ದುಬೈ: ಐಪಿಎಲ್ ಮಿನಿ ಹರಾಜು 2024 ದುಬೈನಲ್ಲಿ ನಡೆಯುತ್ತಿದೆ. ಆಸ್ಟ್ರೇಲಿಯಾದ ಬೌಲರ್ ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಭರ್ಜರಿ ಬೇಡಿಕೆ ಪಡೆದಿದ್ದಾರೆ. ಸ್ಟಾರ್ಕ್ ದಾಖಲೆಯ 24.75 ಕೋಟಿ ರೂ ಪಡೆದರೆ, ಕಮಿನ್ಸ್ ಅವರು 20.50 ಕೋಟಿ ರೂ ಬೆಲೆ ಮಾರಾಟವಾದರು.
ಇದೇ ವೇಳೆ ಕೆಲ ಭಾರತೀಯ ಆಟಗಾರರೂ ಹರಾಜು ವೇದಿಕೆಯಲ್ಲಿ ಉತ್ತಮ ಬೇಡಿಕೆ ಹೊಂದಿದ್ದರು. ಅನ್ ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಗಮನ ಸೆಳೆದವರು ಯುವ ಆಟಗಾರ ಶುಭಂ ದುಬೆ. ರಾಜಸ್ಥಾನ ರಾಯಲ್ಸ್ ತಂಡವು ಶುಭಂ ದುಬೆ ಅವರನ್ನು 5.80 ಕೋಟಿ ರೂ ನೀಡಿ ಖರೀದಿಸಿತು.
ಯಾರು ಈ ಶುಭಂ ದುಬೆ?
ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಸಿಆಸ್ ಕೆ ಆಟಗಾರ ಶಿವಂ ದುಬೆ ಎಂದು ತಪ್ಪಾಗಿ ತಿಳಿದುಕೊಂಡಿದ್ದರು. ಆದರೆ ಇವರು ಬೇರೆ. ಶುಭಂ ದುಬೆ ಅವರು ವಿದರ್ಭ ತಂಡದ ಆಟಗಾರ. ಶಿವಂ ದುಬೆಯಂತೆ ಶುಭಂ ದುಬೆ ಕೂಡಾ ಎಡಗೈ, ಹಾರ್ಡ್ ಹಿಟ್ಟಿಂಗ್ ಆಟಗಾರ.
ವಿದರ್ಭ ಆಟಗಾರ ದುಬೆ ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಬೆಳಕಿಗೆ ಬಂದವರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ದುಬೆ 187.28ರ ಸ್ಟ್ರೇಕ್ ರೇಟ್ ನಲ್ಲಿ 221 ರನ್ ಚಚ್ಚಿದ್ದರು.
ಬಂಗಾಳದ ವಿರುದ್ಧ 213 ರನ್‌ಗಳ ಚೇಸ್, ಅವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ನಂ. 5 ರಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ದುಬೆ ಕೇವಲ 20 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ನೆರವಿನಿಂದ ಅಜೇಯ 58 ರನ್ ಗಳಿಸಿದರು. ಇನ್ನೂ 13 ಎಸೆತಗಳು ಬಾಕಿ ಉಳಿದಿರವುಂತೆ ತಂಡಕ್ಕೆ ಜಯ ತಂದಿತ್ತರು.