ಮುಂಬಯಿ: ಈ ಬಾರಿಯ ಐಪಿಎಲ್ ಭಾರತದಲ್ಲೇ ನಡೆಯುವುದೇ ಅಥವಾ ವಿದೇಶಕ್ಕೆ ಸ್ಥಳಾಂತರಗೊಳ್ಳಲಿದೆಯೇ ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ನಡುವೆ ಭಾರತಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಭರ್ಜರಿ ಆಫರ್ ನೀಡಿದೆ.
ತಮ್ಮ ದೇಶದಲ್ಲಿ ಐಪಿಎಲ್ ನಡೆಸುವುದಾದರೆ ಕಡಿಮೆ ಬೆಲೆಯಲ್ಲಿ ಹೊಟೇಲ್‌ಗಳು, ಕಡಿಮೆ ವೆಚ್ಚದ ವಿಮಾನ ಸಂಚಾರದ ಮೂಲಕ ಇಡೀ ಕೂಟವನ್ನು ಮುಗಿಸಿಕೊಡುವುದಾಗಿ ಸೂಚಿಸಿದೆ.
ಖರ್ಚಿನ ದೃಷ್ಟಿಯಿಂದ ಮಾತ್ರವಲ್ಲ, ಸುರಕ್ಷತೆ, ತಂಪು ವಾತಾವರಣದ ದೃಷ್ಟಿಯಲ್ಲೂ ದಕ್ಷಿಣ ಆಫ್ರಿಕಾ ಸೂಕ್ತವಾಗಿದೆ. ಆದರೆ ಬಿಸಿಸಿಐ ಯೋಜನೆ ಇನ್ನೂ ಸ್ಪಷ್ಟಗೊಂಡಿಲ್ಲ.
ದಕ್ಷಿಣ ಆಫ್ರಿಕಾ ಮಂಡಳಿ ಪ್ರಕಾರ, ಜೊಹಾನ್ಸ್‌ಬರ್ಗ್‌ನಲ್ಲಿ ಜೈವಿಕ ಸುರಕ್ಷಾ ವಲಯವನ್ನು ನಿರ್ಮಿಸಿ ಅಲ್ಲಿನ ವಾಂಡರರ್, ಪ್ರಿಟೋರಿಯಾದ ಸೆಂಚುರಿಯನ್ ಪಾರ್ಕ್, ಬೆನೋನಿಯ ವಿಲ್ಲೋಮೋರ್ ಪಾರ್ಕ್‌ನಲ್ಲಿ ಪಂದ್ಯಗಳನ್ನು ನಡೆಸಬಹುದು. ಇದರಿಂದ ಸಂಚಾರದ ಹೊರೆಯನ್ನು ತಗ್ಗಿಸಬಹುದು ಎಂಬ ಲೆಕ್ಕಾಚಾರದಲ್ಲಿದೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ
ಬಿಸಿಸಿಐ ಮುಂದೆ 4 ಆಯ್ಕೆ
ಬಿಸಿಸಿಐ ಮುಂದೆ 4 ಆಯ್ಕೆಗಳಿವೆ. ಭಾರತದಲ್ಲೇ ಆದರೆ ಮುಂಬಯಿ, ಪುಣೆ, ನಾಗ್ಪುರದಲ್ಲಿ ಎಲ್ಲ ಪಂದ್ಯಗಳನ್ನು ನಡೆಸುವುದು. ವಿದೇಶದಲ್ಲಾದರೆ ಯುಎಇ, ದಕ್ಷಿಣ ಆಫ್ರಿಕಾ, ಶ್ರೀಲಂಕಾಕ್ಕೆ ಸ್ಥಳಾಂತರಿಸುವುದು. ಈ ಪೈಕಿ ದಕ್ಷಿಣ ಆಫ್ರಿಕಾ ಹೆಸರು ಅಗ್ರಸ್ಥಾನದಲ್ಲಿದೆ. ಆದರೆ ಬಿಸಿಸಿಐ ಎಚ್ಚರಿಕೆಯ ನಡೆಗಳನ್ನು ನೋಡಿದರೆ ಮಹಾರಾಷ್ಟ್ರದಲ್ಲೇ ಪೂರ್ಣ ಐಪಿಎಲ್ ನಡೆಸುವ ಸಾಧ್ಯತೆಯಿದೆ.