ಮುಂಬಯಿ: ಈ ಬಾರಿಯ ಐಪಿಎಲ್‌ನಲ್ಲಿ ಸತತ ಐದು ಗೆಲುವಿನ ಬಳಿಕ ಸನ್‌ರೈಸರ್ ಹೈದರಾಬಾದ್ ತಂಡವು ಇದೀಗ ಸತತವಾಗಿ ಮೂರು ಪಂದ್ಯಗಳಲ್ಲಿ ಸೋತಿದೆ.
ಗುರುವಾರ ನಡೆದ ಪಂದ್ಯದಲ್ಲಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 21 ರನ್ನುಗಳಿಂದ ಸೋತಿದೆ. ಡೆಲ್ಲಿಯ 208 ರನ್ನಿಗೆ ಉತ್ತರವಾಗಿ ಹೈದರಾಬಾದ್ 8 ವಿಕೆಟಿಗೆ 186 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಗಿತ್ತು.
ಈ ಸೋಲಿನಿಂದ ನಾವು ಒತ್ತಡಕ್ಕೆ ಒಳಗಾಗಿದ್ದೇವೆ ಎಂದು ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.
ಡೆಲ್ಲಿಯ ಆಟಗಾರರಾದ ಡೇವಿಡ್ ವಾರ್ನರ್ (92 ಔಟಾಗದೆ) ಮತ್ತು ಪೊವೆಲ್ 67 ಔಟಾಗದೆ) ಅವರ ಬ್ಯಾಟಿಂಗ್ ವೈಭವಕ್ಕೆ ವಿಲಿಯಮ್ಸನ್ ಮೆಚ್ಚುಗೆ ಸೂಚಿಸಿದ್ದಾರೆ. ಅವರಿಬ್ಬರ ನಡುವಣ ಜತೆಯಾಟವು ಪಂದ್ಯದ ಗತಿಯನ್ನು ಬದಲಾಯಿಸಲು ಕಾರಣವಾಯಿತು ಎಂದು ತಿಳಿಸಿದ ಅವರು ಡೆಲ್ಲಿ ತಂಡವು ಬೃಹತ್ ಮೊತ್ತ ಪೇರಿಸಿತು ಎಂದರು.
ಡೆಲ್ಲಿಯ ಬೃಹತ್ ಮೊತ್ತಕ್ಕೆ ಉತ್ತರವಾಗಿ ನಾಯಕ ಸೇರಿದಂತೆ ನಮ್ಮ ಅಗ್ರ ಕ್ರಮಾಂಕದ ಆಟಗಾರರು ಉತ್ತಮವಾಗಿ ಆಡಲು ವಿಫಲರಾದರು. ಆದರೆ ಐಡೆನ್ ಮಾರ್ಕ್‌ರಮ್ ಮತ್ತು ನಿಕೋಲಾಸ್ ಪೂರಣ್ ಅವರ ಉತ್ತಮ ನಿರ್ವಹಣೆಯಿಂದಾಗಿ ತೀವ್ರ ಪೈಪೋಟಿ ನೀಡಲು ಸಾಧ್ಯವಾಯಿತು. ಅವರಿಬ್ಬರ ಆಟ ನೋಡಿದಾಗ ಗೆಲುವಿನ ಆಸೆ ಚಿಗುರಿತ್ತು. ಆದರೆ ಆ ಜೋಡಿ ಮುರಿಯುತ್ತಲೇ ಸೋಲು ಖಚಿತವಾಯಿತು ಎಂದು ವಿಲಿಯಮ್ಸನ್ ತಿಳಿಸಿದರು.
ತನ್ನ ಫಾರ್ಮ್ ಬಗ್ಗೆ ಮಾತನಾಡಿದ ವಿಲಿಯಮ್ಸನ್ ಅವರು ನಾವು ಹೆಚ್ಚಿನ ರನ್ ಗಳಿಸಬೇಕಾದ ಅಗತ್ಯವಿದೆ. ತಂಡ ಉತ್ತಮ ನಿರ್ವಹಣೆ ನೀಡುವಂತಾಗಲು ಇನ್ನಷ್ಟು ಶ್ರೇಷ್ಠ ಆಟ ನೀಡಲು ಪ್ರಯತ್ನಿಸುವೆ ಎಂದು ವಿಲಿಯಮ್ಸನ್ ಹೇಳಿದರು. ಈ ಐಪಿಎಲ್‌ನಲ್ಲಿ ಆಡಿದ 10 ಪಂದ್ಯಗಳಿಂದ ಅವರು ಕೇವಲ 199 ರನ್ ಗಳಿಸಿದ್ದಾರೆ.