Advertisement

IPL 2021 : KKR ತಂಡವನ್ನು ಮಣಿಸಿ ಕೊನೆಯ ಸ್ಥಾನದಿಂದ ಮೇಲೇರಿದ ರಾಜಸ್ಥಾನ

11:37 PM Apr 24, 2021 | Team Udayavani |

ಮುಂಬಯಿ : ಬ್ಯಾಟಿಂಗಿಗೆ ಸಹಕರಿಸುವ “ವಾಂಖೇಡೆ’ ಅಂಗಳದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡ ವನ್ನು ಸಾಮಾನ್ಯ ಮೊತ್ತಕ್ಕೆ ಕಟ್ಟಿಹಾಕಿದ ರಾಜಸ್ಥಾನ್‌ ರಾಯಲ್ಸ್‌ ಎರಡನೇ ವಿಜಯೋತ್ಸವ ಆಚರಿಸಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದ ಅವಮಾನದಿಂದ ಪಾರಾಗಿ ಆರಕ್ಕೇರಿದೆ. ಕೊನೆಯ ಸ್ಥಾನವೀಗ ಮಾರ್ಗನ್‌ ತಂಡದ್ದಾಗಿದೆ.

Advertisement

ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ಗೆ ಗಳಿಸಲು ಸಾಧ್ಯವಾದದ್ದು 9 ವಿಕೆಟಿಗೆ ಕೇವಲ 133 ರನ್‌ ಮಾತ್ರ. ರಾಜಸ್ಥಾನ್‌ 18.5 ಓವರ್‌ಗಳಲ್ಲಿ 4 ವಿಕೆಟಿಗೆ 134 ರನ್‌ ಬಾರಿಸಿ ಗೆಲುವು ಸಾಧಿಸಿತು.

ಚೇಸಿಂಗ್‌ ವೇಳೆ ರಾಜಸ್ಥಾನ್‌ ರಾಯಲ್ಸ್‌ಗೆ ನಾಯಕ ಸಂಜು ಸ್ಯಾಮ್ಸನ್‌ ಆಸರೆಯಾಗಿ ನಿಂತರು. ಅವರು ಪಂದ್ಯದಲ್ಲೇ ಸರ್ವಾಧಿಕ 42 ರನ್‌ ಹೊಡೆದರು. ಇವರೊಂದಿಗೆ ಡೇವಿಡ್‌ ಮಿಲ್ಲರ್‌ 24 ರನ್‌ ಮಾಡಿ ಔಟಾಗದೆ ಉಳಿದರು. ಆದರೆ ಜಾಸ್‌ ಬಟ್ಲರ್‌ ಅವರನ್ನು (5) ತಂಡ ಬೇಗ ಕಳೆದುಕೊಂಡಿತು. ಈ ಕೂಟದಲ್ಲಿ ಮೊದಲ ಪಂದ್ಯವಾಡಿದ ಯಶಸ್ವಿ ಜೈಸ್ವಾಲ್‌ ಮತ್ತು ಶಿವಂ ದುಬೆ ತಲಾ 22 ರನ್‌ ಮಾಡಿದರು. ಕೆಕೆಆರ್‌ ಬೌಲರ್ಗೆ ತಿರುಗೇಟು ನೀಡಲು ಸಾಧ್ಯವಾಗಲಿಲ್ಲ.

ಚಡಪಡಿಸಿದ ಕೋಲ್ಕತಾ

ನುಗ್ಗಿ ಬೀಸುವ ಆಟಗಾರರನ್ನು ಹೊಂದಿಯೂ ಕೆಕೆಆರ್‌ ಪವರ್‌ ಪ್ಲೇ ಅವಧಿಯಲ್ಲಿ ಕೇವಲ 25 ರನ್‌ ಮಾಡಿ ಚಡಪಡಿಸಿತು. ಅದರಲ್ಲೂ ಶುಭಮನ್‌ ಗಿಲ್‌ ಅವರ ಬಹುಮೂಲ್ಯ ವಿಕೆಟ್‌ ಉರುಳಿತ್ತು. ಗಿಲ್‌ ಕೇವಲ 11 ರನ್‌ ಮಾಡಿ ರನೌಟ್‌ ಆದರು. ಎರಡು ರನ್‌ ಮಾಡಿದ ವೇಳೆ ಲಭಿಸಿದ ಜೀವದಾನದ ಲಾಭವೆತ್ತಲು ಅವರಿಗೆ ಸಾಧ್ಯವಾಗಲಿಲ್ಲ. ಉನಾದ್ಕತ್‌, ಸಕಾರಿಯಾ, ಮುಸ್ತಫಿಜುರ್‌ ಮತ್ತು ಮಾರಿಸ್‌ ಮೊದಲ 6 ಓವರ್‌ಗಳಲ್ಲಿ ಉತ್ತಮ ಬೌಲಿಂಗ್‌ ನಿಯಂತ್ರಣ ಸಾಧಿಸಿದರು. ಇವರೆಸೆದ ಮೊದಲ 32 ಎಸೆತಗಳಲ್ಲಿ 21 ಡಾಟ್‌ ಬಾಲ್‌ ಆಗಿತ್ತು.

Advertisement

ವನ್‌ಡೌನ್‌ನಲ್ಲಿ ಬಂದ ರಾಹುಲ್‌ ತ್ರಿಪಾಠಿ ಬ್ಯಾಟಿಂಗ್‌ ಕೂಡ ನಿಧಾನ ಗತಿಯಿಂದ ಕೂಡಿತ್ತು. ಮತ್ತೋರ್ವ ಆರಂಭಕಾರ ನಿತೀಶ್‌ ರಾಣಾ ತುಸು ವೇಗ ಗಳಿಸಿದರೂ 22ರ ಗಡಿಯಲ್ಲಿ ಸಕಾರಿಯಾ ಮೋಡಿಗೆ ಸಿಲುಕಿದರು. 25 ಎಸೆತಗಳ ಈ ಚುಟುಕು ಆಟದಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. ದ್ವಿತೀಯ ವಿಕೆಟಿಗೆ 15 ಎಸೆತಗಳಿಂದ ಕೇವಲ 21 ರನ್‌ ಒಟ್ಟುಗೂಡಿತು.
ನಾಯಕ ಮಾರ್ಗನ್‌ಗಿಂತ ಮೊದಲೇ ಬ್ಯಾಟ್‌ ಹಿಡಿದು ಬಂದರೂ ಸುನೀಲ್‌ ನಾರಾಯಣ್‌ ಮತ್ತೆ ವೈಫ‌ಲ್ಯ ಕಂಡರು. ಕೇವಲ 6 ರನ್‌ ಮಾಡಿ ವಾಪಸಾದರು. 10 ಓವರ್‌ ಅಂತ್ಯಕ್ಕೆ ಕೆಕೆಆರ್‌ ಸ್ಕೋರ್‌ 3ಕ್ಕೆ 55 ರನ್‌ ಆಗಿತ್ತು.

ದ್ವಿತೀಯಾರ್ಧದಲ್ಲೂ ಕೋಲ್ಕತಾದ ಬ್ಯಾಟಿಂಗ್‌ ಚಡಪಡಿಕೆ ನಿಲ್ಲಲಿಲ್ಲ. ಇಯಾನ್‌ ಮಾರ್ಗನ್‌ ಬಾಲ್‌ ಫೇಸ್‌ ಮಾಡುವ ಮೊದಲೇ ತ್ರಿಪಾಠಿ ಜತೆ ಮಿಕ್ಸ್‌ ಅಪ್‌ ಮಾಡಿಕೊಂಡು ರನೌಟ್‌ ಆದರು. ಇದು ಈ ಕೂಟದ ಎರಡನೇ “ಡೈಮಂಡ್‌ ಡಕ್‌’ ಎನಿಸಿತು. ಪಂಜಾಬ್‌ನ ನಿಕೋಲಸ್‌ ಪೂರಣ್‌ ಇದೇ ಸಂಕಟಕ್ಕೆ ಸಿಲುಕಿದ್ದರು.

ತ್ರಿಪಾಠಿ-ಕಾರ್ತಿಕ್‌ ಜತೆಯಾಟದಲ್ಲಿ 30 ಎಸೆತಗಳಿಂದ 33 ರನ್‌ ಬಂತು. ಡೆತ್‌ ಓವರ್‌ ಆರಂಭವಾದೊಡನೆಯೇ ತ್ರಿಪಾಠಿ ಆಟ ಮುಗಿಸಿ ಆ್ಯಂಡ್ರೆ ರಸೆಲ್‌ಗೆ ಹಾದಿ ಮಾಡಿ ಕೊಟ್ಟರು. ತ್ರಿಪಾಠಿ ವಿಕೆಟ್‌ ದ್ವಿತೀಯ ಸ್ಪೆಲ್‌ ದಾಳಿಗಿಳಿದ ಮುಸ್ತಫಿಜುರ್‌ ಪಾಲಾಯಿತು. ತ್ರಿಪಾಠಿ ಗಳಿಕೆ 26 ಎಸೆತಗಳಿಂದ ಸರ್ವಾಧಿಕ 36 ರನ್‌ (1 ಫೋರ್‌, 2 ಸಿಕ್ಸರ್‌).

ಕಳೆದ ಪಂದ್ಯದಲ್ಲಿ ಸಿಡಿದಿದ್ದ ರಸೆಲ್‌ ಬ್ಯಾಟ್‌ ಇಲ್ಲಿ ಮಾತಾಡಲಿಲ್ಲ. ಒಂದು ಸಿಕ್ಸರ್‌ ಬಾರಿಸಿದರೂ ಡಬಲ್‌ ಫಿಗರ್‌ ತಲುಪಲಾಗಲಿಲ್ಲ (9). 18ನೇ ಓವರ್‌ನಲ್ಲಿ ಕ್ರಿಸ್‌ ಮಾರಿಸ್‌ ಅವಳಿ ಬೇಟೆಯಾಡಿ ರಸೆಲ್‌ ಮತ್ತು ದಿನೇಶ್‌ ಕಾರ್ತಿಕ್‌ ವಿಕೆಟ್‌ ಉಡಾಯಿಸಿದರು. ಕಾರ್ತಿಕ್‌ ಗಳಿಕೆ 24 ಎಸೆತಗಳಿಂದ 25 ರನ್‌ (4 ಬೌಂಡರಿ).

ಚೆನ್ನೈ ವಿರುದ್ಧ ವಿಸ್ಫೋಟಕ ಬ್ಯಾಟಿಂಗ್‌ ನಡೆಸಿ ಮೆರೆದಿದ್ದ ಪ್ಯಾಟ್‌ ಕಮಿನ್ಸ್‌ಗೆ ಇಲ್ಲಿ ಹೆಚ್ಚಿನ ಬ್ಯಾಟಿಂಗ್‌ ಅವಕಾಶ ಲಭಿಸಲಿಲ್ಲ. ಅವರು ಬ್ಯಾಟ್‌ ಹಿಡಿದು ಬರುವಾಗ 14 ಎಸೆತವಷ್ಟೇ ಉಳಿದಿತ್ತು. ಅಂತಿಮ ಓವರ್‌ನಲ್ಲೂ ಘಾತಕವಾಗಿ ಪರಿಣಮಿಸಿದ ಮಾರಿಸ್‌ ಆಸೀಸ್‌ ಕ್ರಿಕೆಟಿಗನನ್ನು ವಾಪಸ್‌ ಕಳುಹಿಸಿದರು.

ಸ್ಕೋರ್‌ ಪಟ್ಟಿ
ಕೋಲ್ಕತಾ ನೈಟ್‌ರೈಡರ್
ನಿತೀಶ್‌ ರಾಣಾ ಸಿ ಸಂಜು ಬಿ ಸಕಾರಿಯಾ 22
ಶುಭಮನ್‌ ಗಿಲ್‌ ರನೌಟ್‌ 11
ರಾಹುಲ್‌ ತ್ರಿಪಾಠಿ ಸಿ ಪರಾಗ್‌ ಬಿ ಮುಸ್ತಫಿಜುರ್‌ 36
ನಾರಾಯಣ್‌ ಸಿ ಜೈಸ್ವಾಲ್‌ ಬಿ ಉನಾದ್ಕತ್‌ 6
ಇಯಾನ್‌ ಮಾರ್ಗನ್‌ ರನೌಟ್‌ 0
ದಿನೇಶ್‌ ಕಾರ್ತಿಕ್‌ ಸಿ ಸಕಾರಿಯಾ ಬಿ ಮಾರಿಸ್‌ 25
ಆ್ಯಂಡ್ರೆ ರಸೆಲ್‌ ಸಿ ಮಿಲ್ಲರ್‌ ಬಿ ಮಾರಿಸ್‌ 9
ಪ್ಯಾಟ್‌ ಕಮಿನ್ಸ್‌ ಸಿ ಪರಾಗ್‌ ಬಿ ಮಾರಿಸ್‌ 10
ಶಿವಂ ಮಾವಿ ಬಿ ಮಾರಿಸ್‌ 5
ಪ್ರಸಿದ್ಧ್ ಕೃಷ್ಣ ಔಟಾಗದೆ 0
ಇತರ 9
ಒಟ್ಟು(9 ವಿಕೆಟಿಗೆ) 133
ವಿಕೆಟ್‌ ಪತನ:1-24, 2-45, 3-54, 4-61, 5-94, 6-117, 7-118, 8-133, 9-133.
ಬೌಲಿಂಗ್‌; ಜೈದೇವ್‌ ಉನಾದ್ಕತ್‌ 4-0-25-1
ಚೇತನ್‌ ಸಕಾರಿಯಾ 4-0-31-1
ಮುಸ್ತಫಿಜುರ್‌ ರೆಹಮಾನ್‌ 4-0-22-1
ಕ್ರಿಸ್‌ ಮಾರಿಸ್‌ 4-0-23-4
ರಾಹುಲ್‌ ತೇವಟಿಯಾ 3-0-24-0
ಶಿವಂ ದುಬೆ 1-0-5-0

ರಾಜಸ್ಥಾನ್‌ ರಾಯಲ್ಸ್‌
ಜಾಸ್‌ ಬಟ್ಲರ್‌ ಎಲ್‌ಬಿಡಬ್ಲ್ಯು ಬಿ ವರುಣ್‌ 5
ಜೈಸ್ವಾಲ್‌ ಸಿ ನಾಗರ್‌ಕೋಟಿ ಬಿ ಮಾವಿ 22
ಸಂಜು ಸ್ಯಾಮ್ಸನ್‌ ಔಟಾಗದೆ 42
ಶಿವಂ ದುಬೆ ಸಿ ಪ್ರಸಿದ್ಧ್ ಬಿ ವರುಣ್‌ 22
ತೇವಟಿಯಾ ಸಿ ನಾಗರ್‌ಕೋಟಿ ಬಿ ಪ್ರಸಿದ್ಧ್ 5
ಡೇವಿಡ್‌ ಮಿಲ್ಲರ್‌ ಔಟಾಗದೆ 24
ಇತರ 14
ಒಟ್ಟು(18.5 ಓವರ್‌ಗಳಲ್ಲಿ 4 ವಿಕೆಟಿಗೆ) 134
ವಿಕೆಟ್‌ ಪತನ:1-21, 2-40, 3-58, 4-100.
ಬೌಲಿಂಗ್‌; ಶಿವಂ ಮಾವಿ 4-0-19-1
ಪ್ಯಾಟ್‌ ಕಮಿನ್ಸ್‌ 3.5-0-36-0
ವರಣ್‌ ಚಕ್ರವರ್ತಿ 4-0-32-2
ಸುನೀಲ್‌ ನಾರಾಯಣ್‌ 4-0-20-0
ಪ್ರಸಿದ್ಧ್ ಕೃಷ್ಣ 3-0-20-1

Advertisement

Udayavani is now on Telegram. Click here to join our channel and stay updated with the latest news.

Next