ಮುಂಬೈ: ಮುಂದಿನ ಸೀಸನ್ ನ ಐಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ನ ತಯಾರಿ ನಡೆಯುತ್ತಿದೆ. ಈ ಬಾರಿ ಮೆಗಾ ಹರಾಜು ನಡೆಯಲಿದ್ದು, ಇಂದು ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. 15ನೇ ಆವೃತ್ತಿಯ ಕೂಟದಲ್ಲಿ ಹತ್ತು ತಂಡಗಳು ಪಾಲ್ಗೊಳ್ಳುತ್ತಿದ್ದು, ಫೆ.12 ಮತ್ತು 13ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಒಟ್ಟು 590 ಮಂದಿ ಆಟಗಾರರ ಪಟ್ಟಿಯಲ್ಲಿ 370 ಭಾರತೀಯರು ಮತ್ತು 220 ವಿದೇಶಿ ಆಟಗಾರರ ಹೆಸರು ಅಂತಿಮವಾಗಿದೆ. ಎರಡು ಕೋಟಿ ಮೂಲ ಬೆಲೆ ಹೊಂದಿರುವ 48 ಆಟಗಾರರು, 1.5 ಕೋಟಿ ರೂ. ಮೂಲಬೆಲೆ ಹೊಂದಿರುವ 20 ಆಟಗಾರರು ಮತ್ತು ಒಂದು ಕೋಟಿ ಮೂಲಬೆಲೆ ಹೊಂದಿರುವ 34 ಮಂದಿ ಆಟಗಾರರ ಹೆಸರು ಅಂತಿಮವಾಗಿದೆ.
ವಿಶೇಷವೆಂದರೆ, ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿ ಹೆಸರು ಕೂಡಾ ಅಂತಿಮ ಪಟ್ಟಿಯಲ್ಲಿದೆ. ಈ ಹಿಂದೆ ಭಾರತ ತಂಡದ ಪರವೂ ಆಡಿರುವ ಮನೋಜ್ ತಿವಾರಿ 2018ರಲ್ಲಿ ಕೊನೆಯದಾಗಿ ಐಪಿಎಲ್ ಪಂದ್ಯವಾಡಿದ್ದರು.
ಇದನ್ನೂ ಓದಿ:ಐಪಿಎಲ್ ಹರಾಜಿನ ಅಂತಿಮ ಪಟ್ಟಿ ರೆಡಿ: ಕಣದಲ್ಲಿದ್ದಾರೆ 590 ಆಟಗಾರರು
ಐಪಿಎಲ್ ನ ಡೆಲ್ಲಿ ಡೇರ್ ಡೆವಿಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರವಾಗಿ ಮನೋಜ್ ತಿವಾರಿ ಆಡಿದ್ದಾರೆ. ಒಟ್ಟು 98 ಐಪಿಎಲ್ ಪಂದ್ಯವಾಡಿರುವ ಮನೋಜ್ ತಿವಾರಿ 1695 ರನ್ ಗಳಿಸಿದ್ದಾರೆ. ಈ ಬಾರಿ ತಿವಾರಿ 50 ಲಕ್ಷ ರೂ ಮೂಲಬೆಲೆ ಹೊಂದಿದ್ದಾರೆ.
ಅರ್ಜುನ್ ಗೆ 20 ಲಕ್ಷ ರೂ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಐಪಿಎಲ್ ಹರಾಜಿಗೆ ಮರಳಿದ್ದಾರೆ. 2021ರ ಹರಾಜಿನಲ್ಲಿ ಅರ್ಜುನ್ ರನ್ನು ಮೂಲಬೆಲೆಗೆ ಮುಂಬೈ ಇಂಡಿಯನ್ಸ್ ತಂಡ ಖರೀದಿ ಮಾಡಿತ್ತು. ಆದರೆ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿಲ್ಲ. ಅರ್ಜುನ್ ಮೂಲಬೆಲೆ 20 ಲಕ್ಷ ರೂ.
ಆಸ್ಟ್ರೇಲಿಯಾದ 47, ಅಫ್ಘಾನ್ 17, ಬಾಂಗ್ಲಾದೇಶದ 5, ಇಂಗ್ಲೆಂಡ್ ನ 24, ಐರ್ಲೆಂಡ್ ನ 5, ನ್ಯೂಜಿಲ್ಯಾಂಡ್ ನ 24, ದಕ್ಷಿಣ ಆಫ್ರಿಕಾದ 33, ಶ್ರೀಲಂಕಾದ 23, ವೆಸ್ಟ್ ಇಂಡೀಸ್ ನ 34, ನಮೀಬಿಯಾದ 3, ಸ್ಕಾಟ್ಲೆಂಡ್ ನ 2, ಜಿಂಬಾಬ್ವೆ, ನೇಪಾಳ ಮತ್ತು ಯುಎಸ್ಎ ನ ತಲಾ ಓರ್ವ ಆಟಗಾರರು ಅಂತಿಮ ಲಿಸ್ಟ್ ನಲ್ಲಿದ್ದಾರೆ.