ಲಕ್ನೋ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಹೊಸ ಫ್ರಾಂಚೈಸಿಗಳಲ್ಲಿ ಒಂದಾದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈ ಬಾರಿಯ ಐಪಿಎಲ್ ಗೆ ಸಿದ್ದತೆ ನಡೆಸುತ್ತಿದೆ. ಇದೀಗ ತಂಡದ ಉಪ ನಾಯಕನ ಸ್ಥಾನ ಬದಲಾವಣೆ ಮಾಡಲಾಗಿದೆ.
ಕಳೆದ ಎರಡು ಸೀಸನ್ ಗಳಲ್ಲಿ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡದಲ್ಲಿ ಕೃನಾಲ್ ಪಾಂಡ್ಯ ಅವರು ಉಪ ನಾಯಕರಾಗಿದ್ದರು. ಇದೀಗ ಕೃನಾಲ್ ಪಾಂಡ್ಯ ಬದಲು ನಿಕೋಲಸ್ ಪೂರನ್ ಅವರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಅವರು 29ನೇ ಸಂಖ್ಯೆಯ ಉಪನಾಯಕನ ಜೆರ್ಸಿಯನ್ನು ಪೂರನ್ ಗೆ ಹಸ್ತಾಂತರಿಸಿದರು.
ಈ ಹಿಂದೆ ಪಂಜಾಜ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ನಿಕೋಲರ್ ಪೂರನ್ ಅವರನ್ನು 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಖರೀದಿ ಮಾಡಿತ್ತು. 16 ಕೋಟಿ ರೂ ಗೆ ಪೂರನ್ ಅವರು ಲಕ್ನೋ ತಂಡದ ಪಾಲಾಗಿದ್ದರು.
ಸ್ಫೋಟಕ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಗೆ ಹೆಸರುವಾಸಿಯಾಗಿರುವ ಟ್ರಿನಿಡಾಡಿಯನ್ ಕ್ರಿಕೆಟಿಗ ಪೂರನ್, ಜಾಗತಿಕವಾಗಿ ಟಿ20 ಸ್ವರೂಪದಲ್ಲಿ ಪ್ರಮುಖ ಆಟಗಾರರಾಗಿದ್ದಾರೆ.