Advertisement

IPL 2023: MI V/s KKR –“ವಾಂಖೇಡೆ”ವಶಕ್ಕೆ ಮುಂಬೈ ಪ್ರಯತ್ನ

12:16 AM Apr 16, 2023 | Team Udayavani |

ಮುಂಬಯಿ: ಪ್ರಸಕ್ತ ಋತುವಿನಲ್ಲಿ ಇನ್ನೂ ಪೂರ್ಣ ಸಾಮರ್ಥ್ಯವನ್ನು ಅನಾವರಣ ಗೊಳಿಸದ ಮುಂಬೈ ಇಂಡಿಯನ್ಸ್‌ಗೆ ಮತ್ತೂಮ್ಮೆ ತವರಿನ ಸವಾಲು ಎದುರಾಗಿದೆ. “ಫೈರ್‌ ಪವರ್‌” ಕೋಲ್ಕತಾ ನೈಟ್‌ರೈಡರ್ ವಿರುದ್ಧ ರವಿವಾರ “ವಾಂಖೇಡೆ ಸ್ಟೇಡಿಯಂ”ನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಲಿದೆ.
ಮೊದಲೆರಡು ಪಂದ್ಯಗಳನ್ನು ಸೋತು, 3ನೇ ಪ್ರಯತ್ನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಕೋಟ್ಲಾ ಅಂಗಳದಲ್ಲೇ ಮಣಿಸುವಲ್ಲಿ ಮುಂಬೈ ಯಶಸ್ವಿಯಾಗಿತ್ತು. ಆದರೆ ಡೆಲ್ಲಿ ಸತತವಾಗಿ ಸೋಲು ಕಾಣುತ್ತಲೇ ಬಂದ ತಂಡವಾದ್ದರಿಂದ ರೋಹಿತ್‌ ಪಡೆಯ ಪಾಲಿಗೆ ಇದೇನೂ ಹೆಚ್ಚುಗಾರಿಕೆ ಅಲ್ಲ, ಹೆಗ್ಗಳಿಕೆಯ ಜಯವೂ ಅಲ್ಲ. ಡೆಲ್ಲಿಗೆ ಹೋಲಿಸಿದರೆ ಕೆಕೆಆರ್‌ ಸಾಮರ್ಥ್ಯ ಎಷ್ಟೋ ಪಟ್ಟು ಹೆಚ್ಚು. ಹೀಗಾಗಿ ತವರಿನಂಗಳದಲ್ಲೇ ಮುಂಬೈ ದೊಡ್ಡ ಹೋರಾಟವೊಂದನ್ನು ನಡೆಸುವ ಅಗತ್ಯವಿದೆ.

Advertisement

ಇದು ಪ್ರಸಕ್ತ ಋತುವಿನಲ್ಲಿ “ವಾಂಖೇಡೆ”ಯಲ್ಲಿ ಮುಂಬೈ ಆಡಲಿರುವ ಎರಡನೇ ಪಂದ್ಯ. ಚೆನ್ನೈ ವಿರುದ್ಧ ಇಲ್ಲಿ 7 ವಿಕೆಟ್‌ಗಳ ಸೋಲನುಭವಿಸಿತ್ತು. ಹೀಗಾಗಿ ಅಂದು ತವರಿನ ಅಭಿಮಾನಿಗಳಿಗೆ ಎದುರಾದ ನಿರಾಸೆಯನ್ನು ಕೆಕೆಆರ್‌ ವಿರುದ್ಧ ಗೆದ್ದು ಹೋಗಲಾಡಿಸಬೇಕಿದೆ.

ಸಾಮಾನ್ಯವಾಗಿ ಆರಂಭದ ಕೆಲವು ಪಂದ್ಯಗಳನ್ನು ಸೋತು ಮತ್ತೆ ಲಯ ಕಂಡುಕೊಂಡು ಎತ್ತರಕ್ಕೆ ಏರುತ್ತ ಹೋಗುವುದು ಮುಂಬೈ ಇಂಡಿಯನ್ಸ್‌ ವಾಡಿಕೆ. ಆದರೆ ಕಳೆದ ಋತುವಿನಲ್ಲಿ ಮುಂಬೈ ಸಂಪೂರ್ಣ ಲಯ ತಪ್ಪಿತ್ತು. ಈ ಸಲವೂ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಕೆಲವು ಪ್ರಮುಖರ ಗೈರು ಮುಂಬೈಯನ್ನು ಘಾಸಿಗೊಳಿಸಿದೆ. ಪ್ರಧಾನ ವೇಗಿ ಜೋಫ್ರ ಆರ್ಚರ್‌ ಹೊಸತೊಂದು ಗಾಯಕ್ಕೆ ಸಿಲುಕಿದ್ದು, ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಜೇಸನ್‌ ಬೆಹ್ರಂಡರ್ಫ್‌ ಮತ್ತು ರಿಲೀ ಮೆರೆಡಿತ್‌ ಮೇಲೆ ವೇಗದ ಬೌಲಿಂಗ್‌ ಜವಾಬ್ದಾರಿ ಹೆಚ್ಚಿದೆ. ಸ್ಪಿನ್‌ ವಿಭಾಗದಲ್ಲಿ ಅನುಭವಿ ಪೀಯೂಷ್‌ ಚಾವ್ಲಾ ಇದ್ದಾರೆ.
ಮುಂಬೈ ಬ್ಯಾಟಿಂಗ್‌ ಸರದಿ ಬಿಗ್‌ ಹಿಟ್ಟರ್‌ಗಳಿಂದ ಒಳಗೊಂಡಿದ್ದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಸ್ಫೋಟಿಸಿಲ್ಲ. ಇನ್ನೇನು ಕ್ರೀಸ್‌ ಆಕ್ರಮಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಳ್ಳುತ್ತಿದ್ದಾರೆ. ರೋಹಿತ್‌ ಶರ್ಮ ಡೆಲ್ಲಿ ವಿರುದ್ಧ 45 ಎಸೆತಗಳಿಂದ 65 ರನ್‌ ಬಾರಿಸಿ ಕಪ್ತಾನನ ಆಟವಾಡಿದ್ದಾರೆ. ಇಶಾನ್‌ ಕಿಶನ್‌, ತಿಲಕ್‌ ವರ್ಮ ಅವರಿಂದ ದೊಡ್ಡ ಇನ್ನಿಂಗ್ಸ್‌ ದಾಖಲಾಗಬೇಕಿದೆ.

ಕ್ಯಾಮರಾನ್‌ ಗ್ರೀನ್‌ ಮತ್ತು ಟಿಮ್‌ ಡೇವಿಡ್‌ ಅವರಂಥ ಬಿಗ್‌ ಹಿಟ್ಟರ್‌ಗಳನ್ನು ಮುಂಬೈ ಮಧ್ಯಮ ಕ್ರಮಾಂಕದಲ್ಲಿ ಹೊಂದಿದೆ. ಆದರೆ ಡೆಲ್ಲಿ ವಿರುದ್ಧ 173 ರನ್‌ ಚೇಸಿಂಗ್‌ ವೇಳೆ ಇವರಿಂದ ಮುನ್ನುಗ್ಗಿ ಬಾರಿಸಲು ಸಾಧ್ಯವಾಗಿರಲಿಲ್ಲ ಎಂಬುದನ್ನು ಗಮನಿಸಬೇಕು. ಪಂದ್ಯ ಕೊನೆಯ ಎಸೆತದ ತನಕ ಹೋಗಿತ್ತು. ದುರಂತವೆಂದರೆ ಸೂರ್ಯಕುಮಾರ್‌ ಯಾದವ್‌ ಅವರ ಸೊನ್ನೆಯ ನಂಟು ಐಪಿಎಲ್‌ನಲ್ಲೂ ಮುಂದುವರಿದದ್ದು.

ಕೆಕೆಆರ್‌ ಬ್ಯಾಟಿಂಗ್‌ ಪ್ರಬಲ
ಕೋಲ್ಕತಾ ಪ್ರಬಲವಾದ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ. ಈ ಸಲ ಭಾರೀ ಜೋಶ್‌ನಲ್ಲಿ ಆಡುತ್ತಿದೆ. ಗುಜರಾತ್‌ ಟೈಟಾನ್ಸ್‌ ಮತ್ತು ಕಳೆದ ರಾತ್ರಿ ಹೈದರಾಬಾದ್‌ ವಿರುದ್ಧ ಪ್ರಚಂಡ ಪ್ರದರ್ಶನ ನೀಡಿತ್ತು. ವೆಂಕಟೇಶ್‌ ಅಯ್ಯರ್‌, ನಿತೀಶ್‌ ರಾಣಾ, ರಿಂಕು ಸಿಂಗ್‌ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಅಪಾಯಕಾರಿ ಬ್ಯಾಟರ್. ಹೈದರಾಬಾದ್‌ ವಿರುದ್ಧ 229 ರನ್‌ ಗಳಿಸಬೇಕಾದ ಭಾರೀ ಸವಾಲಿದ್ದರೂ ಕೆಕೆಆರ್‌ 205ರ ತನಕ ಓಟ ಬೆಳೆಸಿದ್ದು ಮುಂಬೈ ಪಾಲಿಗೊಂದು ಎಚ್ಚರಿಕೆಯ ಗಂಟೆ.

Advertisement

ಆ್ಯಂಡ್ರೆ ರಸೆಲ್‌, ಗುಜರಾತ್‌ ವಿರುದ್ಧ ಸತತ 5 ಸಿಕ್ಸರ್‌ ಬಾರಿಸಿ ತಂಡವನ್ನು ಗೆಲ್ಲಿಸಿದ್ದ ಎಡಗೈ ಬ್ಯಾಟರ್‌ ರಿಂಕು ಸಿಂಗ್‌ ಹೈದರಾಬಾದ್‌ ವಿರುದ್ಧವೂ ಸಿಡಿದು ನಿಂತಿದ್ದರು. 31 ಎಸೆತಗಳಿಂದ ಅಜೇಯ 58 ರನ್‌ ಹೊಡೆದ ಸಾಧನೆ ಇವರದಾಗಿತ್ತು (4 ಬೌಂಡರಿ, 4 ಸಿಕ್ಸರ್‌).
ಕೆಕೆಆರ್‌ ಬೌಲಿಂಗ್‌ ಯಶಸ್ಸು ಕಂಡದ್ದು ಆರ್‌ಸಿಬಿ ವಿರುದ್ಧ ಮಾತ್ರ. ಶುಕ್ರವಾರ ಹೈದರಾಬಾದ್‌ಗೆ 228 ರನ್‌ ಬಿಟ್ಟುಕೊಟ್ಟು ಕೈಸುಟ್ಟುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next