಾಧ್ಯವಿದೆ.ಸದ್ಯ ಲಂಕಾ ಕ್ರಿಕೆಟ್‌ ಆರ್ಥಿಕ ಕುಸಿತದಲ್ಲಿದೆ. ಐಪಿಎಲ್‌ ನಡೆಸಿದರೆ ಅದರ ಪುನಃಶ್ಚೇತನ ಸಾಧ್ಯ. ಜತೆಗೆ ಮುಂದಿನ ದಿನಗಳಲ್ಲಿ ಭಾರತದ ವಿರುದ್ಧ ದ್ವಿಪಕ್ಷೀಯ ಕ್ರಿಕೆಟ್‌ ನಡೆಸಲು ಸಾಧ್ಯವಾಗಲಿದೆ.

ಸಂಬಂಧವಿಲ್ಲ: ಬಿಸಿಸಿಐ
ಕೋವಿಡ್‌ -19ನಿಂದಾಗಿ ಇಡೀ ಪ್ರಪಂಚವೇ ಸ್ತಬ್ದಗೊಂಡಿರುವ ಇಂತಹ ಪರಿಸ್ಥಿತಿಯಲ್ಲಿ ಐಪಿಎಲ್‌ ಕೂಟದ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿಲ್ಲ. ನಾವು ಯಾವುದೇ ಕ್ರಿಕೆಟ್‌ ಮಂಡಳಿ ಜತೆ ಮಾತನಾಡಿಲ್ಲ. ಇದೊಂದು ಸುಳ್ಳು ಸುದ್ದಿ. ನಮಗೆ ಯಾವುದೇ ವಿಚಾರ ತಿಳಿದಿಲ್ಲ. ಒಂದು ವೇಳೆ ಈ ಬಗ್ಗೆ ಮಾತನಾಡಿದಲ್ಲಿ ಅಧಿಕೃತವಾಗಿ ನಾವೇ ಘೋಷಣೆ ಮಾಡುತ್ತೇವೆ ಎಂದು ಬಿಸಿಸಿಐ ಪ್ರಕಟನೆಯಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next