Advertisement

Ipl 2024: ಹೈದರಾಬಾದ್‌ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್‌ ಟೈಟಾನ್ಸ್‌

08:37 AM May 16, 2024 | Team Udayavani |

ಹೈದರಾಬಾದ್‌: ಪ್ರಸಕ್ತ ಐಪಿಎಲ್‌ ಋತುವಿನಲ್ಲಿ ಬ್ಯಾಟಿಂಗ್‌ ಅಬ್ಬರದ ಮೂಲಕ ಭಾರೀ ಸಂಚಲನ ಮೂಡಿಸಿದ ಸನ್‌ರೈಸರ್ ಹೈದರಾಬಾದ್‌ ಗುರುವಾರ ಪ್ಲೇ ಆಫ್ಗೆ ಅಗತ್ಯವಿರುವ ಎರಡಂಕಗಳ ಬೇಟೆಗೆ ಇಳಿಯಲಿದೆ. ತವರಿನ ಈ ಪಂದ್ಯದಲ್ಲಿ ಕಮಿನ್ಸ್‌ ಬಳಗಕ್ಕೆ ಎದುರಾಗುವ ತಂಡ ಗುಜರಾತ್‌ ಟೈಟಾನ್ಸ್‌.

Advertisement

ಮೊನ್ನೆಯ ಮಳೆ ಅಬ್ಬರಕ್ಕೆ ಸಿಲುಕಿದ ಗುಜರಾತ್‌ ಟೈಟಾನ್ಸ್‌ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ನಿರ್ಗಮಿಸಿದೆ. ಆದರೆ ತನ್ನ ಕೊನೆಯ ಪಂದ್ಯವನ್ನು ಸ್ಮರಣೀಯವಾಗಿ ಮುಗಿಸುವ ಅವಕಾಶವೊಂದು ಗಿಲ್‌ ಪಡೆಯ ಮುಂದಿದೆ. ಅದೆಂದರೆ, ಹೈದರಾಬಾದ್‌ ತಂಡವನ್ನು ಅವರದೇ ಅಂಗಳದಲ್ಲಿ ಮಣಿಸುವುದು. ಆಗ ಪ್ಯಾಟ್‌ ಕಮಿನ್ಸ್‌ ಬಳಗ ತನ್ನ ಪ್ಲೇ ಆಫ್ ಪ್ರವೇಶಕ್ಕೆ ಕೊನೆಯ ಪಂದ್ಯದ ತನಕ ಕಾಯಬೇಕಾಗುತ್ತದೆ.

ಈಗಿನ ಸಾಧ್ಯತೆ ಪ್ರಕಾರ ಹೈದರಾಬಾದ್‌ ತನ್ನ ಕೊನೆಯ ಎರಡು ಪಂದ್ಯಗಳನ್ನು ತವರಲ್ಲೇ ಆಡುವ ಕಾರಣ ಗೆಲುವಿನ ನಿರೀಕ್ಷೆಯಲ್ಲಿದೆ. ಕೊನೆಯ ಎದುರಾಳಿ ಪಂಜಾಬ್‌ ಕಿಂಗ್ಸ್‌. ಇದು ಕೂಡ ಕೂಟದಿಂದ ನಿರ್ಗಮಿಸಿರುವ ತಂಡ.

ಹೈದರಾಬಾದ್‌ 12 ಪಂದ್ಯಗಳಿಂದ 14 ಅಂಕ ಗಳಿಸಿದೆ. ಎರಡನ್ನೂ ಗೆದ್ದರೆ ಅಂಕ 18ಕ್ಕೆ ಏರಲಿದೆ. ಟಾಪ್‌-2 ಫಿನಿಶ್‌ಗೆ ಇಷ್ಟು ಸಾಕು.

ಅಪಾಯಕಾರಿ ಬ್ಯಾಟಿಂಗ್‌ ಸರದಿ
ಫ‌ಸ್ಟ್‌ ಬ್ಯಾಟಿಂಗ್‌ ವೇಳೆ ಹೈದರಾಬಾದ್‌ ಅತ್ಯಂತ ಅಪಾಯಕಾರಿ ಎಂಬುದು ಗುಟ್ಟಾಗಿ ಉಳಿದಿಲ್ಲ. ಐಪಿಎಲ್‌ ಇತಿಹಾಸದ ದಾಖಲೆ ಮೊತ್ತ ಸೇರಿದಂತೆ, ಕೆಲವು ಅಸಾಮಾನ್ಯ ಗೆಲುವನ್ನು ಹೈದರಾಬಾದ್‌ ಒಲಿಸಿಕೊಂಡಿದೆ. ಟ್ರ್ಯಾವಿಸ್‌ ಹೆಡ್‌-ಅಭಿಷೇಕ್‌ ಶರ್ಮ ಈ ಕೂಟದ ಅತ್ಯಂತ ಅಪಾಯಕಾರಿ ಆರಂಭಿಕ ಜೋಡಿ ಎಂಬುದು ಕೂಡ ಸಾಬೀತಾಗಿದೆ. ಲಕ್ನೋ ವಿರುದ್ಧ ಇವರಿಬ್ಬರು ಸೇರಿಕೊಂಡು ಕೇವಲ 9.4 ಓವರ್‌ಗಳಲ್ಲಿ ತಂಡವನ್ನು ಗುರಿ ತಲುಪಿಸಿದ್ದನ್ನು ಮರೆಯುವಂತಿಲ್ಲ. ಈ ಪಂದ್ಯ ನಡೆದದ್ದು ಮೇ 8ರಂದು. ಅನಂತರ ಹೈದರಾಬಾದ್‌ ಮೊದಲ ಸಲ ಕಣಕ್ಕಿಳಿಯುತ್ತಿದೆ. ಒಂದು ವಾರದ ವಿಶ್ರಾಂತಿ ಬಳಿಕ ತಂಡದ ಫಾರ್ಮ್ ಹೇಗಿದ್ದೀತು ಎಂಬುದು ಕುತೂಹಲದ ಸಂಗತಿ.

Advertisement

ನಿರಾಶಾದಾಯಕ ಆಟ
ಮೊದಲೆರಡು ಸೀಸನ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಗುಜರಾತ್‌ ಟೈಟಾನ್ಸ್‌ ಈ ಬಾರಿ ತೀರಾ ನಿರಾಶಾದಾಯಕ ಆಟವಾಡಿದೆ. ಜತೆಗೆ ಅದೃಷ್ಟವೂ ಕೈಕೊಟ್ಟಿದೆ. ನಾಯಕರಾಗಿದ್ದ ಹಾರ್ದಿಕ್‌ ಪಾಂಡ್ಯ ಮುಂಬೈ ಪಾಲಾದದ್ದು, ಮೊಹಮ್ಮದ್‌ ಶಮಿ ಗೈರು ಗುಜರಾತ್‌ ಹಿನ್ನಡೆಗೆ ಪ್ರಮುಖ ಕಾರಣ. ಇದರಿಂದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ತಂಡದ ಸಮತೋಲನ ತಪ್ಪಿತು.

ರಶೀದ್‌ ಖಾನ್‌, ಮೋಹಿತ್‌ ಶರ್ಮ ಛಾತಿಗೆ ತಕ್ಕ ಬೌಲಿಂಗ್‌ ತೋರ್ಪಡಿಸುವಲ್ಲಿ ವಿಫ‌ಲರಾದರು. ಬ್ಯಾಟಿಂಗ್‌ನಲ್ಲಿ ಗಿಲ್‌ ಮತ್ತು ಸಾಯಿ ಸುದರ್ಶನ್‌ ಅವರನ್ನಷ್ಟೇ ಅವಲಂಬಿಸಿತು. ಇಷ್ಟೂ ಸಾಲದೆಂಬಂತೆ ಮೊನ್ನೆ ಕೋಲ್ಕತಾದಲ್ಲಿ ಮಳೆ ಶಾಪವಾಗಿ ಕಾಡಿತು!

Advertisement

Udayavani is now on Telegram. Click here to join our channel and stay updated with the latest news.

Next