Advertisement

IPL 2023: ಫೈನಲ್‌ ಥ್ರಿಲ್‌

11:51 PM May 27, 2023 | Team Udayavani |

ಅಹ್ಮದಾಬಾದ್‌: ಆತಿಥೇಯ ಹಾಗೂ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಐಪಿಎಲ್‌ ಪ್ರಶಸ್ತಿ ಉಳಿಸಿಕೊಳ್ಳಬಹುದೇ? ಚೆನ್ನೈ ಸೂಪರ್‌ ಕಿಂಗ್ಸ್‌ 5ನೇ ಸಲ ಟ್ರೋಫಿಯನ್ನೆತ್ತಿ ಮುಂಬೈ ದಾಖಲೆಯನ್ನು ಸರಿದೂಗಿ ಸೀತೇ? 3 ಶತಕಗಳ ಸರದಾರ ಶುಭಮನ್‌ ಗಿಲ್‌ ಫೈನಲ್‌ನಲ್ಲೂ ಕಮಾಲ್‌ ಮಾಡ ಬಲ್ಲರೇ? ಧೋನಿಗೆ ಇದು ಕೊನೆಯ ಐಪಿಎಲ್‌ ಪಂದ್ಯವೇ? ಇದು ನಿಜವೇ ಆದರೆ ಅವರಿಗೆ ಸ್ಮರಣೀಯ ವಿದಾಯ ಲಭಿಸಬಹುದೇ…?

Advertisement

ಇಂಥ ಹತ್ತಾರು ಕ್ರಿಕೆಟ್‌ ಕುತೂಹಲ ವನ್ನು ತಣಿಸಲು ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ ಸರ್ವ ವಿಧದಲ್ಲೂ ಸಜ್ಜಾಗಿ ನಿಂತಿದೆ. ರವಿವಾರದ ಹೊತ್ತು ಮುಳುಗುತ್ತಿದ್ದಂತೆಯೇ ಗುಜರಾತ್‌-ಚೆನ್ನೈ 16ನೇ ಐಪಿಎಲ್‌ ಫೈನಲ್‌ನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯ ಲಿವೆ. ಚುಟುಕು ಕ್ರಿಕೆಟಿನ ಮಹಾ
ಕದನವೊಂದು ನಡುರಾತ್ರಿಯ ತನಕ ಕಾವೇರುತ್ತ ಹೋಗಲಿದೆ. ಸ್ಟೇಡಿಯಂ ನಲ್ಲಿ ನೆರೆಯಲಿರುವ 1,32,000ದಷ್ಟು ವೀಕ್ಷಕರು, ಟಿವಿ ಮುಂದೆ ಜಮಾಯಿಸಲಿ ರುವ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಪಾಲಿಗೆ ಇದೊಂದು ಅಕ್ಷರಶಃ ಹಬ್ಬ!

ಹಾರ್ದಿಕ್‌ ಪಾಂಡ್ಯ ನೇತೃತ್ವದ ಗುಜರಾತ್‌ ಟೈಟಾನ್ಸ್‌ 2022ರಲ್ಲಿ ಅಖಾಡಕ್ಕಿಳಿದ ನೂತನ ತಂಡ. ತನ್ನ ಮೊದಲ ಪ್ರವೇಶದಲ್ಲೇ ಅದು ಅದ್ಭುತ ಸಾಧನೆಯೊಂದಿಗೆ ಬಹಳ ಎತ್ತರಕ್ಕೆ ಏರಿ ನಿಂತಿತು; ಟ್ರೋಫಿಯೊಂದಿಗೆ ತಾನೂ ಮಿನುಗಿತು. 2023ರಲ್ಲೂ ಇದೇ ಫಾರ್ಮ್ ಮುಂದುವರಿಸಿಕೊಂಡು ಬಂದಿದೆ. ಲೀಗ್‌ನ ಅಗ್ರಸ್ಥಾನಿಯಾಗಿ ಈಗ ಪ್ರಶಸ್ತಿ ಉಳಿಸಿಕೊಳ್ಳುವ ಹಂತಕ್ಕೆ ಬಂದು ತಲುಪಿದೆ. ಗೆದ್ದರೆ ಮೊದಲೆರಡು ಋತುಗಳಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಮೊದಲ ತಂಡವಾಗಿ ಮೂಡಿಬರಲಿದೆ.
ಟೀಮ್‌ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್‌ ಧೋನಿಯ ಚೆನ್ನೈ ತಂಡಕ್ಕೆ ಫೈನಲ್‌ ಎಂಬುದೊಂದು ಹವ್ಯಾಸವೇ ಆಗಿದೆ. ಇದು ದಾಖಲೆ 10ನೇ ಪ್ರಶಸ್ತಿ ಕದನ. ಧೋನಿಗೋ… ಬರೋಬ್ಬರಿ 11ನೇ ಫೈನಲ್‌! ಚೆನ್ನೈ ಈಗಾಗಲೇ 4 ಸಲ ಚಾಂಪಿಯನ್‌ ಆಗಿದೆ. ಕೊನೆಯ ಸಲ ಪ್ರಶಸ್ತಿ ಎತ್ತಿದ್ದು 2021ರಲ್ಲಿ. ಈಗ ಗುಜರಾತ್‌ಗೆ ಅವರ ಅಂಗಳದಲ್ಲೇ ಗುದ್ದು ಕೊಡುವ ಹವಣಿಕೆಯಲ್ಲಿದೆ.

ನಂ.1, ನಂ.2 ತಂಡಗಳು
ಗುಜರಾತ್‌ ಮತ್ತು ಚೆನ್ನೈ ಲೀಗ್‌ ಹಂತದ ನಂ. 1 ಮತ್ತು 2ನೇ ಸ್ಥಾನ ಅಲಂಕರಿಸಿದ ತಂಡಗಳು. 2023ರ ಉದ್ಘಾಟನ ಪಂದ್ಯದ ಎದುರಾಳಿಗಳೂ ಹೌದು. ಅಹ್ಮದಾಬಾದ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್‌ 5 ವಿಕೆಟ್‌ಗಳಿಂದ ಗೆದ್ದು ಬಂದಿತ್ತು. ಚೆನ್ನೈಯಲ್ಲಿ ಏರ್ಪಟ್ಟ ಮೊದಲ ಕ್ವಾಲಿಫೈಯರ್‌ನಲ್ಲಿ ಇವೆರಡು ಮುಖಾಮುಖೀಯಾದಾಗ ಅದೃಷ್ಟ ಧೋನಿ ಪಡೆಯತ್ತ ತಿರುಗಿತು. 15 ರನ್ನುಗಳ ಗೆಲುವು ಒಲಿಯಿತು. ಇದು ಗುಜರಾತ್‌ ವಿರುದ್ಧ ಚೆನ್ನೈ ಸಾಧಿಸಿದ ಮೊಟ್ಟಮೊದಲ ಜಯ ಎಂಬುದನ್ನು ಮರೆಯುವಂತಿಲ್ಲ. ಕಳೆದ ಋತುವಿನ ಎರಡೂ ಪಂದ್ಯಗಳಲ್ಲಿ ಗುಜರಾತ್‌ ಮುಂದೆ ಚೆನ್ನೈ ಮುಗ್ಗರಿಸಿತ್ತು.

“ಹೈ ಫೈವ್‌’ ಕನವರಿಕೆಯಲ್ಲಿರುವ ಚೆನ್ನೈಗೆ ಶುಭಮನ್‌ ಗಿಲ್‌ ಅಡ್ಡಗೋಡೆ ಯಾಗಿ ನಿಲ್ಲುವ ಎಲ್ಲ ಸಾಧ್ಯತೆ ಇದೆ. 3 ಶತಕದೊಂದಿಗೆ 851 ರನ್‌ ರಾಶಿ ಹಾಕಿರುವ “ಮೊಹಾಲಿ ಮೋಡಿ ಗಾರ’ನ ವಿಕೆಟ್‌ ಚೆನ್ನೈ ಪಾಲಿಗೆ ನಿರ್ಣಾಯಕ. ಹಾಗೆಯೇ ಸಿಎಸ್‌ಕೆ ಯಶಸ್ಸು ಧೋನಿಯ ಅನುಭವಿ ನಾಯಕತ್ವ, ಅವರ ಕಾರ್ಯತಂತ್ರವನ್ನು ಅವಲಂಬಿಸಿದೆ.

Advertisement

ಸಮಬಲದ ತಂಡಗಳು
ಕಾಗದದ ಮೇಲೆ ಎರಡೂ ಸಮಬಲದ ತಂಡಗಳು. ದೊಡ್ಡ ಜತೆಯಾಟ ನಿಭಾ ಯಿಸುವವರು, ಮೊನಚಿನ ಬೌಲಿಂಗ್‌ ದಾಳಿ ಸಂಘಟಿಸುವವರು ಎರಡೂ ತಂಡಗಳಲಿದ್ದಾರೆ.
ಶುಭಮನ್‌ ಗಿಲ್‌ ಹೊರತುಪಡಿ ಸಿಯೂ ಗುಜರಾತ್‌ ಬ್ಯಾಟಿಂಗ್‌ ಸರದಿ ಬಲಿಷ್ಠ. ಇವರಲ್ಲಿ ಸಾಯಿ ಸುದರ್ಶನ್‌, ವಿಜಯ್‌ ಶಂಕರ್‌, ಡೇವಿಡ್‌ ಮಿಲ್ಲರ್‌, ರಾಹುಲ್‌ ತೆವಾಟಿಯ ಅತ್ಯಂತ ಅಪಾಯಕಾರಿಗಳು. ರಶೀದ್‌ ಖಾನ್‌ ಕೂಡ ರಭಸದ ಆಟಕ್ಕೆ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹಾರ್ದಿಕ್‌ ಪಾಂಡ್ಯ ಮಾತ್ರ ತಣ್ಣಗಿದ್ದಂತೆ ಕಾಣುತ್ತಾರೆ. ಆದರೆ ರನ್‌ ಗಳಿಕೆಯಲ್ಲಿ ಗಿಲ್‌ ಅನಂತರದ ಸ್ಥಾನದಲ್ಲಿರುವವರು ಪಾಂಡ್ಯ ಎಂಬುದನ್ನು ಮರೆಯುವಂತಿಲ್ಲ (325 ರನ್‌).

ಗುಜರಾತ್‌ ಬೌಲಿಂಗ್‌ ವಿಭಾಗವೂ ಘಾತಕ. ಶಮಿ (28 ವಿಕೆಟ್‌), ರಶೀದ್‌ (27 ವಿಕೆಟ್‌), ನೂರ್‌ ಅಹ್ಮದ್‌ ಜತೆಯಲ್ಲಿ ಮೋಹಿತ್‌ ಶರ್ಮ (24 ವಿಕೆಟ್‌) ಸಮ್ಮೊàಹನಾಸ್ತ್ರ ಬೀಸುತ್ತಿರು ವುದು ಗುಜರಾತ್‌ ಬೌಲಿಂಗ್‌ ಬಲ ವನ್ನು ಹೆಚ್ಚಿಸಿದೆ. 10 ರನ್ನಿಗೆ 5 ವಿಕೆಟ್‌ ಉಡಾಯಿಸಿ ಮುಂಬೈಯನ್ನು ಹೊರ ದಬ್ಬುವಲ್ಲಿ ಮೋಹಿತ್‌ ಪಾತ್ರವೂ ಮಹತ್ವದ್ದಾಗಿತ್ತು.

ಆರಂಭಿಕರ ಪಾತ್ರ
ಚೆನ್ನೈ ಯಶಸ್ಸಿನಲ್ಲಿ ಆರಂಭಿಕರ ಪಾತ್ರ ನಿರ್ಣಾಯಕ. ಡೇವನ್‌ ಕಾನ್ವೇ- ರುತುರಾಜ್‌ ಗಾಯಕ್ವಾಡ್‌ ತಮ್ಮ ಉಜ್ವಲ ಪ್ರದರ್ಶನವನ್ನು ಮುಂದುವರಿ ಸಬೇಕಿದೆ. ರಹಾನೆ, ದುಬೆ ಮೇಲೆ ಜವಾಬ್ದಾರಿ ಹೆಚ್ಚಿದೆ. ಜಡೇಜ, ರಾಯುಡು, ಧೋನಿ, ಅಲಿ ಕೊನೆಯ ಅವಕಾಶದಲ್ಲಾದರೂ ಹೆಚ್ಚಿನ ಮೈಚಳಿ ಬಿಟ್ಟು ಆಡುವುದು ಅಗತ್ಯ.
ಚೆನ್ನೈ ಬೌಲಿಂಗ್‌ ಲಂಕೆಯ ಪತಿರಣ – ತೀಕ್ಷಣ ಜೋಡಿಯನ್ನು ಹೆಚ್ಚು ಅವಲಂಬಿಸಿದೆ. ದೇಶಪಾಂಡೆ, ಚಹರ್‌ ಅವರ ಆರಂಭಿಕ ಸ್ಪೆಲ್‌ಗೆ ವಿಕೆಟ್‌ ಬಿದ್ದರೆ ಚೆನ್ನೈ ಮೇಲುಗೈ ಸಾಧಿಸಿದಂತೆ.

ಗಿಲ್‌ ವರ್ಸಸ್‌ ಧೋನಿ

ಮೇಲ್ನೋಟಕ್ಕೆ ಇದು ಗಿಲ್‌ ವರ್ಸಸ್‌ ಧೋನಿ ನಡುವಿನ ಮೇಲಾಟವಾಗಿ ಕಾಣುತ್ತಿದೆ. 19 ವರ್ಷಗಳ ಹಿಂದೆ ಧೋನಿ ಟೀಮ್‌ ಇಂಡಿಯಾ ಜೆರ್ಸಿ ಧರಿಸಿದಾಗ ಈ ಶುಭಮನ್‌ ಗಿಲ್‌ 4 ವರ್ಷದ ಪುಟ್ಟ ಪೋರ. ಪಾಕಿಸ್ಥಾನ ಗಡಿಗೆ ಹೊಂದಿಕೊಂಡಿರುವ ಪಂಜಾಬ್‌ನ ಫಾಜಿಲ್ಕಾ ಗ್ರಾಮದಲ್ಲಿ ಅಜ್ಜನೇ ತಯಾರಿಸಿಕೊಟ್ಟ ಬ್ಯಾಟ್‌ ಒಂದನ್ನು ಹಿಡಿದುಕೊಂಡು ಆಗಷ್ಟೇ ಚೆಂಡನ್ನು ಬಡಿದಟ್ಟಲು ಆರಂಭಿಸಿದ್ದರು.
ಕಾಲಚಕ್ರ ಉರುಳಿದೆ. ಧೋನಿಗೆ ಈಗ 42 ವರ್ಷ. ಇವರೆದುರು 23 ವರ್ಷದ ಗಿಲ್‌ ದೊಡ್ಡ ಸವಾಲಾಗಿ ಉಳಿದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next