Advertisement

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

10:14 PM Nov 23, 2024 | Team Udayavani |

ಹೊಸದಿಲ್ಲಿ: 18ನೇ ಐಪಿಎಲ್‌ ಕೂಟದ ಹಿನ್ನೆಲೆಯಲ್ಲಿ ಆಟಗಾರರ ಬೃಹತ್‌ ಹರಾಜು ರವಿವಾರ ಮತ್ತು ಸೋಮವಾರ ಸೌದಿ ಅರೇಬಿಯದ ಜೆಡ್ಡಾದಲ್ಲಿ ನಡೆಯಲಿದೆ. ಸತತ 2ನೇ ವರ್ಷವೂ ಹರಾಜು ವಿದೇಶದಲ್ಲಿ ನಡೆಯುತ್ತಿದೆ. ಒಟ್ಟು ಹತ್ತು ತಂಡಗಳು ಶೇ. 80ರಷ್ಟು ಆಟಗಾರರ ಖರೀದಿಗೆ ಸಜ್ಜಾಗಿವೆ. ಆರ್‌ಸಿಬಿ ವಿರಾಟ್‌ ಕೊಹ್ಲಿ, ರಜತ್‌ ಪಾಟೀದಾರ್‌, ಯಶ್‌ ದಯಾಳ್‌ರನ್ನು ಉಳಿಸಿಕೊಂಡಿದ್ದು, ತನ್ನ ಬಳಿ ಬಾಕಿಯಿರುವ 83 ಕೋಟಿ ರೂ.ಗಳಿಂದ ಉಳಿದೆಲ್ಲ ಆಟಗಾರರನ್ನು ಖರೀದಿಸಬೇಕಿದೆ.

Advertisement

ಒಟ್ಟು 1574 ಆಟಗಾರರು ಐಪಿಎಲ್‌ ಹರಾಜಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದರು. ಹೆಸರನ್ನು ಪರಿಶೀಲಿಸಿ ಬಿಸಿಸಿಐ 577 ಆಟಗಾರರ ಅಂತಿಮ ಪಟ್ಟಿ ಸಿದ್ಧಪಡಿಸಿದೆ. ಇದರಲ್ಲಿ 367 ಭಾರತೀಯರು, 210 ವಿದೇಶಿ ಆಟಗಾರರಿದ್ದಾರೆ. ಹತ್ತು ತಂಡಗಳು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, 204 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಕಸರತ್ತು ನಡೆಸಲಿವೆ. ಈ ಪೈಕಿ 70 ವಿದೇಶಿ ಆಟಗಾರರೂ ಸೇರಿದ್ದಾರೆ.

3 ವರ್ಷಗಳಿಗೊಮ್ಮೆ ನಡೆಯುವ ಬೃಹತ್‌ ಹರಾಜು ಇದಾಗಿರುವುದರಿಂದ ಭಾರೀ ಕುತೂಹಲ ಕೆರಳಿಸಿದೆ. ಈಗಾಗಲೇ ತಂಡಗಳು ಕೆಲವು ತಾರೆಯರನ್ನು ಉಳಿಸಿಕೊಂಡಿವೆ. ಮುಂಬಯಿ, ಕೋಲ್ಕತಾ, ಚೆನ್ನೈ, ಡೆಲ್ಲಿಯಂತಹ ತಂಡಗಳ ಬಳಿ ಹಣವಿಲ್ಲ. ಅವು ಬಾಕಿ ಮೊತ್ತದಲ್ಲೇ ಉಳಿಕೆ ಆಟಗಾರರನ್ನು ಕೊಳ್ಳಬೇಕಿದೆ. ಈ ಲೆಕ್ಕಾಚಾರದಲ್ಲಿ ಸ್ವಲ್ಪ ಎಡವಿದರೂ ಹಣ ಖರ್ಚಾಗಿ ಆಟಗಾರರ ಖರೀದಿಗೆ ಕಣ್ಣುಕಣ್ಣು ಬಿಡಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ರಾಹುಲ್‌, ಪಂತ್‌, ಶ್ರೇಯಸ್‌, ಶಮಿ ಮೇಲೆ ಭಾರೀ ನಿರೀಕ್ಷೆ

ರವಿವಾರದ ಹರಾಜಿನಲ್ಲಿ ರಿಷಭ್‌ ಪಂತ್‌, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಯಜುವೇಂದ್ರ ಚಹಲ್‌, ಅರ್ಷದೀಪ್‌ ಸಿಂಗ್‌ ಕಾಣಿಸಿಕೊಳ್ಳಲಿದ್ದಾರೆ. ಈ ಆಟಗಾರರ ಮೇಲೆ ವಿವಿಧ ಫ್ರಾಂಚೈಸಿಗಳು ಕಣ್ಣಿಟ್ಟಿದ್ದು ಭಾರೀ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ. ಪಂತ್‌, ರಾಹುಲ್‌ರಂತೂ 30 ಕೋಟಿ ರೂ.ವರೆಗೆ ಹಣ ಗಳಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ. ಸದ್ಯಕ್ಕೆ ರಾಹುಲ್‌ ಮೇಲೆ ಆರ್‌ಸಿಬಿ ಸೇರಿ ಕೆಲವು ತಂಡಗಳು ಕಣ್ಣಿಟ್ಟಿವೆ. ಅಯ್ಯರ್‌ ನಾಯಕನ ಪಾತ್ರಕ್ಕೆ ಸೂಕ್ತವಾಗಿದ್ದರಿಂದ ಡೆಲ್ಲಿ ಖರೀದಿಗೆ ಯತ್ನಿಸುವ ಸಾಧ್ಯತೆಯೂ ಇದೆ. ಈಗಷ್ಟೇ ಗಾಯದಿಂದ ಚೇತರಿಸಿಕೊಂಡಿರುವ ಶಮಿ ಯಾವ ತಂಡದ ಪಾಲಾಗುತ್ತಾರೆ ಎನ್ನುವುದು ಕುತೂಹಲ.

Advertisement

ತಂಡ  ಅಗತ್ಯ ಆಟಗಾರರು ಬಾಕಿ ಮೊತ್ತ

(ಭಾರತ/ವಿದೇಶ)     ಕೋಟಿ ರೂ.

ಆರ್‌ಸಿಬಿ         14/8    83

ಚೆನ್ನೈ ಕಿಂಗ್ಸ್‌  13/7    55

ಹೈದರಾಬಾದ್‌            15/5    45

ಮುಂಬೈ         12/8    45

ಡೆಲ್ಲಿ   14/7    73

ರಾಜಸ್ಥಾನ್‌     12/7    41

ಪಂಜಾಬ್‌       15/8    110.5

ಕೋಲ್ಕತಾ      13/6    51

ಗುಜರಾತ್‌       13/7    69

ಲಕ್ನೋ           13/7    69

ಕೋಲ್ಕತಾ, ರಾಜಸ್ಥಾನಕ್ಕೆ ಆರ್‌ಟಿಎಂ ಅವಕಾಶವಿಲ್ಲ:

ಕೋಲ್ಕತಾ ನೈಟ್‌ರೈಡರ್ಸ್‌, ರಾಜಸ್ಥಾನ್‌ ರಾಯಲ್ಸ್‌ ತಮಗೆ ಲಭ್ಯವಿದ್ದ 6 ಆಟಗಾರರನ್ನು ಉಳಿಸಿಕೊಂಡಿವೆ. ಹೀಗಾಗಿ ಅವರು ರೈಟ್‌ ಟು ಮ್ಯಾಚ್‌ (ಆರ್‌ಟಿಎಂ) ಕಾರ್ಡ್‌ ಆಯ್ಕೆ ಬಳಸಲು ಅವಕಾಶವಿಲ್ಲ. ಹಿಂದೆ ತಮ್ಮ ಬಳಿಯಿದ್ದ ಆಟಗಾರನೊಬ್ಬನನ್ನು ಈ ಬಾರಿ ನಿರ್ದಿಷ್ಟ ಫ್ರಾಂಚೈಸಿ ಹರಾಜಿಗೆ ಬಿಡುಗಡೆ ಮಾಡಿದ್ದು, ಆ ಆಟಗಾರ ಹರಾಜಿನಲ್ಲಿ ಇನ್ನೊಂದು ಫ್ರಾಂಚೈಸಿ ಪಾಲಾಗುತ್ತಾನೆ ಎಂದುಕೊಳ್ಳೋಣ. ಆತನನ್ನು ಮಾರಾಟವಾದ ಬೆಲೆ ನೀಡಿ ಹಿಂದಿನ ಫ್ರಾಂಚೈಸಿ ಪಡೆದುಕೊಳ್ಳಬಹುದು. ಇದನ್ನು ಆರ್‌ಟಿಎಂ ಆಯ್ಕೆ ಎನ್ನಲಾಗುತ್ತದೆ.

ಹೇಗೆ ನಡೆಯುತ್ತೆ ಹರಾಜು?

ಹರಾಜು ಪಟ್ಟಿಯಲ್ಲಿ ಒಟ್ಟು 577 ಮಂದಿಯಿದ್ದಾರೆ. ಈ ಎಲ್ಲ ಆಟಗಾರರ ಹೆಸರೂ ಹರಾಜಿನಲ್ಲಿ ಪ್ರಸ್ತಾವವಾಗುತ್ತದೆ ಎನ್ನಲಾಗುವುದಿಲ್ಲ. ರವಿವಾರ ಆರಂಭದಲ್ಲಿ 116 ಆಟಗಾರರ ಹೆಸರು ಪ್ರಸ್ತಾವವಾಗುತ್ತದೆ. ಇದು ಮುಗಿದ ಅನಂತರ ಫ್ರಾಂಚೈಸಿಗಳು ಬಯಸಿದ ಆಟಗಾರರ ಹೆಸರು ಪ್ರಸ್ತಾವಕ್ಕೆ ಬರುತ್ತದೆ. ಸೋಮವಾರ ಇದೇ ಪ್ರಕ್ರಿಯೆಯ ಮುಂದುವರಿದ ಭಾಗವಿರುತ್ತದೆ. ಇದರಲ್ಲಿ ಫ್ರಾಂಚೈಸಿಗಳು ಬಯಸಿದಲ್ಲಿ, ಮಾರಾಟವಾಗದ ಆಟಗಾರರ ಹೆಸರೂ ಇರುತ್ತದೆ.

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೋಸಿನಿಮಾ

ಆರಂಭ: ಮ.3.30, ಮುಕ್ತಾಯ ರಾ.10.30

Advertisement

Udayavani is now on Telegram. Click here to join our channel and stay updated with the latest news.

Next