Advertisement

ಗುಜರಾತ್‌: ಪ್ಲೇ ಆಫ್ಗೆ ಒಂದೇ ಮೆಟ್ಟಿಲು

10:19 PM May 05, 2022 | Team Udayavani |

ಮುಂಬಯಿ: ಟೇಬಲ್‌ ಟಾಪರ್‌ ಗುಜರಾತ್‌ ಟೈಟಾನ್ಸ್‌ ಮೊನ್ನೆ ಅಪರೂಪದ ಸೋಲನುಭವಿಸಿದೆ. ಪಂಜಾಬ್‌ ವಿರುದ್ಧ ಎಡವಿದೆ. ಮುಖ್ಯ ಕಾರಣ, ಬ್ಯಾಟಿಂಗ್‌ ವೈಫ‌ಲ್ಯ. ಈ ಸೋಲಿನಿಂದ ಹಾರ್ದಿಕ್‌ ಪಾಂಡ್ಯ ಪಡೆಯ ಪ್ಲೇ ಆಫ್

Advertisement

ರೇಸ್‌ಗೆ ಯಾವುದೇ ಅಡ್ಡಿಯಾಗಿಲ್ಲ. ಆದರೆ ಮುಂದುವರಿ ದಂತೆ ಸವಾಲು ಕಠಿನಗೊಳ್ಳುವುದರಿಂದ ಬ್ಯಾಟಿಂಗ್‌ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಿಕೊಳ್ಳಬೇಕಿದೆ. ಶುಕ್ರವಾರ ಮುಂಬೈ ಇಂಡಿಯನ್ಸ್‌ ವಿರುದ್ಧದ ಮುಖಾಮುಖೀಯಲ್ಲಿ ಗುಜರಾತ್‌ ಈ ನಿಟ್ಟಿನಲ್ಲಿ ಹೋರಾಟ ನಡೆಸಬೇಕಿದೆ.

ಇನ್ನೊಂದೆಡೆ ಮುಂಬೈ ಇಂಡಿಯನ್ಸ್‌ನ ಕತೆ ಮುಗಿದಿದೆ. ಆದರೆ ಅಧಿಕೃತವಲ್ಲ. ಈ ಬಾರಿ 10 ತಂಡಗಳಿರುವುದರಿಂದ 18 ಅಂಕ ಗಳಿಸದ ಹೊರತು ಯಾವುದೇ ತಂಡದ ಪ್ಲೇ ಆಫ್ ಪ್ರವೇಶ ಅಧಿಕೃತಗೊಳ್ಳದು. ಹಾಗೆಯೇ 3-4ನೇ ಸ್ಥಾನದಲ್ಲಿರುವ ತಂಡಗಳ ಅಂಕ 14ಕ್ಕೆ ಏರುವ ತನಕ ಮುಂಬೈ, ಚೆನ್ನೈ ನಿರ್ಗಮನವೂ ಅಧಿಕೃತವಾಗುವುದಿಲ್ಲ ಎಂಬುದೊಂದು ಲೆಕ್ಕಾಚಾರ. ಆದರೆ ಗುಜರಾತ್‌ ವಿರುದ್ಧ ಎಡವಿದರೆ ಮುಂಬೈ ನಿರ್ಗಮನ ಅಧಿಕೃತಗೊಳ್ಳಲಿದೆ.

ಹಾಗೆಯೇ ಗುಜರಾತ್‌ ಟೈಟಾನ್ಸ್‌ ಜಯ ಸಾಧಿಸಿದರೆ 2022ರ ಐಪಿಎಲ್‌ನಲ್ಲಿ ಪ್ಲೇ ಆಫ್ಗೆ ಲಗ್ಗೆ ಇರಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ.

ಅಸಾಮಾನ್ಯ ಸಾಧನೆ :

Advertisement

ನಿಜಕ್ಕಾದರೆ ಗುಜರಾತ್‌ ಈ ಬಾರಿಯ ಲಕ್ಕಿ ಟೀಮ್‌. ಟೀಮ್‌ ಇಂಡಿಯಾದಿಂದ ಬೇರ್ಪಟ್ಟ ಹಾಗೂ ಕ್ಯಾಪ್ಟನ್ಸಿ ಮೆಟಿರಿಯಲ್ಲೇ ಅಲ್ಲದ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್‌ ಪಡೆ ಮೊದಲ ಪ್ರಯತ್ನದಲ್ಲೇ ತೋರ್ಪಡಿಸಿದ ಸಾಧನೆ ಅಸಾಮಾನ್ಯ. ಹತ್ತರಲ್ಲಿ 8 ಪಂದ್ಯ ಗೆದ್ದ ಹೆಗ್ಗಳಿಕೆ ಈ ತಂಡದ್ದು. ಈ 8 ಜಯ ಮೊದಲ 9 ಪಂದ್ಯಗಳಲ್ಲೇ ಒಲಿದಿತ್ತು ಎಂಬುದನ್ನು ಮರೆಯುವಂತಿಲ್ಲ.

ಆದರೆ ಕಳೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಅನುಭವಿಸಿದ 8 ವಿಕೆಟ್‌ ಸೋಲು ಗುಜರಾತ್‌ಗೆ ಭಾರೀ ಆಘಾತವಿಕ್ಕಿದೆ. ಅಗ್ರಸ್ಥಾನಿ ತಂಡ ಎಲ್ಲ ವಿಭಾಗಗಳಲ್ಲೂ ಹಿನ್ನಡೆ ಕಂಡಿತ್ತು. ಗಳಿಸಲು ಸಾಧ್ಯವಾದದ್ದು 143 ರನ್‌ ಮಾತ್ರ. ಇದರಲ್ಲಿ ಸಾಯಿ ಸುದರ್ಶನ್‌ ಒಬ್ಬರದೇ ಅಜೇಯ 65 ರನ್‌ ಕೊಡುಗೆ. ಉರುಳಿಸಿದ್ದು ಬರೀ 2 ವಿಕೆಟ್‌. ಕಾಗಿಸೊ ರಬಾಡ ವೇಗಕ್ಕೆ ಗುಜರಾತ್‌ ಅಕ್ಷರಶಃ ನಡುಗಿತ್ತು. ಸಾಹಾ, ಗಿಲ್‌, ಪಾಂಡ್ಯ, ಮಿಲ್ಲರ್‌, ತೆವಾಟಿಯ, ರಶೀದ್‌ ಖಾನ್‌… ಎಲ್ಲರೂ ಬ್ಯಾಟಿಂಗ್‌ ವೈಫ‌ಲ್ಯಕ್ಕೀಡಾಗಿದ್ದರು. ಕೂಟದಲ್ಲಿ 309 ರನ್‌ ಪೇರಿಸಿರುವ ಹಾರ್ದಿಕ್‌ ಪಾಂಡ್ಯ ಸತತ 2 ಪಂದ್ಯಗಳಲ್ಲಿ ವಿಫ‌ಲರಾಗಿರುವುದು ಯೋಚಿಸಬೇಕಾದ ಸಂಗತಿ.

ಪ್ರತಿಷ್ಠೆಯ ಪಂದ್ಯ :

ಮುಂಬೈ ಇಂಡಿಯನ್ಸ್‌ ಪಾಲಿಗೆ ಉಳಿದಿರುವುದೆಲ್ಲ ಪ್ರತಿಷ್ಠೆಯ ಪಂದ್ಯಗಳು. ಉಳಿದ ಆರರಲ್ಲಿ ಸಾಧ್ಯವಾದಷ್ಟು ಪಂದ್ಯಗಳನ್ನು ಗೆದ್ದು ಮರ್ಯಾದೆ ಉಳಿಸಿಕೊಳ್ಳುವುದೊಂದೇ ರೋಹಿತ್‌ ಪಡೆಯ ಮುಂದಿರುವ ದಾರಿ.

9ನೇ ಪಂದ್ಯದಲ್ಲಿ ಮೊದಲ ಗೆಲುವಿನ ಸವಿ ಅನುಭವಿಸಿದ ಬಳಿಕ ಮುಂಬೈ ಆಡುತ್ತಿರುವ ಮೊದಲ ಪಂದ್ಯವಿದು. ಸತತ ಸೋಲುಂಡ ಬಳಿಕ ನಿರಂತರವಾಗಿ ಗೆದ್ದ ಎಷ್ಟೋ ನಿದರ್ಶನಗಳು ಮುಂಬೈ ಮುಂದಿವೆ. ಇಲ್ಲಿಯೂ ಇಂಥದೊಂದು ಸಾಧ್ಯತೆ ತೆರೆದುಕೊಳ್ಳಬಾರದೇಕೆ? ಕುತೂಹಲ ಸಹಜ. ಇದರಿಂದ ಟೀಮ್‌ ಇಂಡಿಯಾಕ್ಕೂ ಲಾಭವಿದೆ. ಏಕೆಂದರೆ, ಭಾರತ ತಂಡದಲ್ಲಿರುವ ಮುಂಬೈ ಇಂಡಿಯನ್ಸ್‌ನ ಬಹುತೇಕ ಆಟಗಾರರು ಘೋರ ವೈಫ‌ಲ್ಯ ಕಂಡಿದ್ದಾರೆ. ರೋಹಿತ್‌ ಶರ್ಮ, ಇಶಾನ್‌ ಕಿಶನ್‌, ಜಸ್‌ಪ್ರೀತ್‌ ಬುಮ್ರಾ ಇವರಲ್ಲಿ ಪ್ರಮುಖರು. ಕನಿಷ್ಠ ಈ ಮೂವರು ಫಾರ್ಮ್ಗೆ ಮರಳಲಿ ಎಂಬುದು ಅಭಿಮಾನಿಗಳ ಹಾರೈಕೆ.

Advertisement

Udayavani is now on Telegram. Click here to join our channel and stay updated with the latest news.

Next