Advertisement

ಸಭೆ ಸೇರಲಿರುವ ಐಪಿಎಲ್ ಆಡಳಿತ ಮಂಡಳಿ: ಅಂತಿಮ ಪಟ್ಟಿ ಬಿಡುಗಡೆ ಸಾಧ್ಯತೆ

10:21 AM Jan 27, 2020 | keerthan |

ಹೊಸದಿಲ್ಲಿ: ಮುಂಬರುವ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕೂಟದ ಹಿನ್ನೆಲೆಯಲ್ಲಿ ಸೋಮವಾರ ನವದೆಹಲಿಯಲ್ಲಿ ಸಭೆ ನಡೆಯಲಿದೆ. ಐಪಿಎಲ್‌ ಉದ್ಘಾಟನಾ ದಿನ ಸಹಿತ ಪೂರ್ಣ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಮಾತ್ರವಲ್ಲ ಈಗಾಗಲೇ ಚರ್ಚೆಯಲ್ಲಿರುವ ಪಂದ್ಯವನ್ನು ರಾತ್ರಿ 8ರ ಬದಲಿಗೆ ರಾತ್ರಿ 7.30ಕ್ಕೆ, ಅಂದರೆ ಅರ್ಧಗಂಟೆ ಮುಂಚಿತವಾಗಿ ಆರಂಭಿಸಬೇಕು ಎನ್ನುವ ಪ್ರಸ್ತಾಪದ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.

Advertisement

7 ಗಂಟೆಗೇ ಪಂದ್ಯ ಆರಂಭಿಸಲು ಒತ್ತಾಯ: ಕೂಟದ ನೇರಪ್ರಸಾರಕ ಟೀವಿ ಚಾನೆಲ್‌ ಸ್ಟಾರ್‌ ಸ್ಪೋರ್ಟ್ಸ್ ಪಂದ್ಯವನ್ನು ರಾತ್ರಿ 8ರ ಬದಲಿಗೆ ರಾತ್ರಿ 7 ಗಂಟೆಗೆ ಆರಂಭಿಸಬೇಕು ಎಂದು ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಯನ್ನು ಒತ್ತಾಯಿಸಿದೆ. ಆದರೆ ಸ್ಟಾರ್‌ ಪ್ರಸ್ತಾವನೆಯಲ್ಲಿ ಹೇಳಿದಷ್ಟು ಬೇಗ ಪಂದ್ಯ ಆರಂಭಿಸಲು ಸಾಧ್ಯವಿಲ್ಲವಾದರೂ ಪಂದ್ಯವನ್ನು ರಾತ್ರಿ 7.30ಕ್ಕೆ ಆರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಭೆಯ ಬಳಿಕ ಹೊರಬೀಳುವ ಸಾಧ್ಯತೆ ಇದೆ.

ಪರಿಷ್ಕೃತ ಸಮಯದಿಂದ ಸ್ಟಾರ್‌ ಗೇನು ಲಾಭ?: ಬೇಗ ಪಂದ್ಯ ಆರಂಭಿಸಿದರೆ ಹೆಚ್ಚಿನ ವೀಕ್ಷಕರು ಟೀವಿ ನೋಡುತ್ತಾರೆ. ಇದರಿಂದ ಟೀವಿ ರೇಟಿಂಗ್‌ ಹೆಚ್ಚುತ್ತದೆ. ಜಾಹೀರಾತಿನ ಲಾಭನಷ್ಟಗಳ ಲೆಕ್ಕಾಚಾರವೂ ಇಲ್ಲಿ ಅಡಗಿದೆ. ಜತೆಗೆ ಬೇಗ ಪಂದ್ಯ ಮುಗಿದರೆ ಜನರಿಗೆ ಬೇಗ ಮನೆಗೂ ತಲುಪಬಹುದು. ಜನರಿಗೂ ಇದರಿಂದ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

2021ರ ಆವೃತ್ತಿಗೆ ಇನ್ನೆರಡು ತಂಡ: ಈಗಾಗಲೇ ಐಪಿಎಲ್‌ನಲ್ಲಿರುವ ತಂಡಗಳನ್ನು ಹೊರತು ಪಡಿಸಿ ಇನ್ನೆರಡು ಹೊಸ ತಂಡಗಳನ್ನು ಮುಂದಿನ ಆವೃತ್ತಿಯಲ್ಲಿ (2021) ಪರಿಚಯಿಸುವ ಬಗ್ಗೆ ಸಾಕಷ್ಟು ಚರ್ಚೆ ಈಗಾಗಲೇ ನಡೆದಿದೆ. ಈ ವಿಚಾರದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next