ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೆಗಾ ಹರಾಜಿಗೆ ತಯಾರಿ ನಡೆಯುತ್ತಿದೆ. ಇದೀಗ ಹರಾಜಿನಲ್ಲಿ ಭಾಗವಹಿಸಲಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 590 ಆಟಗಾರರು ಅಂತಿಮ ಕಣದಲ್ಲಿದ್ದಾರೆ.
ಫೆ.12 ಮತ್ತು 13ರಂದು ಬೆಂಗಳೂರಿನಲ್ಲಿ ಹರಾಜು ಕಾರ್ಯಕ್ರಮ ನಡೆಯಲಿದೆ. 590 ಆಟಗಾರರ ಪೈಕಿ 228 ಮಂದಿ ಕ್ಯಾಪ್ಡ್ ಮತ್ತು 355 ಮಂದಿ ಅನ್ ಕ್ಯಾಪ್ಡ್ ಆಟಗಾರರಿದ್ದಾರೆ. ಏಳು ಮಂದಿ ಅಸೋಸಿಯೇಟ್ ದೇಶದ ಅಟಗಾರರು ಅಂತಿಮ ಕಣದಲ್ಲಿದ್ದಾರೆ.
ಪಟ್ಟಿಯಲ್ಲಿ 370 ಭಾರತೀಯರು ಮತ್ತು 220 ವಿದೇಶಿ ಆಟಗಾರರ ಹೆಸರು ಅಂತಿಮವಾಗಿದೆ. ಎರಡು ಕೋಟಿ ಮೂಲ ಬೆಲೆ ಹೊಂದಿರುವ 48 ಆಟಗಾರರು, 1.5 ಕೋಟಿ ರೂ. ಮೂಲಬೆಲೆ ಹೊಂದಿರುವ 20 ಆಟಗಾರರು ಮತ್ತು ಒಂದು ಕೋಟಿ ಮೂಲಬೆಲೆ ಹೊಂದಿರುವ 34 ಮಂದಿ ಆಟಗಾರರ ಹೆಸರು ಅಂತಿಮವಾಗಿದೆ.
ಶ್ರೇಯಸ್ ಅಯ್ಯರ್, ಶಿಖರ್ ಧವನ್, ಅಶ್ವಿನ್, ಶಮಿ, ಇಶಾನ್ ಕಿಶನ್, ಚಾಹಲ್, ಡೇವಿಡ್ ವಾರ್ನರ್, ಡುಪ್ಲೆಸಿಸ್, ಕಮಿನ್ಸ್, ರಬಾಡ, ಬೌಲ್ಟ್, ಡಿಕಾಕ್, ಬೇರಿಸ್ಟೋ, ಬ್ರಾವೋ, ಶಕಿಬ್ ಅಲ್ ಹಸನ್, ಸುರೇಶ್ ರೈನಾ, ಅಂಬಾಟಿ ರಾಯುಡು ಮುಂತಾದವರ ಹೆಸರು ಲಿಸ್ಟ್ ನಲ್ಲಿದ್ದು, ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ವಿಂಡೀಸ್ ವಿರುದ್ಧದ ಟಿ20 ಸರಣಿ: ಸ್ಟೇಡಿಯಂನಲ್ಲಿ ಶೇ.75 ಪ್ರೇಕ್ಷಕರಿಗೆ ಅನುಮತಿ
ಆಸ್ಟ್ರೇಲಿಯಾದ 47, ಅಫ್ಘಾನ್ 17, ಬಾಂಗ್ಲಾದೇಶದ 5, ಇಂಗ್ಲೆಂಡ್ ನ 24, ಐರ್ಲೆಂಡ್ ನ 5, ನ್ಯೂಜಿಲ್ಯಾಂಡ್ ನ 24, ದಕ್ಷಿಣ ಆಫ್ರಿಕಾದ 33, ಶ್ರೀಲಂಕಾದ 23, ವೆಸ್ಟ್ ಇಂಡೀಸ್ ನ 34, ನಮೀಬಿಯಾದ 3, ಸ್ಕಾಟ್ಲೆಂಡ್ ನ 2, ಜಿಂಬಾಬ್ವೆ, ನೇಪಾಳ ಮತ್ತು ಯುಎಸ್ಎ ನ ತಲಾ ಓರ್ವ ಆಟಗಾರರು ಅಂತಿಮ ಲಿಸ್ಟ್ ನಲ್ಲಿದ್ದಾರೆ.