ಮುಂಬೈ: ಐಪಿಎಲ್ ಪ್ಲೇಆಫ್ಸ್ ಮತ್ತು ಫೈನಲ್ ಪಂದ್ಯವು ಪೂರ್ಣ ಸಾಮರ್ಥ್ಯದ ಪ್ರೇಕ್ಷಕರೊಂದಿಗೆ ನಡೆಯಲಿದೆ ಮತ್ತು ಮೇ ತಿಂಗಳಲ್ಲಿ ಲಕ್ನೋದಲ್ಲಿ ವನಿತೆಯರ ಚಾಲೆಂಜರ್ ಸರಣಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅಧ್ಯಕ್ಷ ಸೌರವ್ ಗಂಗೂಲಿ ದೃಢಪಡಿಸಿದ್ದಾರೆ.
ಶನಿವಾರ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಮೊದಲ ಪ್ಲೇಆಫ್ ಮತ್ತು ಎಲಿಮಿನೇಟರ್ ಪಂದ್ಯವು ಕೋಲ್ಕತದಲ್ಲಿ ಅನುಕ್ರಮವಾಗಿ ಮೇ 24 ಮತ್ತು 26ರಂದು ನಡೆಯಲಿದೆ.
ಆಬಳಿಕ ದ್ವಿತೀಯ ಪ್ಲೇಆಫ್ ಮತ್ತು ಫೈನಲ್ ಪಂದ್ಯವು ಅಹ್ಮದಾಬಾದ್‌ನಲ್ಲಿ ಅನುಕ್ರಮವಾಗಿ ಮೇ 27 ಮತ್ತು 29ರಂದು ನಡೆಯಲಿದೆ. ಈ ಎಲ್ಲ ಪಂದ್ಯಗಳ ವೇಳೆ ಪೂರ್ಣ ಸಾಮರ್ಥ್ಯದ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಇರಲಿದ್ದಾರೆ.
ವನಿತೆಯರ ಚಾಲೆಂಜರ್ ಸರಣಿಯು ಮೇ 24ರಿಂದ 28ರ ವರೆಗೆ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಗಂಗೂಲಿ ತಿಳಿಸಿದರು.
ಐಪಿಎಲ್ ನಾಕೌಟ್ ಹಂತದ ಪಂದ್ಯಗಳಿಗೆ ಸಂಬಂಧಿಸಿದಂತೆ ಈ ಪಂದ್ಯಗಳು ಕೋಲ್ಕತಾ ಮತ್ತು ಅಹ್ಮದಾಬಾದ್‌ನಲ್ಲಿ ನಡೆಯಲಿದೆ. ಪಂದ್ಯಗಳಿಗೆ ಪೂರ್ಣ ಸಾಮರ್ಥ್ಯದಲ್ಲಿ ಪ್ರೇಕ್ಷಕರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಐಪಿಎಲ್‌ನ ಲೀಗ್ ಹಂತದ ಪಂದ್ಯಗಳು ಮೇ 22ಕ್ಕೆ ಕೊನೆಗೊಳ್ಳಲಿದೆ ಎಂದವರು ತಿಳಿಸಿದರು.
ಇದೇ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ದಿನಾಂಕ ಮತ್ತು ತಾಣಗಳನ್ನು ಬಿಸಿಸಿಐ ಅಂತಿಮಗೊಳಿಸಿದೆ. ಈ ಪಂದ್ಯಗಳು ಅನುಕ್ರಮವಾಗಿ ಜೂ. 9, 12, 14, 17 ಮತ್ತು 19ರಂದು ನಡೆಯಲಿದೆ. ದಿಲ್ಲಿ, ಕಟಕ್, ವಿಶಾಖಪಟ್ಟಣ, ರಾಜ್‌ಕೋಟ್ ಮತ್ತು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.