Advertisement

IPL 2023: ಮತ್ತೆ RCBಯನ್ನು ಕೆಡವಿದ KKR

12:21 AM Apr 27, 2023 | Team Udayavani |

ಬೆಂಗಳೂರು: ಆರ್‌ಸಿಬಿಯನ್ನು ಕೆಕೆಆರ್‌ ಮತ್ತೆ ಕೆಡವಿದೆ. ಬುಧವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ನಿತೀಶ್‌ ರಾಣಾ ಪಡೆ 21 ರನ್ನುಗಳಿಂದ ಬೆಂಗಳೂರು ತಂಡವನ್ನು ಪರಾಭವಗೊಳಿಸಿ ಗೆಲುವಿನ ಹಳಿ ಏರಿತು.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆಕೆಆರ್‌ 5 ವಿಕೆಟಿಗೆ ಭರ್ತಿ 200 ರನ್‌ ಪೇರಿಸಿದರೆ, ಆರ್‌ಸಿಬಿ 8 ವಿಕೆಟಿಗೆ 179 ರನ್‌ ಮಾಡಿತು. ಕೋಲ್ಕತಾದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕೆಕೆಆರ್‌ 81 ರನ್ನುಗಳ ಜಯ ಸಾಧಿಸಿತ್ತು.

ದೊಡ್ಡ ಮೊತ್ತದ ಚೇಸಿಂಗ್‌ಗೆ ಅಗತ್ಯವಿದ್ದ ಓಪನಿಂಗ್‌ ಪಡೆಯಲು ಆರ್‌ಸಿಬಿ ವಿಫ‌ಲವಾಯಿತು. ವಿರಾಟ್‌ ಕೊಹ್ಲಿ ಒಂದೆಡೆ ನಿಂತರೂ ಫಾ ಡು ಪ್ಲೆಸಿಸ್‌ (17), ಶಾಬಾಜ್‌ ಅಹ್ಮದ್‌ (2), ಗ್ಲೆನ್‌ ಮ್ಯಾಕ್ಸ್‌ವೆಲ್‌ (5) ವಿಕೆಟ್‌ಗಳನ್ನು ಪಟಪಟನೆ ಕಳೆದುಕೊಂಡಿತು. ಮೂವರಲ್ಲಿ ಇಬ್ಬರು ಬಿಗ್‌ ಹಿಟ್ಟರ್‌ಗಳನ್ನು ಬೇಗನೇ ಕೆಡವಿದ ಕೆಕೆಆರ್‌ ಸ್ಪಷ್ಟ ಮೇಲುಗೈ ಸಾಧಿಸಿತು. ಕೊಹ್ಲಿ 54 ರನ್‌ ಹೊಡೆದರು.

ಕೆಕೆಆರ್‌ ಮತ್ತೆ ಆರಂಭಿಕ ಜೋಡಿಯನ್ನು ಬದಲಿಸಿತು. ಜೇಸನ್‌ ರಾಯ್‌ ಜತೆಗೆ ಎನ್‌. ಜಗದೀಶನ್‌ ಕಣಕ್ಕಿಳಿದರು. 9.2 ಓವರ್‌ಗಳಿಂದ 83 ರನ್‌ ಹರಿದು ಬಂತು. ಇದು ಪ್ರಸಕ್ತ ಋತುವಿನಲ್ಲೇ ಕೆಕೆಆರ್‌ ಪರ ಮೊದಲ ವಿಕೆಟಿಗೆ ದಾಖಲಾದ ಅತ್ಯಧಿಕ ರನ್‌. ಅಬ್ಬರಿಸಿದ ರಾಯ್‌ 29 ಎಸೆತಗಳಿಂದ 56 ರನ್‌ ಬಾರಿಸಿದರು. ಸಿಡಿಸಿದ್ದು 4 ಬೌಂಡರಿ ಹಾಗೂ 5 ಸಿಕ್ಸರ್‌.

ಪವರ್‌ ಪ್ಲೇಯಲ್ಲಿ ಬೌಲಿಂಗ್‌ ದಾಳಿಗಿಳಿದ ಶಾಬಾಜ್‌ ಅಹ್ಮದ್‌ ಅವರನ್ನು ಜೇಸನ್‌ ರಾಯ್‌ ಚೆನ್ನಾಗಿ ದಂಡಿಸಿದರು. ಹ್ಯಾಟ್ರಿಕ್‌ ಸಿಕ್ಸರ್‌ ಸೇರಿದಂತೆ ಅವರ ಮೊದಲ ಓವರ್‌ನಲ್ಲೇ 4 ಸಿಕ್ಸರ್‌ ಸಿಡಿಸಿದರು. ಆ ಓವರ್‌ನಲ್ಲಿ 25 ರನ್‌ ಸೋರಿಹೋಯಿತು. ಶಾಬಾಜ್‌ ಒಂದೇ ಓವರ್‌ಗೆ ಸಾಕೆನಿಸಿಕೊಂಡರು.
ಜೇಸನ್‌ ರಾಯ್‌ ಭರ್ತಿ 10 ಓವರ್‌ ತನಕ ಕ್ರೀಸ್‌ನಲ್ಲಿ ಉಳಿದರು. ಅರ್ಧ ಹಾದಿ ಕ್ರಮಿಸುವ ವೇಳೆ ಕೆಕೆಆರ್‌ 2 ವಿಕೆಟಿಗೆ 88 ರನ್‌ ಮಾಡಿತ್ತು. ಜಗದೀಶನ್‌ ಗಳಿಕೆ 29 ಎಸೆತಗಳಿಂದ 27 ರನ್‌ (4 ಬೌಂಡರಿ).

Advertisement

ವನ್‌ಡೌನ್‌ನಲ್ಲಿ ಬಂದ ವೆಂಕಟೇಶ್‌ ಅಯ್ಯರ್‌ ಅಷ್ಟೇನೂ ಅಬ್ಬರ ತೋರಲಿಲ್ಲ. ಅವರು 31 ರನ್ನಿಗೆ 26 ಎಸೆತ ತೆಗೆದುಕೊಂಡರು (3 ಬೌಂಡರಿ).
ರಾಯ್‌ ಅವರಂತೆ ನಾಯಕ ನಿತೀಶ್‌ ರಾಣಾ ಕೂಡ ಬಿರುಸಿನ ಆಟಕ್ಕೆ ಮುಂದಾದರು. ಅವರ ಬ್ಯಾಟ್‌ನಿಂದ 48 ರನ್‌ ಹರಿದು ಬಂತು. 21 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ ಸೇರಿತ್ತು.

ಈ ಆರ್ಭಟದ ವೇಳೆ ಕೆಕೆಆರ್‌ ಪರ 100 ಸಿಕ್ಸರ್‌ ಸಿಡಿಸಿದ ಕೇವಲ 2ನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. 180 ಸಿಕ್ಸರ್‌ ಬಾರಿಸಿದ ಆ್ಯಂಡ್ರೆ ರಸೆಲ್‌ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಇಲ್ಲಿ ರಸೆಲ್‌ ಆಟ ಒಂದೇ ರನ್ನಿಗೆ ಮುಗಿಯಿತು.

ಈ ಸೀಸನ್‌ನ ಬ್ಯಾಟಿಂಗ್‌ ಸೆನ್ಸೇಶನ್‌ ರಿಂಕು ಸಿಂಗ್‌ 10 ಎಸೆತಗಳಿಂದ 18 ರನ್‌ ಹೊಡೆದರು. (2 ಬೌಂಡರಿ, 1 ಸಿಕ್ಸರ್‌).

Advertisement

Udayavani is now on Telegram. Click here to join our channel and stay updated with the latest news.

Next