Advertisement

ಐಪಿಎಲ್‌ನಲ್ಲಿ ನಿಂತಿಲ್ಲ ಫಿಕ್ಸಿಂಗ್‌, ಬೆಟ್ಟಿಂಗ್‌?

09:44 AM Nov 29, 2019 | sudhir |

ಬೆಂಗಳೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ನಡೆದಿದೆ ಎನ್ನಲಾದ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದ ತನಿಖೆ ನಡೆಸುತ್ತಿರುವ ಸಿಟಿ ಕ್ರೈಮ್‌ಬ್ರಾಂಚ್‌ಗೆ ಮಹತ್ವದ ಸುಳಿವು ಸಿಕ್ಕಿದೆ. ಬಿಸಿಸಿಐ ನಡೆಸುವ ಐಪಿಎಲ್‌ನಲ್ಲಿ ಫಿಕ್ಸಿಂಗ್‌ ಮುಂದುವ ರಿದಿದೆ ಎಂಬ ಸಂಶಯವನ್ನು ಅದು ವ್ಯಕ್ತಪಡಿಸಿದೆ.

Advertisement

2013ರ ಐಪಿಎಲ್‌ನಲ್ಲಿ ದೊಡ್ಡಮಟ್ಟದಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಹಗರಣ ಬೆಳಕಿಗೆ ಬಂದಿತ್ತು. ಬಳಿಕ ಯಾವುದೇ ಸುದ್ದಿ ಕೇಳಿಬರಲಿಲ್ಲ. ಇದೀಗ ಬೆಂಗಳೂರು ಪೊಲೀಸರಿಗೆ ಲಭಿಸಿರುವ ಹೊಸ ಮಾಹಿತಿ ಪ್ರಕರಣವನ್ನು ಎಲ್ಲಿಗೆ ತಲುಪಿಸುತ್ತದೆ ಎಂದು ಕಾದು ನೋಡಬೇಕು.

ಬಂಧಿತರಿಂದ ಬೆಳಕಿಗೆ
ವಿಶ್ವದ ಅತ್ಯಂತ ಶ್ರೀಮಂತ ಟಿ20 ಕೂಟವಾಗಿ ರುವ ಐಪಿಎಲ್‌ನಲ್ಲಿ ಫಿಕ್ಸಿಂಗ್‌, ಬೆಟ್ಟಿಂಗ್‌ ಮುಂದುವರಿದಿದೆ ಎನ್ನುವುದು, ಇದುವರೆಗೆ ಬಂಧಿತರಾಗಿರುವ ಆಟಗಾರರ ವಿಚಾರಣೆ ವೇಳೆ ಬಯಲಾಗಿದೆ. ಬಂಧಿತ ಆಟಗಾರ ಅಬ್ರಾರ್‌ ಖಾಜಿ ಸೇರಿದಂತೆ ಇನ್ನೂ ಹಲವು ಆಟಗಾರರು ಇಲ್ಲೂ ತಪ್ಪೆಸಗಿರುವ ಸಂಶಯವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ.

ಬಿಸಿಸಿಐಗೂ ಮಾಹಿತಿ
ಸದ್ಯದ ಬೆಳವಣಿಗೆಗಳ ಬಗ್ಗೆ ಬಿಸಿಸಿಐಗೂ ಈಗಾಗಲೇ ಮಾಹಿತಿ ಕಳುಹಿಸಲಾಗಿದೆ. ತನಿಖೆಗೆ ಅತ್ಯಗತ್ಯವಾಗಿರುವ ಕೆಲವು ಮಾಹಿತಿಯನ್ನು ಅವರಿಂದಲೂ ಕೋರಲಾಗಿದೆ. ಬಿಸಿಸಿಐ ಸಹಕಾರ ನೀಡುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಮಿಥುನ್‌ ವಿಚಾರಣೆಗೆ ನಿರ್ಧಾರ
ಈ ಬೆಳವಣಿಗೆಗಳ ನಡುವೆಯೇ ಕೆಪಿಎಲ್‌ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದ ತನಿಖೆ ಸಂಬಂಧ ಅಂತಾರಾಷ್ಟ್ರೀಯ ವೇಗದ ಬೌಲರ್‌ ಅಭಿಮನ್ಯು ಮಿಥುನ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರಿಂದ ನೋಟಿಸ್‌ ನೀಡಲಾಗಿದೆ.
ಬಂಧಿತರಾಗಿರುವ ಆಟಗಾರರು ನೀಡಿರುವ ಮಾಹಿತಿ ಹಾಗೂ ತನಿಖೆಯಲ್ಲಿ ಕಂಡುಬಂದ ಅಂಶಗಳನ್ವಯ ಅಭಿಮನ್ಯು ಮಿಥುನ್‌ ಅವರನ್ನು ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೆಪಿಎಲ್‌ನಲ್ಲಿ ಅಭಿಮನ್ಯು ಮಿಥುನ್‌ ನಮ್ಮ ಶಿವಮೊಗ್ಗ, ಬಿಜಾಪುರ ಬುಲ್ಸ್‌ ತಂಡಗಳ ಪರವಾಗಿ ಆಡಿದ್ದಾರೆ.

Advertisement

ಜಾಮೀನು ನಿರಾಕರಣೆ
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಜಾಮೀನಿಗಾಗಿ ರಣಜಿ ಆಟಗಾರರಾದ ಸಿ.ಎಂ. ಗೌತಮ್‌, ಅಬ್ರಾರ್‌ ಖಾಜಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಜಾಮೀನು ನೀಡಲು ಸೆಷನ್ಸ್‌ ಕೋರ್ಟ್‌ ನಿರಾಕರಿಸಿದೆ. ಅಬ್ರಾರ್‌ ಖಾಜಿ ಈ ವರ್ಷದ ಕೆಪಿಎಲ್‌ನಲ್ಲಿ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡ ಆರೋಪವಿದೆ. ಆ. 22ರಂದು ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಬಳ್ಳಾರಿ ಟಸ್ಕರ್ಸ್‌ ನಡುವೆ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯ, ಮೈಸೂರಿನಲ್ಲಿ ಆ. 31ರಂದು ಬಳ್ಳಾರಿ ಹಾಗೂ ಹುಬ್ಬಳ್ಳಿ ನಡುವೆ ನಡೆದ ಪಂದ್ಯದಲ್ಲಿ ಅವರು ಫಿಕ್ಸಿಂಗ್‌, ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next