Advertisement

ಕುಲದೀಪ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಏಕೆ ಒಲಿಯಿತು?

10:35 PM Apr 21, 2022 | Team Udayavani |

ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್‌ ಬೌಲಿಂಗ್‌ ದಾಳಿಗೆ ಪಂಜಾಬ್‌ ಕಿಂಗ್ಸ್‌ ಚೆಲ್ಲಾಪಿಲ್ಲಿಯಾಗಿ ದೊಡ್ಡ ಸೋಲನುಭವಿಸಿದ್ದು ಈಗ ಇತಿಹಾಸ. ಪಂಜಾಬ್‌ ಪತನದಲ್ಲಿ  ಬೌಲಿಂಗ್‌ ಪಾತ್ರವಿತ್ತು. ಇದರಲ್ಲಿ ಅಕ್ಷರ್‌ ಪಟೇಲ್‌ಗೆ ಅಗ್ರಸ್ಥಾನ. ಅವರು ಕೇವಲ 10 ರನ್‌ ನೀಡಿ ಲಿಯಮ್‌ ಲಿವಿಂಗ್‌ಸ್ಟೋನ್‌ ಹಾಗೂ ಟಾಪ್‌ ಸ್ಕೋರರ್‌ ಜಿತೇಶ್‌ ಶರ್ಮ ಅವರ ವಿಕೆಟ್‌ ಉಡಾಯಿಸಿ ಡೆಲ್ಲಿಗೆ ಮೇಲುಗೈ ಒದಗಿಸಿದ್ದರು.

Advertisement

ಹಾಗೆಯೇ ಖಲೀಲ್‌ ಅಹ್ಮದ್‌ (21ಕ್ಕೆ 2), ಲಲಿತ್‌ ಯಾದವ್‌ (11ಕ್ಕೆ 2) ಮತ್ತು ಕುಲದೀಪ್‌ ಯಾದವ್‌ (24ಕ್ಕೆ 2) ಕೂಡ ಘಾತಕ ಸ್ಪೆಲ್‌ ಮೂಲಕ ಪಂಜಾಬ್‌ಗ ಸಿಂಹಸ್ವಪ್ನರಾದರು. ಚೈನಾಮನ್‌ ಬೌಲರ್‌ ಕುಲದೀಪ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು. ಇದರೊಂದಿಗೆ ಡೆಲ್ಲಿಯ ಮೂರೂ ಗೆಲುವಿನ ವೇಳೆ ಕುಲದೀಪ್‌ ಅವರೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದಂತಾಯಿತು.

ಇವರಲ್ಲಿ ಅಕ್ಷರ್‌ ಪಟೇಲ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು ಎಂಬುದು ಅನೇಕರ ವಾದವಾಗಿದೆ. ಅವರು ಎರಡೂ ಬಿಗ್‌ ವಿಕೆಟ್‌ಗಳನ್ನೇ ಉರುಳಿಸಿದ್ದರು. ರನ್‌ ಕೂಡ ಕಡಿಮೆ ನೀಡಿದ್ದರು. ಇತ್ತ ಕುಲದೀಪ್‌ ಒಂದೇ ಓವರ್‌ನಲ್ಲಿ ಕಾಗಿಸೊ ರಬಾಡ ಮತ್ತು ನಥನ್‌ ಎಲ್ಲಿಸ್‌ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದ್ದರು. ಆದರೆ ಇದೇನೂ ದೊಡ್ಡ ವಿಕೆಟ್‌ ಆಗಿರಲಿಲ್ಲ. ಆದರೂ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಏಕೆ ನೀಡಲಾಯಿತು ಎಂಬ ಪ್ರಶ್ನೆ ಅನೇಕರ ತಲೆಯನ್ನು ಕೊರೆಯುತ್ತಲೇ ಇದೆ!

ಸ್ವತಃ ಕುಲದೀಪ್‌ ಯಾದವ್‌ ಕೂಡ ಇದನ್ನೇ ಹೇಳಿದ್ದಾರೆ. “ಈ ಪ್ರಶಸ್ತಿಗೆ ಅಕ್ಷರ್‌ ಪಟೇಲ್‌ ಅರ್ಹರಾಗಿದ್ದರು, ನಾನಲ್ಲ. ಅವರೊಂದಿಗೆ ನಾನಿದನ್ನು ಹಂಚಿಕೊಳ್ಳಲು ಬಯಸುತ್ತೇನೆ’ ಎಂದು ಪ್ರಶಸ್ತಿ ಸ್ವೀಕರಿಸುವ ವೇಳೆ ಕುಲದೀಪ್‌ ಕ್ರೀಡಾಸ್ಫೂರ್ತಿ ಮೆರೆದರು.

ಪಂತ್‌ ಆತ್ಮವಿಶ್ವಾಸ ತುಂಬಿದರು :

Advertisement

ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಕುಲದೀಪ್‌ ಯಾದವ್‌, ನಾಯಕ ರಿಷಭ್‌ ಪಂತ್‌ ಆತ್ಮವಿಶ್ವಾಸ ತುಂಬುತ್ತಲೇ ಇರುವುದರಿಂದ ತನ್ನಿಂದ ಇಂಥದೊಂದು ಸಾಧನೆ ದಾಖಲಾಯಿತು ಎಂದಿದ್ದಾರೆ.

“ನನಗೆ ಮಾತ್ರವಲ್ಲ, ಎಲ್ಲ ಬೌಲರ್‌ಗಳನ್ನೂ ರಿಷಭ್‌ ಪಂತ್‌ ಹುರಿದುಂಬಿಸುತ್ತಲೇ ಇರುತ್ತಾರೆ. ಇದರಿಂದ ಎಲ್ಲರಲ್ಲೂ ಭಾರೀ ಆತ್ಮವಿಶ್ವಾಸ ಮೂಡಿದೆ’ ಎಂದು ಕುಲದೀಪ್‌ ಹೇಳಿದರು. ಮುಂಬೈ ಇಂಡಿಯನ್ಸ್‌ ಎದುರಿನ ಜಯದ ವೇಳೆ ಕುಲದೀಪ್‌ 18 ರನ್ನಿಗೆ 3 ವಿಕೆಟ್‌ ಉರುಳಿಸಿದ್ದರು. ಡೆಲ್ಲಿ ಇನ್ನೊಂದು ಜಯ ಸಾಧಿಸಿದ್ದು ಕೆಕೆಆರ್‌ ವಿರುದ್ಧ. ದೊಡ್ಡ ಮೊತ್ತದ ಈ ಮೇಲಾಟದಲ್ಲಿ ಕುಲದೀಪ್‌ ಅಮೋಘ ನಿಯಂತ್ರಣ ಸಾಧಿಸಿ 35 ರನ್ನಿಗೆ 4 ವಿಕೆಟ್‌ ಉಡಾಯಿಸಿದ್ದರು. ಈ ಎರಡೂ ಸಂದರ್ಭಗಳಲ್ಲಿ “ಮ್ಯಾನ್‌ ಆಫ್ ದ ಮ್ಯಾಚ್‌’ ಗೌರವಕ್ಕೆ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next