ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೆಗಾ ಹರಾಜು ಪ್ರಕ್ರಿಯೆ ರಂಗೇರುತ್ತಿದೆ. ಅಲ್ಪ ಬ್ರೇಕ್ ನ ನಂತರ ಹರಾಜು ಪ್ರಕ್ರಿಯೆ ಮತ್ತೆ ಮುಂದುವರಿದಿದೆ. ಚಾರು ಶರ್ಮಾ ಹರಾಜುಗಾರರಾಗಿ ಕಾಣಿಸಿಕೊಂಡಿದ್ದಾರೆ.
ನಿರೀಕ್ಷೆಯಂತೆ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಉತ್ತಮ ಮೊತ್ತವನ್ನೇ ಪಡೆದಿದ್ದಾರೆ. ಅಂತಿಮವಾಗಿ ಮುಂಬೈ ತಂಡ ಇಶಾನ್ ಕಿಶನ್ ರನ್ನು 15.25 ಕೋಟಿ ರೂ. ಗೆ ಖರೀದಿಸಿತು.
ಇಶಾನ್ ಕಿಶನ್ ಹೇಳುತ್ತಿದ್ದಂತೆ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಬಿಡ್ ಮಾಡಲು ಆರಂಭಿಸಿದವು. ಆದರೆ ಅಂತಿಮವಾಗಿ ಮುಂಬೈ ಇಂಡಿಯನ್ಸ್ ದುಬಾರಿ ಬೆಲೆಗೆ ಇಶಾನ್ ರನ್ನು ತಮ್ಮಲ್ಲೇ ಉಳಿಸಿಕೊಂಡಿತು.
ಇದನ್ನೂ ಓದಿ:ಐಪಿಎಲ್ ಹರಾಜು: ಆರ್ ಸಿಬಿ ಪಾಲಾದ ಹರ್ಷಲ್ ಪಟೇಲ್; ರೈನಾ, ಸ್ಮಿತ್, ಶಕಿಬ್ ಗಿಲ್ಲ ಬೇಡಿಕೆ!
ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಹರಾಜಿನಲ್ಲಿ ಹೆಚ್ಚು ಮೊತ್ತ ಪಡೆದ ಎರಡನೇ ಭಾರತೀಯ ಎಂಬ ದಾಖಲೆಗೆ ಇಶಾನ್ ಪಾತ್ರರಾದರು. 2015ರಲ್ಲಿ ಯುವರಾಜ್ ಸಿಂಗ್ ರನ್ನು ಡೆಲ್ಲಿ ತಂಡವು 16 ಕೋಟಿ ರೂ ಗೆ ಖರೀದಿಸಿದ್ದು ದಾಖಲೆಯಾಗಿದೆ.
ಉಳಿದಂತೆ ಶ್ರೇಯಸ್ ಅಯ್ಯರ್ ರನ್ನು 12.25 ಕೋಟಿ ರೂಗೆ ಕೆಕೆಆರ್ ಖರೀದಿ ಮಾಡಿದರೆ, ಹಸರಂಗ ಮತ್ತು ಹರ್ಷಲ್ ಪಟೇಲ್ ರನ್ನು ತಲಾ 10.75 ಕೋಟಿ ರೂ ಗೆ ಆರ್ ಸಿಬಿ ಖರೀದಿಸಿದೆ.