Advertisement

ಮುಂಬೈ ಓಟಕ್ಕೆ ಬ್ರೇಕ್‌ ನೀಡಲು ರಾಯಲ್ಸ್‌ ಕಾತರ

02:06 AM Oct 06, 2020 | mahesh |

ಅಬುಧಾಬಿ: ಪ್ರಚಂಡ ಫಾರ್ಮ್ ಮತ್ತು ಆತ್ಮವಿಶ್ವಾಸದಲ್ಲಿರುವ ಮುಂಬೈ ಇಂಡಿಯನ್ಸ್‌ನ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ರಾಜಸ್ಥಾನ ರಾಯಲ್ಸ್‌ ಕಾತರದಲ್ಲಿದೆ. ಯುವ ಆಟಗಾರರನ್ನು ಒಳಗೊಂಡ ರಾಯಲ್ಸ್‌ ತಂಡ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಯೋಜನೆ ಹಾಕಿಕೊಂಡಿದೆ.

Advertisement

ಕೂಟದಲ್ಲಿ ಉತ್ತಮ ಆರಂಭ ಪಡೆದಿದ್ದ ರಾಜಸ್ಥಾನ ತಂಡವು ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ನಿರ್ವಹಣೆ ನೀಡಲು ವಿಫ‌ಲವಾಗಿತ್ತು. ಟಿ20 ಪಂದ್ಯದಲ್ಲಿ ಯಾವುದನ್ನು ಊಹಿಸಲು ಸಾಧ್ಯವಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಎದುರಾಳಿ ತಂಡ ನಮ್ಮನ್ನು ಹಿಂದಿಕ್ಕಿವೆ ಎಂದು ರಾಯಲ್ಸ್‌ ನಾಯಕ ಸ್ಟೀವನ್‌ ಸ್ಮಿತ್‌ ಹೇಳಿದ್ದಾರೆ.

ಮುಂಬೈ ವಿರುದ್ಧ ಉತ್ತಮ ಬ್ಯಾಟಿಂಗ್‌ ನಡೆಸುವ ವಿಶ್ವಾಸವಿದೆ. ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದ್ದೆ. ಆದರೆ ಇನ್ನು ಹಾಗೇ ನಡೆಯದು. ಸ್ಫೋಟಕ ಆಟಕ್ಕೆ ಮುಂದಾಗುವೆ ಎಂದು ಸ್ಮಿತ್‌ ತಿಳಿಸಿದ್ದಾರೆ.

ಕೆಲವು ಬದಲಾವಣೆ
ಜೋಸ್‌ ಬಟ್ಲರ್‌ ಅವರ ವೈಫ‌ಲ್ಯ ರಾಜಸ್ಥಾನದ ನೀರಸ ನಿರ್ವಹಣೆಗೆ ಪ್ರಮುಖ ಕಾರಣವೆಂದು ಹೇಳಬಹುದು. ಜೈದೇವ್‌ ಉನಾದ್ಕತ್‌ ಮತ್ತು ಯುವ ರಿಯಾನ್‌ ಪರಾಗ್‌ ಕೂಡ ನಿರೀಕ್ಷಿತ ನಿರ್ವಹಣೆ ನೀಡಿಲ್ಲ. ಹೀಗಾಗಿ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡುವ ಬಗ್ಗೆ ಸ್ಮಿತ್‌ ಮಾತನಾಡಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಪರಾಗ್‌ ಬದಲಿಗೆ ಯಶಸ್ವಿ ಜೈಸ್ವಾಲ್‌ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಉನಾದ್ಕತ್‌ ಬದಲಿಗೆ ಅನುಭವಿ ವರುಣ್‌ ಅರೊನ್‌ ಅಥವಾ ಯುವ ಕಾರ್ತಿಕ್‌ ತ್ಯಾಗಿ ಅವರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಮುಂಬೈ ಪ್ರಚಂಡ ಫಾರ್ಮ್
ಕಳೆದ ಕೆಲವು ಪಂದ್ಯಗಳಲ್ಲಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ ಹಾಲಿ ಚಾಂಪಿಯನ್‌ ಮುಂಬೈ ತಂಡವು ಆರಂಕದೊಂದಿಗೆ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸೂಪರ್‌ ಓವರ್‌ನಲ್ಲಿ ಆರ್‌ಸಿಬಿ ವಿರುದ್ಧ ಆಘಾತಕಾರಿ ಸೋಲನ್ನು ಕಂಡ ಬಳಿಕ ಮುಂಬೈ ತಂಡವು ಪಂಜಾಬ್‌ ಮತ್ತು ಹೈದರಾಬಾದ್‌ ವಿರುದ್ಧ ಅಮೋಘ ಗೆಲುವು ದಾಖಲಿಸಿ ಗೆಲುವಿನ ಟ್ರ್ಯಾಕ್‌ಗೆ ಮರಳಿತ್ತು.
ರೋಹಿತ್‌ ಶರ್ಮ ಫಾರ್ಮ್ನಲ್ಲಿರುವುದು ಮುಂಬೈಯ ಅಭಿಯಾನದ ಪ್ರಮುಖ ಅಂಶವಾಗಿದೆ. ಅವರು 176 ರನ್‌ ಗಳಿಸಿದ್ದರೆ ಕ್ವಿಂಟನ್‌ ಡಿ ಕಾಕ್‌ ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿ ಗಮನ ಸೆಳೆದಿದ್ದಾರೆ. ಕೈರನ್‌ ಪೊಲಾರ್ಡ್‌ ಸ್ಥಿರ ನಿರ್ವಹಣೆ ನೀಡುತ್ತ ಬಂದಿದ್ದರೆ ಕಿಶನ್‌, ಹಾರ್ದಿಕ್‌ ಪಾಂಡ್ಯ ಕೊನೆ ಹಂತದಲ್ಲಿ ಸ್ಫೋಟಕ ಟಚ್‌ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಹಾರ್ದಿಕ್‌ ಅವರ ಸಹೋದರ ಕೃಣಾಲ್‌ ಕೂಡ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದರು. ಮುಂಬೈ ಪರ ಜೇಮ್ಸ್‌ ಪ್ಯಾಟಿನ್ಸನ್‌ ಉತ್ತಮ ಬೌಲಿಂಗ್‌ ದಾಳಿ ಸಂಘಟಿಸಿದ್ದಾರೆ. ಜಸ್‌ಪ್ರೀತ್‌ ಬುಮ್ರಾ, ಟ್ರೆಂಟ್‌ ಬೌಲ್ಟ್ ಮತ್ತು ಹಾರ್ದಿಕ್‌ ಪಾಂಡ್ಯ ಎದುರಾಳಿಯನ್ನು ಕಟ್ಟಿಹಾಕಲು ಸಮರ್ಥರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next