Advertisement

IPL;ಮುಂಬೈಗೆ ಬೆಳಕಾಗಬಹುದೇ ಸೂರ್ಯ?: ಇಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಖಾಮುಖಿ

12:29 AM Apr 07, 2024 | Team Udayavani |

ಮುಂಬಯಿ: ಹಾರ್ಡ್‌ ಹಿಟ್ಟಿಂಗ್‌ 360 ಡಿಗ್ರಿ ಬ್ಯಾಟರ್‌ ಸೂರ್ಯ ಕುಮಾರ್‌ ಯಾದವ್‌ ರವಿವಾರ 2024ರ ಐಪಿಎಲ್‌ ರಂಗಪ್ರವೇಶ ಮಾಡಲಿದ್ದಾರೆ. ಸ್ಪೋರ್ಟ್ಸ್ ಹರ್ನಿಯಾದಿಂದ ಚೇತರಿಸಿಕೊಂಡಿರುವ ಅವರು ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದಲ್ಲಿ ಮುಂಬೈ ತಂಡದ ಕೇಂದ್ರಬಿಂದುವಾಗಲಿದ್ದಾರೆ. ಸೂರ್ಯನ ಆಗಮನದಿಂದಾದರೂ ಮುಂಬೈ ಬೆಳಗೀತೇ, ಗೆಲುವಿನ ಖಾತೆ ತೆರೆದೀತೇ ಎಂಬುದು ಬಹು ಜನರ ನಿರೀಕ್ಷೆ.

Advertisement

ಹಾಗೆ ನೋಡಹೋದರೆ ಮುಂಬೈ ಸೋಲಿನ ಹಿಂದೆ ಸಾಕಷ್ಟು ಸಂಶಯಗಳಿವೆ. ಅದು ನಿಜಕ್ಕೂ ವೈಫ‌ಲ್ಯ ಅನುಭವಿಸಿ ಹ್ಯಾಟ್ರಿಕ್‌ ಸೋಲಿಗೆ ಸಿಲುಕಿದೆಯೇ ಅಥವಾ ಪಾಂಡ್ಯ ವಿರೋಧಿ ಅಲೆಯಿಂದ ತಂಡದಲ್ಲಿ ಭಿನ್ನಮತ ಸೃಷ್ಟಿಯಾಗಿ ಬೇಕೆಂದೇ ಎಡವುತ್ತಿದೆಯೇ ಎಂಬುದು ಮುಖ್ಯ ಪ್ರಶ್ನೆ. ನಿಜವಾದ ವೈಫ‌ಲ್ಯ ಅನುಭವಿಸಿದರೆ ಇದಕ್ಕೆ ಪರಿಹಾರ ಖಂಡಿತ ಸಾಧ್ಯ. ಆದರೆ ಇನ್ನೊಂದಕ್ಕೆ ಪರಿಹಾರ ಕಷ್ಟ! ಆಗ ಪಂದ್ಯ ವಾಂಖೇಡೆಯಲ್ಲಿ ನಡೆದರೂ ಒಂದೇ, ಸೂರ್ಯಕುಮಾರ್‌ ಅವರಂಥ ಬಿಗ್‌ ಹಿಟ್ಟರ್‌ ಬಂದರೂ ಒಂದೇ, ಇರಲಿ…

ಒಂದೇ ದೋಣಿಯಲ್ಲಿ…
ವಾಸ್ತವವನ್ನು ವಿಶ್ಲೇಷಿಸುವುದಾದರೆ, ಮುಂಬೈ ಮತ್ತು ಡೆಲ್ಲಿ ಒಂದೇ ದೋಣಿಯಲ್ಲಿವೆ. ಎರಡೂ ತಂಡಗಳು ಮೂರು ಸೋಲನುಭವಿಸಿವೆ. ಮುಂಬೈ ಎಲ್ಲದರಲ್ಲೂ ಮುಗ್ಗರಿಸಿದರೆ, ಡೆಲ್ಲಿ ನಾಲ್ಕರಲ್ಲಿ ಒಂದನ್ನು ಗೆದ್ದಿದೆ. ಅಂಕ ಪಟ್ಟಿಯಲ್ಲಿ ಮುಂಬೈ ಕೊನೆಯ ಸ್ಥಾನದಲ್ಲಿದ್ದರೆ, ಡೆಲ್ಲಿ ಇದಕ್ಕಿಂತ ಒಂದು ಮೆಟ್ಟಿಲು ಮೇಲಿದೆ.

ಮುಂಬೈ ತಂಡದ್ದು ಸಾಮೂಹಿಕ ವೈಫ‌ಲ್ಯ. ಇದು ನಾಯಕನಿಂದಲೇ ಆರಂಭವಾಗುತ್ತದೆ. ಪಾಂಡ್ಯ ಈವರೆಗೆ ತಂಡಕ್ಕೆ ಸ್ಫೂರ್ತಿ ತುಂಬುವಲ್ಲಿ ಯಶಸ್ಸು ಕಂಡಿಲ್ಲ. ರೋಹಿತ್‌ ಅವರಂಥ ಸೀನಿಯರ್‌ ಆಟಗಾರರನ್ನು ಕಡೆಗಣಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗೆಯೇ ರೋಹಿತ್‌, ಇಶಾನ್‌ ಕಿಶನ್‌, ತಿಲಕ್‌ ವರ್ಮ, ನಮನ್‌ ಧೀರ್‌, ವಿದೇಶಿಗರಾದ ಟಿಮ್‌ ಡೇವಿಡ್‌, ಡಿವಾಲ್ಡ್‌ ಬ್ರೇವಿಸ್‌… ಸಾಲು ಸಾಲು ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದಾರೆ. ಪರಿಣಾಮ, ರಾಜಸ್ಥಾನ್‌ ವಿರುದ್ಧ ವಾಂಖೇಡೆಯಲ್ಲೇ ಆಡಲಾದ ಕಳೆದ ಪಂದ್ಯದಲ್ಲಿ ಮುಂಬೈ 125ಕ್ಕೆ ಆಲೌಟ್‌ ಆಗಿತ್ತು. ಇಲ್ಲಿ ಹಾರ್ದಿಕ್‌ ಪಾಂಡ್ಯ ಅವರದೇ ಟಾಪ್‌ ಸ್ಕೋರ್‌ ಆಗಿತ್ತು (34). ಡೆಲ್ಲಿ ವಿರುದ್ಧ ಸೂರ್ಯಕುಮಾರ್‌ ಅವರಿಗಾಗಿ ನಮನ್‌ ಧೀರ್‌ ಜಾಗ ಬಿಡಬೇಕಾಗಬಹುದು.

ಬುಮ್ರಾ, ಕೋಟ್ಜಿ , ಮಫ‌ಕ ಅವರನ್ನೊಳಗೊಂಡ ಮುಂಬೈ ಬೌಲಿಂಗ್‌ ವಿಭಾಗ ಕೂಡ ಘಾತಕವಾಗಿ ಪರಿಣಮಿಸಿಲ್ಲ. ರಾಜಸ್ಥಾನ್‌ ವಿರುದ್ಧ ಆಕಾಶ್‌ ಮಧ್ವಾಲ್‌ 3 ವಿಕೆಟ್‌ ಉರುಳಿಸಿದ್ದೊಂದೇ ಗಮನಿಸಬೇಕಾದ ಸಾಧನೆ. ತವರಲ್ಲಿ ಇನ್ನೂ ವೈಫ‌ಲ್ಯ ಮುಂದುವರಿದರೆ ಮುಂಬೈ ಹಾದಿ ದುರ್ಗಮಗೊಳ್ಳುವುದರಲ್ಲಿ ಅನುಮಾನವಿಲ್ಲ.

Advertisement

ಸ್ಫೂರ್ತಿ ಆಗಿರುವ ಪಂತ್‌
ಡೆಲ್ಲಿ ಸ್ಥಿತಿ ಮುಂಬೈಯಂತಲ್ಲ. “ಕಮ್‌ಬ್ಯಾಕ್‌ ಸ್ಟಾರ್‌’ ರಿಷಭ್‌ ಪಂತ್‌ ತಮ್ಮ ನಾಯಕತ್ವ ಹಾಗೂ ಆಟವನ್ನು ಪ್ರತಿಷ್ಠೆಯ ಜತೆಗೆ ಸವಾಲಾಗಿ ಪರಿಗಣಿಸಿದ್ದಾರೆ. ಸತತ 2 ಅರ್ಧ ಶತಕ ಬಾರಿಸಿ ಉಳಿದವರಿಗೆ ಸ್ಫೂರ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಉಳಿದವರೂ ಸೂಕ್ತ ಬೆಂಬಲ ನೀಡಬೇಕಾದ ತುರ್ತು ಅಗತ್ಯವಿದೆ.

ಕಳೆದ ಪಂದ್ಯದಲ್ಲಿ ಎರಡನೇ ತವರಾದ ವಿಶಾಖಪಟ್ಟಣದಲ್ಲಿ ಕೆಕೆಆರ್‌ಗೆ 272 ರನ್‌ ಬಿಟ್ಟುಕೊಟ್ಟ ಆಘಾತದಿಂದ ಹೊರಬರಬೇಕಾದ ಒತ್ತಡ ಹಾಗೂ ಸಂಕಟ ಡೆಲ್ಲಿಯದ್ದು. ಇದಕ್ಕೆ ಉತ್ತರವಾಗಿ ಡೆಲ್ಲಿ 166ಕ್ಕೆ ಕುಸಿದಿತ್ತು.
ವಾರ್ನರ್‌, ಸ್ಟಬ್ಸ್, ಮಾರ್ಷ್‌, ಅವರನ್ನೊಳಗೊಂಡ ಡೆಲ್ಲಿ ಬ್ಯಾಟಿಂಗ್‌ ಸರದಿ ಕಾಗದದಲ್ಲಿ ಬಲಿಷ್ಠವಾಗಿದೆ. ಆದರೆ ಇದು ಮುಂಬಯಿಯಲ್ಲಿ ನಡೆಯುವ ಪಂದ್ಯವಾದ ಕಾರಣ ಪೃಥ್ವಿ ಶಾ ಮೇಲೆ ಬಹು ದೊಡ್ಡ ಬ್ಯಾಟಿಂಗ್‌ ಜವಾಬ್ದಾರಿ ಇದೆ. ಕಾರಣ, ಇದು ಅವರ ಹೋಮ್‌ ಗ್ರೌಂಡ್‌.
ಡೆಲ್ಲಿ ಬೌಲಿಂಗ್‌ ಮೇಲೆ ಏನೂ ನಂಬಿಕೆ ಸಾಲದು. ಇಶಾಂತ್‌, ನೋರ್ಜೆ, ಅಕ್ಷರ್‌, ಖಲೀಲ್‌ ಅಹ್ಮದ್‌ ಎಸೆತಗಳನ್ನು ಕೆಕೆಆರ್‌ ಬ್ಯಾಟರ್ ಪುಡಿಗಟ್ಟಿದ ರೀತಿ ಕಂಡಾಗ ಮುಂಬೈಗೆ ಸಹಜವಾಗಿಯೇ ಸ್ಫೂರ್ತಿ ಲಭಿಸಬೇಕಿದೆ.

ಸಂಭಾವ್ಯ ತಂಡಗಳು
ಮುಂಬೈ: ರೋಹಿತ್‌ ಶರ್ಮ, ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮ, ಹಾರ್ದಿಕ್‌ ಪಾಂಡ್ಯ (ನಾಯಕ), ಟಿಮ್‌ ಡೇವಿಡ್‌, ಗೆರಾಲ್ಡ್‌ ಕೋಟಿj, ಪೀಯೂಷ್‌ ಚಾವ್ಲಾ, ಆಕಾಶ್‌ ಮಧ್ವಾಲ್‌, ಜಸ್‌ಪ್ರೀತ್‌ ಬುಮ್ರಾ, ಕ್ವೇನ ಮಫ‌ಕ.
ಡೆಲ್ಲಿ: ಪೃಥ್ವಿ ಶಾ, ಡೇವಿಡ್‌ ವಾರ್ನರ್‌, ಮಿಚೆಲ್‌ ಮಾರ್ಷ್‌, ರಿಷಭ್‌ ಪಂತ್‌ (ನಾಯಕ), ಟ್ರಿಸ್ಟನ್‌ ಸ್ಟಬ್ಸ್, ಅಕ್ಷರ್‌ ಪಟೇಲ್‌, ಸುಮಿತ್‌ ಕುಮಾರ್‌, ರಾಸಿಕ್‌ ದಾರ್‌ ಸಲಾಮ್‌, ಆ್ಯನ್ರಿಚ್‌ ನೋರ್ಜೆ, ಇಶಾಂತ್‌ ಶರ್ಮ, ಖಲೀಲ್‌ ಅಹ್ಮದ್‌.

ಪಿಚ್‌ ರಿಪೋರ್ಟ್‌
ವಾಂಖೇಡೆಯದ್ದು ಚಿಕ್ಕ ಬೌಂಡ ರಿಯಾದರೂ ಬೌಲರ್‌ಗಳಿಗೆ ಹೆಚ್ಚಿನ ಸಹಕಾರ ನೀಡುತ್ತದೆ. ರಾಜಸ್ಥಾನ್‌ ವಿರುದ್ಧದ ಪಂದ್ಯವೇ ಇದಕ್ಕೆ ಸಾಕ್ಷಿ. ಮುಂಬೈ ಗಳಿಸಿದ್ದು 125 ರನ್‌ ಮಾತ್ರ. 40 ಓವರ್‌ ತನಕ ಪಿಚ್‌ ಒಂದೇ ರೀತಿ ಇರಲಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ತಂಡಗಳ ಸರಾಸರಿ ಸ್ಕೋರ್‌ 169 ರನ್‌. ಇಲ್ಲಿ ಆಡಲಾದ 110 ಐಪಿಎಲ್‌ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡ 50ರಲ್ಲಿ, ಚೇಸಿಂಗ್‌ ತಂಡ 60ರಲ್ಲಿ ಜಯ ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next