ಚೆನ್ನೈ: ಸಾಂಪ್ರದಾಯಿಕ ಎದುರಾಳಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 17ನೇ ಸೀಸನ್ ನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಶುಕ್ರವಾರ ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ತಂಡವು ಗೆಲುವು ಸಾಧಿಸಿದೆ. ಈ ಮೂಲಕ ರುತುರಾಜ್ ಗಾಯಕ್ವಾಡ್ ಅವರು ಗೆಲುವಿನ ಮೂಲಕ ನಾಯಕತ್ವ ಅಭಿಯಾನ ಆರಂಭಿಸಿದ್ದಾರೆ.
ಈ ಪಂದ್ಯದಲ್ಲಿ ಆರ್ ಸಿಬಿ ಸೋತರೂ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದಾಖಲೆಯೊಂದನ್ನು ನಿರ್ಮಿಸಿದರು. ಟಿ20 ಇತಿಹಾಸಲ್ಲಿ 12 ಸಾವಿರ ರನ್ ಗಡಿ ದಾಟಿದ ಏಕೈಕ ಭಾರತೀಯ ಎಂಬ ಖ್ಯಾತಿಗೆ ವಿರಾಟ್ ಪಾತ್ರರಾದರು.
ಹಲವು ಸಮಯದ ಬಳಿಕ ಮೈದಾನಕ್ಕಿಳಿದ ವಿರಾಟ್ ಕಾಣಲು ಅಭಿಮಾನಿಗಳು ಉತ್ಸುಕರಾಗಿದ್ದರು. ನಾಯಕ ಫಾಫ್ ಜತೆ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ 20 ಎಸೆತಗಳಲ್ಲಿ 21 ರನ್ ಹೊಡೆದರು. ಇದೇ ವೇಳೆ ಅವರು 12 ಸಾವಿರ ರನ್ ಗಡಿ ದಾಟಿದರು.
ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮಾಜಿ ಆರ್ ಸಿಬಿ ಆಟಗಾರ, ವೆಸ್ಟ್ ಇಂಡಿಯನ್ ದಿಗ್ಗಜ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಟಿ20 ಕ್ರಿಕೆಟ್ ನಲ್ಲಿ 14562 ರನ್ ಗಳಿಸಿದ್ದಾರೆ. ಪಾಕಿಸ್ತಾನದ ಶೋಯೆಬ್ ಮಲಿಕ್ ಅವರು ಎರಡನೇ ಸ್ಥಾನದಲ್ಲಿದ್ದು 13360 ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ನ ಕೈರನ್ ಪೊಲಾರ್ಡ್ 12900 ರನ್ ಪೇರಿಸಿದ್ದಾರೆ. ಇಂಗ್ಲೆಂಡ್ ನ ಅಲೆಕ್ಸ್ ಹೇಲ್ಸ್ 12319 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ 12065 ರನ್ ಗಳಿಸಿದ್ದಾರೆ. ವಿರಾಟ್ ನಂತರ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ 377ನೇ ಟಿ20 ಪಂದ್ಯ ಮತ್ತು 360ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.