Advertisement

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

11:36 PM Mar 27, 2024 | Team Udayavani |

ಜೈಪುರ: ಸ್ಪರ್ಧಾತ್ಮಕ ಕ್ರಿಕೆಟ್‌ ಕೊರತೆಯಿಂದ ತುಸು ಮಂಕಾಗಿರುವ ರಿಷಭ್‌ ಪಂತ್‌ ಮತ್ತು ಅವರ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಗುರುವಾರ ಬಲಿಷ್ಠ ರಾಜಸ್ಥಾನ್‌ ರಾಯಲ್ಸ್‌ ಸವಾಲು ಎದುರಾಗಲಿದೆ. ಇದು ಜೈಪುರದಲ್ಲಿ ನಡೆಯುವ ಮುಖಾಮುಖೀ. ರಾಜಸ್ಥಾನ್‌ಗೆ ಸತತ 2ನೇ ತವರು ಪಂದ್ಯವಾದರೆ, ಡೆಲ್ಲಿಗೆ ಸತತ 2ನೇ ತವರಾಚೆಯ ಪಂದ್ಯ.

Advertisement

ಇಲ್ಲಿ ಆಡಲಾದ ಮೊದಲ ಮುಖಾ ಮುಖೀಯಲ್ಲಿ ಸಂಜು ಸ್ಯಾಮ್ಸನ್‌ ಸಾರಥ್ಯದ ರಾಜಸ್ಥಾನ್‌ 20 ರನ್ನು ಗಳಿಂದ ಲಕ್ನೋವನ್ನು ಮಣಿಸಿತ್ತು. ಹಾಗೆಯೇ ಚಂಡೀಗಢದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸಿದ ಡೆಲ್ಲಿ ಕ್ಯಾಪಿಟಲ್ಸ್‌ 4 ವಿಕೆಟ್‌ಗಳ ಸೋಲನುಭವಿಸಿತ್ತು. ಇದೀಗ ಗೆಲುವಿನ ಖಾತೆ ತೆರೆಯಲು ಹಾತೊರೆಯುತ್ತಿದೆ. ಆದರೆ ರಾಜಸ್ಥಾನ್‌ “ಹೋಮ್‌ ಗ್ರೌಂಡ್‌’ನಲ್ಲಿ ಆಡುತ್ತಿರುವ ಕಾರಣ ಫೇವರಿಟ್‌ ಎನಿಸಿದೆ.

ಪಂತ್‌ ಆಗಮನವೇ ಖುಷಿ
453 ದಿನಗಳ ದೊಡ್ಡ ವಿರಾಮದ ಬಳಿಕ ಆಡಲಿಳಿದ ರಿಷಭ್‌ ಪಂತ್‌, ಪಂಜಾಬ್‌ ವಿರುದ್ಧ 13 ಎಸೆತಗಳಿಂದ 18 ರನ್‌ ಮಾಡಿದ್ದರು. 2 ಬೌಂಡರಿ ಕೂಡ ಬಾರಿಸಿದ್ದರು. ಕೀಪಿಂಗ್‌ ವೇಳೆ ಜಿತೇಶ್‌ ಶರ್ಮ ಅವರನ್ನು ಸ್ಟಂಪ್ಡ್ ಔಟ್‌ ಮಾಡುವ ಮೂಲಕವೂ ಗಮನ ಸೆಳೆದಿದ್ದರು. ಒಂದು ದೊಡ್ಡ ಇನ್ನಿಂಗ್ಸ್‌ ಆಡುವುದಷ್ಟೇ ಪಂತ್‌ ಮುಂದಿರುವ ಸವಾಲು. ಅನಂತರ ಅವರು ಅದೇ “ಓಲ್ಡ್‌ ಡ್ಯಾಶಿಂಗ್‌ ಪಂತ್‌’ ಆಗುವುದರಲ್ಲಿ ಅನುಮಾನವಿಲ್ಲ. ರಾಜಸ್ಥಾನ್‌ ವಿರುದ್ಧ ಅವರು ಬೌಲ್ಟ್, ಅಶ್ವಿ‌ನ್‌, ಚಹಲ್‌ ಮೊದಲಾದವರ ಬೌಲಿಂಗ್‌ ಸವಾಲನ್ನು ಎದುರಿಸಿ ನಿಲ್ಲಬೇಕಿದೆ.

ಆದರೆ ರಿಷಭ್‌ ಪಂತ್‌ ಪುನರಾಗ ಮನವೇ ತಂಡದ ಪಾಲಿಗೆ ಖುಷಿ ಕೊಡುವ ಸಂಗತಿ. ಕೋಚ್‌ ರಿಕಿ ಪಾಂಟಿಂಗ್‌ ಕೂಡ ಇದೇ ಅಭಿ ಪ್ರಾಯ ಪಡುತ್ತಾರೆ. ಹೀಗಾಗಿ ಪಂತ್‌ ಅವರನ್ನು ಅವರಷ್ಟಕ್ಕೇ ಬಿಟ್ಟು ತಂಡದ ಉಳಿದ ಆಟಗಾರರು ಗೆಲುವಿಗೆ ಪಣತೊಡಬೇಕಿದೆ. ಆಸ್ಟ್ರೇಲಿಯದ ಜೋಡಿ ಆಗಿರುವ ಡೇವಿಡ್‌ ವಾರ್ನರ್‌, ಮಿಚೆಲ್‌ ಮಾರ್ಷ್‌, ವಿಂಡೀಸ್‌ನ ಶೈ ಹೋಪ್‌, ಕೀಪರ್‌ ಅಭಿಷೇಕ್‌ ಪೊರೆಲ್‌ ಅವರೆಲ್ಲ ಡೆಲ್ಲಿ ಸರದಿಯ ಪ್ರಮುಖ ಬ್ಯಾಟರ್. ಪೃಥ್ವಿ ಶಾ ಕೂಡ ರೇಸ್‌ನಲ್ಲಿದ್ದಾರೆ.

ಇನ್ನು ಬೌಲಿಂಗ್‌ ವಿಭಾಗ. ಪಂಜಾಬ್‌ ಎದುರಿನ ಪಂದ್ಯದ ವೇಳೆ ಅನುಭವಿ ಇಶಾಂತ್‌ ಶರ್ಮ ಕಾಲು ಉಳುಕಿಸಿಕೊಂಡು ಹೊರನಡೆದದ್ದು ಡೆಲ್ಲಿಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತ್ತು. 2 ಓವರ್‌ ಎಸೆದಿದ್ದ ಇಶಾಂತ್‌ 16 ರನ್‌ ನೀಡಿ ಒಂದು ವಿಕೆಟ್‌ ಉರುಳಿಸಿದ್ದರು. ರಾಜಸ್ಥಾನ್‌ ವಿರುದ್ಧ ಆಡುವುದು ಇನ್ನೂ ಖಾತ್ರಿಯಾಗಿಲ್ಲ. ಸ್ಪಿನ್ನರ್‌ಗಳಾದ ಅಕ್ಷರ್‌ ಪಟೇಲ್‌ ಮತ್ತು ಕುಲದೀಪ್‌ ಯಾದವ್‌ ಜೈಪುರ ಟ್ರ್ಯಾಕ್‌ನಲ್ಲಿ ಮ್ಯಾಜಿಕ್‌ ಮಾಡುವುದನ್ನು ನಿರೀಕ್ಷಿಸಲಾಗುತ್ತಿದೆ.

Advertisement

ಬಲಿಷ್ಠ ಬ್ಯಾಟಿಂಗ್‌ ಸರದಿ
ರಾಜಸ್ಥಾನ್‌ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ. ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌, ಪರಾಗ್‌, ಹೆಟ್‌ಮೈರ್‌, ಜುರೆಲ್‌ ಇಲ್ಲಿನ ಪ್ರಮುಖರು. ಲಕ್ನೋ ವಿರುದ್ಧ ಜೈಸ್ವಾಲ್‌-ಬಟ್ಲರ್‌ ಅಷ್ಟೇನೂ ಯಶಸ್ಸು ಸಾಧಿಸದೆ ಹೋದರೂ ಇದು ಕೂಟದ ಅತ್ಯಂತ ಅಪಾಯ ಕಾರಿ ಆರಂಭಿಕ ಜೋಡಿ ಎಂಬುದರಲ್ಲಿ ಅನುಮಾನವಿಲ್ಲ.

ಸಂಜು ಸ್ಯಾಮ್ಸನ್‌ ಅಜೇಯ 82 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿಗೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಟಿ20 ವಿಶ್ವಕಪ್‌ ಮೇಲೆ ಕಣ್ಣಿಟ್ಟಿರುವ ಸಂಜು, ಹೆಚ್ಚು ಜವಾಬ್ದಾರಿಯುತ ಪ್ರದರ್ಶನ ನೀಡುವ ಯೋಜನೆ ಹಾಕಿಕೊಂಡಿದ್ದಾರೆ.

ರಾಜಸ್ಥಾನ್‌ ತಂಡದ ವೇಗದ ಬೌಲಿಂಗ್‌ ವಿಭಾಗದ ಪ್ರಮುಖ ರೆಂದರೆ ಬೌಲ್ಟ್, ಬರ್ಗರ್‌, ಆವೇಶ್‌ ಖಾನ್‌ ಮತ್ತು ಸಂದೀಪ್‌ ಶರ್ಮ. ಇವರಲ್ಲಿ ಸಂದೀಪ್‌ ಡೆತ್‌ ಓವರ್‌ಗಳಲ್ಲಿ ಉತ್ತಮ ನಿಯಂತ್ರಣ ಸಾಧಿಸಿದ್ದರು.

ಪಿಚ್‌ ರಿಪೋರ್ಟ್‌
ಜೈಪುರ ಪಿಚ್‌ ಬ್ಯಾಟಿಂಗ್‌ ಸ್ನೇಹಿ. ಮೊದಲು ಬ್ಯಾಟಿಂಗ್‌ ನಡೆಸುವ ತಂಡಕ್ಕೆ ಇನ್ನೂರರ ಗಡಿ ತಲುಪುವುದು ಕಷ್ಟವೇನಲ್ಲ. ಹೀಗಾಗಿ ಚೇಸಿಂಗ್‌ ತಂಡಕ್ಕೆ ಸವಾಲು, ಆದರೆ ಚೇಸ್‌ ಮಾಡಿ ಗೆಲ್ಲುವುದು ಅಸಾಧ್ಯವೇನಲ್ಲ. ಬೌಲಿಂಗ್‌ನಲ್ಲಿ ಸ್ಪಿನ್ನರ್ ಮಿಂಚುವ ಸಾಧ್ಯತೆ ಹೆಚ್ಚು. ಮಳೆ ಸಾಧ್ಯತೆ ಇಲ್ಲ. 34ರಿಂದ 30 ಡಿಗ್ರಿ ವಾತಾವರಣದಲ್ಲಿ ಪಂದ್ಯ ಸಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next