Advertisement

IPL-2024; ಪಂಜಾಬ್‌ಗೆ ಪಂಚ್‌ ಕೊಡಲು ಗುಜರಾತ್‌ ಕಾತರ

01:11 AM Apr 04, 2024 | Team Udayavani |

ಅಹ್ಮದಾಬಾದ್‌: ಕಳೆದ ಪಂದ್ಯದಲ್ಲಿ ಮಾಯಾಂಕ್‌ ಯಾದವ್‌ ಅವರ ಬಿರುಗಾಳಿಯ ವೇಗಕ್ಕೆ ದಿಕ್ಕಾಪಾಲಾದ ಪಂಜಾಬ್‌ ಕಿಂಗ್ಸ್‌ ಗುರುವಾರದ ಐಪಿಎಲ್‌ ಪಂದ್ಯದಲ್ಲಿ ವಿಭಿನ್ನ ಸವಾಲಿಗೆ ಅಣಿಯಾಗಬೇಕಿದೆ.

Advertisement

ಅಹ್ಮದಾಬಾದ್‌ನಲ್ಲಿ ಆತಿಥೇಯ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಲಿದೆ. ಸತತ 2 ಪಂದ್ಯಗಳನ್ನು ಸೋತು ಕಂಗೆಟ್ಟಿರುವ ಶಿಖರ್‌ ಧವನ್‌ ಪಡೆಗೆ ಇದು ನಿಜಕ್ಕೂ ಅಗ್ನಿಪರೀಕ್ಷೆ.

ಗುಜರಾತ್‌ ಟೈಟಾನ್ಸ್‌ ಕಳೆದ ಪಂದ್ಯವನ್ನೂ ತವರಿನಂಗಳದಲ್ಲೇ ಆಡಿತ್ತು. ಹಿಂದಿನ ಪಂದ್ಯದಲ್ಲಷ್ಟೇ ದಾಖಲೆಯ ಮೊತ್ತ ಪೇರಿಸಿ ಬಂದಿದ್ದ ಸನ್‌ರೈಸರ್ ಹೈದರಾಬಾದ್‌ ಮರು ಪಂದ್ಯದಲ್ಲೇ ಗಿಲ್‌ ಪಡೆಗೆ ಮಂಡಿಯೂರಿದ್ದನ್ನು ಮರೆಯುವಂತಿಲ್ಲ. ಹೈದರಾಬಾದ್‌ಗೆ ಗಳಿಸಲು ಸಾಧ್ಯವಾದದ್ದು 8ಕ್ಕೆ 162 ರನ್‌ ಮಾತ್ರ. ಇದನ್ನು ಗುಜರಾತ್‌ ಮೂರೇ ವಿಕೆಟ್‌ ನಷ್ಟದಲ್ಲಿ ಹಿಂದಿಕ್ಕಿತ್ತು.

ಪಂಜಾಬ್‌ಗೆ ಸತತ ಸೋಲು
ಪಂಜಾಬ್‌ ಸತತ 2 ಪಂದ್ಯಗಳಲ್ಲಿ ಮುಗ್ಗರಿಸಿರುವ ತಂಡ. ಡೆಲ್ಲಿ ವಿರುದ್ಧ ತವರಿನ ಚಂಡೀಗಢದಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿದ ಬಳಿಕ ಸೋಲಿನ ಸುಳಿಗೆ ಸಿಲುಕಿದೆ. ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲಿ 4 ವಿಕೆಟ್‌, ಲಕ್ನೋದಲ್ಲಿ ಲಕ್ನೋ ವಿರುದ್ಧ 21 ರನ್ನುಗಳಿಂದ ಎಡವಿದೆ. ಅರ್ಥಾತ್‌, ತವರಿನಾಚೆಯ ಎರಡೂ ಪಂದ್ಯಗಳಲ್ಲಿ ಪಂಜಾಬ್‌ ಲಾಗ ಹಾಕಿದೆ. ಹೀಗಾಗಿ ಅಹ್ಮದಾಬಾದ್‌ನಲ್ಲಿ ಗೆಲುವಿನ ಮುಖ ಕಂಡೀತೇ ಎಂಬುದೊಂದು ದೊಡ್ಡ ಪ್ರಶ್ನೆ.

ಡೆಲ್ಲಿ ವಿರುದ್ಧ ಸ್ಯಾಮ್‌ ಕರನ್‌ ಅವರ ಬ್ಯಾಟಿಂಗ್‌ ಸಾಹಸದಿಂದ ಪಂಜಾಬ್‌ ಗೆಲುವಿನ ಬಾವುಟ ಹಾರಿಸಿತ್ತು. ಆದರೆ ಅನಂತರ ಯಾರೂ ಆಪತ್ಭಾಂದವರ ಪಾತ್ರ ವಹಿಸಿಲ್ಲ. ಹೀಗಾಗಿ ಗುಜರಾತ್‌ ವಿರುದ್ಧ ನೆಚ್ಚಿನ ತಂಡವಾಗೇನೂ ಕಾಣಿಸುತ್ತಿಲ್ಲ.

Advertisement

ಲಕ್ನೋ ವಿರುದ್ಧ ಮಾಯಾಂಕ್‌ ಯಾದವ್‌ ಅವರ ವೇಗಕ್ಕೆ ನೆಲಕಚ್ಚಿದರೆ, ಇಲ್ಲಿ ಮೋಹಿತ್‌ ಶರ್ಮ ಅವರ ವೆರೈಟಿ ಎಸೆತಗಳಿಗೆ ಸೂಕ್ತ ಉತ್ತರ ನೀಡಬೇಕಿದೆ. ನಾಯಕ ಶಿಖರ್‌ ಧವನ್‌, ಇವರ ಆರಂಭಿಕ ಜತೆಗಾರ ಜಾನಿ ಬೇರ್‌ಸ್ಟೊ ಉತ್ತಮ ಫಾರ್ಮ್ ನಲ್ಲಿದ್ದಾರೆ. ಲಕ್ನೋ ವಿರುದ್ಧ ಇವರಿಬ್ಬರು ಆರಂಭಿಕ ವಿಕೆಟಿಗೆ 102 ರನ್‌ ಪೇರಿಸಿದ ಬಳಿಕ ತಂಡ ನಾಟಕೀಯ ಕುಸಿತ ಕಂಡಿತ್ತು. ಹೀಗಾಗಿ ಮಧ್ಯಮ ಕ್ರಮಾಂಕ ಹಾಗೂ ಕೆಳ ಕ್ರಮಾಂಕದ ಆಟಗಾರರು ಹೆಚ್ಚಿನ ಜವಾಬ್ದಾರಿಯುತ ಆಟ ಆಡಬೇಕಿದೆ. ಪ್ರಭ್‌ಸಿಮ್ರಾನ್‌, ಜಿತೇಶ್‌, ಲಿವಿಂಗ್‌ಸ್ಟೋನ್‌, ಶಶಾಂಕ್‌ ಸಿಂಗ್‌ ಮೊದಲಾದವರೆಲ್ಲ ಕ್ರೀಸ್‌ ಆಕ್ರಮಿಸಿಕೊಳ್ಳಬೇಕಾದ ಅಗತ್ಯ ಎಂದಿಗಿಂತ ಹೆಚ್ಚಿದೆ.

ಗುಜರಾತ್‌ ಶಿಸ್ತಿನ ಆಟ
ಗುಜರಾತ್‌ ಬೌಲರ್ ಹೈದರಾಬಾದ್‌ ವಿರುದ್ಧ ಶಿಸ್ತಿನ ಪ್ರದರ್ಶನ ನೀಡಿದ್ದರು. ಅಜ್ಮತುಲ್ಲ, ಉಮೇಶ್‌ ಯಾದವ್‌, ರಶೀದ್‌ ಖಾನ್‌, ನೂರ್‌ ಅಹ್ಮದ್‌, ಮೋಹಿತ್‌ ಶರ್ಮ ಅವರೆಲ್ಲ ಸೇರಿಕೊಂಡು ಎದುರಾಳಿಯನ್ನು ಕಟ್ಟಿಹಾಕಿದ ಪರಿ ಊಹೆಗೂ ನಿಲುಕದ್ದಾಗಿತ್ತು. ಬ್ಯಾಟಿಂಗ್‌ ಸರದಿಯನ್ನು ಹೋಲಿಕೆ ಮಾಡುವುದಾದರೆ, ಪಂಜಾಬ್‌ ತಂಡ ಹೈದರಾಬಾದ್‌ನಷ್ಟು ಬಲಿಷ್ಠವಲ್ಲ. ಹೀಗಾಗಿ ಗುಜರಾತ್‌ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಡ್ಡಿಯಿಲ್ಲ.

ಸಾಹಾ, ಗಿಲ್‌, ಸಾಯಿ ಸುದರ್ಶನ್‌, ಮಿಲ್ಲರ್‌, ತೆವಾಟಿಯ ಅವರೆಲ್ಲ ಗುಜರಾತ್‌ ಬ್ಯಾಟಿಂಗ್‌ ಸರದಿಯ ಪ್ರಮುಖರು. ಡೆತ್‌ ಓವರ್‌ಗಳಲ್ಲಿ ಪಂಜಾಬ್‌ ಬೌಲರ್ ದುಬಾರಿಯಾಗುತ್ತ ಬಂದಿರುವುದನ್ನು ಗುಜರಾತ್‌ ಗಮನಿಸದೇ ಇರದು. ಲೆಗ್‌ಸ್ಪಿನ್ನರ್‌ ರಾಹುಲ್‌ ಚಹರ್‌ 11.37ರಷ್ಟು ರನ್‌ ನೀಡಿರುವುದು ಪಂಜಾಬ್‌ ಪಾಲಿನ ಆತಂಕದ ಸಂಗತಿ. ಯಾರ್ಕರ್‌ ಸ್ಪೆಷಲಿಸ್ಟ್‌ ಅರ್ಷದೀಪ್‌ ಕೂಡ ಮಿಂಚುವಲ್ಲಿ ವಿಫ‌ಲರಾಗಿದ್ದಾರೆ.

ಪಿಚ್‌ ರಿಪೋರ್ಟ್‌
ಬ್ಯಾಟಿಂಗ್‌ ಹಾಗೂ ಬೌಲರ್‌ಗಳಿಬ್ಬರಿಗೂ ನೆರವು ನೀಡುವ ಟ್ರ್ಯಾಕ್‌. ಹೀಗಾಗಿ 160-170 ರನ್‌ ಗಳಿಸಿದರೂ ಇದನ್ನು ಉಳಿಸಿಕೊಳ್ಳಬಹುದು ಅಥವಾ ಚೇಸ್‌ ಮಾಡಬಹುದು. ಹಿಂದಿನ ಪಂದ್ಯದಲ್ಲಷ್ಟೇ ಗರಿಷ್ಠ ಸ್ಕೋರ್‌ ದಾಖಲಿಸಿ ಮೆರೆದಿದ್ದ ಹೈದರಾಬಾದ್‌ ತಂಡ ಅನಂತರ ಈ ಅಹ್ಮದಾಬಾದ್‌ ಟ್ರ್ಯಾಕ್‌ನಲ್ಲಿ ಹೇಗೆ ಪರದಾಡಿತು ಎಂಬುದನ್ನು ಒಮ್ಮೆ ಅವಲೋಕಿಸಿದರೆ “ಅಂಕಣ ಗುಟ್ಟು’ ಅರಿಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next