Advertisement

ಆತಂಕದಲ್ಲಿ  ಐಪಿಎಲ್‌!

01:15 AM May 04, 2021 | Team Udayavani |

ಹೊಸದಿಲ್ಲಿ: ಕೋಲ್ಕತಾ ನೈಟ್‌ರೈಡರ್ಸ್‌ ತಂಡದ ಇಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಸೋಮವಾರ ರಾತ್ರಿ ಅಹ್ಮದಾಬಾದ್‌ನಲ್ಲಿ ನಡೆಯಬೇಕಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು -ಕೋಲ್ಕತಾ ನೈಟ್‌ ರೈಡರ್ಸ್‌ ಪಂದ್ಯ ವನ್ನು ಮುಂದೂಡಲಾಗಿದೆ.

Advertisement

ಕೋಲ್ಕತಾ ತಂಡಕ್ಕೆ 6 ದಿನಗಳ ಕ್ವಾರಂಟೈನ್‌ ವಿಧಿಸಲಾಗಿದೆ. ಇನ್ನೊಂದು ಕಡೆ ಚೆನ್ನೈ ಸೂಪರ್‌ ಕಿಂಗ್ಸ್‌  ತಂಡದ ಮೂವರು ಸಹಾಯಕ ಸಿಬಂದಿಗೆ ಸೋಂಕು ತಗುಲಿದೆ ಎಂದು ರವಿವಾರದ ವರದಿಯಲ್ಲಿ ಗೊತ್ತಾಗಿತ್ತು. ಸೋಮ ವಾರ ಚೆನ್ನೈ ಸಿಇಒ ಕಾಶಿ ವಿಶ್ವನಾಥನ್‌ಗೆ ಕೊರೊನಾ ಇಲ್ಲವೆಂದು ಖಚಿತವಾಗಿದೆ. ಆದರೆ ಬೌಲಿಂಗ್‌ ತರಬೇತುದಾರ ಲಕ್ಷ್ಮೀಪತಿ ಬಾಲಾಜಿ, ಬಸ್‌ ಚಾಲಕನಿಗೆ ಕೋವಿಡ್ ಸಾಬೀತಾಗಿದೆ. ಬಾಲಾಜಿ ಅವರು ಚೆನ್ನೈ ತಂಡದ ನೇರ ಸಂಪರ್ಕದಲ್ಲಿ ಇರು ವುದ ರಿಂದ ಈ ತಂಡದ ಪಂದ್ಯಗಳನ್ನು ಮುಂದೂಡ ಬೇಕೆ ಎಂಬ ಜಿಜ್ಞಾಸೆಯಲ್ಲಿ ಬಿಸಿಸಿಐ ಇದೆ.

ಹೊಸದಿಲ್ಲಿ, ಮೇ 3: ಐಪಿಎಲ್‌ ಮೇಲೆ ಕೋವಿಡ್ ಬಲವಾದ ಬೌನ್ಸರ್‌ ಎಸೆದಿದೆ. ಕೋಲ್ಕತಾ ನೈಟ್‌ರೈಡರ್ ತಂಡದ ಇಬ್ಬರು ಆಟಗಾರರ ಫ‌ಲಿತಾಂಶ ಪಾಸಿಟಿವ್‌ ಬಂದ ಕಾರಣ ಸೋಮವಾರ ರಾತ್ರಿ ಅಹ್ಮದಾಬಾದ್‌ನಲ್ಲಿ ನಡೆಯಬೇಕಿದ್ದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದೆದುರಿನ ಪಂದ್ಯವನ್ನು ಮುಂದೂಡಲಾಯಿತು. ಇದರ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು.

ಮೂರನೇ ಸುತ್ತಿನ ಕೋವಿಡ್‌ ಟೆಸ್ಟ್‌ ವೇಳೆ ಕೆಕೆಆರ್‌ ತಂಡದ ಬೌಲರ್‌ಗಳಾದ ವರುಣ್‌ ಚಕ್ರವರ್ತಿ ಮತ್ತು ಸಂದೀಪ್‌ ವಾರಿಯರ್‌ ಅವರ ಫ‌ಲಿತಾಂಶ ಪಾಸಿಟಿವ್‌ ಬಂದಿತ್ತು. ಆದರೆ ತಂಡದ ಉಳಿದ ಆಟಗಾರರ ಫ‌ಲಿತಾಂಶ ನೆಗೆಟಿವ್‌ ಆಗಿದೆ ಎಂದು ಐಪಿಎಲ್‌ ಆಡಳಿತ ಮಂಡಳಿ ತಿಳಿಸಿದೆ.

ಲೆಗ್‌ಸ್ಪಿನ್ನರ್‌ ಚಕ್ರವರ್ತಿ ಮತ್ತು ಪೇಸರ್‌ ವಾರಿಯರ್‌ ಇಬ್ಬರೂ ಐಸೊಲೇಶನ್‌ನಲ್ಲಿದ್ದಾರೆ. ಇವರಲ್ಲಿ ವಾರಿಯರ್‌ ಈ ವರ್ಷ ಯಾವುದೇ ಪಂದ್ಯವನ್ನಾಡಿಲ್ಲ.

Advertisement

ದಿನವೂ ಕೋವಿಡ್‌ ಟೆಸ್ಟ್‌ :

“ವೈದ್ಯಕೀಯ ತಂಡ ಇವರಿಬ್ಬರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇರಿಸಿದೆ. ಈ ನಡುವೆ ಕೆಕೆಆರ್‌ ಆಟಗಾರರಿಗೆ ದಿನವೂ ಕೋವಿಡ್‌ ಟೆಸ್ಟ್‌ ನಡೆಸಲಾಗುವುದು. ಇವರಿಬ್ಬರ ಸಂಪರ್ಕದಲ್ಲಿದ್ದವರನ್ನು ಆ್ಯಪ್‌ ಮೂಲಕ ಟ್ರೇಸ್‌ ಮಾಡಿ ಪರೀಕ್ಷಿಸಲಾಗುವುದು. ಅಹ್ಮದಾಬಾದ್‌ನಲ್ಲೇ ಇರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಟಗಾರರಿಗೂ ಕೊರೊನಾ ಟೆಸ್ಟ್‌ ನಡೆಸಲಾಗುವುದು’ ಎಂದು ಬಿಸಿಸಿಐ ತಿಳಿಸಿದೆ. ಕೆಕೆಆರ್‌ ವಿರುದ್ಧ ಆಡಿದ ಕೊನೆಯ ತಂಡವಾದ ಕಾರಣ ಡೆಲ್ಲಿ ಆಟಗಾರರು ಕೋವಿಡ್‌ ಪರೀಕ್ಷೆಗೆ ಒಳಪಡುವುದು ಅನಿವಾರ್ಯವಾಗಿದೆ. ಇತ್ತಂಡಗಳು ಎ. 29ರಂದು ಮುಖಾಮುಖೀ ಆಗಿದ್ದವು.

ಐಪಿಎಲ್‌ ಎಸ್‌.ಒ.ಪಿ. ಆಡಳಿತ ಮಂಡಳಿಯ ನಿಯಮಾವಳಿಯಂತೆ, ಕೊರೊನಾ ಪಾಸಿಟಿವ್‌ ಸಂಪರ್ಕದಲ್ಲಿರುವವರು 6 ದಿನ ಐಸೊಲೇಶನ್‌ನಲ್ಲಿದ್ದು, 3 ಸಲ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಿದೆ (1, 3 ಹಾಗೂ 6ನೇ ದಿನ). ನೆಗೆಟಿವ್‌ ವರದಿಯನ್ನು ಪಡೆದ ಬಳಿಕವಷ್ಟೇ ತಂಡವನ್ನು ಕೂಡಿಕೊಳ್ಳಬಹುದಾಗಿದೆ.

ಚೆನ್ನೈ ತಂಡದಲ್ಲೂ ಕೋವಿಡ್ :

ಇದರ ಬೆನ್ನಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್‌ ಪಾಳೆಯದಲ್ಲೂ ಕೋವಿಡ್ ಪಾಸಿಟಿವ್‌ ಬಂದಿದೆ ಎಂಬ ಸುದ್ದಿಯೊಂದು ಹರಿದಾಡಿದೆ. ತಂಡದ ಸಿಇಒ ಕಾಶಿ ವಿಶ್ವನಾಥನ್‌, ಬೌಲಿಂಗ್‌ ಕೋಚ್‌ ಲಕ್ಷ್ಮೀಪತಿ ಬಾಲಾಜಿ ಮತ್ತು ತಂಡದ ಬಸ್‌ ಚಾಲಕನ ಫ‌ಲಿತಾಂಶ ಪಾಸಿಟಿವ್‌ ಬಂದಿದ್ದಾಗಿ ವರದಿ ಯಾಯಿತು. ಆದರೆ ಇದು “ಸುಳ್ಳು ಪಾಸಿಟಿವ್‌ ರಿಸಲ್ಟ್’ ಎಂಬುದಾಗಿ ಬಿಸಿಸಿಐ ತಿಳಿಸಿತ್ತು. ಸಂಜೆಯ ವರದಿ ಪ್ರಕಾರ ಬಾಲಾಜಿ ಅವರಲ್ಲಿ ಪಾಸಿಟಿವ್‌ ಇದ್ದದ್ದು ದೃಢಪಟ್ಟಿದೆ.

ಪಾಸಿಟಿವ್‌ ಸುದ್ದಿ ಇಲ್ಲಿಗೇ ನಿಲ್ಲಲಿಲ್ಲ. ಹೊಸದಿಲ್ಲಿಯ ಕೋಟ್ಲಾ ಮೈದಾನದ ಕೆಲವು ಸಿಬಂದಿಗೂ ಕೊರೊನಾ ಸೋಂಕು ತಗಲಿದ ಬಗ್ಗೆ ವರದಿಯಾಗಿದೆ. ಇದನ್ನು ಡಿಡಿಸಿಎ ಅಧ್ಯಕ್ಷ ರಂಜನ್‌ ಜೇಟಿÉ ಸ್ಪಷ್ಟಪಡಿಸಿದ್ದು, ಇವರಲ್ಲಿ ಯಾವ ಸಿಬಂದಿಯೂ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದಿದ್ದಾರೆ. ಇಲ್ಲಿ ಮಂಗಳವಾರ ಮುಂಬೈ-ಹೈದರಾಬಾದ್‌ ನಡುವಿನ ಪಂದ್ಯ ನಡೆಯಬೇಕಿದೆ.

ಐಪಿಎಲ್‌ ರದ್ದುಗೊಳಿಸಿ: ಟ್ವಿಟರ್‌ ಅಭಿಯಾನ! :

ಪಂದ್ಯಾವಳಿಯ ನಡುವೆ ಆಟಗಾರರಲ್ಲಿ ಕೋವಿಡ್ ಸೋಂಕು ಕಂಡುಬಂದದ್ದು ದೊಡ್ಡ ಆತಂಕ ಸೃಷ್ಟಿಸಿದೆ. ಒಂದೆಡೆ ದೇಶದಲ್ಲಿ ಸಾಲು ಸಾಲು ಹೆಣಗಳು ಬೀಳುತ್ತಿರುವಾಗ ಹಣ ಮಾಡುವ ಈ ಕ್ರಿಕೆಟ್‌ ವಿರುದ್ಧ ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಪಿಎಲ್‌ ಟೂರ್ನಿಯನ್ನು ರದ್ದು ಮಾಡಿ ಎಂಬ ಟ್ವಿಟರ್‌ ಅಭಿಯಾನವನ್ನು ಆರಂಭಿಸಿದ್ದಾರೆ.

“ಐಪಿಎಲ್‌ ಆಟಗಾರರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳಲಾರಂಭಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಟೂರ್ನಿಯನ್ನು ರದ್ದುಗೊಳಿಸಬೇಕು. ಇಂತಹ ವಿಷಮ ಸ್ಥಿತಿಯಲ್ಲಿ ಜನತೆಗೆ ಮನರಂಜನೆ ಬೇಕಿಲ್ಲ , ಜನರ ಪ್ರಾಣಕ್ಕಿಂತ ಮನರಂಜನೆ ಮುಖ್ಯವಲ್ಲ…’ ಎಂದು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಯಾವ ಮಾರ್ಗವಾಗಿ ಬಂತು ಕೋವಿಡ್ ? :

ಕೋವಿಡ್ ಈ ಭೀಕರ ಕಾಲಘಟ್ಟದಲ್ಲಿ ಐಪಿಎಲ್‌ ಬೇಕಿತ್ತೇ ಎಂಬ ಪ್ರಶ್ನೆ ಆರಂಭದಿಂದಲೇ ಕೇಳಿ ಬಂದಿತ್ತು. ಸಾಕಷ್ಟು ಟೀಕೆಯೂ ವ್ಯಕ್ತವಾಗಿತ್ತು. ಆದರೆ ಬಿಸಿಸಿಐ ಮಾತ್ರ “ಜೈವಿಕ ಸುರಕ್ಷಾ ವಲಯ’ ಮಂತ್ರವನ್ನು ಪಠಿಸುತ್ತಲೇ ಕೂಟವನ್ನು ಯಶಸ್ವಿಗೊಳಿಸುವ ವಿಶ್ವಾಸದಲ್ಲಿತ್ತು. ಆದರೀಗ ಬಯೋ ಬಬಲ್‌ ಏರಿಯಾದಲ್ಲೂ ಕೋವಿಡ್ ಲಗ್ಗೆ ಇರಿಸಿದ್ದು ದೊಡ್ಡ ಆತಂಕವನ್ನು ತಂದೊಡ್ಡಿದೆ.

ಕೋವಿಡ್ ಯಾವ ಮಾರ್ಗವಾಗಿ ಬಂತು ಎಂಬುದು ದೊಡ್ಡ ಪ್ರಶ್ನೆ. ಮೈದಾನದ ಸಿಬಂದಿ ಮೂಲಕ ಬಂತೇ, ಆಹಾರ ಸರಬರಾಜು ಮಾಡುವರು ತಂದರೇ? ಪ್ರಶ್ನೆಗಳು ಸಹಜ. ಇವರ್ಯಾರೂ ಜೈವಿಕ ಸುರಕ್ಷಾ ವಲಯ ವ್ಯಾಪ್ತಿಗೆ ಬರುವುದಿಲ್ಲ. ಹಾಗೆಯೇ ಇವರಿಗೆ ಕೋವಿಡ್‌ ಟೆಸ್ಟ್‌ ನಡೆಸಲಾಗಿದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.

ಆರಂಭದಲ್ಲಿ ವಾಂಖೇಡೆ ಸಿಬಂದಿಗೆ ಕೊರೊನಾ ಬಂದಾಗ ಅವರನ್ನು ಅಲ್ಲಿಯೇ ಉಳಿಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಆದರೆ ಅಹ್ಮದಾಬಾದ್‌, ಹೊಸದಿಲ್ಲಿಯಲ್ಲಿ ಇಂಥ ವ್ಯವಸ್ಥೆ ಮಾಡಿಲ್ಲ ಎನ್ನಲಾಗುತ್ತಿದೆ.

ಮುಂದುವರಿದೀತೇ ಐಪಿಎಲ್‌? :

ದೇಶದಲ್ಲಿ ಯಾವುದೇ ಪ್ರತಿಕೂಲ ಸನ್ನಿವೇಶವಿದ್ದರೂ ಐಪಿಎಲ್‌ ಆಯೋಜಿಸುವುದನ್ನು ಮಾತ್ರ ಬಿಸಿಸಿಐ ನಿಲ್ಲಿಸಿರಲಿಲ್ಲ. ಯಾವ ದೇಶದಲ್ಲಾದರೂ ಈ “ಕ್ಯಾಶ್‌ ರಿಚ್‌’ ಕೂಟವನ್ನು ನಡೆಸಿ ಸೈ ಎನಿಸಿಕೊಳ್ಳುತ್ತಿತ್ತು. ಕೋವಿಡ್ ಮೊದಲ ಅಲೆ ಕಾಣಿಸಿಕೊಂಡ 2020ರಲ್ಲಂತೂ 6 ತಿಂಗಳು ವಿಳಂಬವಾಗಿ, ವೀಕ್ಷಕರಿಗೆ ಬೇಲಿ ಹಾಕಿ, ಯುಎಇಯಲ್ಲಿ ಕೂಟವನ್ನು ನಡೆಸಿತ್ತು. ಮಹಾ ಚುನಾವಣೆ ವೇಳೆ ದಕ್ಷಿಣ ಆಫ್ರಿಕಾದಲ್ಲಿ ಪಂದ್ಯಾವಳಿಯನ್ನು ಸಂಘಟಿಸಿತ್ತು.

ಆದರೆ ಈಗಿನದ್ದು ವಿಭಿನ್ನ  ಸವಾಲು. ಪಂದ್ಯಾವಳಿ ಸರಿ ಯಾಗಿ ಅರ್ಧ ಹಾದಿ ಕ್ರಮಿಸಿದ ಹಂತದಲ್ಲಿ ಆಟಗಾರರಿಗೆ ಸೋಂಕು ಅಂಟಿಕೊಂಡಿದೆ. ಬಿಸಿಸಿಐಯೇನೋ ಕೂಟ ನಿಲ್ಲದು ಎಂದು ಹೇಳಿಕೊಂಡಿದೆ. ಆದರೆ ಇದು ಹೇಳಿದಷ್ಟು ಸುಲಭವಲ್ಲ. ಈ ಬಾರಿ ಐಪಿಎಲ್‌ಗೆ ವಿರೋಧವೇ ಹೆಚ್ಚಾಗಿದೆ. ಈ ನಡುವೆ ಕೇಂದ್ರ ಸರಕಾರ ಅಥವಾ ನ್ಯಾಯಾಲಯ ಮಧ್ಯ ಪ್ರವೇಶಿಸಿ ಕೂಟಕ್ಕೆ ತಡೆಯೊಡ್ಡಿದರೆ ಬಿಸಿಸಿಐ ಮುಂದೆ ಯಾವ ಮಾರ್ಗವೂ ಇಲ್ಲದಂತಾಗುತ್ತದೆ!

ಸೋಂಕಿತ ಐಪಿಎಲ್‌ ಆಟಗಾರರು :

ಐಪಿಎಲ್‌ 2020 :

ಋತುರಾಜ್‌ ಗಾಯಕ್ವಾಡ್‌, ದೀಪಕ್‌ ಚಹರ್‌: ಇಬ್ಬರೂ ಚೆನ್ನೈ ತಂಡದ ಆಟಗಾರರು. ಯುಎಇಗೆ ತೆರಳಿದ ಬಳಿಕ ಇವರಿಗೆ ಸೋಂಕು ತಗುಲಿತ್ತು. ತಂಡದ ಕ್ವಾರಂಟೈನ್‌ ಅವಧಿಯನ್ನು ವಿಸ್ತರಿಸಲಾಯಿತು. ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿದರು.

ಐಪಿಎಲ್‌ 2021 :

ನಿತೀಶ್‌ ರಾಣಾ: ಕೆಕೆಆರ್‌ ಆಟಗಾರ. ಈ ವರ್ಷದ ಮೊದಲ ಕೋವಿಡ್ ಸೋಂಕಿತ ಕ್ರಿಕೆಟಿಗ.

ಅಕ್ಷರ್‌ ಪಟೇಲ್‌: ಡೆಲ್ಲಿ ಆಲ್‌ರೌಂಡರ್‌. 21 ದಿನ ಕ್ವಾರಂಟೈನ್‌ ಪೂರೈಸಿ ತಂಡಕ್ಕೆ ವಾಪಸ್‌.

ದೇವದತ್ತ ಪಡಿಕ್ಕಲ್‌: ಮನೆಯಲ್ಲೇ ಉಳಿದು ಬಳಿಕ  ಆರ್‌ಸಿಬಿ ಬಯೋಬಬಲ್‌ಗೆ ಪ್ರವೇಶ.

ಡೇನಿಯಲ್‌ ಸ್ಯಾಮ್ಸ್‌: ಆರ್‌ಸಿಬಿಯ ಆಸೀಸ್‌ ಆಟಗಾರ. ಭಾರತಕ್ಕೆ ಬಂದ ಬಳಿಕ ಕೋವಿಡ್ ತಗುಲಿತ್ತು. ಈಗ ಚೇತರಿಕೆ ಕಂಡಿದ್ದಾರೆ.

ಅನ್ರಿಚ್‌ ನೋರ್ಜೆ: ಡೆಲ್ಲಿ ತಂಡದ ದಕ್ಷಿಣ ಆಫ್ರಿಕಾ ವೇಗಿ. ವರದಿಯಲ್ಲಿ ಎಡವಟ್ಟು ಸಂಭವಿಸಿತ್ತು. ಮೊದಲು ಪಾಸಿಟಿವ್‌ ಬಂದು ಬಳಿಕ ನೆಗೆಟಿವ್‌ ಎಂದಾಗಿತ್ತು.

ವರುಣ್‌ ಚಕ್ರವರ್ತಿ, ಸಂದೀಪ್‌ ವಾರಿಯರ್‌: ಕೂಟದ ನಡುವೆ ಸೋಂಕಿಗೊಳಗಾದ ಮೊದಲ ಆಟಗಾರರು. ಐಪಿಎಲ್‌ ಪಂದ್ಯವೊಂದು ಮೊದಲ ಬಾರಿಗೆ ಕೋವಿಡ್ ದಿಂದ ನಿಲ್ಲಲು ಇವರೇ ಕಾರಣ!

ಹಿಂದೆ ಸರಿಯುವ ಸಾಧ್ಯತೆ ದೂರ :

ಕೆಕೆಆರ್‌ ಪಾಳೆಯದಲ್ಲಿಕೋವಿಡ್ ಕಾಣಿಸಿಕೊಂಡದ್ದು ಎಲ್ಲ ಆಟಗಾರರಲ್ಲೂ ಭೀತಿ ಮೂಡಿಸಿದೆ. ಮುಖ್ಯವಾಗಿ ವಿದೇಶಿ ಆಟಗಾರರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಇವರ್ಯಾರೂ ಈಗ ಕೂಟವನ್ನು ಅರ್ಧದಲ್ಲಿ ಬಿಟ್ಟು ಹೋಗುವ ಸ್ಥಿತಿಯಲ್ಲಿಲ್ಲ. ಕಾರಣ, ಭಾರತದ ಎಲ್ಲ ಅಂತಾರಾಷ್ಟ್ರೀಯ ವಾಯುಯಾನಕ್ಕೆ ನಿರ್ಬಂಧವಿದೆ. ಹೀಗಾಗಿ ಕೂಟ ಅರ್ಧದಲ್ಲಿ ನಿಲ್ಲುವ ಸಾಧ್ಯತೆ ಕಡಿಮೆ. ಅಕಸ್ಮಾತ್‌ ನಿಂತರೆ, ಆಗ ವಿದೇಶಿ ಆಟಗಾರರಿಗೆ ಬಿಸಿಸಿಐ ಯಾವ ವ್ಯವಸ್ಥೆ ಮಾಡುತ್ತದೆ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ!

ಹೊರಗಿನಿಂದ ಬಂದ ಕೋವಿಡ್? :

ಫ್ರಾಂಚೈಸಿ ಅಧಿಕಾರಿಯೊಬ್ಬರ ಪ್ರಕಾರ,ಕೋವಿಡ್ ಹೊರಗಿನಿಂದ ದಾಳಿ ಮಾಡಿದೆ. ಆಟಗಾರನೊಬ್ಬನನ್ನು ಸ್ಕ್ಯಾನಿಂಗ್‌ಗಾಗಿ ಹೊರಗೆ ಕೊಂಡೊಯ್ದಾಗ ಈ ಸೋಂಕು ಬಂದಿರುವ ಸಾಧ್ಯತೆ ಹೆಚ್ಚು ಎಂಬುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next