Advertisement
ಮುಂಬಯಿಯಲ್ಲಿ ಕೊರೊನಾ ಸೋಂಕು ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆ ಕುರಿತು ಅನುಮಾನ ಹುಟ್ಟಿಕೊಂಡಿತ್ತು. ಇದೇ ವಿಚಾರವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮುಂಬಯಿಯಲ್ಲಿ ಪಂದ್ಯಗಳ ಆಯೋಜನೆಗೆ ಪಟ್ಟು ಹಿಡಿದಿದ್ದರು. ಅನಂತರದ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಸರಕಾರ ಮುಂಬಯಿಯಲ್ಲಿ ಪಂದ್ಯಗಳನ್ನು ನಡೆಸಲು ಷರತ್ತುಬದ್ಧ ಅನುಮತಿ ನೀಡಿತು.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಮಲಿಕ್ “ಐಪಿಎಲ್ ಪಂದ್ಯಗಳು ವೇಳಾಪಟ್ಟಿಯಂತೆ ಮುಂಬ ಯಿಯಲ್ಲಿ ನಡೆಯಲಿವೆ. ಇದಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ. ಕೆಲವು ಷರತ್ತು ಮತ್ತು ನಿರ್ಬಂಧಗಳೊಂದಿಗೆ ಪಂದ್ಯಗಳಿಗೆ ಅನುಮತಿ ನೀಡಲಾಗಿದೆ. ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶವಿರುವುದಿಲ್ಲ. ಐಪಿಎಲ್‌ನಲ್ಲಿ ಭಾಗವಹಿಸುವವರು ಪ್ರತ್ಯೇಕವಾಗಿ ಒಂದೇ ಸ್ಥಳದಲ್ಲಿ ಇರಬೇಕಾಗುತ್ತದೆ. ಗುಂಪುಗೂಡುವಂತಿಲ್ಲ. ಈ ಬಗ್ಗೆ ಬಿಸಿಸಿಐನಿಂದ ಲಿಖೀತ ಒಪ್ಪಿಗೆ ಪಡೆದ ಬಳಿಕ ಅನುಮತಿ ನೀಡಲಾಗಿದೆ’ ಎಂದು ಹೇಳಿದರು. ವೇಳಾಪಟ್ಟಿಯಂತೆ ಐಪಿಎಲ್: ಗಂಗೂಲಿ
ನಿಗದಿತ ವೇಳಾಪಟ್ಟಿಯಂತೆಯೇ ಐಪಿಎಲ್ ಟೂರ್ನಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಒಮ್ಮೆ ಆಟಗಾರರು, ಸಿಬಂದಿಯೆಲ್ಲ ಜೈವಿಕ ಸುರಕ್ಷಾ ವಲಯ ಪ್ರವೇಶಿಸಿದರೆ ಏನೂ ಸಮಸ್ಯೆ ಇಲ್ಲ. ಕಳೆದ ಸೀಸನ್ ಆರಂಭದಲ್ಲೂ ಇಂಥದೇ ಗೊಂದಲಗಳಿದ್ದವು. ಆದರೆ ಒಮ್ಮೆ ಟೂರ್ನಿ ಆರಂಭಗೊಂಡ ಬಳಿಕ ಎಲ್ಲವೂ ಚೆನ್ನಾಗಿ ನಡೆಯಲಾರಂಭಿಸಿತು. ಭಾರತದಲ್ಲಿಯೂ ಈ ಕೂಟ ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ’ ಎಂದು ಗಂಗೂಲಿ ಹೇಳಿದ್ದಾರೆ.
Related Articles
ಆಟಗಾರರಿಗೆ ಲಸಿಕೆ ನೀಡುವ ವಿಚಾರದಲ್ಲಿ ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದೆ. ಅದರಂತೆ ಐಪಿಎಲ್‌ಗೂ ಮೊದಲೇ ಆಟಗಾರರಿಗೆ ವ್ಯಾಕ್ಸಿನೇಶನ್ ಮಾಡಿಸಲು ಮಂಡಳಿ ಸತತ ಪ್ರಯತ್ನ ಮಾಡುತ್ತಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ.
Advertisement
“ಕೊರೊನಾ ವೈರಸ್‌ಗೆ ಲಸಿಕೆ ಪಡೆಯುವುದೊಂದೇ ಪರಿಹಾರ ಎಂದು ನಾನು ಭಾವಿಸುತ್ತೇನೆ. ಬಿಸಿಸಿಐ ಕೂಡ ಈ ಬಗ್ಗೆ ಯೋಚಿಸುತ್ತಿದೆ. ಕೊರೊನಾ ಯಾವಾಗ ಕೊನೆಗೊಳ್ಳುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದ್ದರಿಂದ ಈಗಲೇ ಆಟಗಾರರಿಗೆ ಲಸಿಕೆ ನೀಡುವ ಕುರಿತು ಯೋಚಿಸಬೇಕಾಗುತ್ತದೆ’ ಎಂದು ಶುಕ್ಲಾ ಹೇಳಿದರು.