ಕೆ.ಎಸ್.ಮಂಜುನಾಥ್ ಕುದೂರು
ಕುದೂರು: ಐಪಿಎಲ್ ಕ್ರಿಕೆಟ್ನಿಂದ ಬೆಟ್ಟಿಂಗ್ ದಂಧೆ ಕುದೂರಿನಲ್ಲಿ ನಡೆಯುತ್ತಿದೆ. ಐಪಿಎಲ್ ಕ್ರಿಕೆಟ್ ದಂಧೆಯಿಂದ ಕಳೆದ ಎರಡು ವರ್ಷಗಳಲ್ಲಿ ಇಬ್ಬರು ಸಾವಿಗೀಡಾದ ಪ್ರಸಂಗ ಮರೆಯುವ ಮುನ್ನವೇ ಕುದೂರಿನಲ್ಲಿ ಐಪಿಎಲ್ ಜ್ವರ ಜಾಸ್ತಿಯಾಗಿದೆ. ಇದರಿಂದ ಗ್ರಾಮದ ಯುವಕರು ಮೀಟರ್ ಬಡ್ಡಿಗೆ ಹಣ ಪಡೆದು ಊರು ಬಿಟ್ಟಿರುವ ಸಾಕಷ್ಟು ಉದಾಹರಣೆಗಳೂ ಇವೆ.
ಎಲ್ಲೆಲ್ಲಿ ದಂಧೆ: ಗ್ರಾಮದ ಹೋಟೆಲ್, ಅಂಗಡಿ ಮುಂಗಟ್ಟುಗಳು, ರಸ್ತೆಗಳು ಮತ್ತು ಬಸ್ ನಿಲ್ದಾಣದಲ್ಲಿ ಬೆಟ್ಟಿಂಗ್ ದಂಧೆ ಟಾಸ್‌ನಿಂದ ಹಿಡಿದು ಕೊನೆಯ ಎಸೆತದವರೆಗೂ ವ್ಯಾಪಕವಾಗಿ ನಡೆಯುತ್ತಿದೆ. ಮುಂದಿನ ಪಂದ್ಯದ ಭವಿಷ್ಯದ ಕುರಿತು ಅಡ್ವಾನ್ಸ್ ಬುಕ್ಕಿಂಗ್ ಕೂಡ ನಡೆಯುತ್ತದೆ. ಒಟ್ಟಾರೆ ಯಾರು ಗೆಲ್ಲುತ್ತಾರೆ. ಎಷ್ಟು ಕೊಡುತ್ತಾರೆ. ಎನ್ನುವುದೇ ಮಾತು. ಪ್ರತಿ ವರ್ಷ ನಡೆಯುವ ಐಪಿಎಲ್ ಕ್ರಿಕೆಟ್ ವೇಳೆ ಬೆಟ್ಟಿಂಗ್ ನಡೆಯುವುದು ಸಾಮಾನ್ಯ. ಆದರೆ, ಈ ಬಾರಿ ಬೆಟ್ಟಿಂಗ್ ಆನ್‌ಲೈನ್‌ಗೊಂಡಿದ್ದು, ವೆಬ್‌ಸೈಟ್‌ಗಳ ಮೂಲಕವೇ ದಂಧೆ ನಡೆಯುತ್ತಿರುವುದರಿಂದ ಸೈಬರ್ ಕ್ರೈಂ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಗ್ರಾಮೀಣ ಭಾಗದಲ್ಲೂ ಆನ್‌ಲೈನ್: ದೇಶವೇ ಡಿಜಿಟಲಿಕರಣಗೊಂಡ ಮೇಲೆ ಜೂಜು ಸಹ ಆನ್‌ಲೈನ್‌ಗೊಂಡಿದೆ. ಮಧ್ಯವರ್ತಿಗಳೆ ಸೃಷ್ಟಿಸಿರುವ ವೆಬ್‌ಸೈಟ್‌ಗಳಿಂದಾಗಿ ಗ್ರಾಮೀಣ ಭಾಗದಲ್ಲಿಯೂ ಆನ್‌ಲೈನ್ ಬೆಟ್ಟಿಂಗ್ ದಂಧೆ ಶುರುವಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿನ ಕ್ರಿಕೆಟ್ ಮಧ್ಯವರ್ತಿಗಳು ಸ್ಥಳೀಯವಾಗಿ ಯೇ ಒಂದೊಂದು ವೆಬ್‌ಸೈಟ್ ಲಿಂಕನ್ನು ಬೆಟ್ಟಿಂಗ್ ಮಾಡುವವರಿಗೆ ಸಂದೇಶದ ಮೂಲಕ ಕಳುಹಿಸಲಾ ಗುತ್ತಿದೆ. ಈ ಲಿಂಕ್ ತೆರೆಯಲು ಖಾತೆದಾರರ ಹೆಸರು, ಪಾಸ್ ವರ್ಡ್ ಅವಶ್ಯ. ಲಿಂಕ್‌ಕಳಿಸುವ ಮಧ್ಯವರ್ತಿ ಗಳಿಗೆ ನಗದು ಮೂಲಕ ನೀಡಿದ ಅಷ್ಟು ಹಣವನ್ನು ಈ ಲಿಂಕ್‌ನಲ್ಲಿ ಪಾಯಿಂಟ್ಸ್ ಮೂಲಕ ನೀಡಲಾಗುತ್ತದೆ. ಅಷ್ಟು ಹಣ ಖಾಲಿಯಾಗುವವರೆಗೂ ಯಾವ ತಂಡದ ಮೇಲಾದರೂ ಬೆಟ್ಟಿಂಗ್ ಕಟ್ಟಬಹುದು. ಹೀಗೆ ಲಿಂಕ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ ಆನ್‌ಲೈನ್ ರೂಪ ಪಡೆದುಕೊಂಡಿದೆ. ಆದರೆ, ಬೆಟ್ಟಿಂಗ್ ಕಟ್ಟುವವರ ಇದನ್ನು ಬಹಿರಂಗಪಡಿಸಲು ಮುಂದಾಗುತ್ತಿಲ್ಲ.
ಈ ಲಿಂಕ್‌ನಲ್ಲಿ ಹಣ ಇದ್ದರೆ ಮಾತ್ರ ಪುಟ ತೆರೆದುಕೊಳ್ಳುತ್ತದೆ. ಇಲ್ಲವಾದರೆ ಲೋ ಬ್ಯಾಲೆನ್ಸ್ ಎಂದು ಲಿಂಕ್ ಕಟ್ ಆಗುತ್ತದೆ. ಮಧ್ಯವರ್ತಿಗೆ ಹಣ ನೀಡಿದ ಬಳಿಕವಷ್ಟೆ ಲಿಂಕ್ ತೆರೆಯುತ್ತದೆ. ಇಲ್ಲಿ ಯಾವ ತಂಡದ ಮೇಲೆ ಬೇಕಾದರೂ, ಹೇಗೆ ಬೇಕಾದರೂ ಬೆಟ್ಟಿಂಗ್ ಕಟ್ಟಿಕೊಳ್ಳಬಹುದು. ಕೊನೆ ಕ್ಷಣದವರೆಗೂ ಗೆಲ್ಲುವ ತಂಡದ ಮೇಲೆ ಬಾಜಿ ಕಟ್ಟಬಹುದು.
ದಂಧೆ ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟ: ಆನ್‌ಲೈನ್ ಬೆಟ್ಟಿಂಗ್ ದಂಧೆ ಹಳ್ಳಿ ಹಳ್ಳಿಗೂ ವ್ಯಾಪಿಸಿದೆ ಎನ್ನುವುದೇ ಆತಂಕಕಾರಿ ವಿಷಯ. ಆನ್‌ಲೈನ್ ಬೆಟ್ಟಿಂಗ್ ದಂಧೆ ತಲೆ ನೋವಾಗಿ ಪರಿಣಮಿಸಿದೆ. ಏಕೆಂದರೆ ಇದೇ ಜಾಡು ಹಿಡಿಯುವುದು ಪೊಲೀಸರಿಗೆ ತುಂಬಾ ಕಷ್ಟವಾಗಿದೆ. ಬೆಟ್ಟಿಂಗ್ ದಂಧೆ ಹೇಗೆ ನಡೆಯುತ್ತಿದೆ ಎಂಬುದನ್ನು ಪತ್ತೆ ಹಚ್ಚಿ, ಇದನ್ನು ಸಾಭೀತುಪಡಿಸುವುದು ಪೊಲೀಸರಿಗೆ ತುಂಬಾ ಕಷ್ಟವಾಗಿದೆ.
ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಜೂಜುಕೋರರೇ ಮಧ್ಯವರ್ತಗಳಿಗೆ ರಿಮೋಟ್ ಕಂಟ್ರೋಲ್. ಇಲ್ಲಿ ಎಲ್ಲರಿಗೂ ಲಿಂಕ್ ದೊರಕುವುದಿಲ್ಲ. ಲಿಂಕ್ ಹೊಂದಿರುವವರ ಶಿಫಾರಸ್ಸು ಇದ್ದರೆ ಮಾತ್ರವೇ ಈ ಲಿಂಕ್ ಜತೆಗೆ ಯೂಸರ್ ನೇಮ್, ಪಾಸ್ ವರ್ಡ್ ದೊರೆಯುತ್ತದೆ. ಜೂಜುಕೋರರನ್ನೇ ರಿಮೋಟ್ ಆಗಿ ಬಳಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳಲಾಗುತ್ತದೆ.
ಇಲ್ಲಿ ಯಾರು ಬೆಟ್ಟಿಂಗ್ ಕಟ್ಟಿದ್ದಾರೆ. ಎಷ್ಟು ಕಟ್ಟಿದ್ದಾರೆ ಎಂಬ ಮಾಹಿತಿ ಮಧ್ಯವರ್ತಿಗಳಿಗೂ ತಿಳಿಸಿರುವುದಿಲ್ಲ. ಎಲ್ಲವೂ ರಹಸ್ಯವಾಗಿ ನಡೆಯುತ್ತದೆ. ಜೂಜಿಗೆ ಬಲಿಯಾಗಿ ಹಲವು ಮಂದಿ ಬೀದಿ ಪಾಲಾಗಿರುವ ಉದಾಹರಣೆಗಳೂ ಇವೆ. ಈಗ ಆನ್‌ಲೈನ್ ಜೂಜು ಯುವ ಸಮುದಾಯವನ್ನು ಟಾರ್ಗೆಟ್ ಮಾಡಿರುವುದು ವಿಪರ್ಯಾಸ.