Advertisement

ಆರ್‌ಸಿಬಿಗೆ ಸರ್ವಾಂಗೀಣ ಯಶಸ್ಸು, ಡೆಲ್ಲಿಗೆ ಮತ್ತೆ ಸೋಲು

11:38 PM Apr 16, 2022 | Team Udayavani |

ಮುಂಬೈ: ಮೊದಲು ಗ್ಲೆನ್‌ ಮ್ಯಾಕ್ಸ್‌ವೆಲ್‌, ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ನೆರವು ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಶನಿವಾರ ರಾತ್ರಿಯ ಐಪಿಎಲ್‌ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆಲುವು ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟಿಗೆ 189 ರನ್‌ ಪೇರಿಸಿತು. ಇದನ್ನು ಬೆನ್ನಟ್ಟಿದ ಡೆಲ್ಲಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 173 ರನ್‌ ಗಳಿಸಿತು. ಈ ಜಯದ ಮೂಲಕ ಬೆಂಗಳೂರು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ಸೋತ ಡೆಲ್ಲಿ 8ನೇ ಸ್ಥಾನದಲ್ಲೇ ಉಳಿಯಿತು.

ರನ್‌ ಬೆನ್ನತ್ತಿ ಹೊರಟ ಡೆಲ್ಲಿಗೆ ನೆರವಾಗಿದ್ದು ಆರಂಭಿಕ ಡೇವಿಡ್‌ ವಾರ್ನರ್‌. ಅವರು 38 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ ಸಹಿತ 66 ರನ್‌ ಚಚ್ಚಿದರು. ಇವರನ್ನು ಹೊರತುಪಡಿಸಿದರೆ ನಾಯಕ ರಿಷಭ್‌ ಪಂತ್‌ 34 ರನ್‌ ಗಳಿಸಿದರು. ಉಳಿದಂತೆ ಡೆಲ್ಲಿ ಬ್ಯಾಟಿಂಗ್‌ನದ್ದು ದಯನೀಯ ವೈಫ‌ಲ್ಯ. ಬೆಂಗಳೂರು ಪರ ಜೋಶ್‌ ಹೇಝಲ್‌ವುಡ್‌ (28ಕ್ಕೆ 3), ಮೊಹಮ್ಮದ್‌ ಸಿರಾಜ್‌ (31ಕ್ಕೆ 2) ಉತ್ತಮ ಬೌಲಿಂಗ್‌ ನಡೆಸಿದರು.

ಬೆಂಗಳೂರಿಗೆ ಕಾರ್ತಿಕ್‌, ಮ್ಯಾಕ್ಸಿ ನೆರವು: ಮೊದಲು ಬ್ಯಾಟಿಂಗ್‌ಗಿಳಿದು ರನ್‌ ಪರದಾಟ ನಡೆಸುತ್ತಿದ್ದ ಬೆಂಗಳೂರಿಗೆ ಆರಂಭದಲ್ಲಿ ಮ್ಯಾಕ್ಸ್‌ವೆಲ್‌ ಆಧಾರವಾದರು. ಬಳಿಕ ದಿನೇಶ್‌ ಕಾರ್ತಿಕ್‌ ಸ್ಫೋಟಕ ಆಟವಾಡಿ ಡೆಲ್ಲಿಯನ್ನು ಕಾಡಿದರು. ಇಬ್ಬರಿಂದಲೂ ಅರ್ಧಶತಕ ದಾಖಲಾಯಿತು.

ದಿನೇಶ್‌ ಕಾರ್ತಿಕ್‌ ಮತ್ತು ಶಹಬಾಜ್‌ ಅಹ್ಮದ್‌ ಡೆತ್‌ ಓವರ್‌ ವೇಳೆ ಕ್ರೀಸ್‌ನಲ್ಲಿದ್ದುರಿಂದ ಆರ್‌ಸಿಬಿ ಸವಾಲಿನ ಮೊತ್ತದ ನಿರೀಕ್ಷೆಯಲ್ಲಿತ್ತು. ಇದು ಹುಸಿಯಾಗಲಿಲ್ಲ. ಕಾರ್ತಿಕ್‌ ಈ ಋತುವಿನಲ್ಲಿ ಕ್ರೀಸ್‌ಗಿಳಿಯುವ ಮುನ್ನವೇ ಡೆತ್‌ ಓವರ್‌ಗಳಲ್ಲಿ 41 ಎಸೆತಗಳಿಂದ 87 ರನ್‌ ಬಾರಿಸಿದ ಜೋಶ್‌ನಲ್ಲಿದ್ದರು (7 ಸಿಕ್ಸರ್‌, 7 ಫೋರ್‌). ಇಲ್ಲಿಯೂ ಇದೇ ಅಬ್ಬರವನ್ನು ಮುಂದುವರಿಸಿದರು. ಮುಸ್ತಫಿಜುರ್‌ ಅವರ 18ನೇ ಓವರ್‌ನಲ್ಲಿ 28 ರನ್‌ ಸೂರೆಗೈದರು. 4 ಫೋರ್‌, 2 ಸಿಕ್ಸರ್‌ ಸಿಡಿಸಿ ಭರ್ಜರಿ ರಂಜನೆ ಒದಗಿಸಿದರು. 26 ಎಸೆತಗಳಲ್ಲಿ ಕಾರ್ತಿಕ್‌ ಅವರ ಅರ್ಧಶತಕ ಪೂರ್ತಿಗೊಂಡಿತು.

Advertisement

ಕಾರ್ತಿಕ್‌ ಒಟ್ಟು 34 ಎಸೆತಗಳಿಂದ ಅಜೇಯ 66 ರನ್‌ . ಈ ಆಕರ್ಷಕ ಬ್ಯಾಟಿಂಗ್‌ ವೇಳೆ 5 ಸಿಕ್ಸರ್‌, 5 ಬೌಂಡರಿ ಬಾರಿಸಿದರು. ಅವರಿಗೆ ಶಹಬಾಜ್‌ ಅಹ್ಮದ್‌ ಅಮೋಘ ಬೆಂಬಲವಿತ್ತರು. ಈ ಜೋಡಿ ಮುರಿಯದ 6ನೇ ವಿಕೆಟಿಗೆ 52 ಎಸೆತಗಳಿಂದ 97 ರನ್‌ ಪೇರಿಸಿತು. ಶಹಬಾಜ್‌ ಕೊಡುಗೆ ಅಜೇಯ 32 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸರ್‌). ಇವರಿಬ್ಬರ ಬ್ಯಾಟಿಂಗ್‌ ಸಾಹಸದಿಂದ ಡೆತ್‌ ಓವರ್‌ಗಳಲ್ಲಿ ಆರ್‌ಸಿಬಿ 74 ರನ್‌ ಒಟ್ಟುಗೂಡಿಸಿತು. ಇದು 6ನೇ ವಿಕೆಟಿಗೆ ದಾಖಲಾದ 3ನೇ ಅತೀ ದೊಡ್ಡ ಜತೆಯಾಟ.

ಆರಂಭಿಕ ವೈಫ‌ಲ್ಯ: ಆರ್‌ಸಿಬಿ ಆರಂಭಿಕ ಜೋಡಿ ಮತ್ತೆ ವೈಫ‌ಲ್ಯ ಕಂಡಿತು. ಅನುಜ್‌ ರಾವತ್‌ ಖಾತೆ ತೆರೆಯದೆ ನಿರ್ಗಮಿಸಿದರೆ, ನಾಯಕ ಫಾ ಡು ಪ್ಲೆಸಿಸ್‌ ಎಂಟೇ ರನ್ನಿಗೆ ಆಟ ಮುಗಿಸಿದರು. ಅನುಜ್‌ ಅವರದು ಶೂನ್ಯಕ್ಕೆ ಔಟಾದ ಸಂಕಟ. ಶಾರ್ದೂಲ್ ಠಾಕೂರ್ ಅವರ ಮೊದಲ ಎಸೆತವನ್ನೇ ಕಾಲಿನ ಮೇಲೆಳೆದುಕೊಂಡು ಲೆಗ್‌ ಬಿಫೋರ್‌ ಆದರು. ಡು ಪ್ಲೆಸಿಸ್‌ 2 ಬೌಂಡರಿ ಬಾರಿಸಿ ಸಿಡಿಯುವ ಸೂಚನೆ ನೀಡಿದರೂ ಯಶಸ್ಸು ಕಾಣಲಿಲ್ಲ. ಪವರ್‌ ಪ್ಲೇ ಅವಧಿಯಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡ ಆರ್‌ಸಿಬಿ 40 ರನ್‌ ಮಾಡಿತ್ತು.

ಮಾಜಿ ಕಪ್ತಾನ ವಿರಾಟ್‌ ಕೊಹ್ಲಿ ಅವರದು ಮತ್ತೊಂದು ವಿಫ‌ಲ ಆಟ. ಈ ಬಾರಿ ರನೌಟ್‌ ಸಂಕಟ. ಒಂಟಿ ರನ್ನಿಗೆ ಪ್ರಯತ್ನಿಸಿದ ಕೊಹ್ಲಿಗೆ ಮ್ಯಾಕ್ಸ್‌ವೆಲ್‌ ತಡೆದಾಗ ಅನಾಹುತ ಸಂಭವಿಸಿ ಆಗಿತ್ತು. ಲಲಿತ್‌ ಯಾದವ್‌ ಅವರ ನೇರಎಸೆತ ಒಂದು ಕೊಹ್ಲಿ ಅವರನ್ನು ವಂಚಿಸಿತು.

ಈ ನಡುವೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದರು. ಕುಲದೀಪ್‌ ಯಾದವ್‌ ಅವರ ಒಂದೇ ಓವರ್‌ನಲ್ಲಿ 23 ರನ್‌ ಬಾರಿಸಿ ಡೆಲ್ಲಿಗೆ ಅಪಾಯದ ಸೂಚನೆಯಿತ್ತರು. ಆದರೆ ಸುಯಶ್‌ ಪ್ರಭುದೇಸಾಯಿ ಯಶಸ್ಸು ಕಾಣಲಿಲ್ಲ. ಕೇವಲ 6 ರನ್‌ ಮಾಡಿ ಅಕ್ಷರ್‌ ಪಟೇಲ್‌ ಸ್ಪಿನ್‌ ಮೋಡಿಗೆ ಸಿಲುಕಿದರು. 10 ಓವರ್‌ ಅಂತ್ಯಕ್ಕೆ ಆರ್‌ಸಿಬಿ ಸ್ಕೋರ್‌ 4ಕ್ಕೆ 82 ರನ್‌ ಆಗಿತ್ತು.

ಅರ್ಧಹಾದಿ ಕ್ರಮಿಸಿದೊಡನೆಯೇ ಮ್ಯಾಕ್ಸ್‌ವೆಲ್‌ (55 ರನ್‌, 34 ಎಸೆತ, 7 ಬೌಂಡರಿ, 2 ಸಿಕ್ಸರ್‌) ವಿಕೆಟ್‌ ಬಿತ್ತು. ಕುಲದೀಪ್‌ ಯಾದವ್‌ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಲಲಿತ್‌ ಯಾದವ್‌ ಸೊಗಸಾದ ಕ್ಯಾಚ್‌ ಪಡೆದು ಮ್ಯಾಕ್ಸಿಯನ್ನು ವಾಪಸ್‌ ಕಳುಹಿಸಿದರು. ನೂರರೊಳಗೆ ಆರ್‌ಸಿಬಿಯ 5 ವಿಕೆಟ್‌ ಬಿತ್ತು. 15 ಓವರ್‌ ಮುಕ್ತಾಯದ ವೇಳೆ ಸ್ಕೋರ್‌ 5ಕ್ಕೆ 115 ರನ್‌ ಆಗಿತ್ತು.

ಹರ್ಷಲ್‌ ಪಟೇಲ್‌ ಆಗಮನ: ಆರ್‌ಸಿಬಿಯ ಡೆತ್‌ ಓವರ್‌ ತಜ್ಞ ಹರ್ಷಲ್‌ ಪಟೇಲ್‌ ಈ ಪಂದ್ಯದ ಮೂಲಕ ತಂಡವನ್ನು ಕೂಡಿಕೊಂಡರು. ಇವರಿಗಾಗಿ ಜಾಗ ಬಿಟ್ಟವರು ಆಕಾಶ್‌ದೀಪ್‌. ಡೆಲ್ಲಿ ಕ್ಯಾಪಿಟಲ್ಸ್‌ ಆಸೀಸ್‌ ಕ್ರಿಕೆಟರ್‌ ಮಿಚೆಲ್‌ ಮಾರ್ಷ್‌ ಅವರಿಗೆ ಅವಕಾಶ ನೀಡಿತು. ಇದು ಪ್ರಸಕ್ತ ಋತುವಿನಲ್ಲಿ ಅವರ ಮೊದಲ ಪಂದ್ಯ. ಸಫ‌ìರಾಜ್‌ ಖಾನ್‌ ಹೊರಗುಳಿದರು.

ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು 20 ಓವರ್‌, 189/5 (ದಿನೇಶ್‌ ಕಾರ್ತಿಕ್‌ 66, ಗ್ಲೆನ್‌ ಮ್ಯಾಕ್ಸ್‌ವೆಲ್‌ 55, ಶಾರ್ದೂಲ್ ಠಾಕೂರ್ 27ಕ್ಕೆ 1). ಡೆಲ್ಲಿ 20 ಓವರ್‌, 173/7 (ಡೇವಿಡ್‌ ವಾರ್ನರ್‌ 66, ಹೇಝಲ್‌ವುಡ್‌ 28ಕ್ಕೆ 3, ಸಿರಾಜ್‌ 31ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next