Advertisement

ಮುಂಬೈ vs ಡೆಲ್ಲಿ ಫೈನಲ್ ಫೈಟ್ : ಟಾಸ್ ಗೆದ್ದ ಆಯ್ಯರ್ ಪಡೆ ಬ್ಯಾಟಿಂಗ್ ಆಯ್ಕೆ

07:10 PM Nov 10, 2020 | Suhan S |

ದುಬೈ : 2020 ರ ಐಪಿಎಲ್ ಕ್ರಿಕೆಟ್ ಹಬ್ಬದ ತೆರೆಗೆ ಇನ್ನೊಂದೇ ರೋಚಕ ಪಂದ್ಯ ಬಾಕಿ ಉಳಿದಿದೆ. ಟಾಸ್ ಗೆದ್ದ  ಡೆಲ್ಲಿ ಕ್ಯಾಪಿಟಲ್ಸ್  ಬ್ಯಾಟಿಂಗ್ ಆಯ್ದುಕೊಂಡಿದೆ.

Advertisement

ಮುಂಬೈ ಹಾಗೂ ಡೆಲ್ಲಿ ತಂಡ ಫೈನಲ್ ಪೈಟ್ ನಲ್ಲಿ ಐಪಿಎಲ್ ಟ್ರೋಫಿಗಾಗಿ ಹೋರಾಟ ನಡೆಸಲಿದೆ. ಎರಡೂ ತಂಡಗಳೂ ಟೂರ್ನಿ ಉದ್ದಕ್ಕೂ ಏಳು ಬೀಳಿನ ಫಲಿತಾಂಶವನ್ನು ಕಂಡು, ಬಲಿಷ್ಠ ಆಟವನ್ನು ಪ್ರದರ್ಶಿಸಿ ಫೈನಲ್ ತಲುಪಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಇದುವರೆಗೆ 2013,2015,2017 ಹಾಗೂ 2019 ರಲ್ಲಿ ಪ್ರಶಸ್ತಿ ಗೆದ್ದುಕೊಂಡು ಅತೀ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. 5 ನೇ ಬಾರಿ ಟ್ರೋಫಿ ಗೆಲುವಿಗೆ ಡೆಲ್ಲಿ ವಿರುದ್ಧ ಸೆಣೆಸಾಟ ನಡೆಸಲಿದೆ.

ಇತ್ತ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಗೆ ಇದು ಮೊದಲ ಫೈನಲ್ ಸಮರದ ಅನುಭವ. ಟೂರ್ನಿಯಲ್ಲಿ ಡೆಲ್ಲಿ ಬಲಿಷ್ಠ ತಂಡಗಳೆದುರು ಉತ್ತಮ ಪ್ರದರ್ಶನ ನೀಡಿ, ಫೈನಲ್ ತಲುಪಿದೆ. ಇವತ್ತಿನ ಪಂದ್ಯದಲ್ಲಿ ಡೆಲ್ಲಿ ಬಾಯ್ಸ್ ಬಾಯ್ಸ್ ಮುಂಬೈಗೆ ಟಕ್ಕರ್ ಕೊಟ್ಟು ಟ್ರೋಫಿ ಗೆದ್ದರೆ ಅಚ್ಚರಿ ಏನಿಲ್ಲ.

ಮುಂಬೈ ಫೇವರಿಟ್‌, ಆದರೆ…
ಒಂದೆ ಸಾಲಲ್ಲಿ ಹೇಳುವು ದಾದರೆ ಮುಂಬೈ ನೆಚ್ಚಿನ ತಂಡ; ಅನಿಶ್ಚಿತ ಫ‌ಲಿತಾಂಶ ದಾಖಲಿಸುತ್ತ ಬಂದಿರುವ ಡೆಲ್ಲಿ ಇಲ್ಲಿನ “ಡಾರ್ಕ್‌ ಹಾರ್ಸ್‌’. ಗೆಲುವಿನ ಸಾಧ್ಯತೆ 50-50. ತಂಡದ ಬಲಾಬಲದ ಲೆಕ್ಕಾಚಾರದಲ್ಲಿ ಮುಂಬೈಗೆ ಅವಕಾಶ ಹೆಚ್ಚು. ಲೀಗ್‌ ಹಂತದ ಎರಡೂ ಪಂದ್ಯಗಳಲ್ಲಿ, ಮೊದಲ ಕ್ವಾಲಿಫೈಯರ್‌ನಲ್ಲಿ ಡೆಲ್ಲಿಯನ್ನು ಬಗ್ಗುಬಡಿದ ಅಜೇಯ ದಾಖಲೆಯನ್ನು ಅದು ಹೊಂದಿದೆ.

ಮುಂಬೈ ಬ್ಯಾಟಿಂಗ್‌ ಲೈನ್‌ಅಪ್‌ ಸುದೀರ್ಘ‌. ಕ್ವಿಂಟನ್‌ ಡಿ ಕಾಕ್‌, ರೋಹಿತ್‌ ಶರ್ಮ, ಇಶಾನ್‌ ಕಿಸನ್‌, ಸೂರ್ಯಕುಮಾರ್‌, ಪಾಂಡ್ಯ, ಪೊಲಾರ್ಡ್‌… ಹೀಗೆ 6ನೇ ಕ್ರಮಾಂಕದ ತನಕ ಚಿಂತೆ ಇಲ್ಲ. ಎಲ್ಲರೂ ಬಿಗ್‌ ಹಿಟ್ಟರ್‌ಗಳೇ. ಪಾಂಡ್ಯ, ಕೈರನ್‌ ಪೊಲಾರ್ಡ್‌ ಆಲ್‌ರೌಂಡ್‌ ಪ್ರದರ್ಶನಕ್ಕೂ ಸೈ. ಬೌಲಿಂಗ್‌ ವಿಭಾಗದಲ್ಲಿ ಬುಮ್ರಾ, ಬೌಲ್ಟ್ ಇಬ್ಬರೇ ಸೇರಿ ಎದುರಾಳಿ ಬ್ಯಾಟಿಂಗ್‌ ಸರದಿಯನ್ನು ಸೀಳಬಲ್ಲರು. ಇದಕ್ಕೆ ಮೊದಲ ಕ್ವಾಲಿಫೈಯರ್‌ ಪಂದ್ಯಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ. ಅಲ್ಲಿ ಡೆಲ್ಲಿಯ 3 ವಿಕೆಟ್‌ ಖಾತೆ ತೆರೆಯುವ ಮೊದಲೇ ಹಾರಿಹೋಗಿತ್ತು.

Advertisement

ಮುಂಬೈ ಕ್ರಿಕೆಟಿಗರಿಂದ ಈ ಕೂಟದಲ್ಲಿ 130 ಸಿಕ್ಸರ್‌ ಸಿಡಿದಿವೆ. ಡೆಲ್ಲಿಯಿಂದ ಬಾರಿಸಲು ಸಾಧ್ಯವಾದದ್ದು 84 ಸಿಕ್ಸರ್‌ ಮಾತ್ರ. ಮುಂಬೈ ಯಶಸ್ಸಿನಲ್ಲಿ ಅನುಭವಿಗಳಿಗಿಂತ ಪ್ರತಿಭಾನ್ವಿತರ ಪಾತ್ರವೇ ದೊಡ್ಡದು. ಸೂರ್ಯಕುಮಾರ್‌ ಯಾದವ್‌ ಅವರಂತೂ 60 ಬೌಂಡರಿ, 10 ಸಿಕ್ಸರ್‌ ಸಿಡಿಸಿ ಎದುರಾಳಿಗಳ ಪಾಲಿಗೆ ಬೆಂಕಿಯುಂಡೆಯೇ ಆಗಿದ್ದಾರೆ. ಎಡಗೈ ಆಟಗಾರ ಇಶಾನ್‌ ಕಿಶನ್‌ ಅವರಂತೂ ಬರೋಬ್ಬರಿ 29 ಸಿಕ್ಸರ್‌ ಸಿಡಿಸಿ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಒಟ್ಟಾರೆ, ಮುಂಬೈ ಒಂದು ಪರಿಪೂರ್ಣ ಟಿ20 ಪ್ಯಾಕೇಜ್‌. ಆದರೆ ಇವೆಲ್ಲದರ ಜತೆಗೆ ಅದೃಷ್ಟದ ಪಾತ್ರವೂ ಇಲ್ಲಿ ನಿರ್ಣಾಯಕ ಎಂಬುದನ್ನು ಮರೆಯುವಂತಿಲ್ಲ.

ಪಾಂಟಿಂಗ್‌ ಮಾಸ್ಟರ್‌ ಮೈಂಡ್‌ :
ಪ್ಲೇ ಆಫ್ನಲ್ಲಿ ಮುಂಬೈ ವಿರುದ್ಧ ಶೋಚನೀಯ ಪ್ರದರ್ಶನ ನೀಡಿದ್ದ ಡೆಲ್ಲಿ, ರವಿವಾರ ಹೈದರಾಬಾದ್‌ ವಿರುದ್ಧ ತೋರಿದ ಪರಾಕ್ರಮ ಅಸಾಮಾನ್ಯ. ಸೊನ್ನೆ ಸುತ್ತುವ ಪೃಥ್ವಿ ಶಾ ಅವರನ್ನು ಕೈಬಿಟ್ಟು ಸ್ಟೋಯಿನಿಸ್‌ ಅವರನ್ನು ಆರಂಭಿಕನನ್ನಾಗಿ ಇಳಿಸಿದ ಡೆಲ್ಲಿ ಕಾರ್ಯತಂತ್ರ ಅತ್ಯಂತ ಯಶಸ್ವಿಯಾಗಿದೆ. ಇದು ಕೋಚ್‌ ರಿಕಿ ಪಾಂಟಿಂಗ್‌ ಅವರ “ಮಾಸ್ಟರ್‌ ಮೈಂಡ್‌’ ಎಂಬುದರಲ್ಲಿ ಎರಡು ಮಾತಿಲ್ಲ. ಮುಂಬೈಯ ಮಾಜಿ ಕೋಚ್‌ ಆಗಿರುವ ಪಾಂಟಿಂಗ್‌ ಬಳಿ ಫೈನಲ್‌ಗಾಗಿ ಇನ್ನಷ್ಟು ಗೇಮ್‌ಪ್ಲ್ರಾನ್‌ ಇರಲೂಬಹುದು.

ಡೆಲ್ಲಿ ಮೇಲುಗೈ ಸಾಧಿಸಬೇಕಾದರೆ ಸ್ಟೋಯಿನಿಸ್‌-ಧವನ್‌ ಇಬ್ಬರೂ ಮತ್ತೂಮ್ಮೆ ಕ್ಲಿಕ್‌ ಆಗಬೇಕು. ಹೆಟ್‌ಮೈರ್‌ ಸಿಡಿಯಬೇಕು. ಬಿಗ್‌ ಫೈನಲ್‌ ಒಂದರಲ್ಲಿ ಮೊದಲ ಸಲ ತಂಡವನ್ನು ಮುನ್ನಡೆಸುವ ಅಯ್ಯರ್‌ ಒತ್ತಡ ಮುಕ್ತರಾಗಿರಬೇಕು. ರಿಷಭ್‌ ಪಂತ್‌, ಅಜಿಂಕ್ಯ ರಹಾನೆ ಹೆಚ್ಚಿನ ಬದ್ಧತೆ ತೋರಬೇಕು. ಎಲ್ಲರೂ ಈ ಅಂತಿಮ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರಷ್ಟೇ ಯಶಸ್ಸು ಸಾಧ್ಯ.

ವೇಗದ ಬೌಲಿಂಗ್‌ ವಿಭಾಗದಲ್ಲಿ ಡೆಲ್ಲಿ 2 ಪ್ರಬಲ ಅಸ್ತ್ರಗಳನ್ನು ಹೊಂದಿದೆ-ರಬಾಡ (29 ವಿಕೆಟ್‌) ಮತ್ತು ನೋರ್ಜೆ (20 ವಿಕೆಟ್‌). ರವಿವಾರ ಮುನ್ನುಗ್ಗಿ ಬರುತ್ತಿದ್ದ ಹೈದರಾಬಾದ್‌ಗೆ ತಡೆಯೊಡ್ಡಿದ್ದೇ ರಬಾಡ ಎಂಬುದನ್ನು ಮರೆಯುವಂತಿಲ್ಲ. ತೃತೀಯ ವೇಗಿಯಾಗಿರುವ ಮಾರ್ಕಸ್‌ ಸ್ಟೋಯಿನಿಸ್‌ ಪಾತ್ರ ನಿರ್ಣಾಯಕವಾಗಲಿದೆ. ಆಸೀಸ್‌ ಸವ್ಯಸಾಚಿ 352 ರನ್‌ ಜತೆಗೆ 12 ವಿಕೆಟ್‌ ಕೂಡ ಹಾರಿಸಿದ್ದಾರೆ. ಸ್ಪಿನ್ನಿಗೆ ಆರ್‌. ಅಶ್ವಿ‌ನ್‌-ಅಕ್ಷರ್‌ ಪಟೇಲ್‌ ಇದ್ದಾರೆ.

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ಕ್ವಿಂಟನ್ ಡಿ ಕಾಕ್ (ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಪ್ಲೇಯಿಂಗ್): ಮಾರ್ಕಸ್ ಸ್ಟೋಯಿನಿಸ್, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಾಸ್ ಅಯ್ಯರ್ (ನಾಯಕ), ಶಿಮ್ರಾನ್ ಹೆಟ್ಮಿಯರ್, ರಿಷಭ್ ಪಂತ್ (ಕೀಪರ್), ಆಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಪ್ರವೀಣ್ ದುಬೆ, ಅನ್ರಿಚ್ ನಾರ್ಟ್ಜೆ

Advertisement

Udayavani is now on Telegram. Click here to join our channel and stay updated with the latest news.

Next