Advertisement

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

01:16 AM May 28, 2022 | Team Udayavani |

ಅಹ್ಮದಾಬಾದ್‌:  ಬೊಂಬಾಟ್‌ ಬಟ್ಲರ್‌ ಅಮೋಘ 4ನೇ ಶತಕದ ಮೂಲಕ ಆರ್‌ಸಿಬಿಯನ್ನು 2022ನೇ ಐಪಿಎಲ್‌ನಿಂದ ಹೊರದಬ್ಬಿದ್ದಾರೆ.

Advertisement

ರಾಜಸ್ಥಾನ್‌ ರಾಯಲ್ಸ್‌ 7 ವಿಕೆಟ್‌ಗಳ ಅಮೋಘ ಜಯದೊಂದಿಗೆ ಫೈನಲ್‌ಗೆ ಲಗ್ಗೆ ಇರಿಸಿದೆ. ರವಿವಾರದ ಪ್ರಶಸ್ತಿ ಕಾಳಗದಲ್ಲಿ ಎದುರಾಗಲಿರುವ ತಂಡ ಆತಿಥೇಯ ಗುಜರಾತ್‌ ಟೈಟಾನ್ಸ್‌.

ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ 8 ವಿಕೆಟಿಗೆ ಕೇವಲ 157 ರನ್‌ ಗಳಿಸಿತು. ರಾಜಸ್ಥಾನ್‌ 18.1 ಓವರ್‌ಗಳಲ್ಲಿ 3 ವಿಕೆಟಿಗೆ 161 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಇದು ರಾಜಸ್ಥಾನ್‌ ಕಾಣುತ್ತಿರುವ ಕೇವಲ 2ನೇ ಫೈನಲ್‌. 2008ರ ಚೊಚ್ಚಲ ಕೂಟದಲ್ಲಿ ಫೈನಲ್‌ಗೆ ಲಗ್ಗೆ ಇರಿಸಿದ ಅದು ಪ್ರಶಸ್ತಿಯನ್ನೆತ್ತಿ ಮೆರೆದಿತ್ತು. ಅಂದು ಶೇನ್‌ ವಾರ್ನ್ ಸಾರಥ್ಯವಿತ್ತು.

4 ಶತಕಗಳ ಸರದಾರ
ಜಾಸ್‌ ಬಟ್ಲರ್‌ ಗಳಿಕೆ ಅಜೇಯ 106 ರನ್‌. ಇದು ಪ್ರಸಕ್ತ ಐಪಿಎಲ್‌ನಲ್ಲಿ ಬಟ್ಲರ್‌ ಬಾರಿಸಿದ 4ನೇ ಶತಕ. 60 ಎಸೆತಗಳ ಈ ಪ್ರಚಂಡ ಇನ್ನಿಂಗ್ಸ್‌ನಲ್ಲಿ ಬಟ್ಲರ್‌ ಬರೋಬ್ಬರಿ 6 ಸಿಕ್ಸರ್‌, 10 ಬೌಂಡರಿ ಬಾರಿಸಿ ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು.

ಜಾಸ್‌ ಬಟ್ಲರ್‌ ಐಪಿಎಲ್‌ ಸೀಸನ್‌ ಒಂದರಲ್ಲಿ ಅತ್ಯಧಿಕ 4 ಶತಕ ಬಾರಿಸಿದ ವಿರಾಟ್‌ ಕೊಹ್ಲಿ ದಾಖಲೆಯನ್ನು ಸರಿದೂ ಗಿಸಿದರು. ಕೊಹ್ಲಿ 2016ರಲ್ಲಿ ಈ ಸಾಧನೆ ಗೈದಿದ್ದರು. ಒಟ್ಟಾರೆಯಾಗಿ ಬಟ್ಲರ್‌ ಐಪಿಎಲ್‌ನಲ್ಲಿ ಹೊಡೆದ 5ನೇ ಶತಕ ಇದಾಗಿದೆ. ಈ ಯಾದಿಯಲ್ಲಿ ಅವರಿಗೆ ಕೊಹ್ಲಿ ಜತೆ ಜಂಟಿ ದ್ವಿತೀಯ ಸ್ಥಾನ. 6 ಸೆಂಚುರಿ ಹೊಡೆದಿರುವ ಕ್ರಿಸ್‌ ಗೇಲ್‌ ಅಗ್ರಸ್ಥಾನಿಯಾಗಿದ್ದಾರೆ. ಒಟ್ಟಾರೆಯಾಗಿ ಇದು ಐಪಿಎಲ್‌ ಪ್ಲೇ ಆಫ್‌ನಲ್ಲಿ ದಾಖಲಾದ 6ನೇ ಶತಕವಾಗಿದೆ.

Advertisement

ಆರ್‌ಸಿಬಿಗೆ ಕಡಿವಾಣ
ಅಪರೂಪಕ್ಕೆ ಟಾಸ್‌ ಗೆದ್ದ ಸಂಜು ಸ್ಯಾಮ್ಸನ್‌ ಆರ್‌ಸಿಬಿಯನ್ನು ಬ್ಯಾಟಿಂಗಿಗೆ ಇಳಿಸಿದರು. ಆದರೆ ಪ್ರಸಿದ್ಧ್ ಕೃಷ್ಣ ಮತ್ತು ಒಬೆಡ್‌ ಮೆಕಾಯ್‌ ಸೇರಿಕೊಂಡು ಬೆಂಗಳೂರು ಬ್ಯಾಟರ್‌ಗಳಿಗೆ ಬಲವಾದ ಬ್ರೇಕ್‌ ಹಾಕಿದರು.

ಲಕ್ನೋ ವಿರುದ್ಧ ಅಜೇಯ 112 ರನ್‌ ಬಾರಿಸಿದ್ದ ಪಾಟೀದಾರ್‌ ಇಲ್ಲಿ 42 ಎಸೆತ ನಿಭಾಯಿಸಿ 58 ರನ್‌ ಕೊಡುಗೆ ಸಲ್ಲಿಸಿದರು. ಸಿಡಿಸಿದ್ದು 4 ಫೋರ್‌ ಹಾಗೂ 3 ಸಿಕ್ಸರ್‌. ಇದರೊಂದಿಗೆ ಐಪಿಎಲ್‌ ಸೀಸನ್‌ ಒಂದರ ಪ್ಲೇ ಆಫ್ನಲ್ಲಿ ಅತ್ಯಧಿಕ ರನ್‌ ಗಳಿಸಿದವರ ಯಾದಿಯಲ್ಲಿ ಪಾಟೀದಾರ್‌ ದ್ವಿತೀಯ ಸ್ಥಾನಿಯಾದರು (170 ರನ್‌). ಆದರೆ ಇದು ಭಾರತೀಯನ ದಾಖಲೆ ಎಂಬುದು ಉಲ್ಲೇಖನೀಯ. 2016ರಲ್ಲಿ ಡೇವಿಡ್‌ ವಾರ್ನರ್‌ 190 ರನ್‌ ಬಾರಿಸಿದ್ದರು.

ವಿರಾಟ್‌ ಮತ್ತೆ ವಿಫ‌ಲ
ಟ್ರೆಂಟ್‌ ಬೌಲ್ಟ್ ಅವರ ಮೊದಲ ಓವರ್‌ನಲ್ಲೇ ಸಿಕ್ಸರ್‌ ಬಾರಿಸುವ ಮೂಲಕ ವಿರಾಟ್‌ ಕೊಹ್ಲಿ ಸಿಡಿಯುವ ಸೂಚನೆಯೇನೋ ನೀಡಿ ದರು. ಆದರೆ ಪ್ರಸಿದ್ಧ್ ಕೃಷ್ಣ ತಮ್ಮ ಮೊದಲ ಓವರ್‌ನಲ್ಲೇ ಆರ್‌ಸಿಬಿಯ ಮಾಜಿ ಕಪ್ತಾನ ನನ್ನು ಪೆವಿಲಿಯನ್ನಿಗೆ ಅಟ್ಟಿದರು. ಬ್ಯಾಟಿಗೆ ಸವರಿದ ಚೆಂಡು ಸುರಕ್ಷಿತವಾಗಿ ಕೀಪರ್‌ ಸ್ಯಾಮ್ಸನ್‌ ಕೈಸೇರಿತು. ಕೊಹ್ಲಿ ಗಳಿಕೆ 7 ರನ್‌.

ಕಳೆದ ಪಂದ್ಯದ ಸೆಂಚುರಿ ಹೀರೋ ರಜತ್‌ ಪಾಟೀದಾರ್‌ ಬೌಂಡರಿ ಮೂಲಕವೇ ಖಾತೆ ತೆರೆದರು. 13 ರನ್‌ ಮಾಡಿದ ವೇಳೆ ಜೀವದಾನವನ್ನೂ ಪಡೆದರು. ಕ್ಯಾಚ್‌ ಬಿಟ್ಟವರು ರಿಯಾನ್‌ ಪರಾಗ್‌.

ಎಲಿಮಿನೇಟರ್‌ ಪಂದ್ಯದಲ್ಲಿ ಖಾತೆ ತೆರೆಯದೆ “ಎಲಿಮಿನೇಟ್‌’ ಆಗಿದ್ದ ನಾಯಕ ಡು ಪ್ಲೆಸಿಸ್‌ ಇಲ್ಲಿ ಆಕರ್ಷಕ ಆರಂಭ ಪಡೆ ದರು. ಪವರ್‌ ಪ್ಲೇ ಮುಕ್ತಾಯಕ್ಕೆ ಆರ್‌ಸಿಬಿ ಒಂದು ವಿಕೆಟಿಗೆ 46 ರನ್‌ ಮಾಡಿತು. ಡು ಪ್ಲೆಸಿಸ್‌ ಹೆಚ್ಚು ಎಚ್ಚರಿಕೆಯಿಂದ ಬ್ಯಾಟ್‌ ಬೀಸಿದರೆ, ಪಾಟೀದಾರ್‌ ಕಳೆದ ಪಂದ್ಯದ ಮುಂದುವರಿದ ಭಾಗದ ಸೂಚನೆಯೊಂದನ್ನು ರವಾನಿಸಿದರು. ದ್ವಿತೀಯ ವಿಕೆಟಿಗೆ ಸರಾಗವಾಗಿ ರನ್‌ ಹರಿದುಬರತೊಡಗಿತು. ಅರ್ಧ ಹಾದಿ ಕ್ರಮಿಸುವ ವೇಳೆ ಆರ್‌ಸಿಬಿ ಸ್ಕೋರ್‌ಬೋರ್ಡ್‌ ಒಂದು ವಿಕೆಟಿಗೆ 74 ರನ್‌ ತೋರಿಸುತ್ತಿತ್ತು. ಡು ಪ್ಲೆಸಿಸ್‌-ಪಾಟೀದಾರ್‌ ಆಪಾಯಕಾರಿಯಾಗಿ ಬೆಳೆಯುವ ಸೂಚನೆ ಲಭಿಸಿತು.

ಆದರೆ 11ನೇ ಓವರ್‌ನಲ್ಲಿ ಒಬೆಡ್‌ ಮೆಕಾಯ್‌ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 27 ಎಸೆತಗಳಿಂದ 25 ರನ್‌ ಮಾಡಿದ ಡು ಪ್ಲೆಸಿಸ್‌ ಅಶ್ವಿ‌ನ್‌ಗೆ ಕ್ಯಾಚ್‌ ನೀಡಿ ವಾಪಸಾದರು. ದ್ವಿತೀಯ ವಿಕೆಟಿಗೆ 53 ಎಸೆತಗಳಿಂದ 70 ರನ್‌ ಹರಿದು ಬಂತು.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಸಿ ಸ್ಯಾಮ್ಸನ್‌ ಬಿ ಪ್ರಸಿದ್ಧ್ 7
ಫಾ ಡು ಪ್ಲೆಸಿಸ್‌ ಸಿ ಅಶ್ವಿ‌ನ್‌ ಬಿ ಮೆಕಾಯ್‌ 25
ರಜತ್‌ ಪಾಟೀದಾರ್‌ ಸಿ ಬಟ್ಲರ್‌ ಬಿ ಅಶ್ವಿ‌ನ್‌ 58
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಮೆಕಾಯ್‌ ಬಿ ಬೌಲ್ಟ್ 24
ಮಹಿಪಾಲ್‌ ಲೊನ್ರೋರ್‌ ಸಿ ಅಶ್ವಿ‌ನ್‌ ಬಿ ಮೆಕಾಯ್‌ 8
ದಿನೇಶ್‌ ಕಾರ್ತಿಕ್‌ ಸಿ ಪರಾಗ್‌ ಬಿ ಪ್ರಸಿದ್ಧ್ 6
ಶಬಾಜ್‌ ಅಹ್ಮದ್‌ ಔಟಾಗದೆ 12
ವನಿಂದು ಹಸರಂಗ ಬಿ ಪ್ರಸಿದ್ಧ್ 0
ಹರ್ಷಲ್‌ ಪಟೇಲ್‌ ಬಿ ಮೆಕಾಯ್‌ 1
ಜೋಶ್‌ ಹ್ಯಾಝಲ್‌ವುಡ್‌ ಔಟಾಗದೆ 1
ಇತರ 15
ಒಟ್ಟು (8 ವಿಕೆಟಿಗೆ) 157
ವಿಕೆಟ್‌ ಪತನ: 1-9, 2-79, 3-111, 4-130, 5-141, 6-146, 7-146, 8-154.
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 4-0-28-1
ಪ್ರಸಿದ್ಧ್ ಕೃಷ್ಣ 4-0-22-3
ಒಬೆಡ್‌ ಮೆಕಾಯ್‌ 4-0-23-3
ಆರ್‌. ಅಶ್ವಿ‌ನ್‌ 4-0-31-1
ಯಜುವೇಂದ್ರ ಚಹಲ್‌ 4-0-45-0
ರಾಜಸ್ಥಾನ್‌ ರಾಯಲ್ಸ್‌
ಯಶಸ್ವಿ ಜೈಸ್ವಾಲ್‌ ಸಿ ಕೊಹ್ಲಿ ಬಿ ಹ್ಯಾಝಲ್‌ವುಡ್‌ 21
ಜಾಸ್‌ ಬಟ್ಲರ್‌ ಔಟಾಗದೆ 106
ಸಂಜು ಸ್ಯಾಮ್ಸನ್‌ ಸ್ಟಂಪ್ಡ್ ಕಾರ್ತಿಕ್‌ ಬಿ ಹಸರಂಗ 23
ದೇವದತ್ತ ಪಡಿಕ್ಕಲ್‌ ಸಿ ಕಾರ್ತಿಕ್‌ ಬಿ ಹ್ಯಾಝಲ್‌ವುಡ್‌ 9
ಶಿಮ್ರನ್‌ ಹೆಟ್‌ಮೈರ್‌ ಔಟಾಗದೆ 2
ಇತರ 0
ಒಟ್ಟು (18.1 ಓವರ್‌ಗಳಲ್ಲಿ 3 ವಿಕೆಟಿಗೆ) 161
ವಿಕೆಟ್‌ ಪತನ: 1-61, 2-113, 3-148.
ಬೌಲಿಂಗ್‌:
ಮೊಹಮ್ಮದ್‌ ಸಿರಾಜ್‌ 2-0-31-0
ಜೋಶ್‌ ಹ್ಯಾಝಲ್‌ವುಡ್‌ 4-0-23-2
ಗ್ಲೆನ್‌ ಮ್ಯಾಕ್ಸ್‌ವೆಲ್‌ 3-0-17-0
ಶಬಾಜ್‌ ಅಹ್ಮದ್‌ 2-0-35-0
ಹರ್ಷಲ್‌ ಪಟೇಲ್‌ 3.1-0-29-0
ವನಿಂದು ಹಸರಂಗ 4-0-26-1
ಪಂದ್ಯಶ್ರೇಷ್ಠ: ಜಾಸ್‌ ಬಟ್ಲರ್‌

Advertisement

Udayavani is now on Telegram. Click here to join our channel and stay updated with the latest news.

Next