ಅಹ್ಮದಾಬಾದ್: ಇದು “ಬ್ಯಾಟಲ್ ಆಫ್ ಬ್ರದರ್”, ಸಹೋದರರ ಸವಾಲ್! ಇದಕ್ಕೆ ವೇದಿಕೆಯಾಗಿ ರುವುದು ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ”. ರವಿವಾರ ಇಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪರಸ್ಪರ ಎದುರಾಗಲಿದ್ದು, ಸಹೋದರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಇತ್ತಂಡಗಳ ನಾಯಕರೆಂಬುದು ವಿಶೇಷ.
ಇವರಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ಹೊಸತೇನಲ್ಲ. ಅವರು ಗುಜರಾತ್ ಟೈಟಾನ್ಸ್‌ನ ಖಾಯಂ ಕಪ್ತಾನ. ಆದರೆ ಕೃಣಾಲ್‌ಗೆ ಇದು ಹೊಸ ಅನುಭವ. ಕೆ.ಎಲ್. ರಾಹುಲ್ ಗಾಯಾಳಾಗಿ ಐಪಿಎಲ್‌ನಿಂದ ಹೊರಗುಳಿದ ಕಾರಣ ಈ ಜವಾಬ್ದಾರಿ ಕೃಣಾಲ್ ಹೆಗಲೇರಿದೆ. ಗುಜರಾತ್ ವಿರುದ್ಧ ಲಕ್ನೋಗೆ ಮೊದಲ ಗೆಲುವನ್ನು ತಂದುಕೊಡಲು ಇವರಿಂದ ಸಾಧ್ಯವೇ ಎಂಬುದೊಂದು ನಿರೀಕ್ಷೆ.
ಈವರೆಗೆ ಗುಜರಾತ್ ವಿರುದ್ಧ ಆಡಿದ ಎಲ್ಲ 3 ಪಂದ್ಯಗಳಲ್ಲೂ ಲಕ್ನೋ ಲಾಗ ಹಾಕಿದೆ. ಇದರಲ್ಲಿ 2023ರ ಸಾಲಿನ ಮುಖಾಮುಖೀಯೂ ಸೇರಿದೆ. ಲಕ್ನೋದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ರಾಹುಲ್ ಪಡೆಗೆ ಗೆಲ್ಲುವ ಅವಕಾಶವಿತ್ತು. ಆದರೆ ಲಕ್ನೋ 136 ರನ್ ಗಳಿಸಲಾಗದೆ ನಾಟಕೀಯ ರೀತಿಯಲ್ಲಿ ಸೋಲನುಭವಿಸಿತು. ಈ ಫಲಿತಾಂಶ ಸಾಕಷ್ಟು ಅಚ್ಚರಿ ಹಾಗೂ ಅನುಮಾನ ಹುಟ್ಟುಹಾಕಿದ್ದನ್ನು ಮರೆಯುವಂತಿಲ್ಲ.
ಬಳಿಕ ಆರ್‌ಸಿಬಿ ವಿರುದ್ಧವೂ ಲಕ್ನೋ ಶೋಚನೀಯ ಬ್ಯಾಟಿಂಗ್ ನಡೆಸಿ ಸೋಲೊಪ್ಪಿಕೊಂಡಿತು. ಇಲ್ಲಿ ಲಕ್ನೋಗೆ 127 ರನ್ ಗಳಿಸಲಾಗಲಿಲ್ಲ. 108ಕ್ಕೆ ಕುಸಿಯಿತು. ಈ ನೂರೆಂಟರ ಸಂಕಟದಿಂದ ಪಾರಾಗಿ ಬರಲು ಇರುವುದೊಂದೇ ಮಾರ್ಗ, ಅದು ಬ್ಯಾಟಿಂಗ್ ಸುಧಾರಣೆ! ಮೇಯರ್, ಪೂರಣ್, ಬದೋನಿ, ಸ್ಟೋಯಿನಿಸ್, ಹೂಡಾ ಅವರಂಥ ಬಿಗ್ ಹಿಟ್ಟರ್‌ಗಳನ್ನು ಒಳಗೊಂಡಿರುವ ತಂಡವಿದು ಎಂಬುದನ್ನು ಮರೆಯಲಾದೀತೇ? ಆದರೆ ಕೃಣಾಲ್ ಕ್ಯಾಪ್ಟನ್ಸಿ ಕ್ಲಿಕ್ ಆಗಬೇಕಿದೆ, ಅಷ್ಟೇ.
ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ಕಳೆದ ರಾತ್ರಿಯಷ್ಟೇ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು 9 ವಿಕೆಟ್‌ಗಳಿಂದ ಬಗ್ಗುಬಡಿದ ಉತ್ಸಾಹದಲ್ಲಿದೆ. ಅದೂ ಜೈಪುರ ಅಂಗಳದಲ್ಲಿ. ಸದ್ಯಕ್ಕೆ ಗುಜರಾತ್ ಚಾಂಪಿಯನ್ನರ ಆಟವನ್ನು ಕಾಯ್ದುಕೊಂಡು ಬಂದಿದೆ. ಅತ್ಯಧಿಕ 7 ಪಂದ್ಯಗಳನ್ನು ಗೆದ್ದ ಸಂಭ್ರಮದಲ್ಲಿದೆ. ಎಂಟರ ನಂಟು ಅಸಾಧ್ಯವೇನಲ್ಲ.